ವೈಣಿಕರ ವೀಣೆಯ ಬೆಡಗು

7

ವೈಣಿಕರ ವೀಣೆಯ ಬೆಡಗು

Published:
Updated:
ವೈಣಿಕರ ವೀಣೆಯ ಬೆಡಗು

ಗಾಂಧಿ ಜಯಂತಿಯ ದಿನ ನಗರದಲ್ಲಿ ಒಂದು ವಿಶೇಷ ಕಾರ್ಯಕ್ರಮ. ಅಂದು ವಿಶ್ವ ಮಾಧುರ್ಯ ದಿನವನ್ನಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಆಚರಣೆ. ಬೆಳಗಿನಿಂದ ಸಂಜೆಯವರೆಗೆ ವೈಣಿಕರು ವೀಣೆ ನುಡಿಸಿ ರಾಷ್ಟ್ರಪಿತನಿಗೆ ನಾದಾಂಜಲಿ ಅರ್ಪಿಸಿದರು. ನವದೆಹಲಿಯ ಭಾರತ್ ವೀಣಾಲಯ ರಾಷ್ಟ್ರದ ವಿವಿಧ ಕಡೆ ನಡೆಸುತ್ತಿರುವ ವೀಣಾ ಮಹೋತ್ಸವದ ಅಂಗವಾಗಿ ನಡೆದ ಉತ್ಸವದಲ್ಲಿ ಏಳು ಜನ ವೈಣಿಕರು ಪಾಲ್ಗೊಂಡರು. ನಿವೃತ್ತ ನ್ಯಾಯಮೂರ್ತಿ ಡಾ. ಎಂ.ಎನ್. ವೆಂಕಟಾಚಲಯ್ಯ ದೀಪ ಬೆಳಗಿಸಿ ವೀಣಾ ಮಹೋತ್ಸವಕ್ಕೆ ಚಾಲನೆ ನೀಡಿದರು.ಉತ್ಸವದ ಮೊದಲ ಕಾರ್ಯಕ್ರಮ ನೀಡಿದ ಡಾ. ಸುಮಾ ಸುಧೀಂದ್ರ ಮೋಹನ ವರ್ಣವನ್ನು ಭಿನ್ನ ಕಾಲಗಳಲ್ಲಿ ನುಡಿಸಿ, ಬಿರುಸಾದ ಚಾಲನೆ ನೀಡಿದರು. ದೀಕ್ಷಿತರ ನಾಟರಾಗದ ಕೀರ್ತನೆಯಿಂದ ಗಣಪತಿಗೆ ನಮಿಸಿ, ಪ್ರಧಾನ ರಾಗಕ್ಕೆ ಸರಿದರು.ಭಾವಪೂರ್ಣ ರಾಗವೆಂದು ಹೆಸರಾದ ವರಾಳಿಯನ್ನು ನುಡಿಸಿ, ತಾನಕ್ಕೆ ಮುಂದಾದರು. ಸಮಯಾಭಾವದಿಂದ ತಾನ ಹಾಗೂ ಸ್ವರ ಪ್ರಸ್ತಾರಗಳೂ ಕಿರಿದಾದವು. ಆದರೆ ಆಯ್ದ ಕೃತಿ ಮಾಮವ ಮೀನಾಕ್ಷಿ ಈ ರಾಗದ ಒಂದು ಭಾವಪೂರ್ಣ ಕೃತಿ. ಪಿಟೀಲಿನಲ್ಲಿ ನಳಿನಾ ಮೋಹನ್, ಮೃದಂಗದಲ್ಲಿ ಬಿ.ಸಿ. ಮಂಜುನಾಥ್ ಹಾಗೂ ಘಟದಲ್ಲಿ ಎಸ್.ಎನ್. ನಾರಾಯಣಮೂರ್ತಿ ನೆರವಾದರು. ವ್ಯಾಕರಣ ಬದ್ಧವಾದ ವೀಣೆ 

ಎರಡನೆಯದಾಗಿ ವೀಣೆ ನುಡಿಸಿದ ವಿ.ಜಿ. ಸುಬ್ರಹ್ಮಣ್ಯಂ ಕಾರೈಕುಡಿ ಪರಂಪರೆಗೆ ಸೇರಿದವರಾಗಿ ಅಣ್ಣಾಮಲೈ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವವರು. ಕಾರ್ಯಕ್ರಮದ ಪ್ರಾರಂಭಕ್ಕೆ ದಶರಾಗ ಮಾಲಿಕಾ ವರ್ಣ ಒಂದು ಉತ್ತಮ ಆಯ್ಕೆ. ಪರಿದಾನ ಮಿಚ್ಚಿತೆ ಕೃತಿಯನ್ನು ಹಿತಮಿತವಾಗಿ ವಿಸ್ತರಿಸಿದರು.ಆ ಮಧ್ಯೆ-ನಿರವದಿಸುಖದಾ, ಮನವ್ಯಾಲರಾ   ಮುಂತಾದ ಕೃತಿಗಳನ್ನು ದ್ರುತ ಗತಿಯಲ್ಲಿ ನುಡಿಸಿದರು. ವ್ಯಾಕರಣಬದ್ಧ ಸಂಗೀತ! ಆದರೆ ಇಂದಿನ ಸ್ವಾದದಿಂದ ದೂರ! ಇವರಿಗೂ ಮಂಜುನಾಥ್ ಮತ್ತು ನಾರಾಯಣಮೂರ್ತಿ ಲಯವಾದ್ಯಗಳಲ್ಲಿ ಸಹಕರಿಸಿದರು.ಪ್ರಖರ ಮೀಟು

ಪ್ರಶಾಂತ್ ಅಯ್ಯಂಗಾರ್ ಅವರು ದಿವಂಗತ ಆರ್.ಕೆ. ಸೂರ್ಯನಾರಾಯಣ ಅವರ ಶಿಷ್ಯರಾಗಿ ವೈಣಿಕ ಪ್ರವೀಣ ಭಕ್ಷಿ ಸುಬ್ಬಣ್ಣನವರ ಶಿಷ್ಯ ಪರಂಪರೆಗೆ ಸೇರುತ್ತಾರೆ. ತಮ್ಮ ಸ್ವಯಂ ರಚಿತ ಗಮನಶ್ರಮ ರಾಗದ ವರ್ಣದೊಂದಿಗೆ ಪ್ರಶಾಂತ್ ತಮ್ಮ ಕಾರ್ಯಕ್ರಮ ಪ್ರಾರಂಭಿಸಿದರು. ಮಾಧುರ್ಯದ ರಾಗ ಬಿಂದುಮಾಲಿನಿಯನ್ನು ಕ್ಲಿಪ್ತವಾದರೂ ಸಬಲ ಸಂಗತಿಗಳಿಂದ ಚಿತ್ರಿಸಿದರು. ಈ ರಾಗದ ಪ್ರಸಿದ್ಧ ಕೃತಿ `ಎಂಥ ಮುದ್ದೊ~ (ತ್ಯಾಗರಾಜರ ರಚನೆ) ಹಾಡನ್ನು ಸ್ವರ ಪ್ರಸ್ತಾರಗಳಿಂದ ಅಲಂಕರಿಸಿದರು. ಬಿರುಸಾದ ಮೀಟು, ಪ್ರಖರ ಸಂಗತಿಗಳು! ವಿನಿಕೆಗೆ ಸ್ವಲ್ಪ ಮೃದುತ್ವ ಬಂದರೆ ಸೌಖ್ಯ ಹೆಚ್ಚಾದೀತು. ಇದಲ್ಲದೆ ಸ್ವಾಮಿನಾಥ ಪರಿಪಾಲಯ, ತಿಲ್ಲಾನಗಳನ್ನೂ ತಮ್ಮದೇ ಆದ ರೀತಿಯಲ್ಲಿ ನುಡಿಸಿದರು.

ಅವರೊಂದಿಗೆ ಮೃದಂಗದಲ್ಲಿ ಪ್ರಶಾಂತ್ ಹಾಗೂ ಘಟದಲ್ಲಿ ದಯಾನಂದ ಮೋಹಿತೆ ಸಹಕರಿಸಿದರು. ಇವರಲ್ಲದೆ ಡಿ. ಬಾಲಕೃಷ್ಣ, ಪ್ರೊ. ಪಿ.ಕೆ. ಶ್ರೀವತ್ಸ, ರೇವತಿ ಸದಾಶಿವಮ್ ಹಾಗೂ ಅನುರಾಧಾ ಮಧುಸೂಧನ್ ಸಹ ವೀಣೆ ನುಡಿಸಿ ಗಾಂಧೀಜಿಗೆ ನಾದ ನಮನ ಸಲ್ಲಿಸಿದರು.ಪ್ರತಿ ಕಾರ್ಯಕ್ರಮದ ಅವಧಿಯನ್ನು ಈಗಿರುವ 45 ನಿಮಿಷದಿಂದ ಕನಿಷ್ಠ 120 ನಿಮಿಷಕ್ಕಾದರೂ ಹೆಚ್ಚಿಸುವ ಅಗತ್ಯವಿದೆ. ವ್ಯವಸ್ಥಾಪನ-ಪೂರ್ವಪ್ರಚಾರಗಳಲ್ಲೂ ಪರಿಷ್ಕಾರವಾದರೆ ಗಾಂಧೀಜಿ ಹೆಸರಿನ ವೀಣಾ ಮಹೋತ್ಸವ ಇನ್ನೂ ಅರ್ಥಪೂರ್ಣವಾಗಬಹುದು.ನಾಟ್ಯ ಸಸಿಗಳು

ನಾಟ್ಯಾಂಜಲಿ ನೃತ್ಯ ಶಾಲೆಯ ವಿದ್ಯಾರ್ಥಿನಿ ಭಾರ್ಗವಿ ಗೌತಮ್ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆರ್ಕಿಟೆಕ್ಟ್ ಪದವೀಧರೆ. ಕೆಲ ನೃತ್ಯ ನಾಟಕಗಳಲ್ಲೂ ಇವರು ಪಾಲ್ಗೊಂಡಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ (ನಯನ ಸಭಾಂಗಣ) ಪುಷ್ಪಾಂಜಲಿ, ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ, ಘನವಾದ ವರ್ಣ ಮನವಿಯನ್ನು ಆಯ್ದರು.ಪದದಲ್ಲೂ ಹಸನಾದ ಅಭಿನಯದಿಂದ ಗಮನ ಸೆಳೆದರು. ಉತ್ತಮ ನತ್ತ-ನೃತ್ಯಗಳಿಂದ ತಾನು ಪಡೆಯುತ್ತಿರುವ ಶಿಕ್ಷಣವನ್ನು ಹೊರಗೆಡಹಿದರು. ನಟುವಾಂಗದಲ್ಲಿ ಪ್ರಸನ್ನ, ಗಾಯನದಲ್ಲಿ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ಗುರುಮೂರ್ತಿ ಹಾಗೂ ಕೊಳಲಿನಲ್ಲಿ ವೇಣುಗೋಪಾಲ್ ಮೇಳದಲ್ಲಿ ಸಹಾಯ ಮಾಡಿದರು.ಶಾಂಭವಿ ನೃತ್ಯ ಶಾಲೆಯ ಗುರುರಾಜ, ತಮ್ಮ ಶಾಲೆಯ ಕೆಲ ಕಾರ್ಯಕ್ರಮಗಳಲ್ಲಿ ಈಗಾಗಲೇ ನರ್ತಿಸಿದ್ದಾರೆ. ಗುರುರಾಜ ತಮ್ಮ ಕೂಚಿಪುಡಿ ನೃತ್ಯವನ್ನು ಗಜಾನನ ಮೇಲಿನ ಒಂದು ಕೃತಿಯೊಂದಿಗೆ ಪ್ರಾರಂಭಿಸಿ, ಅಠಾಣ ಸ್ವರಜತಿಯೊಂದಿಗೆ ಮುಂದುವರೆದರು. ರಾಮನ ಜನ್ಮದಿಂದ ಪಟ್ಟಾಭಿಷೇಕದವರೆಗೆ ಅಭಿನಯಿಸಿ ಸಂಧ್ಯಾತಾಂಡವ ಹಾಗೂ ದೇವರನಾಮಗಳಿಗೂ (ಹರಿ ಆಡಿದನೊ) ನರ್ತಿಸಿದರು.ಪ್ರೌಢ ಶಿಕ್ಷಣ ಹಾಗೂ ಹೆಚ್ಚಿನ ರಂಗ ಅನುಭವಗಳಿಂದ ಗುರುರಾಜ್ ನೃತ್ಯ ಹೆಚ್ಚು ಪರಿಣಾಮಕಾರಿ ಆಗಬಹುದು. ನಟುವಾಂಗದಲ್ಲಿ ಪ್ರತೀಕ್ಷಾ ಕಾಶಿ, ಗಾಯನದಲ್ಲಿ ರಮ್ಯಾ, ಮೃದಂಗದಲ್ಲಿ ಜನಾರ್ದನ್ ಹಾಗೂ ಕೊಳಲಿನಲ್ಲಿ ಕಾರ್ತಿಕ್ ನೆರವಾದರು.

ಈ ಎರಡೂ ನೃತ್ಯ ಕಾರ್ಯಕ್ರಮಗಳು ಕರ್ನಾಟಕ ನೃತ್ಯಕಲಾ ಪರಿಷತ್ತಿನ ಆಶ್ರಯದಲ್ಲಿ ನಡೆದ ಅಂಕುರ ಉತ್ಸವದ ಭಾಗವಾಗಿದ್ದವು.ವೈವಿಧ್ಯಮಯ ಗೀತೆಗಳು

ಮಲ್ಲೆೀಶ್ವರದ ಗಾರ್ಡನ್ ಯೂತ್ಸ್ ಫ್ರೆಂಡ್ಸ್ ಅಸೋಸಿಯೇಷನ್ 7ನೇ ವಾರ್ಷಿಕೋತ್ಸವ ನಿಮಿತ್ತ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳನ್ನು ಸಡಗರದಿಂದ ನೆರವೇರಿಸಿದರು. ಗಾಯನ ಮಾಡಿದ ಶಂಕರ ಶಾನಭೋಗ್ ಗಾಯಕರಲ್ಲದೆ ಬೋಧಕ, ರಾಗ ಸಂಯೋಜಕರಾಗೂ ಪ್ರಸಿದ್ಧರು. ಅವರು ಭಾವಗೀತೆ, ದೇವರನಾಮ ಹಾಗೂ ಜಾನಪದ ಗೀತೆಗಳನ್ನು ಸಾದರಪಡಿಸಿದರು.

ತಮ್ಮ ಹಾಡುಗಾರಿಕೆಯನ್ನು ಶಂಕರಾಚಾರ್ಯರ `ಅಜಂ ನಿರ್ವಿಕಲ್ಪಂ~ ನಿಂದ ಶುಭವಾಗಿ ನಾಂದಿ ಹಾಕಿ, `ಶರಣು ಶರಣಯ್ಯ ನಮ್ಮ ಕರುಣದಿಂದಲಿ~ ಮೂಲಕ ಮುಂದುವರೆಸಿದರು. ವ್ಯಾಸರಾಜರ ಗಜಮುಖನೆ ಸಿದ್ಧಿವಿನಾಯಕನೆ ಹಾಡಿ, ಕುವೆಂಪು ಅವರ ತನುವು ನಿನ್ನದು ಮನವು ನಿನ್ನದು ಹಾಗೂ ಇಳಿದು ಬಾ ತಾಯೆ ಇಳಿದು ಬಾ - ನಿರೂಪಿಸಿದರು. ಡಾ. ದ.ರಾ. ಬೇಂದ್ರೆ ಅವರ ಜನಪ್ರಿಯ ಗೀತೆ  `ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ~, ಡಾ.ಜಿ.ಎಸ್. ಶಿವರುದ್ರಪ್ಪ ಅವರ `ಕಾಣದ ಕಡಲಿಗೆ~, `ಇಂದು ನಾ ಹಾಡಿದರೆ~ ಅಂದಿನಂತೆ ಕುಳಿತು, ಡಾ. ಕೆ.ಎಸ್. ನರಸಿಂಹಸ್ವಾಮಿ ಅವರ `ದೀಪವು ನಿನ್ನದೆ, ಗಾಳಿಯು ನಿನ್ನದೆ~ ಮುಂತಾದವುಗಳನ್ನು ಹಾಡಿದರು. ಗಾಯನಕ್ಕೆ ಪೂರಕವಾಗಿ ಕೀಬೋರ್ಡ್ (ವಸಂತಕುಮಾರ್ ಕುಂಬ್ಳೆ), ಕೊಳಲು (ರಮೇಶ್ ಕುಮಾರ್), ತಬಲಾ (ಪ್ರೀತಂ ಹಳಬಂಡಿ), ರಿದಂ ಪ್ಯಾಡ್ (ಅರುಣ್) ವಾದ್ಯಗಳೂ ಮೇಳೈಸಿ ಗಾಯನದ ಪ್ರಭಾವವನ್ನು ಇಮ್ಮಡಿಗೊಳಿಸಿದರು. `ಪಿಳ್ಳಂಗೋವಿಯ ಚೆಲ್ವ ಕಷ್ಣನ~ ಮುಂತಾದ ದೇವರನಾಮಗಳೂ ಕೇಳುಗರಿಗೆ ಪ್ರಿಯವಾಯಿತು.ಡಾ. ಜಿ.ಪಿ. ರಾಜರತ್ನಂ ಅವರ `ನೀ ನನ್ ಅಟ್ಟಿಗ್ ಬೆಳಕ್ಕಂಗ್ ಇದ್ದೆ ನಂಜು~ ಹಾಗೂ ಡಾ. ಕೆ.ಎಸ್. ನಿಸ್ಸಾರ್ ಅಹ್ಮದ್ ಅವರ  ಕುರಿಗಳು ಸಾರ್ ಕುರಿಗಳು ವಿಡಂಬನಾತ್ಮಕ ಧ್ವನಿಯಿಂದ ಲಕ್ಷ್ಯ ಸೆಳೆಯಿತು. ವಂದೆ ಮಾತರಂ ಗೀತೆಯೊಂದಿಗೆ ಮುಕ್ತಾಯ ಮಾಡಿದ್ದೂ ಅರ್ಥಪೂರ್ಣ. ತಮ್ಮ ಗಾಢದನಿ, ಮಿಂಚಿನ ಸಂಗತಿಗಳಿಂದ ಶಂಕರ್ ಶಾನ್‌ಭೋಗ್ ಪ್ರಭಾವಕಾರಿ ಗಾಯನ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry