ಮಂಗಳವಾರ, ಮೇ 17, 2022
25 °C

ವೈದ್ಯಕೀಯ ಪಿ.ಜಿ.ಕೋರ್ಸ್ ಪ್ರವೇಶ ಪರೀಕ್ಷೆ: ಕಳೆದೆರಡು ವರ್ಷದ ಅಕ್ರಮವೂ ತನಿಖೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಹಿಂದಿನ ಎರಡು ವರ್ಷಗಳ ಅಕ್ರಮಗಳ ಬಗ್ಗೆಯೂ ತನಿಖೆಗೆ ತೀರ್ಮಾನಿಸಿದೆ.ಈ ವಿಷಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಫೆಬ್ರುವರಿಯಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ.ಈ ತನಿಖೆಯಲ್ಲಿ ಅನೇಕ ರೀತಿಯ ಅಕ್ರಮಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ 2009-10 ಮತ್ತು 2010-11ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಕುರಿತೂ ತನಿಖೆ ನಡೆಸಲಾಗುವುದು ಎಂದು ವಿವರಿಸಿದರು. ಈ ಸಂಬಂಧ ನಗರದ ಪೊಲೀಸ್ ಠಾಣೆಯೊಂದರಲ್ಲಿ ಇನ್ನೆರಡು ದಿನಗಳಲ್ಲಿ ದೂರು ದಾಖಲಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ ಕುಲಪತಿಗೆ ಸೂಚನೆ ನೀಡಲಾಗಿದೆ.ಇದರ ತನಿಖೆಯನ್ನೂ ಸಿಐಡಿಗೆ ಒಪ್ಪಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗುವುದು ಎಂದರು. 2011ನೇ ಸಾಲಿನ ಹಾಗೆಯೇ ಹಿಂದೆಯೂ ಅಕ್ರಮಗಳು ನಡೆದಿರುವ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿವೆ. ಈ ಕಾರಣಕ್ಕೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.ವೈದ್ಯರ ಅಮಾನತು: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಸರ್ಕಾರಿ ವೈದ್ಯರಾದ ಧನಂಜಯ್, ಡಾ.ಫಿರ್ದೋಸಾ ಸುಲ್ತಾನ್ ಮತ್ತು ಡಾ.ಭಾರತಿ ಅವರನ್ನು ಅಮಾನತು ಮಾಡಲಾಗಿದೆ ಎಂದು ರಾಮದಾಸ್ ವಿವರಿಸಿದರು.ಇವರಲ್ಲಿ ಕೆಲವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಸೇವಾ ನಿರತ ಕೋಟಾದಡಿ ಸೀಟು ಪಡೆಯಲು ಇವರು ಕೂಡ ಪ್ರವೇಶ ಪರೀಕ್ಷೆ ಬರೆದಿದ್ದರು. ಬಳ್ಳಾರಿ ವೈದ್ಯಕೀಯ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಮಲ್ಲಿಕಾರ್ಜುನ ಕೂಡ ಅಕ್ರಮದ ರೂವಾರಿಯಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ಆರೋಗ್ಯ ಇಲಾಖೆ ಸಿಬ್ಬಂದಿಯಾದ ಕಾರಣ ಈ ಕ್ರಮ ಅನುಸರಿಸಲಾಗಿದೆ.ಮತ್ತೊಬ್ಬ ಪ್ರಮುಖ ಆರೋಪಿ ಡಾ.ವನಜಾ ಅವರು ಅ.3ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದು, ಅವರು 48 ಗಂಟೆಗಳ ಒಳಗೆ ಸರ್ಕಾರಕ್ಕೆ ವರದಿ ಮಾಡಿಕೊಳ್ಳದಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಹರಿಹರ ದತ್ತಾತ್ರೇಯ ಎಂಬುವರು ತಮ್ಮ ಸ್ನಾತಕೋತ್ತರ ಸೀಟನ್ನು ವಾಪಸ್ ಮಾಡಿ, ಇದೇ 14ರಂದು ಆರೋಗ್ಯ ಇಲಾಖೆಯಲ್ಲಿ ವರದಿ ಮಾಡಿಕೊಂಡಿದ್ದು, ಆ ನಂತರ ಅವರು ಕೂಡ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದರು.

 

 2012 ಪಿಜಿಇಟಿ ಬೆಂಗಳೂರಿನಲ್ಲಿ

ಬೆಂಗಳೂರು:
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ 2012ನೇ ಸಾಲಿನ ಪ್ರವೇಶ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲು ನಿರ್ಧರಿಸಲಾಗಿದೆ.ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಸಚಿವ ರಾಮದಾಸ್, ಇದುವರೆಗೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಇದರಲ್ಲಿ ಅಕ್ರಮ ನಡೆಯುತ್ತಿರುವುದು ಗೊತ್ತಾದ ನಂತರ ಅದನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಅಕ್ರಮ ತಡೆಯಲು ಮುಂದೇನು ಕ್ರಮ?

ಬೆಂಗಳೂರು:
ಅಕ್ರಮ ತಡೆಯುವ ಉದ್ದೇಶದಿಂದ ಇನ್ನು ಮುಂದೆ ನಡೆಯುವ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಸಂದರ್ಭಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸಿ, ಹೆಚ್ಚಿನ ನಿಗಾ ಇಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಡುವುದು ಸೇರಿದಂತೆ ಆ ನಂತರದ ಎಲ್ಲ ಪ್ರಕ್ರಿಯೆಗಳನ್ನು ಸಿ.ಸಿ.ಟಿ.ವಿ.ಯಲ್ಲಿ ದಾಖಲಿಸಲು ನಿರ್ಧರಿಸಲಾಗಿದೆ. ನೋಂದಣಿ ಸಂಖ್ಯೆಗಳ ಹಂಚಿಕೆ ಮೇಲೂ ನಿಗಾ ಇಡುವುದು. ಸಂಖ್ಯೆ ಕೊಟ್ಟ ದಿನಾಂಕ ಮತ್ತು ಸಮಯವನ್ನು ದಾಖಲು ಮಾಡಲು ಸೂಚಿಸಲಾಗಿದೆ.ಉತ್ತರ ಪತ್ರಿಕೆಗಳನ್ನು (ಒಎಂಆರ್) ಸ್ಕ್ಯಾನ್ ಮಾಡಿದ ನಂತರವೇ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಇದರಿಂದ ಒಎಂಆರ್ ಶೀಟ್‌ಗಳನ್ನು ಅದಲು-ಬದಲು ಮಾಡುವುದನ್ನು ತಡೆಯಬಹುದು ಎಂದು ಸಚಿವ ರಾಮದಾಸ್ ವಿವರಿಸಿದರು. ಪರೀಕ್ಷೆ ನಡೆಸುವ ಸಿಬ್ಬಂದಿ ಕೂಡ ಇನ್ನು ಮುಂದೆ ಮೊಬೈಲ್ ಬಳಕೆ ಮಾಡುವಂತಿಲ್ಲ.ಇದಲ್ಲದೆ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಿಐಡಿ ಪೊಲೀಸರಿಂದಲೂ ಹೆಚ್ಚಿನ ಸಲಹೆ ಪಡೆಯಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.