ವೈಟ್‌ಹೌಸ್ 3ನೇ ತಲೆಮಾರು ರಾಜಕೀಯಕ್ಕೆ

7

ವೈಟ್‌ಹೌಸ್ 3ನೇ ತಲೆಮಾರು ರಾಜಕೀಯಕ್ಕೆ

Published:
Updated:

ಗಂಗಾವತಿ: ಮಾಜಿ ಎಂ.ಎಲ್.ಸಿ. ಎಚ್.ಆರ್. ಶ್ರೀನಾಥರ ಕಿರಿಯ ಪುತ್ರ ಭರತ್ ಕುಮಾರ ಬುಧವಾರ ನಡೆದ `ಕಾಂಗ್ರೆಸ್ಸಿಗೆ ಬನ್ನಿ ಬದಲಾವಣೆ ತನ್ನಿ~ ಎಂಬ ಕಾರ್ಯಕ್ರಮದಲ್ಲಿ ವಿಧ್ಯುಕ್ತವಾಗಿ ಕಾಂಗ್ರೆಸಿಗೆ ಸೇರುವ ಮೂಲಕ `ವೈಟ್‌ಹೌಸಿನ ಮೂರನೇ ತಲೆಮಾರು~ ರಾಜಕೀಯ ಪ್ರವೇಶಿಸಿದಂತಾಗಿದೆ.ಶ್ರೀನಾಥ ಪುತ್ರ ಭರತ್, ರಾಜಕೀಯ ವಲಯದಲ್ಲಿ ವೈಟ್‌ಹೌಸ್ ಎಂದೇ ಚಿರಪರಿಚಿತವಾದ ಕೊಪ್ಪಳ ಜಿಲ್ಲಾ ಕಾಂಗ್ರೆಸ್ಸಿನ ಶಕ್ತಿಕೇಂದ್ರದ ನಿವಾಸಿ ಮಾಜಿ ಸಂಸದ ಎಚ್.ಜಿ. ರಾಮುಲು ಮೊಮ್ಮಗ. ತಾತ, ತಂದೆಯರ ಬಳಿಕ ಈಗ ಮೊಮ್ಮಗ ಸಕ್ರಿಯ ರಾಜಕೀಯದ ಸುಳಿವು ನೀಡಿದ್ದಾನೆ.   ಪಕ್ಷದ ಶಕ್ತಿ ಕೇಂದ್ರ: ಕೊಪ್ಪಳ ಜಿಲ್ಲೆಯಾಗುವುದಕ್ಕಿಂತಲೂ ಮುಂಚೆ ಅವಿಭಜಿತ ರಾಯಚೂರು ಜಿಲ್ಲೆಯ ಕಾಂಗ್ರೆಸಿನಲ್ಲಿ ರಾಮುಲು ಹಿಡಿತ ಸಾಧಿಸಿದ್ದರು. ರಾಮುಲು ಹೇಳದೇ ಪಕ್ಷದಲ್ಲಿ ಒಂದು ಗರಿಕೆ ಹುಲ್ಲು ಕದಲದು ಎಂಬಷ್ಟು ಪಕ್ಷದ ಮೇಲೆ ವೈಟ್‌ಹೌಸ್ ಹಿಡಿತವಿತ್ತು.1974ರಲ್ಲಿ ಎಚ್.ಜಿ. ರಾಮುಲು ತಮ್ಮ ಚಿಕ್ಕಪ್ಪ ಶ್ರೀರಾಮುಲು ನಿಧನರಾದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು.ಅಲ್ಲಿಂದ 1980ರಿಂದ ಎರಡು ಅವಧಿಗೆ ಕೊಪ್ಪಳ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

1989ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಹತ್ತು ವರ್ಷ ರಾಜಕೀಯ ಅಜ್ಞಾತವಾಸ ಅನುಭವಿಸಿದ ರಾಮುಲು, 1999ರಲ್ಲಿ ಸಂಸದರಾಗಿ ಆಯ್ಕೆಯಾಗಿ 2004ರ ಬಳಿಕ ಇಲ್ಲಿವರೆಗೂ 

ರಾಜಕೀಯ ನಿವೃತ್ತಿಯಲ್ಲಿದ್ದಾರೆ. ಇಂದಿಗೂ ಪಕ್ಷದಲ್ಲಿ ಅವರು ಹೇಳಿದ್ದೆ ವೇದವಾಖ್ಯ. ಪಕ್ಷಕ್ಕೆ ಪುನರ್‌ವೈಭವ: ತಂದೆ ಎಚ್.ಜಿ. ರಾಮುಲು ಅವರ ರಾಜಕೀಯ ಅನುಭವವನ್ನೆ ಮೆಟ್ಟಿಲಾಗಿಸಿಕೊಂಡು ರಾಜಕೀಯಕ್ಕೆ ಪ್ರವೇಶಿಸಿದ ಎಚ್.ಆರ್. ಶ್ರೀನಾಥ, ಮೊದಲ ಬಾರಿಗೆ 1997ರಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ಗೆ (ಡಿಸಿಸಿ) ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಜಿಲ್ಲೆಯಲ್ಲಿ ಜನತಾ ಪರಿವಾರದ ಅಲೆ ಇತ್ತು.ಕೊಪ್ಪಳದಲ್ಲಿ ಕರಡಿ ಸಂಗಣ್ಣ, ಯಲಬುರ್ಗಾದಲ್ಲಿ ಬಸವರಾಜ ರಾಯರೆಡ್ಡಿ, ಕುಷ್ಟಗಿಯಲ್ಲಿ ಕೆ. ಶರಣಪ್ಪ, ಕನಕಗಿರಿಯಲ್ಲಿ ಸಾಲೋಣಿ ನಾಗಪ್ಪ ಶಾಸಕರಾಗಿದ್ದರೆ, ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರಾಗಿ ಶ್ರೀರಂಗದೇವರಾಯಲು ಗಂಗಾವತಿಯಲ್ಲಿ ಆಯ್ಕೆಯಾಗಿದ್ದರು.ಇಂತಹ ಸಂದರ್ಭದಲ್ಲಿ ಡಿಸಿಸಿ ಜವಾಬ್ದಾರಿ ವಹಿಸಿಕೊಂಡ ಶ್ರೀನಾಥ, 1999ರ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಬಿಟ್ಟು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದರು. ಸಂಸದ ಸ್ಥಾನವೂ ಆಗ ಪಕ್ಷಕ್ಕೆ ಲಭಿಸಿತು.ಅಖಾಡಕ್ಕೆ ಮೊಮ್ಮಗ: ಪಕ್ಷದ ಹೊಣೆ ನಿಭಾಯಿಸಿದ ಶ್ರೀನಾಥ, 2003ರಲ್ಲಿ ಎಂ.ಎಲ್.ಸಿ. ಯಾಗಿ ಜನ ಸೇವೆಗೆ ಮರಳಿದರು.ಈಗ ಅದಿರು ವ್ಯವಹಾರ, ಹೊಟೇಲ್ ಉದ್ಯಮದ ಅನುಭವ ಇರುವ ವೈಟ್‌ಹೌಸಿನ ಮೊಮ್ಮಗ ಭರತ್ ಅಖಾಡಕ್ಕಿಳಿದಿರುವುದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ, ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry