ವೈದ್ಯಕೀಯ ಕೋರ್ಸ್ ಪರೀಕ್ಷೆ ಅಕ್ರಮ: ಜಾಮೀನು ತಿರಸ್ಕಾರ

7

ವೈದ್ಯಕೀಯ ಕೋರ್ಸ್ ಪರೀಕ್ಷೆ ಅಕ್ರಮ: ಜಾಮೀನು ತಿರಸ್ಕಾರ

Published:
Updated:

ಬಳ್ಳಾರಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಪ್ರವೇಶ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬಂಧಿಸಿರುವ 12 ಆರೋಪಿಗಳು  ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಧೀಶರು ಶುಕ್ರವಾರ ತಿರಸ್ಕರಿಸಿದರು.ಇದೇ 24ರಂದು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಕಾದಿರಿಸಿದ್ದ ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಬಿ.ಕುಲಕರ್ಣಿ ಅವರು ಮಧ್ಯಾಹ್ನ ವಿಚಾರಣೆ ನಡೆಸಿ, ಜಾಮೀನು ನೀಡಲು ನಿರಾಕರಿಸಿದರು.

ಡೇವಿಡ್ ಪ್ರಭಾಕರ್, ಡಾ. ವಿ.ಸುರೇಶ್, ಡಾ. ಅಭಿಜಿತ್ ಪಾಟೀಲ್, ಡಾ. ಕೆ. ಬಸವರಾಜ್, ಡಾ. ವಿನೋದ್ ಕರ್ಜಗಿ, ಡಾ. ಭರತ್‌ಕುಮಾರ್, ಡಾ. ಸಂಕೀರ್ತ್, ಡಾ. ಡಿ.ಕೆ.ಭಾರತಿ, ಡಾ. ಫಿರ್ದೋಸ್ ಸುಲ್ತಾನಾ, ಮಲ್ಲಿಕಾರ್ಜುನ, ಡಾ. ರೇಣುಕಾ ಛತ್ರಕಿ, ಡಾ. ಧನಂಜಯ ಅವರೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಆರೋಪಿಗಳು.ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಐವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 24ರಂದೇ ನ್ಯಾಯಾಧೀಶರು ತಿರಸ್ಕರಿಸಿದ್ದರು.ನ್ಯಾಯಾಲಯಕ್ಕೆ ಶರಣಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಡಾ. ಕೆ.ವಿನಾಯಕ ಪ್ರಸನ್ನ ಅವರನ್ನು ಸಿಐಡಿ ವಶಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆಗಾಗಿ ಗುರುವಾರ ಬೆಂಗಳೂರಿಗೆ ಕರೆದೊಯ್ಯಲಾಗಿದೆ.ಅಮಾನತು: ಪ್ರಮುಖ ಆರೋಪಿ ಡಾ. ಕೆ.ವಿನಾಯಕ ಪ್ರಸನ್ನ ಅವರ ಪತ್ನಿ, ವಿಮ್ಸನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ವನಜಾ ಅವರನ್ನು ಬಂಧನದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ವಿಮ್ಸ ನಿರ್ದೇಶಕ ಡಾ. ಬಿ.ದೇವಾನಂದ್ ತಿಳಿಸಿದ್ದಾರೆ.ಡಾ. ವನಜಾ ಅವರನ್ನು ಸಿಐಡಿ ಪೊಲೀಸರು ಇದೇ 26ರಂದು ರಾತ್ರಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದು, ಅವರ ಜತೆ 9 ತಿಂಗಳಿನ ಮಗುವೂ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry