ವೈದ್ಯಕೀಯ ಪಿ.ಜಿ. ಪರೀಕ್ಷೆ ಅಕ್ರಮ: ಕಠಿಣ ಕ್ರಮ ಅವಶ್ಯ

7

ವೈದ್ಯಕೀಯ ಪಿ.ಜಿ. ಪರೀಕ್ಷೆ ಅಕ್ರಮ: ಕಠಿಣ ಕ್ರಮ ಅವಶ್ಯ

Published:
Updated:

ಇತ್ತೀಚೆಗೆ ನಡೆದ ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳಲ್ಲಿ ಭಾರಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರವೇಶವಂಚಿತ ಹಲವಾರು ಅಭ್ಯರ್ಥಿಗಳು ಉಚ್ಚನ್ಯಾಯಾಲಯದ ಮೆಟ್ಟಿಲೇರಿ, ನ್ಯಾಯಾಲಯವನ್ನೇ ದಾರಿ ತಪ್ಪಿಸಲು ನೋಡಿದ ಪೊಲೀಸರನ್ನು ನಂಬದೇ, ನ್ಯಾಯಾಲಯದ ಆದೇಶದಂತೆ ಸಿ.ಐ.ಡಿ. ತಂಡ ಅದರಲ್ಲೂ ಡಿ.ಐ.ಜಿ. ನೇತೃತ್ವದಲ್ಲಿಯೇ ಸಮಗ್ರ ತನಿಖೆ ನಡೆಸಿದ ಕಾರಣ ಈ ಹಗರಣದ ಹೂರಣ ಒಂದೊಂದಾಗಿ ಹೊರಬೀಳುತ್ತಿವೆ. ಅಕ್ರಮಗಳ ಹಿನ್ನೆಲೆಯಲ್ಲಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಬಳ್ಳಾರಿಯ ಕೌಲ್‌ಬಝಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ, ತನಿಖೆಯ ನೇತೃತ್ವ ವಹಿಸಿದ್ದ ಇನ್ಸ್‌ಪೆಕ್ಟರ್‌ರವರು ಏನೂ ಅಕ್ರಮವೇ ನಡೆದಿಲ್ಲವೆಂದು ವರದಿ ನೀಡಿದ್ದು (ಪ್ರ.ವಾ.ಅ.25) ನಿಜಕ್ಕೂ ಅಚ್ಚರಿ. ಈಗ ಬಂಧಿಸಿರುವ ವೈದ್ಯರ ಜೊತೆಗೆ ಇಂಥ ಸುಳ್ಳು ವರದಿ ನೀಡಿದ ಅಧಿಕಾರಿಗಳನ್ನೂ ಸಂಪೂರ್ಣ ತನಿಖೆಗೊಳಪಡಿಸುವುದು ಅತ್ಯಗತ್ಯ.ಇಲ್ಲದಿದ್ದರೆ ಇಂಥ ಸುಳ್ಳು ವರದಿ ನೀಡುವವರ, ಅದಕ್ಷರ ಸಂಖ್ಯೆಗೆ ಅಂತ್ಯವೇ ಇರುವುದಿಲ್ಲ.

  ಆಗಲೇ ಈ ಅಧಿಕಾರಿಯು ಸತ್ಯಸಂಗತಿಯನ್ನು ಮರೆಮಾಚದೆ ಇದ್ದಿದ್ದರೆ  ಅಭ್ಯರ್ಥಿಗಳ ಆತಂಕ ನಿವಾರಣೆಯಾಗುತ್ತಿತ್ತು, ನ್ಯಾಯಾಲಯಗಳ ಅಮೂಲ್ಯ ಸಮಯ ಉಳಿಯುತ್ತಿತ್ತು, ಆರೋಪಿಗಳ ಬಂಧನ ಇಷ್ಟೊಂದು ವಿಳಂಬವಾಗುತ್ತಿರಲಿಲ್ಲ. ಮುಖ್ಯವಾಗಿ ಜನಸಾಮಾನ್ಯರ ತೆರಿಗೆ ಹಣ ಸುದೀರ್ಘ ತನಿಖೆಗಾಗಿ ವ್ಯಯವಾಗುವುದು ತಪ್ಪುತ್ತಿತ್ತು. ಏನೇ ಆಗಲಿ ತಪ್ಪಿತಸ್ಥರ ವಿರುದ್ಧ ಆದಷ್ಟು ಕೂಡಲೇ ಕಠಿಣ ಕ್ರಮ ಜರುಗುವಂತಾಗಲಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry