ವೈಜಯಂತಿಗೆ ಪ್ರಶಸ್ತಿ ಪ್ರದಾನ

7

ವೈಜಯಂತಿಗೆ ಪ್ರಶಸ್ತಿ ಪ್ರದಾನ

Published:
Updated:
ವೈಜಯಂತಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಇಲಾಖೆ ವತಿಯಿಂದ ಇದೇ ಪ್ರಥಮ ಬಾರಿಗೆ ನಗರದಲ್ಲಿ ಡಿಸೆಂಬರ್ 15ರಿಂದ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುರುವಾರ ಇಲ್ಲಿ ಹೇಳಿದರು.ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ನಟಿ ಡಾ. ವೈಜಯಂತಿಮಾಲ ಬಾಲಿ ಅವರಿಗೆ ಪದ್ಮಭೂಷಣ ಡಾ.ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.`ಕಲೆಗೆ ಸರ್ಕಾರ ಮೊದಲಿನಿಂದಲೂ ಅಗತ್ಯ ಸಹಕಾರ ನೀಡುತ್ತಿದೆ. ಎರಡು ವರ್ಷಗಳ ಹಿಂದೆ ಚಲನಚಿತ್ರ ಅಕಾಡೆಮಿ ಸ್ಥಾಪಿಸಿದ್ದರ ಜತೆಗೆ, ಚಲನಚಿತ್ರ ನೀತಿಯನ್ನೂ ಜಾರಿಗೊಳಿಸಿದೆ.ವಿಡಿಯೋ ಪೈರಸಿ ವಿರುದ್ಧ ಉಗ್ರ ಶಿಕ್ಷೆ ನೀಡುವಂತಹ ಕಾಯ್ದೆಯನ್ನೂ ಜಾರಿಗೊಳಿಸಿದೆ. ಇದಲ್ಲದೆ, ಸ್ವರ್ಣಕಮಲ ಪ್ರಶಸ್ತಿ ವಿಜೇತರಿಗೆ ನೀಡುತ್ತಿದ್ದ ಗೌರವ ಮೊತ್ತವನ್ನು 15ರಿಂದ 25 ಲಕ್ಷ ರೂಪಾಯಿಗಳಿಗೆ ಏರಿಸಿದೆ~ ಎಂದು ಹೇಳಿದರು.`ಕಲೆ, ಸಂಸ್ಕೃತಿ ಹಾಗೂ ಪರಂಪರೆಗೆ ಕರ್ನಾಟಕ ಮೊದಲಿನಿಂದಲೂ ಗೌರವ ಕೊಡುವಂತಹ ರಾಜ್ಯ. ಕಲಾವಿದರನ್ನು ಪ್ರೋತ್ಸಾಹಿಸುವುದು ಕೂಡ ಸಮಾಜದ ಜವಾಬ್ದಾರಿ. ಆದರೆ, ಕಲಾವಿದರನ್ನು ಕಲಾವಿದರೇ ಸನ್ಮಾನಿಸುವ ಮೂಲಕ ನಟಿ ಡಾ.ಬಿ. ಸರೋಜಾದೇವಿ ಅಭಿನಂದನೆಗೆ ಪಾತ್ರರಾಗಿದ್ದಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಭಿನಂದನಾ ಭಾಷಣ ಮಾಡಿದ ನಟಿ ಡಾ.ಬಿ. ಸರೋಜಾದೇವಿ, `ವೈಜಯಂತಿಮಾಲ ಬಾಲಿ ಮೇಲೆ ನನಗೆ ಅಕ್ಕನ ಪ್ರೀತಿ. ನಾನು ತುಂಬಾ ಪ್ರೀತಿಸುವ ಕಲಾವಿದೆ. ಆಕೆ ಕಲಾವಿದೆ ಎನ್ನುವುದಕ್ಕಿಂತ ಕಲಾ ದೇವತೆ. ದೇವರ ಅನುಗ್ರಹವೋ ಏನೋ ಬಾಲಿ ಹಾಗೂ ನನ್ನ ನಕ್ಷತ್ರ-ರಾಶಿ ಒಂದೇ. ಶಿಸ್ತನ್ನು ನಾನು ಅಕ್ಕನಿಂದಲೇ ಕಲಿತೆ. ಅಂತಹ ಅಕ್ಕನಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯೆನಿಸಿದೆ~ ಎಂದು ಹೇಳಿದರು.ನೋಡುವುದೇ ಸಂತಸ: ಪಂಚೆಯುಟ್ಟು ಗಮನಸೆಳೆದ ನಟ ಅಂಬರೀಶ್, `ವೈಜಯಂತಿಮಾಲ ಬಾಲಿಯಂತಹ ಕಲಾವಿದರನ್ನು ನೋಡುವುದೇ ಒಂದು ಸಂತಸ. ಅವರ ಜತೆ ವೇದಿಕೆ ಹಂಚಿಕೊಂಡದ್ದು ನನ್ನ ಭಾಗ್ಯ. ಅಂತಹ ದೊಡ್ಡ ಕಲಾವಿದೆಯನ್ನು ಇಲ್ಲಿಗೆ ಕರೆಸುವ ಶಕ್ತಿ ಬಿ. ಸರೋಜಮ್ಮನವರಿಗೆ ಮಾತ್ರ ಇದೆ~ ಎಂದರು.`ದಕ್ಷಿಣ ಭಾರತ ಈ ಹಿಂದೆ ಸೌಂದರ‌್ಯದ ಕಲಾವಿದೆಯರಿಗೆ ಹೆಸರಾಗಿತ್ತು. ಹಾಗಾಗಿ, ವೈಜಯಂತಿಮಾಲ, ಬಿ. ಸರೋಜಾದೇವಿ ಉತ್ತರ ಭಾರತದಲ್ಲೂ ಮಿಂಚಿದರು. ಆದರೆ, ನಮ್ಮ ದೌರ್ಭಾಗ್ಯವೋ ಏನೋ. ಇಂದು ಉತ್ತರ ಭಾರತದಿಂದ ಕಲಾವಿದೆಯರನ್ನು ಕರೆತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ~ ಎಂದರು.ಪ್ರಶಸ್ತಿ ಸ್ವೀಕರಿಸಿದ ನಟಿ ಡಾ. ವೈಜಯಂತಿಮಾಲ ಬಾಲಿ, `ಕಿರಿಯ ಸಹೋದರಿ ನೀಡಿದ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ತಂದಿದೆ~ ಎಂದು ಕೃತಜ್ಞತೆ ಸಲ್ಲಿಸಿದರು.ಪದ್ಮಭೂಷಣ ಡಾ.ಬಿ. ಸರೋಜಾದೇವಿ ಭಾರತೀಯ ವಿದ್ಯಾಭವನದಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಇದು ದತ್ತಿನಿಧಿಯಿಂದ ನೀಡಿದ ಎರಡನೇ ವರ್ಷದ ಪ್ರಶಸ್ತಿ.ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ ಸ್ವಾಗತಿಸಿದರು. ಭವನದ ಕಾರ್ಯಕ್ರಮ ನಿರ್ದೇಶಕ ಸುರೇಶ್ ನಿರೂಪಿಸಿದರು. ನಿರ್ದೇಶಕ ಡಾ. ಮತ್ತೂರು ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry