ಗುರುವಾರ , ಫೆಬ್ರವರಿ 25, 2021
29 °C
ಸಿಜಿಕೆ ಬೀದಿರಂಗ ದಿನದಲ್ಲಿ ಸಾಹಿತಿ ಬರಗೂರು ಅಭಿಮತ

ವೈಚಾರಿಕ ಸಂಭ್ರಮಕ್ಕೆ ಪ್ರೇರಣೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಚಾರಿಕ ಸಂಭ್ರಮಕ್ಕೆ ಪ್ರೇರಣೆಯಾಗಲಿ

ಬೆಂಗಳೂರು: ಸಿಜಿಕೆ ಅವರ ನೆನಪಿನ ಕಾರ್ಯಕ್ರಮ ರೋಚಕ ಸಂಭ್ರಮದ ಬದಲು ವೈಚಾರಿಕ ಸಂಭ್ರಮಕ್ಕೆ ಪ್ರೇರಣೆಯಾಗಲಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಶಯ ವ್ಯಕ್ತಪಡಿಸಿದರು.ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್‌ ಫಂಡೇಷನ್‌ ವತಿಯಿಂದ ನಗರದ ಸಂಸ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಸಿಜಿಕೆ ಬೀದಿರಂಗ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರೂಪಕಗಳನ್ನು ಚಾರಿತ್ರಿಕ ವ್ಯಕ್ತಿಗಳನ್ನಾಗಿ ಚಾರಿತ್ರಿಕ ವ್ಯಕ್ತಿಗಳನ್ನು ರೂಪಕಗಳನ್ನಾಗಿ ಪ್ರತಿ ಬಿಂಬಿಸುವ ಷಡ್ಯಂತರ ನಡೆಯುತ್ತಿದೆ. ಈ ಬಗ್ಗೆ ಬೌದ್ಧಿಕ ವಲಯ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.ಸಿಜಿಕೆ ಅವರು ಆ ದಿನಗಳಲ್ಲೇ ಸಾಕವ್ವನ ಸಂಕಟ, ಒಡಲಾಳ, ಅಂಬೇಡ್ಕರ್‌, ಟಿಪ್ಪು ಸುಲ್ತಾನ್‌ ನಾಟಕಗಳನ್ನು ನಿರ್ದೇಶಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಆದರೆ ಇಂದಿಗೂ ನಮ್ಮ ಸಮಾಜ ಬಡತನ, ಹಸಿವು, ಜಾತಿ ತಾರತಮ್ಯ, ಕೋಮುವಾದಗಳಿಂದ ಮುಕ್ತಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಮರುಳಸಿದ್ಧಪ್ಪ ಮಾತನಾಡಿ, ‘ಸಿಜಿಕೆ ಶ್ರೇಷ್ಠ ರಂಗನಿರ್ದೇಶಕ ಮಾತ್ರವಲ್ಲ, ತಮ್ಮ ಸಾಮಾಜಿಕ ಪ್ರಜ್ಞೆ ಹಾಗೂ ಚಳವಳಿಯನ್ನು ಕಟ್ಟಿ ಬೆಳೆಸಲು ರಂಗಭೂಮಿಯನ್ನು ಸಾಧನವಾಗಿ ಬಳಸಿಕೊಂಡರು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಸಿಜಿಕೆ ಅವರ ಮನಸ್ಸು ಸಾಮಾಜಿಕ ಬದಲಾವಣೆಗಾಗಿ ಸದಾ ತುಡಿಯುತ್ತಿತ್ತು. ಆದ್ದರಿಂದಲೇ ಅವರು ಕೆಲವೊಮ್ಮೆ ತಾಳ್ಮೆಗೆಡುತ್ತಿದ್ದರು. ಸಿಜಿಕೆಯನ್ನು ಬಲ್ಲವರಿಗೆ ಮಾತ್ರವೇ ತಾಳ್ಮೆರಹಿತ ಗುಣದ ಹಿಂದಿನ ಕಾರಣ ತಿಳಿದಿತ್ತು. ಅವರ ಅಂಗವಿಕಲತೆ ರಂಗ ಸೃಜನಶೀಲತೆಗೆ ಎಂದಿಗೂ ತೊಡಕಾಗಲಿಲ್ಲ’ ಎಂದು ಹೇಳಿದರು.‘ಅಂತಃಕರಣ, ಸಂವೇದನೆ, ಆತ್ಮಸಾಕ್ಷಿ ಮರೆತ ಕೆಲವರು ಬಡವರ ಪರಿಸ್ಥಿತಿ ಬಗ್ಗೆ ಆಕ್ರಮಣಶೀಲರಾಗಿ ಮಾತನಾಡುತ್ತಿರುವುದು ವಿಷಾದನೀಯ. ಇಂತಹ ಮಾತು ಅವರವರ ವರ್ಗ ಹಿನ್ನೆಲೆ ಏನೆಂಬುದನ್ನು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಬೌದ್ಧಿಕ ವಲಯ ವಿವೇಕದಿಂದ ವರ್ತಿಸಬೇಕು ಎಂದು ಬರಗೂರು ಅವರು ಆಡಿದ ಮಾತು ಅತ್ಯಂತ ಸೂಚ್ಯವಾದುದು’ ಎಂದು ತಿಳಿಸಿದರು.ಸಿಜಿಕೆ ಅವರ ಒಡನಾಡಿ ಪ್ರೊ.ಜಿ.ಶರಣಪ್ಪ ಮಾತನಾಡಿ, ‘ನಾನು ಮತ್ತು ಸಿಜಿಕೆ ಒಂದೇ ಕೇರಿಯಲ್ಲಿ ಒಟ್ಟಿಗೆ ಆಡಿ ಬೆಳೆದೆವು. ನಾಟಕಗಳನ್ನೂ ಮಾಡಿದೆವು. ಒಮ್ಮೆ ಹಸಿವೆ ಕುರಿತು ಆಡಿದ ನಾಟಕ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಿಜಿಕೆಗೆ ಬಾಲ್ಯದಲ್ಲಿಯೇ ರಂಗನಿರ್ದೇಶನ ದಕ್ಕಿತ್ತು’ ಎಂದು   ಹೇಳಿದರು.‘ಈಚೆಗೆ ಅಡ್ವಾಣಿ ಅವರು ತುರ್ತು ಪರಿಸ್ಥಿತಿ ಕುರಿತು ನೀಡಿದ ಹೇಳಿಕೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿವೆ. ಅಂದು ಇಂದಿರಾ ಅವರು ತುರ್ತಪರಿಸ್ಥಿತಿ  ಹೇರಿದ್ದಾಗ ನಾನು ಸಿಜಿಕೆ ತುಂಬಾ ಚರ್ಚಿಸುತ್ತಿದ್ದೆವು. ನಮ್ಮ ಊರಿನಲ್ಲಿದ್ದ ಶ್ರೀಮಂತನೊಬ್ಬ ಬಡವರ ಒಡವೆ, ಪಾತ್ರೆ–ಪಡಗ, ಜಮೀನು–ಮನೆ ಪತ್ರಗಳನ್ನು ಇಟ್ಟುಕೊಂಡು ಸಾಲ ನೀಡುತ್ತಿದ್ದ. ತುರ್ತು ಪರಿಸ್ಥಿತಿ ಘೋಷಿಸಿದಾಗ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅವುಗಳನ್ನೆಲ್ಲ ವಶಪಡಿಸಿಕೊಂಡು ಬಡವರಿಗೆ ಹಂಚಿದರು. ಈ ದಿಸೆಯಿಂದ  ತುರ್ತು ಪರಿಸ್ಥಿತಿ ಘೋಷಿಸಿದ್ದು ಒಳ್ಳೆಯದಾಯಿತು ಎಂದುಕೊಳ್ಳುತ್ತಿದ್ದೆವು’ ಎಂದು ಸ್ಮರಿಸಿದರು.ಕಾರ್ಪೊರೇಟ್‌ ಸಂಸ್ಕೃತಿಗೆ ಪ್ರತೀಕವಾದ ಸ್ಮಾರ್ಟ್‌ ಸಿಟಿ ಎಂಬ ಕನಸಿನ ಜಾಲ ಬಿತ್ತಲಾಗುತ್ತಿದೆ. ವಾಸ್ತವದಲ್ಲಿ ಕೊಳೆ ಗೇರಿಗಳು ಅಭಿವೃದ್ಧಿಯಾಗಬೇಕಿದೆ

ಕೆ.ಮರುಳಸಿದ್ಧಪ್ಪ, ಸಾಹಿತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.