ವೈದಿಕ ಆಳ್ವಿಕೆ ಹೇರುವ ಹುನ್ನಾರ : ಎಂ.ಎಂ. ಕಲಬುರ್ಗಿ ಆತಂಕ

ಸೋಮವಾರ, ಜೂಲೈ 22, 2019
27 °C

ವೈದಿಕ ಆಳ್ವಿಕೆ ಹೇರುವ ಹುನ್ನಾರ : ಎಂ.ಎಂ. ಕಲಬುರ್ಗಿ ಆತಂಕ

Published:
Updated:

ಕೊಪ್ಪಳ: ರಾಜ್ಯದಲ್ಲಿ ಎರಡು ವಿಧಾನಸೌಧಗಳಿವೆ. ಒಂದನೆಯದು ಚುನಾಯಿತ ಸದಸ್ಯರು ಸೇರುವ ವಿಧಾನಸೌಧವಾದರೆ, ಎರಡನೆಯದು ಕೇಶವ ಶಿಲ್ಪ ಎಂದು ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಆಕ್ರೋಶ ವ್ಯಕ್ತಪಡಿಸಿದರು.ಅವರು ನಗರದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ 3ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕೇಶವ ಶಿಲ್ಪ ಎಂಬ ಮತ್ತೊಂದು ವಿಧಾನಸೌಧದ ಮೂಲಕ ರಾಜ್ಯದಲ್ಲಿ ವೈದಿಕ ಆಳ್ವಿಕೆಯನ್ನು ಹೇರುವ ಹುನ್ನಾರ ನಡೆಯುತ್ತಿದೆ. ರಾಜ್ಯದ ಜನತೆ ಈ ಕೇಶವ ಶಿಲ್ಪದ ವಿರುದ್ಧ, ವೈದಿಕ ಆಳ್ವಿಕೆಯನ್ನು ಹೇರುವ ಯತ್ನದ ವಿರುದ್ಧ ಹೋರಾಡುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ ಪುನಃ ಆರ್ಯೀಕರಣ ನಡೆಯುತ್ತಿದೆ.

 

ಶಿವರಾತ್ರಿಯಂದು ಗಂಗಾಜಲ ಹಂಚಿಕೆ ಮಾಡಿದ ಘಟನೆ ಆರ್ಯೀಕರಣಕ್ಕೆ ಒಂದು ನಿದರ್ಶನ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗಂಗಾ ಜಲವನ್ನು ಹಂಚಿದ ಸಂಬಂಧಪಟ್ಟ ಸಚಿವ ಬುದ್ಧಿಗೇಡಿ ಎಂದೂ ಟೀಕಿಸಿದರು.ನಮ್ಮ ದೇಶ ವೈದಿಕ, ಮುಸ್ಲಿಂ ಹಾಗೂ ಬ್ರಿಟಿಷರ ಆಳ್ವಿಕೆಯನ್ನು ಕಂಡಿದೆ. ಈ ಮೂರರ ಪೈಕಿ ವೈದಿಕ ಆಳ್ವಿಕೆಯೇ ಅಪಾಯಕಾರಿ. ಹೀಗಾಗಿ ಎಲ್ಲ ಹಂತದಲ್ಲಿ ವ್ಯವಸ್ಥಿತವಾಗಿ ವೈದಿಕ ಆಳ್ವಿಕೆಯನ್ನು ಪುನರ್‌ಸ್ಥಾಪನೆಗೊಳಿಸುವುದರ ವಿರುದ್ಧ ಚಳವಳಿ ನಡೆಯಬೇಕು ಎಂದು ಹೇಳಿದರು.ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ನಡೆಸಿದ ಚಳವಳಿಗಿಂತ ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟು ಹಾಕಿದ ಚಳವಳಿ ದೊಡ್ಡದು ಎಂದು ಡಾ.ಎಂ.ಎಂ.ಕಲಬುರ್ಗಿ ಈ ಸಂದರ್ಭದಲ್ಲಿ ಹೇಳಿದರು. ಮಹಾತ್ಮಗಾಂಧಿ ಆರಂಭಿಸಿದ ಚಳವಳಿ ಕೇವಲ ಬ್ರಿಟಿಷರನ್ನು ದೇಶದಿಂದ ತೊಲಗಿಸುವುದು ಆಗಿತ್ತು. ಹೀಗಾಗಿ ಉದ್ದೇಶ ಈಡೇರಿದ ನಂತರ ಆ ಚಳವಳಿ ಅಂತ್ಯ ಕಂಡಿತು. ಆದರೆ, ಅಸಮಾನತೆ, ಅಸ್ಪೃಶ್ಯತೆ ಹಾಗೂ ಶೋಷಣೆ ವಿರುದ್ಧ ಅಂಬೇಡ್ಕರ್ ಆರಂಭಿಸಿದ ಚಳವಳಿಗೆ ಅಂತ್ಯ ಎಂಬುದೇ ಇಲ್ಲ. ಈ ತಾರತಮ್ಯಗಳು ಸಮಾಜದಲ್ಲಿ ಇರುವವರೆಗೆ ಚಳವಳಿ ಇದ್ದೇ ಇರುತ್ತದೆ ಎಂದು ಹೇಳಿದರು.ದಲಿತ ಸಾಹಿತ್ಯದಲ್ಲಿ ಕಲಾತ್ಮಕತೆ ಬರಬೇಕು. ಶಕ್ತಿ ಇದೆ ಆದರೆ, ಸಂಯಮವೂ ಬರಬೇಕು. ದಲಿತರು ಪರಿವರ್ತನೆಗೊಳ್ಳುವ ಬದಲು ಪರಿಷ್ಕರಣೆಗೊಳ್ಳಬೇಕು. ದಲಿತರ ಪ್ರವೇಶದಿಂದ ಆಡಳಿತ, ಶಿಕ್ಷಣ, ಸಾಹಿತ್ಯ ಸುಧಾರಣೆ ಆಗಿದೆ ಎಂಬುದಾಗಿ ನಾಡು ಮಾತನಾಡುವ ರೀತಿಯಲ್ಲಿ ದಲಿತ ಸಮುದಾಯ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಪತ್ರಕರ್ತ ಡಾ.ಸರಜೂ ಕಾಟ್ಕರ್ ಮಾತನಾಡಿ, ದಲಿತ ಚಳವಳಿ ಆರಂಭಗೊಂಡ ಅವಧಿಯಲ್ಲಿದ್ದ ಆಕ್ರೋಶ ಈಗ ಇಲ್ಲ ಎಂದು ವಿಷಾದಿಸಿದರು. ಇದಕ್ಕೂ ಮುನ್ನ ಅವರು, ದಲಿತ ಸಾಹಿತ್ಯ ಪರಿಷತ್ ಹೊರತಂದ ಎಂಟು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ನಂತರ ಜಿಪಂ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಮಾತನಾಡಿದರು.ಸಿದ್ಧಲಿಂಗಯ್ಯ ಹಿರೇಮಠ, ಡಾ.ಅರ್ಜುನ ಗೊಳಸಂಗಿ, ಪತ್ರಕರ್ತ ರಮೇಶ ಸುರ್ವೆ, ಜಿ.ಪಂ.ಉಪಾಧ್ಯಕ್ಷೆ ಡಾ.ಸೀತಾ ಜಿ.ಹಲಗೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry