ಗುರುವಾರ , ಮೇ 26, 2022
31 °C

ವೈಜ್ಞಾನಿಕ ಬೆಲೆ ಘೋಷಣೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹ.ಮಾಯಕೊಂಡ: ಅಡಿಕೆ ಬೆಳೆಗಾರರಿಂದ ರೈಲುತಡೆ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಯಕೊಂಡ: ಅಡಿಕೆ ಉತ್ಪನ್ನಗಳಾದ ಗುಟ್ಕಾ ಮತ್ತು ಪಾನ್ ಮಸಾಲಗಳನ್ನು ಪ್ಲಾಸ್ಟಿಕ್ ಸ್ಯಾಷೇಗಳಲ್ಲಿ ಮಾರಾಟ ಮಾಡದಂತೆ ಕಾನೂನು ಮಾಡಿರುವುದನ್ನು ಕೇಂದ್ರ ಸರ್ಕಾರ ಕೂಡಲೆ ಹಿಂದಕ್ಕೆ ಪಡೆದು ಅಡಿಕೆ ಬೆಳೆಗೆ ವೈಜ್ಞಾನಿಕ ಬೆಲೆ ಘೋಷಿಸಬೇಕೆಂದು ಅಡಿಕೆ ಬೆಳೆಗಾರರ ಹಿತರಕ್ಷಣಾ ಸಂಘ ಸರ್ಕಾರವನ್ನು ಒತ್ತಾಯಿಸಿತು.ಗ್ರಾಮದಲ್ಲಿ ಗುರುವಾರ ಸರ್ಕಾರದ ಧೋರಣೆ ವಿರೋಧಿಸಿ ಹಮ್ಮಿಕೊಂಡಿದ್ದ ರೈಲುತಡೆ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಅಡಿಕೆ ಬೆಳೆಗಾರರ ಹಿತರಕ್ಷಣಾ ಸಂಘ ಮತ್ತು ರೈತಸಂಘಗಳ ಮುಖಂಡರು ಮಾತನಾಡಿ, ರಾಜ್ಯದಲ್ಲಿ 5.7 ಮತ್ತು ರಾಷ್ಟ್ರದಲ್ಲಿ 11 ಲಕ್ಷ ಹೆಕ್ಟೇರಿನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.ದುಬಾರಿ ಖರ್ಚನ್ನು ಭರಿಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಪ್ಲಾಸ್ಟಿಕ್ ಸ್ಯಾಷೇಯಲ್ಲಿ ಮಾರಾಟ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ವರ್ತಕರು ಮತ್ತು ದಲ್ಲಾಲಿಗಳಿಗಿಂತ ರೈತರಿಗೆ ಮರಣ ಶಾಸನವಾಗಿದೆ. ಅಡಿಕೆಯ ಬೆಲೆ ಕುಸಿದು, ರೈತರು ತತ್ತರಿಸಿದ್ದಾರೆ ಎಂದರು.

ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಇದಕ್ಕೂ ಮುಂಚೆ ಮಾಯಕೊಂಡ ರೈಲುನಿಲ್ದಾಣದ ಬಳಿ ಜಮಾಯಿಸಿದ್ದ ನೂರಾರು ರೈತರು ಶರಾವತಿ ಎಕ್ಸ್‌ಪ್ರೆಸ್ ರೈಲನ್ನು 5ನಿಮಿಷ ತಡೆದು ಪ್ರತಿಭಟಿಸಿದರು.ರೈಲ್ವೆ ಸುರಕ್ಷಾ ದಳದ ವೃತ್ತ ನಿರೀಕ್ಷಕ ಸುಧೀರ್ ಗಿವಾರಿ, ಉಪ ನಿರೀಕ್ಷಕ ಕಾರೇಕರ್, ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್, ಉಪ ನಿರೀಕ್ಷಕ ರಾಜಣ್ಣ ಹಾಗೂ ಸಿಬ್ಬಂದಿ ಭದ್ರತೆ ಒದಗಿಸಿದ್ದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಬಂಡೇ ಬೊಮ್ಮೇನಹಳ್ಳಿ ಚಂದ್ರಪ್ಪ, ಹೆದ್ನೆ ಮುರಿಗೇಶಪ್ಪ, ವಿಜಯಣ್ಣ, ಹುಚ್ಚವ್ವನಹಳ್ಳಿ ಗ್ರಾ.ಪಂ. ಅಧ್ಯಕ್ಷ ರಾಜೇಂದ್ರ, ಮಾಯಕೊಂಡ ಮಾಜಿ ಪುರಸಭಾ ಅಧ್ಯಕ್ಷ ನೀಲಪ್ಪ, ರೈತ ಸಂಘದ ಅಧ್ಯಕ್ಷ ಬೀರೇಶಪ್ಪ, ಕ್ಯಾತನಹಳ್ಳಿ ರುದ್ರೇಶ್, ಹುಚ್ಚವ್ವನಹಳ್ಳಿ ಸುಭಾಷ್, ಶಶಿಧರ, ಈಚಘಟ್ಟ ರುದ್ರೇಶ್, ಕೃಷಿಕ ಸಮಾಜದ ಉಪಾಧ್ಯಕ್ಷ ರುದ್ರೇಶ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.