ಬುಧವಾರ, ಮೇ 12, 2021
18 °C

ವೈಟ್‌ಫೀಲ್ಡ್: ಮೆಟ್ರೊ ಪಥ ಬದಲಾಯಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಮ್ಮ ಮೆಟ್ರೊ 2ನೇ ಹಂತದ ಯೋಜನೆಯಲ್ಲಿ ವೈಟ್‌ಫೀಲ್ಡ್ ಬಳಿಯ ರಫ್ತು ಉತ್ತೇಜನ ಕೈಗಾರಿಕಾ ಪಾರ್ಕ್ (ಇಪಿಐಪಿ) ಸಮೀಪ ಪಥ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನಿರ್ಧರಿಸಿದ್ದಾರೆ.10 ವರ್ಷಗಳಿಂದ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಆಗುವ ತೊಂದರೆ ತಪ್ಪಿಸಲು ಪಥ ಬದಲಾವಣೆ ಮಾಡುವುದು ಸೂಕ್ತ ಎಂದು ಪಾಟೀಲ್ ಅವರು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಮನವಿ ಸಲ್ಲಿಸಿದರು. ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರದ ಉನ್ನತ ಅಧಿಕಾರ ಸಮಿತಿ ಸಹ ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಾಟೀಲ್ ಸರ್ಕಾರದ ಮೊರೆ ಹೋಗಲು ನಿರ್ಧರಿಸಿದ್ದಾರೆ.`ಅನುಷ್ಠಾನ ಪ್ರಾಧಿಕಾರಗಳ ತಲೆ ಗಟ್ಟಿಯಾಗಿದೆ. ಮೆಟ್ರೊ ಅನುಷ್ಠಾನಗೊಳ್ಳುತ್ತಿರುವುದು ಬೆಂಗಳೂರಿನಲ್ಲಿ ಮಾತ್ರ ಅಲ್ಲ. 10ಕ್ಕೂ ಅಧಿಕ ನಗರಗಳಲ್ಲಿ ಮೆಟ್ರೊ ಅನುಷ್ಠಾನಗೊಳ್ಳುತ್ತಿದೆ. ಯೋಜನೆ ಜಾರಿಗೆ ತರುವಾಗ ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ. ಅವರು ಏಕಮುಖವಾಗಿ ತೀರ್ಮಾನ ತೆಗೆದುಕೊಳ್ಳುವುದು ಸಮರ್ಥನೀಯ ಅಲ್ಲ. ಹೀಗಾಗಿ ರಾಜ್ಯ ಸರ್ಕಾರದ ಮುಂದೆ ನಿಯೋಗ ಕರೆದೊಯ್ಯಲು ತೀರ್ಮಾನಿಸಿದ್ದೇನೆ' ಎಂದು ಪಾಟೀಲ್ ತಿಳಿಸಿದ್ದಾರೆ.ಬೆಂಗಳೂರು ಮೆಟ್ರೊ ರೈಲು ನಿಗಮದ ಬಿ.ಎಸ್. ಸುಧೀರ್‌ಕೃಷ್ಣ ಅವರು ಪಾಟೀಲ್ ಪತ್ರಕ್ಕೆ ಪ್ರತಿಕ್ರಿಯೆ ನೀಡಿ, `ಪಥದಲ್ಲಿ ಬದಲಾವಣೆ ಮಾಡಲು ಉನ್ನತ ಅಧಿಕಾರ ಸಮಿತಿ ಒಪ್ಪಿಗೆ ನೀಡಿಲ್ಲ' ಎಂದು ತಿಳಿಸಿದ್ದರು. `ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ ಈಗಿನ ಪಥ ಹಾಗೂ ವೈದೇಹಿ ಆಸ್ಪತ್ರೆ ಬಳಿ ನಿಲ್ದಾಣದ ಬಗ್ಗೆ ಚರ್ಚೆ ನಡೆಸಲಾಗಿದೆ.

ನೀವು ಸಲಹೆ ನೀಡಿದಂತೆ ವೈದೇಹಿ ಆಸ್ಪತ್ರೆ ನಿಲ್ದಾಣ ಮತ್ತು ಬಿಎಂಟಿಸಿ ನಿಲ್ದಾಣದ ನಡುವೆ ಮಾರ್ಗ ನಿರ್ಮಿಸುವುದು ಸಾಧ್ಯವಿಲ್ಲ' ಎಂದು ನಿಗಮವು ಪಾಟೀಲ್ ಅವರಿಗೆ ಪತ್ರದಲ್ಲಿ ತಿಳಿಸಿತ್ತು. `ಪಾಟೀಲ್ ಸಲಹೆಯನ್ನು ಸ್ವೀಕರಿಸಿದರೆ ಬಸ್ ನಿಲ್ದಾಣ ಸೇರಿದಂತೆ ಬಿಎಂಟಿಸಿಗೆ ಸೇರಿದ ಜಾಗ ವಶಪಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ಸಲಹೆ ಸ್ವೀಕಾರಾರ್ಹ ಅಲ್ಲ' ಎಂದು ನಿಗಮ ಅಭಿಪ್ರಾಯ ಪಟ್ಟಿತ್ತು.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಟೀಲ್ ಅವರು, `ನನ್ನ ಸಲಹೆ ಸ್ವೀಕರಿಸಿದರೆ ಮೂಲಸೌಕರ್ಯಕ್ಕೆ ತೊಂದರೆಯಾಗುವುದಿಲ್ಲ. ಒಂದು ಭಾಗವನ್ನು ಮಾತ್ರ ವಶಕ್ಕೆ ಪಡೆದುಕೊಳ್ಳಬೇಕಾಗುತ್ತದೆ. ಪಥ ಬದಲಾವಣೆ ಮಾಡದಿರಲು ಅವರು ಈಗಾಗಲೇ ತೀರ್ಮಾನಿಸಿದ್ದಾರೆ. ಅನ್ಯ ಮಾರ್ಗವೇ ಇಲ್ಲ. ಅನಿವಾರ್ಯವಾಗಿ ಸರ್ಕಾರದ ಮೊರೆ ಹೋಗಬೇಕಾಗಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.