ಶನಿವಾರ, ಫೆಬ್ರವರಿ 27, 2021
31 °C

ವೈಜ್ಞಾನಿಕತೆಯ ಬಳಕೆ ವೈಚಾರಿಕವೂ ಆಗಿರಲಿ

ಎಂ. ಆರ್‌. ನಾಗರಾಜು Updated:

ಅಕ್ಷರ ಗಾತ್ರ : | |

ವೈಜ್ಞಾನಿಕತೆಯ ಬಳಕೆ ವೈಚಾರಿಕವೂ ಆಗಿರಲಿ

ವಿಜ್ಞಾನ ಎಂಬ ಪದದ ಗುಣವಾಚಕ ರೂಪ - ವೈಜ್ಞಾನಿಕ. ಆದರೆ ಈ ಪದ ಅನೇಕ ರೀತಿಯ ಅರ್ಥಕ್ಕೆ ದಾರಿ ಮಾಡಿಕೊಟ್ಟಿದೆ. ಕೆಲವರು ‘ವೈಜ್ಞಾನಿಕ ಸತ್ಯ’ ಎಂಬ ಪದ ಪ್ರಯೋಗ ಮಾಡುವರು. ಹಾಗೆಂದರೆ ವೈಜ್ಞಾನಿಕ ಅಸತ್ಯವೂ ಉಂಟು ಎಂಬ ಗೃಹೀತವಾಗುವ ಅಪಾಯವಿದೆ.ನಿಸರ್ಗದ ವಿದ್ಯಮಾನಗಳನ್ನು ಗಮನಿಸಿ ಅದಕ್ಕೆ ಕಾರಣಗಳನ್ನು ಊಹೆ ಮಾಡಲಾಗುತ್ತಿತ್ತು. ಇದೇ ವಿಜ್ಞಾನದ ಆರಂಭಿಕ ಹೆಜ್ಜೆ. ಆದರೆ ಇದಕ್ಕೆ ಮೊದಲು ನಿಸರ್ಗದ ವಿದ್ಯಮಾನವನ್ನು ‘ಅದು ಇರುವುದೇ ಹಾಗೆ’ ಎಂದು ಹೇಳುವ ಇಲ್ಲವೆ ‘ಅಗೋಚರ ದೈವದ ಲೀಲೆ’ ಎಂದು ಆಲೋಚನೆಯನ್ನೇ ಮರೆ ಮಾಚುವ ಕಾಲದಲ್ಲಿ ಕಾರಣಗಳನ್ನು ಊಹೆ ಮಾಡುವ ಪ್ರಯತ್ನ ‘ವಿಜ್ಞಾನ’ ಎನಿಸಿಕೊಂಡಿತು.ಆದರೆ, ಊಹೆ ಮಾಡಿದ ಅಂಶಗಳು ಅನೇಕ ಗೊಂದಲಗಳಿಗೆ ಎಡೆಮಾಡಿಕೊಟ್ಟವು. ಒಬ್ಬರ ಊಹೆಗೂ ಇನ್ನೊಬ್ಬರ ಊಹೆಗೂ ತಾಳ ಮೇಳ ಇರುತ್ತಿರಲಿಲ್ಲ. ವೀಕ್ಷಣೆಯ ಆಧಾರದ ಮೇಲೆ ಮಾಡಿದ್ದರೂ ಊಹೆಯ ಅನೇಕ ಸಾಧ್ಯತೆಗಳು ಇರುತ್ತಿದ್ದವು. ಮಿಗಿಲಾಗಿ ವಿದ್ಯಮಾನಗಳಿಗೆ ಕಾರಣವಾಗಿ ದೈವ, ದೆವ್ವ ಎಲ್ಲವನ್ನೂ ಊಹಿಸಲು ಸಾಧ್ಯ.ಅನಂತರದಲ್ಲಿ ಊಹೆಗಳ ತಾಕಲಾಟವಾಗದ ಹಾಗೆ ಹೊಂದಿಕೆ/ಸಾಂಗತ್ಯ ಇರಬೇಕೆಂಬ ಅಂಶಕ್ಕೆ ಸಾಕ್ರಟಿಸ್ ಒತ್ತು ನೀಡಿದ್ದು ವಿಶೇಷ. ಆದಾಗ್ಯೂ ಇಂದಿನ ವಿಚಾರಶೀಲ ಮನಸ್ಸುಗಳಿಗೆ ಒಪ್ಪಿಗೆಯಾಗದಂತಹ ಸಂಗತಿಗಳು ವಿಜ್ಞಾನದ ಹೆಸರಲ್ಲಿ ಇದ್ದವು.ಇದಕ್ಕೆ ವಿಜ್ಞಾನ ವಿಚಾರಕ್ಕೆ ಹತ್ತಿರವಾಗುವಂತಹ ತಿರುವು ನೀಡಿದಾತ ಫ್ರಾನ್ಸಿಸ್ ಬೇಕನ್. ನಿಸರ್ಗದ ವಿದ್ಯಮಾನಗಳನ್ನು ಅರಿಯುವಾಗ ನಿಸರ್ಗದಲ್ಲಿಯೇ ಕಾರಣವನ್ನು ಹುಡುಕಬೇಕೇ ವಿನಾ ಅಲೌಕಿಕ ಶಕ್ತಿಗಳನ್ನು ಊಹಿಸಬಾರದು. ಆಲೋಚಿಸಿದ ಕಾರಣಗಳಿಗೆ ನಿಸರ್ಗ ಅಧ್ಯಯನದಿಂದ ಪುಷ್ಟಿ ನೀಡಬೇಕು ಎಂದು ಆತ ಪ್ರತಿಪಾದಿಸಿದ. ಇಂದು ಈ ಅಭಿಪ್ರಾಯ ಬಾಲಿಶ ಎನಿಸಬಹುದು.ರೋಗಿಗೆ ಚಿಕಿತ್ಸೆ ನೀಡುವ ಮೊದಲು ರೋಗಿಯ ದೇಹವನ್ನು ಪರೀಕ್ಷಿಸಿ ರೋಗ ಪತ್ತೆ ಹಚ್ಚಬೇಕು ಎಂದು ಹೇಳಿದ ಹಾಗಿದೆ ಈ ಅಭಿಪ್ರಾಯ. ಆದರೆ, ಬೇಕನ್, ಪ್ರಯೋಗಕ್ಕೆ ನೀಡಿದ ಒತ್ತು ಅನೇಕ ತಪ್ಪು ಊಹೆಗಳಿಗೆ ಕಡಿವಾಣ ಹಾಕಿತು. ವಿಜ್ಞಾನದ ಸಿದ್ಧಾಂತಕ್ಕೆ ಬೇಕಾದ ಮಾಹಿತಿಯನ್ನು ಪರಿಪೂರ್ಣಾತ್ಮಕವಾಗಿ ಪಡೆಯುವ ಪ್ರವೃತ್ತಿ ಫ್ರಾನ್ಸಿಸ್ ಬೇಕನ್‌ನಿಂದಾಗಿ ಪ್ರಾರಂಭವಾಯಿತೆಂಬುದು ಈಗ ಇತಿಹಾಸ! ಅದೇನೂ ಕಡಿಮೆಯ ಸಾಧನೆ ಅಲ್ಲ.ಗೆಲಿಲಿಯೋ ವೇಗದ ಮಾಪನ ಮಾಡುವುದನ್ನು ಪ್ರಾರಂಭಿಸಿ - ಗುರುತ್ವಾಕರ್ಷಣೆಗೆ ಚಲಿಸುವ ವಸ್ತುವಿನ ವೇಗ ನಿಯತಗತಿಯಿಂದ ಬದಲಾಗುವುದನ್ನು ಗುರುತಿಸಿದ್ದಲ್ಲದೆ ಅದರ ವೇಗವನ್ನು ಕೊಟ್ಟಿರುವ ಕಾಲಾವಧಿಯ ಅನಂತರ ಇಷ್ಟೇ ಇರುತ್ತದೆ ಎಂಬುದನ್ನು ಮುನ್ಸೂಚಿಸಲು ಸಾಧ್ಯವಾಯಿತು. ಮುನ್ಸೂಚನೆಯಿಂದ ಮತ್ತೊಂದು ಅನುಕೂಲವೆಂದರೆ - ಆ ಮುನ್ಸೂಚನೆ ನಿಜವೇ ಎಂಬುದನ್ನು ಪ್ರಯೋಗದ ಮೂಲಕ ತಾಳೆ ನೋಡುವುದು ಸಾಧ್ಯವಾಯಿತು.ಮಾಹಿತಿಯ ಗಳಿಕೆ ಪ್ರಯೋಗ/ ನಿಸರ್ಗ ಅಧ್ಯಯನದಿಂದ, ಮಾಹಿತಿಯನ್ನು ಆಧರಿಸಿದ ಆ ಪರಿಕಲ್ಪನೆಯನ್ನು ತಾಳೆ ನೋಡುವುದೂ ಪ್ರಯೋಗ/ ಸಿದ್ಧಾಂತಗಳಿಂದಲೇ! ಈ ಹಂತ ವಿಜ್ಞಾನ ಮತ್ತು ವೈಜ್ಞಾನಿಕತೆಗೊಂದು ಹೊಸ ರೆಕ್ಕೆ ಮೂಡಿಸಿತು.ಆಧಾರ ಹಾಗೂ ಮಾಹಿತಿಯನ್ನು ಬಳಕೆ ಮಾಡಿ ರೂಪಿಸಿದ ಸಿದ್ಧಾಂತವು ಸ್ಪಷ್ಟ ರೂಪ ತಳೆದದ್ದು ನ್ಯೂಟನ್ ಕಾಲದಲ್ಲಿ. ಭೂಮಿಯ ಮೇಲೆ ಕೈಗೊಂಡ ಪ್ರಯೋಗಗಳಿಂದ ರೂಪಿಸಿದ ಪರಿಕಲ್ಪನೆಗಳನ್ನು ಕ್ರೋಡೀಕರಿಸಿ - ಅದನ್ನು ವ್ಯೋಮದ ಆಕಾಶಕಾಯಗಳಿಗೂ ವಿಸ್ತರಿಸಿದ್ದು ನ್ಯೂಟನ್ ಸಿದ್ಧಾಂತದ ವಿಶೇಷ. ಪರಿಕಲ್ಪನೆಗಳಿಂದ ಮಾಡಿದ ಸಿದ್ಧಾಂತವನ್ನು ಪ್ರಕ್ಷೇಪನಗೊಳಿಸಿ (projecting) ಅದರ ಸತ್ಯ ಮುನ್ಸೂಚನೆಯನ್ನು ವ್ಯಾಪಕಗೊಳಿಸಿದ್ದು ನ್ಯೂಟನ್‌ನ ಸಾಧನೆ.ಇಂದು, ನಾವು ವೈಜ್ಞಾನಿಕವೆಂದು ಪರಿಭಾವಿಸುವ ಅಂಶಗಳ ಬಹುತೇಕ ಭಾಗ ಈ ಪರಿಕಲ್ಪನೆಯಲ್ಲಿದೆ. ಅಧ್ಯಯನದಿಂದ ಮಾಹಿತಿ ಸಂಗ್ರಹಣ, ಸಂಗ್ರಹಿಸಿದ ಮಾಹಿತಿ ಆಧರಿಸಿ ಸಾಮಾನ್ಯೀಕರಣ ಮೂಲಕ ನಿಯಮ/ಪರಿಕಲ್ಪನೆಗಳ ಪ್ರತಿಪಾದನೆ, ಆ ನಿಯಮಗಳನ್ನು ಕ್ರೋಡೀಕರಿಸಿ ಒಂದು ಮಾದರಿಯ ಮೂಲಕ ವಿವರಿಸುವ ಸಿದ್ಧಾಂತ ಮುನ್ಸೂಚನೆಯನ್ನೂ ನೀಡಬಲ್ಲದು.ಪ್ರಯೋಗ ಸುಧಾರಣೆಯ ಮೂಲಕ ಹೊಸ ಮಾಹಿತಿ ಒಂದು ಈಗಾಗಲೇ ಪ್ರಚಲಿತ ಸಿದ್ಧಾಂತ ಹೊಂದಿಕೆಯಾಗದೇ ಹೋದರೆ ಆಗ ಸಿದ್ಧಾಂತವನ್ನು ಪರಿಷ್ಕರಣ ಮಾಡಲಾಗುವುದು. ಇಲ್ಲವೇ ಪೂರ್ಣವಾಗಿ ಬದಲಿಸಿ ಪರ್ಯಾಯ ಸಿದ್ಧಾಂತವನ್ನು ರೂಪಿಸಿರುವುದು ಉಂಟು.ಮತ್ತೊಂದು ಸ್ಪಷ್ಟೀಕರಣ ಅಗತ್ಯ. ವೈಚಾರಿಕತೆಗೂ ವೈಜ್ಞಾನಿಕತೆಗೂ ಅಂತರವುಂಟು. ವೈಚಾರಿಕತೆಯಲ್ಲಿ ತರ್ಕವೇ ಅಂತಿಮ ತೀರ್ಪುಗಾರ! ಆದರೆ ವಿಜ್ಞಾನದಲ್ಲಿ ತರ್ಕಬದ್ಧವಾಗಿ ರೂಪಿಸಿದ ಸಿದ್ಧಾಂತಕ್ಕೆ ಪ್ರತಿಕೂಲವಾದ ಸಂದರ್ಭ ಬಂದೊದಗಿದರೆ ಆಗ ಕೊನೆಯ ನಿರ್ಣಯ ಪ್ರಯೋಗಫಲಿತಾಂಶವೇ ವಿನಾ ತರ್ಕವಲ್ಲ. ಆ ಅರ್ಥದಲ್ಲಿ ವಿಜ್ಞಾನವು ತರ್ಕಕ್ಕೂ ಮೀರಿದ ಯಥಾರ್ಥವಾದಿಯಾದದ್ದು. ಆದರೆ, ಸಮುದಾಯದಲ್ಲಿ ‘ವೈಜ್ಞಾನಿಕ’ / ‘ವಿಜ್ಞಾನ’ ಎಂಬ ಪದವನ್ನು ಜಾಳುಜಾಳಾಗಿ ಬಳಕೆ ಮಾಡಲಾಗುತ್ತಿದೆ.ಅನೇಕ ವೇಳೆ ‘ವೈಜ್ಞಾನಿಕ’ ಎಂದರೆ ಅಂಕಿ-ಅಂಶ ಆಧಾರಿಸಿದ್ದು ಎಂದೂ (ಉದಾ: ಭತ್ತಕ್ಕೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿದ್ದೇವೆ ಎಂಬಂಶವನ್ನು ಗಮನಿಸಿ) ಮತ್ತೆ ಕೆಲವು ಬಾರಿ ಸಾಮಾನ್ಯ ತರ್ಕಕ್ಕೆ ಒಪ್ಪಿಗೆ ಆಗುವಂತಹದೂ ಎಂದೂ ‘ವೈಜ್ಞಾನಿಕ’ ಪದದ ಬಳಕೆ ಮಾಡಲಾಗುತ್ತದೆ. ಜನಗಳು ಮಾಡುವ ಊಹೆ ನಿಜವಾಗಿದ್ದರೂ, ಅದನ್ನು ‘ವೈಜ್ಞಾನಿಕ’ ಎಂದು ಹೇಳಲು ಬರುವುದಿಲ್ಲ. ಏಕೆಂದರೆ ಹೇಳಿದ್ದು ನಿಜವಾಗಿದ್ದರೂ ಆ ಮಾಹಿತಿ ಊಹೆಯನ್ನು ಆಧರಿಸಿದ್ದು, ಊಹೆಯು ಪ್ರಯೋಗ- ಮಾಹಿತಿಯ ಸಾಧಾರಣೀಕರಣ ಕ್ರಮದಿಂದ ಬಂದದ್ದಲ್ಲ.ಮಾನವಿಕ ವಿಷಯಗಳನ್ನು ಅರಿಯಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲಾಗುತ್ತದೆ. ಆದರೂ ಪರಿಣಾಮದ ಮುನ್ಸೂಚನೆ ನಿಸರ್ಗದಲ್ಲಿನ ಮುನ್ಸೂಚನೆಯಷ್ಟು - ಖಾತರಿಯಾಗಿರುವುದಿಲ್ಲ. ಏಕೆಂದರೆ ಮಾನವರ ನಿರ್ಣಯಗಳು ಸದಾ ತಾರ್ಕಿಕ ನೆಲೆಗಟ್ಟಿನಲ್ಲೇ ಆಗುವುದಿಲ್ಲ. ವಿಜ್ಞಾನದ ಜಟಿಲ ಮಾಪಕಗಳು, ಅನೇಕ ಮಾಪನಗಳ ಸಂಕೀರ್ಣತೆ ಇರುವಾಗಲೂ ಮುನ್ಸೂಚನೆ ಖಚಿತವಿರದು, ಉದಾಹರಣೆಗೆ, ಹವಾಮಾನ ಮುನ್ಸೂಚನೆಯನ್ನು ಗಮನಿಸಿ.ಆದರೆ ಮುನ್ಸೂಚನೆ ಒಂದೇ ವೈಜ್ಞಾನಿಕ ವಿಧಾನದ ಆಧಾರ ಅಲ್ಲ. ವಿಧಾನ ಬಹು ಬಾರಿ ತಾಳೆ ನೋಡುವಿಕೆ. ಒಮ್ಮೆ ರೂಪಿಸಿದ ಸಿದ್ಧಾಂತವನ್ನು ಮರುರೂಪಗೊಳಿಸುವ ತೆರೆದ ಮನಸ್ಸು - ಎಲ್ಲವನ್ನೂ ಆಧರಿಸಿ ಸಿದ್ಧಾಂತದ ವೈಜ್ಞಾನಿಕತೆಯನ್ನು ನಿರ್ಧರಿಸಬೇಕು. ಇವ್ಯಾವೂ ಇಲ್ಲದ ವೈಜ್ಞಾನಿಕತೆ - ಕೇವಲ ಕತೆ!(ಲೇಖಕರು: ಶಿಕ್ಷಣತಜ್ಞರು ಮತ್ತು ಸಂವಹನಕಾರರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.