ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಪರೀಕ್ಷೆ

ಮಂಗಳವಾರ, ಜೂಲೈ 23, 2019
25 °C

ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಪರೀಕ್ಷೆ

Published:
Updated:

ಬೆಂಗಳೂರು: `ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇನ್ನು ಮುಂದೆ ನರ್ಸಿಂಗ್, ಪ್ಯಾರಾ ಮೆಡಿಕಲ್ ಕೋರ್ಸ್‌ಗಳ ಪರೀಕ್ಷೆಗಳನ್ನು ಅಗತ್ಯ ಮೂಲ ಸೌಲಭ್ಯಗಳಿರುವ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ನಡೆಸಲು ಸರ್ಕಾರ ಶೀಘ್ರ ಆದೇಶ ಹೊರಡಿಸಲಿದೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಬುಧವಾರ ಇಲ್ಲಿ ತಿಳಿಸಿದರು.ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.`ನರ್ಸಿಂಗ್ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್, ಸಿಸಿಟಿವಿ ಅಳ ವಡಿಕೆ ಸೇರಿದಂತೆ ಆರು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಆದರೆ ಅನೇಕ ನರ್ಸಿಂಗ್ ಕಾಲೇಜುಗಳು ಈ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಈ ಹಿನ್ನೆಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿರುವ ನರ್ಸಿಂಗ್ ಕಾಲೇಜುಗಳ ಪರೀಕ್ಷಾ ಕೇಂದ್ರಗಳನ್ನು ರದ್ದುಪಡಿಸಲಾಗುವುದು~ ಎಂದು ಅವರು ಹೇಳಿದರು.`ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರೀಕ್ಷಾ ಅಕ್ರಮಗಳ ಬಗ್ಗೆ ಏಳು ತಿಂಗಳಿಂದಲೇ ನನಗೆ ದೂರುಗಳು ಬರ ತೊಡಗಿದವು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದೆ. ಉತ್ತರಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿ ಅಂಕಗಳನ್ನು ತಿದ್ದಿರುವುದು ಸಹ ಇದೀಗ ಬೆಳಕಿಗೆ ಬಂದಿದೆ. ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಂದ ಒಂದು ಅಂಕ ತಿದ್ದಲು ಒಂದು ಲಕ್ಷ, 2 ಅಂಕಕ್ಕೆ ರೂ 2 ಲಕ್ಷ ಪಡೆದಿರುವ ಕುರಿತು ದೂರುಗಳು ಬಂದಿವೆ~ ಎಂದು ಸಚಿವರು ತಿಳಿಸಿದರು. `ವಿಶ್ವವಿದ್ಯಾಲಯದ ಪರೀಕ್ಷಾ ಕೇಂದ್ರದ ವಿಭಾಗಕ್ಕೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿರುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿ ನಡೆಯುವ ಅಕ್ರಮಗಳಿಗೆ ಇಂತಹ ಸಂಸ್ಥೆಗಳನ್ನು ಹೊಣೆ ಮಾಡಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ವಿವಿ ಮೌಲ್ಯಮಾಪನ ವಿಭಾಗಕ್ಕೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವುದಿಲ್ಲ~ ಎಂದರು.`ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಸಂದರ್ಭದಲ್ಲಿ ಅಂಕ ತಿದ್ದುವಲ್ಲಿ ಯಾರಿಂದ ತಪ್ಪಾಗಿದೆ ಎನ್ನುವ ಕುರಿತು ವರದಿ ನೀಡುವಂತೆ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಪರೀಕ್ಷಾ ಅಕ್ರಮಗಳ ಬಗ್ಗೆ ಕೆಲವರು ದೂರು ನೀಡಿದ್ದರೂ ತಿಲಕ್‌ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಈ ಬಗ್ಗೆ ವರದಿ ಪಡೆದು ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು~ ಎಂದು ಅವರು ಎಚ್ಚರಿಕೆ ನೀಡಿದರು.`ನರ್ಸಿಂಗ್, ಸ್ನಾತಕೋತ್ತರ ಪದವಿ, ಆಯುರ್ವೇದ, ಪ್ಯಾರಾ ಮೆಡಿಕಲ್, ಮೆಡಿಸಿನ್ ಪರೀಕ್ಷೆಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿವೆ.ಸಾವಿರಾರು ವೈದ್ಯರೇ ಪ್ರತಿ ವರ್ಷ ಈ ರೀತಿ ಅಕ್ರಮ ಮಾರ್ಗಗಳಲ್ಲಿ ಪರೀಕ್ಷೆ ಎದುರಿಸಿ ಪಾಸಾದರೆ ದೇಶದ ಭವಿಷ್ಯ ಏನು?~ ಎಂದು ಆತಂಕ ವ್ಯಕ್ತಪಡಿಸಿದರು.ತನಿಖಾ ವರದಿ ನೀಡಲು ಸೂಚನೆ: `ವಿಶ್ವವಿದ್ಯಾಲಯದ ಅಕ್ರಮಗಳ ಕುರಿತು ಅರೋರಾ ಸಮಿತಿ, ಸಿಬಿಐ ಹಾಗೂ ವಿಶ್ವವಿದ್ಯಾಲಯದ ಉಪ ಸಮಿತಿಗಳು ನೀಡಿರುವ ವರದಿ ಇದುವರೆಗೆ ಬಹಿರಂಗವಾಗಿಲ್ಲ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೂಡ ಜರುಗಿಸಿಲ್ಲ. ಈ ವರದಿಗಳನ್ನು ಪರಿಶೀಲಿಸಿದ ನಂತರ ವಿವಿ ಸಿಂಡಿಕೇಟ್ ಸದಸ್ಯರ ಜತೆ ಚರ್ಚಿಸಿ ಮುಂದಿನ ಕ್ರಮಗಳ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಆನಂತರ ರಾಜ್ಯಪಾಲರನ್ನೂ ಭೇಟಿ ಮಾಡುತ್ತೇನೆ~ ಎಂದು ರಾಮದಾಸ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry