ವೈದ್ಯಕೀಯ ಕಾಲೇಜು: ಬಗೆಹರಿಯದ ಗೊಂದಲ

7

ವೈದ್ಯಕೀಯ ಕಾಲೇಜು: ಬಗೆಹರಿಯದ ಗೊಂದಲ

Published:
Updated:

ಕಾರವಾರ: ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಆಗಬೇಕಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಶಿರಸಿಯಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಪ್ರಸ್ತಾವ ಜಿಲ್ಲೆಯಾದ್ಯಂತ ಪರ-ವಿರೋಧ ಅಲೆಯನ್ನು ಎಬ್ಬಿಸಿದೆ. ಜಿಲ್ಲೆಯ ಇಬ್ಬರು ಸಚಿವರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ಅದರ ಕರಿನೆರಳು ಕಾಲೇಜು ಸ್ಥಾಪನೆ ವಿಷಯದ ಮೇಲೆ ಬಿದ್ದಿದೆ ಎನ್ನುವ ಅಸಮಾಧಾನವೂ ವ್ಯಕ್ತವಾಗಿದೆ.ಅಂದಿನ ಧರ್ಮಸಿಂಗ್ ನೇತೃತ್ವದ ಸರ್ಕಾರ ರಾಜ್ಯದ ಕೆಲ ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜು ಘೋಷಣೆ ಮಾಡಿತ್ತು. ಇದರದಲ್ಲಿ ಕಾರವಾರವೂ ಸೇರಿತ್ತು. ಕಾಲೇಜು ನಿರ್ಮಾಣಕ್ಕೆ ಜಿಲ್ಲಾಡಳಿತ ತಾಲ್ಲೂಕಿನ ಮುಡಗೇರಿಯಲ್ಲಿ (ಸರ್ವೇ ನಂ. 425) 35 ಎಕರೆ ಜಮೀನನ್ನೂ ಮಂಜೂರು ಮಾಡಿತ್ತು. ಬಳಿಕ ಕಾಲೇಜು ನಿರ್ಮಾಣದ ಪ್ರಕ್ರಿಯೆ ತೆರೆಮರೆಗೆ ಸರಿದಿತ್ತು.ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯನ್ನು ವಿವರಿಸಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬೇಕು ಎಂದು ಸ್ಥಳೀಯ ವ್ಯಕ್ತಿಯೊಬ್ಬರು 1999ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ವೈದ್ಯಕೀಯ ಕಾಲೇಜು ಮಂಜೂರು ಮಾಡುವ ಪ್ರಸ್ತಾವವನ್ನು ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತ್ತು.

ವೈದ್ಯಕೀಯ ಕಾಲೇಜನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಪ್ರಾರಂಭಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.ಸರ್ಕಾರ ಕಾಲೇಜು ಮಂಜೂರು ಮಾಡಿದ ನಂತರ ಅಂದಿನ ಜಿಲ್ಲಾಧಿಕಾರಿ ನಿಲಯ್ ಮಿತಾಶ್ ಭವಿಷ್ಯದಲ್ಲಿ ಕಾರವಾರದಲ್ಲಿ ಕೈಗಾರಿಕೆಗಳು ಬರುವುದರಿಂದ ಮುಡಗೇರಿಯಲ್ಲಿ ಕಾಲೇಜು ನಿರ್ಮಾಣ ಮಾಡುವುದು ಸೂಕ್ತ ಎಂದು ಅಲ್ಲಿ ಜಮೀನು ಮಂಜೂರು ಮಾಡಿದ್ದರು.ಈ ಆದೇಶದ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಚಿವ ಆನಂದ ಅಸ್ನೋಟಿಕರ್ ಮಾಹಿತಿ ಇಲ್ಲ ಎನ್ನುವುದು ಕಾರವಾರಕ್ಕೆ ಕಾಲೇಜು ತರುವಲ್ಲಿ ಹೋರಾಟ ನಡೆಸುತ್ತಿರುವವರ ದೂರಾಗಿದೆ.

 

ಜಿಲ್ಲೆಗೆ ಈಗಾಗಲೇ ವೈದ್ಯಕೀಯ ಕಾಲೇಜು ಮಂಜೂರು ಆಗಿದೆ ಎನ್ನುವ ವಿಷಯ ಗೊತ್ತಿದ್ದರೆ ಉಸ್ತುವಾರಿ ಸಚಿವರು ಶಿರಸಿಯಲ್ಲಿ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಹೊಸ ಪ್ರಸ್ತಾವವನ್ನು ಸರ್ಕಾರದ ಮುಂದಿಡುತ್ತಿರಲಿಲ್ಲ. ಜಿಲ್ಲಾಡಳಿತ ಕಳುಹಿಸಿರುವ ಪ್ರಸ್ತಾವವನ್ನೇ ರಾಜ್ಯ ಸರ್ಕಾರ, ಕೇಂದ್ರದ ಅನುಮತಿಗೆ ಕಳುಹಿಸಲಿದೆ. ಇಲ್ಲಿಯೇ ಕಾಲೇಜು ಆಗಲಿದೆ ಎಂದು ಸಚಿವ ಅಸ್ನೋಟಿಕರ್ ಹೇಳುವ ಸಂದರ್ಭವೂ ಎದುರಾಗುತ್ತಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.ಸಚಿವದ್ವಯರ ನಡುವಿನ ಹೊಂದಾಣಿಕೆ ಕೊರತೆಯಿಂದ ವೈದ್ಯಕೀಯ ಕಾಲೇಜಿನ ವಿಷಯವನ್ನೇ ಮುಂದಿಟ್ಟುಕೊಂಡು ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಕಾಲೇಜು ಸ್ಥಾಪನೆ ವಿಷಯ ಘಟ್ಟದ ಮೇಲಿನ ಮತ್ತು ಕರಾವಳಿ ಜನರ ಮಧ್ಯೆ ಕಹಿ ಭಾವವನ್ನು ಉಂಟುಮಾಡಿದೆ.ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಗೆ ನಿರ್ಧಾರ:
ಹೈಕೋರ್ಟ್ ಆದೇಶದಂತೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮೂಲಸೌಲಭ್ಯ ಒದಗಿಸಿಲ್ಲ ಮತ್ತು ವೈದ್ಯಕೀಯ ಕಾಲೇಜು ಆರಂಭಿಸಲು ಪ್ರಕ್ರಿಯೆ ಆರಂಭಿಸಿಲ್ಲ ಎಂದು ಅರ್ಜಿದಾರರು ನ್ಯಾಯಾಂಗ ನಿಂದನೆ ದೂರು ದಾಖಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.~ವೈದ್ಯಕೀಯ ಕಾಲೇಜಿನ ವಿಷಯವನ್ನು ಜನಪ್ರತಿನಿಧಿಗಳು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಸರ್ಕಾರದ ಆದೇಶ ಹೇಗಿದೆಯೋ ಆ ಪ್ರಕಾರವೇ ನಡೆದುಕೊಳ್ಳಬೇಕು. ಜನರ ಮನಸ್ಸು ಒಡೆಯುವ ಕಾರ್ಯವನ್ನು ಮಾಡಬಾರದು~ ಎನ್ನುತ್ತಾರೆ ವಿನಾಯಕ ಹರಿಕಂತ್ರ, ಎಂ.ಕೆ.ಫರ್ನಾಂಡೀಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry