ವೈದ್ಯಕೀಯ ಆವಿಷ್ಕಾರದಿಂದ ತಾಯಿ-ಮಗು ರಕ್ಷಿಸಿ: ಡಾ.ಪಾಟೀಲ

7

ವೈದ್ಯಕೀಯ ಆವಿಷ್ಕಾರದಿಂದ ತಾಯಿ-ಮಗು ರಕ್ಷಿಸಿ: ಡಾ.ಪಾಟೀಲ

Published:
Updated:

ತಾಳಿಕೋಟೆ: `ಗರ್ಭಿಣಿ, ಬಾಣಂತಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಹಾಗೂ ಸಂಭವನೀಯ ಅಪಾಯಗಳನ್ನು ತಪ್ಪಿಸಲು ವೈದ್ಯಕೀಯ ಕ್ಷೇತ್ರದಲ್ಲಿನ  ನೂತನ ಆವಿಷ್ಕಾರಗಳನ್ನು ಬಳಸಿಕೊಂಡು ಮುನ್ನಡೆಯಬೇಕು' ಎಂದು  ಮಿರಜ್‌ನ ವೀರಾನಂದ ಚಾರಿಟೆಬಲ್ ಆಸ್ಪತ್ರೆ ಮತ್ತು ರಿಸರ್ಚ ಸೆಂಟರ್‌ನ ಅಧ್ಯಕ್ಷ ಡಾ.ಸೋಮಶೇಖರ ಪಾಟೀಲ ಸಲಹೆ ನೀಡಿದರು.ಅವರು ಶನಿವಾರ ಸ್ಥಳೀಯ ವೈದ್ಯರ ಸೊಸೈಟಿ ಹಾಗೂ ಶ್ರೀ ಸಾಯಿ ಆಸ್ಪತ್ರೆ  ಸಹಯೋಗದಲ್ಲಿ  ಪಟ್ಟಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಗರ್ಭಿಣಿ, ಸ್ತ್ರೀರೋಗ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿನ ಜನತೆಗೆ ಗರ್ಭಿಣಿ ಸ್ತ್ರೀಯರ ಆರೈಕೆ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು  ಪರಸ್ಪರ ಪರಿಹರಿಸಿಕೊಳ್ಳಲು ವೈಧ್ಯ ಸಮೂಹ ಸಂಘಟಿತರಾಗಿ ವಿಚಾರ ವಿನಿಮಯ ಮಾಡಿಕೊಳ್ಳುವುದರಿಂದ ಗರ್ಭಿಣಿ ಸ್ತ್ರೀ,  ಬಾಣಂತಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ನಂತರ ಗೋಷ್ಠಿಯಲ್ಲಿ ಮಾತನಾಡಿದ ಅವರು ಗರ್ಭಿಣಿ ಸ್ತ್ರೀಯರಿಗಾಗಿ ಆಗುವ ರಕ್ತಸ್ರಾವದ ಕಾರಣಗಳು, ಅದನ್ನು ತಡೆಯುವ ನೂತನ ಕ್ರಮಗಳ ಕುರಿತು ಕುರಿತು ಎಲ್‌ಸಿಡಿ ಬಳಸಿ ಪ್ರಾತ್ಯಕ್ಷಿಕೆ ನೀಡಿದರು.`ಗರ್ಭಿಣಿಯರಲ್ಲಿ ರಕ್ತದೊತ್ತಡ' ಕುರಿತು ವಿಜಾಪುರದ ಸ್ತ್ರೀರೋಗ ತಜ್ಞ  ಡಾ.ಸುಭಾಷ್ ಮುದ್ನೂರ,  `ಗರ್ಭಿಣಿ ಸ್ತ್ರೀ ಹಾಗೂ ಬಾಣಂತಿಯರಿಗೆ  ಔಷಧೋಪಚಾರ'ಕುರಿತು ಸಿಂದಗಿಯ  ಪ್ರಸೂತಿ ವಿಜ್ಞಾನ ತಜ್ಞೆ ಸ್ಮಿತಾ ಹಿರೇಗೌಡರ, `ಗರ್ಭಿಣಿಯ ಚಿಕಿತ್ಸೆ' ಕುರಿತು ರಾಣೆಬೆನ್ನೂರಿನ ಪ್ರಸೂತಿ ವಿಜ್ಞಾನದ ಡಾ.ವಿದ್ಯಾ ವೈದ್ಯಾ, ನವಜಾತ ಶಿಶುಗಳ ಆರೋಗ್ಯ ಮತ್ತು ಆರೈಕೆ ಬಗ್ಗೆ ಬಾಗಲಕೋಟೆಯ ಚಿಕ್ಕಮಕ್ಕಳ ತಜ್ಞ ವೈದ್ಯ ಡಾ.ಸಂದೀಪ ಸಜ್ಜನ ಉಪನ್ಯಾಸ ನೀಡಿದರು.ಪ್ರಶ್ನೋತ್ತರ ಅವಧಿಯಲ್ಲಿ ಮಿರಜ್‌ನ ಡಾ.ಸೋಮಶೇಖರ ಪಾಟೀಲ ನೇತೃತ್ವದಲ್ಲಿ ಡಾ.ಸುಭಾಷ್ ಮುದ್ನೂರ, ಡಾ.ಜಗದೇವಿ ನಾಗೂರ, ಡಾ.ತೇಜಸ್ವಿನಿ ಸಾಸನೂರ, ಡಾ.ಸರೋಜಾ ಕಾರ್ಚಿ, ಶ್ರಿಸಾಯಿ ಆಸ್ಪತ್ರೆಯ ಡಾ.ಗಂಗಾಂಬಿಕಾ ಅವರು ಶಿಬಿರಾರ್ಥಿ ವೈದ್ಯರು ಪ್ರಶ್ನೆಗಳಿಗೆ ಉತ್ತರಿಸಿದರು.

ಹಿರಿಯ ವೈದ್ಯ ಡಾ.ಎನ್.ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ.ಎಸ್.ಆರ್. ಮುದ್ನೂರ ಮತ್ತು ಡಾ.ವಿ.ಎಸ್.ಕಾರ್ಚಿ ಉಪಸ್ಥಿತರಿದ್ದರು.ಗುರುವಂದನೆ: ಶ್ರಿಸಾಯಿ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಗಂಗಾಂಬಿಕಾ ಪಾಟೀಲ ತಮ್ಮ ವಿದ್ಯಾ ಗುರುಗಳಾದ ಮಿರಜ್‌ನ ಡಾ.ಸೋಮಶೇಖರ ಪಾಟೀಲ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಮೌನಾಚರಣೆ:  ಆರಂಭದಲ್ಲಿ  ದಿ.ಮಾಜಿ ಪ್ರಧಾನಿ ಐ. ಕೆ.ಗುಜ್ರಾಲ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.ನಂತರ ವಿಶ್ವ ಏಡ್ಸ್ ದಿನಚರಣೆ ಕಾರ್ಯಕ್ರಮವನ್ನು  ಡಾ.ಬಿ.ಎಸ್.ಯಾದವಾಡ ಉದ್ಘಾಟಿಸಿದರು. ಸಿಂದಗಿಯ ಹಿರಿಯ ಪ್ರಸೂತಿ ವಿಜ್ಞಾನ ತಜ್ಞೆ  ಡಾ.ಶಾರದಾ ನಾಡಗೌಡ ಏಡ್ಸ್ ರೋಗದ ಸಾರ್ವತ್ರಿಕ ಮುಂಜಾಗ್ರತಾ ಕ್ರಮ  ಕುರಿತು ಮಾತನಾಡಿದರು. ನಿವೃತ್ತ ಸಂಗೀತ ಶಿಕ್ಷ ಎ.ಎಸ್. ವಠಾರ ಪ್ರಾರ್ಥನಾ ಗೀತೆ ಹಾಡಿದರು. ಜಿ.ವಿ.ಶೆಟ್ಟಿ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry