ವೈಜ್ಞಾನಿಕ ಅಧ್ಯಯನಕ್ಕೆ ಇತಿಹಾಸ ತಜ್ಞರ ಸಲಹೆ

7
`ನಮ್ಮ ಮೆಟ್ರೊ' ಕಾಮಗಾರಿ ವೇಳೆ ದೊರೆತ 2 ಫಿರಂಗಿ

ವೈಜ್ಞಾನಿಕ ಅಧ್ಯಯನಕ್ಕೆ ಇತಿಹಾಸ ತಜ್ಞರ ಸಲಹೆ

Published:
Updated:

ಬೆಂಗಳೂರು: `ನಗರದ ಕೆ.ಆರ್.ಮಾರುಕಟ್ಟೆಯ ಬಳಿ ಈಚೆಗೆ `ನಮ್ಮ ಮೆಟ್ರೊ' ಕಾಮಗಾರಿಯ ವೇಳೆ ದೊರೆತ ಎರಡು ಫಿರಂಗಿಗಳ ವೈಜ್ಞಾನಿಕ ಅಧ್ಯಯನ ನಡೆಸಿದರೆ ಇತಿಹಾಸದ ಇನ್ನಷ್ಟು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರಲಿವೆ' ಎಂದು ಇತಿಹಾಸತಜ್ಞರು ಅಭಿಪ್ರಾಯಪಟ್ಟಿದ್ದಾರೆ.ರಾಜ್ಯ ಉನ್ನತ ಶಿಕ್ಷಣ ಪರಿಷತ್ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಇತಿಹಾಸ ಹಾಗೂ ಪುರಾತತ್ವಶಾಸ್ತ್ರ ಸಂಶೋಧನಾ ಪದ್ಧತಿ'ಯ ಕುರಿತ ರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ ಬೆಂಗಳೂರು ಕೇಂದ್ರದ ಉಪನಿರ್ದೇಶಕ ಪ್ರೊ.ಎಸ್.ಕೆ. ಅರುಣಿ ಮಾತನಾಡಿ, `ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿದರೆ ಈ ಎರಡು ಫಿರಂಗಿಗಳ ಬಗ್ಗೆ ಸಮಗ್ರ ಮಾಹಿತಿ ದೊರಕಲಿದೆ. ಈ ಅಧ್ಯಯನಕ್ಕೆ ಅಧಿಕ ಕಾಲಾವಕಾಶ ಬೇಕಾಗುತ್ತದೆ' ಎಂದರು.`18ನೇ ಶತಮಾನದ ಈ ಫಿರಂಗಿಯನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಿಸಿರಬಹುದು ಎಂಬ ವಾದ ಇದೆ. ಆದರೆ, ಎರಡೂ ಫಿರಂಗಿಗಳು ಒಂದೇ ಕಾಲಕ್ಕೆ ಸೇರಿದವು ಅಲ್ಲ. ಅಲ್ಲದೆ ಇವರೆಡು ಒಂದೇ ಶೈಲಿಯಲ್ಲಿ ಇಲ್ಲ.ಅವುಗಳ ಶೈಲಿ ಹಾಗೂ ತಾಂತ್ರಿಕತೆಯನ್ನು ಗಮನಿಸಿದರೆ ಬೇರೆ ಬೇರೆ ಕಾಲದಲ್ಲಿ ತಯಾರಾಗಿವೆ ಎಂಬ ವಾದಕ್ಕೆ ಪುಷ್ಠಿ ದೊರಕುತ್ತಿದೆ' ಎಂದು ಅವರು ಪ್ರತಿಪಾದಿಸಿದರು.`ಒಂದು ಫಿರಂಗಿ 1750ರ ಕಾಲದಲ್ಲಿ ತಯಾರಾಗಿರಬಹುದು. ಅಲ್ಲದೆ ಒಂದು ಫಿರಂಗಿಯು ಕೋಟೆಯ ಅಂಗಳ ಇದ್ದ ಜಾಗದಲ್ಲಿ ಪತ್ತೆಯಾಗಿದೆ. ಟಿಪ್ಪು ಸೇನೆಗೆ ಸೇರಿದ ಫಿರಂಗಿಯಾಗಿದ್ದರೆ ಕೋಟೆಯ ಮೇಲ್ಭಾಗದಲ್ಲಿ ಇರುತ್ತಿತ್ತು. ಈ ಫಿರಂಗಿ ಎದುರಾಳಿ ಸೇನೆಗೆ ಸೇರಿರುವ ಸಾಧ್ಯತೆಯೂ ಇದೆ. ವೈಜ್ಞಾನಿಕ ಅಧ್ಯಯನದಿಂದ ಈ ಎಲ್ಲ ಅಂಶಗಳು ಬೆಳಕಿಗೆ ಬರಲಿವೆ' ಎಂದು ಅವರು ಅಭಿಪ್ರಾಯಪಟ್ಟರು.ನವೆಂಬರ್ 22ರಂದು `ನಮ್ಮ ಮೆಟ್ರೊ' ಕಾಮಗಾರಿ ನಡೆಯುತ್ತಿದ್ದ ವೇಳೆ ಸುಮಾರು 12 ಅಡಿ ಉದ್ದದ ಪುರಾತನ ಫಿರಂಗಿ ಮತ್ತು ಒಂದು ಗುಂಡು ಪತ್ತೆಯಾಗಿತ್ತು. ಮರುದಿನ ಮತ್ತೊಂದು ಫಿರಂಗಿ ಪತ್ತೆಯಾಗಿತ್ತು. ಎರಡೂ ಫಿರಂಗಿಗಳು ಸಾವಿರ ಕೆ.ಜಿ.ಗಿಂತಲೂ ಅಧಿಕ ತೂಕ ಹೊಂದಿವೆ. ಬೆಂಗಳೂರು ಮೆಟ್ರೊ ರೈಲು ನಿಗಮವು ಈ ಫಿರಂಗಿಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿತ್ತು. ಬಳಿಕ ವೆಂಕಟಪ್ಪ ಕಲಾ ಗ್ಯಾಲರಿಗೆ ತಂದು ಇಡಲಾಗಿತ್ತು. ಆದರೆ, ಈವರೆಗೂ ಫಿರಂಗಿಗಳನ್ನು ರಾಸಾಯನಿಕದಿಂದ ಸ್ವಚ್ಛಗೊಳಿಸುವ ಕೆಲಸ ಆಗಿಲ್ಲ. ಪುರಾತತ್ವ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಿ ಫಿರಂಗಿಯ ಕಾಲಮಾನದ ಪತ್ತೆಗೆ ಮುಂದಾಗಬೇಕು ಎಂದು ಇತಿಹಾಸತಜ್ಞರು ಒತ್ತಾಯಿಸಿದ್ದಾರೆ.ವಿಜ್ಞಾನಿ ಡಾ.ಎನ್.ಎಸ್.ರಾಜಾರಾಮ್ ಪ್ರತಿಕ್ರಿಯಿಸಿ, `ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾದ ಸಂದರ್ಭದಲ್ಲಿ ಸಮಗ್ರ ಅಧ್ಯಯನ ನಡೆಸಲು ಪುರಾತತ್ವ ಇಲಾಖೆಯಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ. ಅಲ್ಲದೆ ಸ್ಫೂರ್ತಿ ತುಂಬುವ ಕೆಲಸವೂ ಆಗಬೇಕಿದೆ. ಆಧುನಿಕ ತಂತ್ರಜ್ಞಾನದ ನೆರವು ಪಡೆಯಬೇಕು' ಎಂದು ಸಲಹೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಮಾತನಾಡಿ, `ಫಿರಂಗಿಗಳನ್ನು ಶೀಘ್ರದಲ್ಲಿ ರಾಸಾಯನಿಕದಿಂದ ಶುದ್ಧಗೊಳಿಸಲು ತಿಳಿಸಲಾಗಿದೆ.ತಜ್ಞರ ನೆರವು ಪಡೆದು ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ತಿಳಿಸಲಾಗಿದೆ' ಎಂದು ಅವರು ಸ್ಪಷ್ಟಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry