ಶುಕ್ರವಾರ, ಜೂನ್ 18, 2021
28 °C

ವೈದ್ಯಕೀಯ ಪ್ರಪಂಚದ ಓಣಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಪ್ನನಗರಿ

ಮೆಡಿಕಲ್ ಟೂರಿಸಂನ ಕೇಂದ್ರವಾಗಿ ಬೆಂಗಳೂರು ಬೆಳೆದಿದೆ ಅನ್ನುವ ವಿಷಯವನ್ನು ನೀವು ಕೇಳಿರಬಹುದು. ವಿದೇಶದಿಂದ ಇಲ್ಲಿಗೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹೋಗುವವರು ಸುಮಾರು ಎಂಟು-ಹತ್ತು ವರ್ಷದಿಂದ ಹೆಚ್ಚಾಗಿದ್ದರು. ಈಗ ಆ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆಯಂತೆ.ಗಂಭೀರ ಹೃದ್ರೋಗದ ಟ್ರೀಟ್ಮೆಂಟ್‌ಗೆ ಬರುವವರಂತೆಯೇ ಚೆಲುವನ್ನು ಹೆಚ್ಚಿಸಿಕೊಳ್ಳಲು ಬರುವವರೂ ಇರುತ್ತಾರೆ. ಈ ಎರಡನೇ ವರ್ಗದ ಮೆಡಿಕಲ್ ಟೂರಿಸ್ಟ್‌ಗಳು ಹಲ್ಲು ಸರಿ ಮಾಡಿಸಿಕೊಳ್ಳುವುದು, ಮೂಗಿನ ಆಕಾರ ಬದಲಿಸಿಕೊಳ್ಳುವುದು, ಬೊಜ್ಜು ಇಳಿಸಿಕೊಳ್ಳುವುದು... ಹೀಗೆ ವಿಧವಿಧವಾದ ಸೌಂದರ್ಯವರ್ಧಕ ಉಪಚಾರಕ್ಕಾಗಿ ಬರುತ್ತಾರೆ. ಕೇರಳಕ್ಕೆ ವಿದೇಶೀ ಪ್ರವಾಸಿಗರು ಆಯುರ್ವೇದಕ್ಕಾಗಿ ಬಂದರೆ, ಬೆಂಗಳೂರಿಗೆ ಅಲೋಪತಿ, ಅಂದರೆ ಪಾಶ್ಚಾತ್ಯ ಔಷಧ ಪದ್ಧತಿಗಾಗಿ ಬರುತ್ತಾರೆ. ಬೆಂಗಳೂರಿನ ಆಸ್ಪತ್ರೆಗಳು ಮೆಡಿಕಲ್ ಟೂರಿಸ್ಟ್‌ಗಳಿಗೆ ಪ್ರಿಯವಾಗಿರುವುದಕ್ಕೆ ಹಲವು ಕಾರಣಗಳಿವೆ: ಇಲ್ಲಿ ಖರ್ಚು ಕಡಿಮೆ, ವೈದ್ಯರು ಪರಿಣತರು ಮತ್ತು ವಿಶ್ವಾಸಾರ್ಹರು, ಸೌಕರ್ಯಗಳು ಚೆನ್ನಾಗಿವೆ. ಜೊತೆಗೆ ಬರುವವರು ತಂಗಲು ಹೋಟೆಲುಗಳಿವೆ...ಕಾರ್ಪೊರೇಟ್ ಆಸ್ಪತ್ರೆಗಳು ಬೆಂಗಳೂರಿನ ಈ ಹೆಸರನ್ನು ಚೆನ್ನಾಗಿಯೇ ಬಳಸಿಕೊಂಡು ಅಮೆರಿಕ, ಯೂರೋಪ್, ಮತ್ತು ಆಫ್ರಿಕಾದಿಂದ ವ್ಯಾಪಾರವನ್ನು ಆಕರ್ಷಿಸುತ್ತಿವೆ.ಯೂರೋಪ್ ಮತ್ತು ಅಮೆರಿಕಕ್ಕೆ ಹೋಲಿಸಿದರೆ ಇಲ್ಲಿಯ ವೆಚ್ಚ ಅಲ್ಲಿಗಿಂತ ಹತ್ತನೇ ಒಂದರಷ್ಟು ಅಷ್ಟೆ. ಹಾಗಾಗಿ ಇಲ್ಲಿಯ ಆಸ್ಪತ್ರೆಗಳು ಅಲ್ಲಿಯೂ ಹೆಸರುವಾಸಿಯಾಗುತ್ತಿವೆ.ಈ ವರ್ಷ 20 ಸಾವಿರ ಕೋಟಿ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ನಮ್ಮ ದೇಶ ಈ ಉದ್ಯಮದಿಂದ ಸಂಪಾದಿಸುತ್ತದಂತೆ. ಈ ಭರಾಟೆಯಲ್ಲಿ ಬೆಂಗಳೂರಿನ ನಾಟಿ ವೈದ್ಯ ಪದ್ಧತಿಯ ಬಗ್ಗೆ ಹಳೆ ಬೆಂಗಳೂರಿಗರೇ ಮರೆತಂತಿದೆ. ನನಗೆ ತಿಳಿದಂತೆ ನಮ್ಮ ನಡುವೆ ಹಲವು ಹತ್ತು ಸಣ್ಣ ಪ್ರಮಾಣದ ವೈದ್ಯ ಪದ್ಧತಿಗಳಿವೆ.ಅಕ್ಕಿಪೇಟೆಯಲ್ಲಿ ಇರುವ ತವಕಲ್ ದರ್ಗಾದ ಹತ್ತಿರ ಕಾಯಂಗಡಿ ಪಾಪಣ್ಣ ಎಂದು ಹೆಸರು ಕೇಳಿಕೊಂಡು ಇಂದಿಗೂ ಕೆಲವರು ಹೋಗುತ್ತಾರೆ. ಪೈಲ್ವಾನ್ ಆಗಿದ್ದ ಪಾಪಣ್ಣ ಎಂಬುವರ ಮನೆಯವರು ನಡೆಸುವ ಸಣ್ಣ ಚಿಕಿತ್ಸಾ ಕೊಠಡಿಗಳು ಇವೆ. ಉಳುಕು, ಬೆನ್ನುನೋವು, ಸಂಧುಮೂಳೆಗೆ ಸಂಬಂಧಪಟ್ಟ ತೊಂದರೆಗಳಿಗೆ ಇಲ್ಲಿ ಔಷಧಿ ಕೊಡುತ್ತಾರೆ.ಎಷ್ಟೋ ರೋಗಿಗಳಿಗೆ ನೀವಿ ಎಣ್ಣೆಹಚ್ಚಿ ಗುಣಪಡಿಸುತ್ತಾರೆ.  ಹಾಗೆಯೇ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಪುತ್ತೂರು ಕಟ್ಟುಹಾಕುವರು ಇದ್ದಾರೆ. ಈ ಕುಟುಂಬ ಆಂಧ್ರಮೂಲದ್ದು. ಅವರೂ ಎಷ್ಟೋ ಆರ್ಥೋಪೆಡಿಕ್ ತೊಂದರೆಗಳಿಗೆ ಎಲೆಗಳಿಂದ ಮಾಡಿದ ಮದ್ದು ಹಚ್ಚಿ, ಪ್ಲಾಸ್ಟರ್‌ನಂತೆ ಕಟ್ಟುಹಾಕಿ, ಉಪಚಾರ ಮಾಡುವ ರೂಢಿಯಿದೆ.ಇಂಥ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಚಿಕಿತ್ಸಾಲಯ ಇರುವುದು ಸಹಜ. ಅಣ್ಣ ತಮ್ಮಂದಿರು ಹಿರಿಯರ ಪದ್ಧತಿಯನ್ನು ಮುಂದುವರಿಕೊಂಡು ಹೋಗುತ್ತಿರುತ್ತಾರೆ. 

ನೆಲಮಂಗಲದಿಂದ ಕುಣಿಗಲ್ ಮಾರ್ಗದ ಕಡೆ ತಿರುಗಿಕೊಂಡು ಸ್ವಲ್ಪ ದೂರ ಹೋದರೆ ಎಂಟಗಾನಹಳ್ಳಿಯಲ್ಲಿ ನಾಣ್ಯದ ಟ್ರೀಟ್ಮೆಂಟ್ ಮಾಡುವ ಒಂದು ಕುಟುಂಬವಿದೆ.ಇಲ್ಲಿಗೆ ಬಹಳ ದೂರದ ಊರುಗಳಿಂದ ಜನ ಬರುವುದನ್ನು ನಾನು ಕಂಡಿದ್ದೇನೆ. ಹೆಚ್ಚಾಗಿ ಬಡವರು ಬಂದರೂ, ಅಲ್ಲಲ್ಲಿ ಕಾರಿನಲ್ಲಿ ಬಂದು ತೋರಿಸಿಕೊಳ್ಳುವವರೂ ಸುಮಾರಿದ್ದಾರೆ. ನಟ ರಾಜಕುಮಾರ್ ಅವರಿಗೂ ಇಲ್ಲಿಯ ನಾಟಿ ಪದ್ಧತಿ ಸಹಾಯ ಮಾಡಿತ್ತಂತೆ.ಪೆಟ್ಟುಬಿದ್ದು ಕೈಕಾಲು ಮುರಿದುಕೊಂಡವರು, ಬೆನ್ನು ನೋವಿರುವವರು, ಸ್ಲಿಪ್ಡ್ ಡಿಸ್ಕ್ ಆದವರು ಈ ಹೈ ವೇ ಪಕ್ಕದ ಆಸ್ಪತ್ರೆಗೆ ಬರುತ್ತಾರೆ. ಚಾಪೆಯ ಮೇಲೆ ರೋಗಿಯನ್ನು ಮಲಗಿಸಿ, ಬೆನ್ನಿಗೆ ಎಣ್ಣೆ ಬಿಟ್ಟು, ಸ್ವಲ್ಪ ಹೊತ್ತಾದ ಮೇಲೆ ವೈದ್ಯರು ಬೆನ್ನಿನ ಮೇಲೆ ಕಿವಿ ಇಟ್ಟು ಇಂಥ ತೊಂದರೆಯಿದೆ ಎಂದು ತೀರ್ಮಾನಕ್ಕೆ ಬರುತ್ತಾರೆ.ಆಮೇಲೆ ಬೆನ್ನಿನ ಯಾವುದೋ ಒಂದು ಸ್ಥಳವನ್ನು ಗುರುತಿಸಿ, ಅಮುಕಿ, ಅಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಇಟ್ಟು ಪ್ಲಾಸ್ಟರ್ ಹಾಕಿ ಬಿಗಿಮಾಡುತ್ತಾರೆ. ಎರಡು ವಾರ ಬಿಟ್ಟು ತೆಗೆಯಲು ಹೇಳುತ್ತಾರೆ. ಇದು ಚೀನಾದಲ್ಲಿ ಉದ್ಭವಿಸಿ ಜಗತ್ತಿನಾದ್ಯಂತ ಹರಡಿರುವ ಅಕ್ಯುಪ್ರೆಶರ್ ಪದ್ಧತಿಯ ಒಂದು ನಾಟಿ ವಿಧವಿರಬಹುದು. ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ವೈದ್ಯರ ಪೈಕಿಯೂ ಬೆಂಗಳೂರಿನಲ್ಲಿ ಹಲವರು ಪ್ರಸಿದ್ಧರಿದ್ದಾರೆ. ಈ ಪದ್ಧತಿಗಳಷ್ಟು ಜನಜನಿತವಲ್ಲದ ಕೆಲವು ಪದ್ಧತಿಗಳು ಇವೆ. ಟಿಬೆಟನ್ ವೈದ್ಯಕೀಯ ಅಂಥದರಲ್ಲಿ ಒಂದು. ಬೆಂಗಳೂರಿನಲ್ಲಿ ಎರಡು ಟಿಬೆಟನ್ ಚಿಕಿತ್ಸಾಲಯಗಳಿದ್ದವು: ಬ್ರಿಗೇಡ್ ರಸ್ತೆಯ ಹತ್ತಿರ (ಫೋನ್: 080-65990869) ಮತ್ತು ಮಹಾಲಕ್ಷ್ಮಿಪುರದಲ್ಲಿ.

 

ಶುಕ್ರವಾರ ಕೋರಮಂಗಲದಲ್ಲೂ (ಫೋನ್: 080-25521135) ಒಂದು ಪ್ರಾರಂಭವಾಯಿತು. ಡಾಕ್ಟರ್ ಜಂಪ ಯೊಂತೆನ್ ಮತ್ತು ಅವರ ಅಮೆರಿಕನ್ ಶಿಷ್ಯ ಕೈಲ್ ವೀನರ್ ಈ ಹೊಸ ಚಿಕಿತ್ಸಾಲಯವನ್ನು ನಡೆಸುತ್ತಾರೆ. ಕೈಲ್ ವೀನರ್ ಟಿಬೆಟನ್ ಭಾಷೆಯನ್ನೂ ಕಲಿತು ಆ ಪದ್ಧತಿಯ ಸೂಕ್ಷ್ಮಗಳನ್ನು ಅಧ್ಯಯನ ಮಾಡುತ್ತಾ ಬಂದವರು.ಟಿಬೆಟನ್ ಪದ್ಧತಿ ಆಯುರ್ವೇದದಿಂದ ಪ್ರೇರಿತವಾದದ್ದು. ವಾತ ಪಿತ್ಥ ಕಫಾ ಆಧಾರದ ಮೇಲೆ, ಮತ್ತು ನಾಡಿ ಪರೀಕ್ಷೆಯ ಮೂಲಕ, ವೈದ್ಯರು ರೋಗಗಳನ್ನು ಗುರುತಿಸಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ತಯಾರಾದ ಗುಳಿಗೆಗಳನ್ನು ಕೊಡುತ್ತಾರೆ.ಕೇರಳ ಮೂಲದ ರಾಜಗೋಪಾಲ ಎಂಬ ಮತ್ತೊಬ್ಬರು ಮರ್ಮ ಚಿಕಿತ್ಸಾ ಎಂಬ ಪದ್ಧತಿಯನ್ನು ಅನುಸರಿಸಿ ಮಸಾಜ್ ಮಾಡಿ ಬೆನ್ನುನೋವಿನಂಥ ತೊಂದರೆಗಳನ್ನು ಟ್ರೀಟ್ ಮಾಡುತ್ತಿದುದನ್ನು ನಾನು ಬಲ್ಲೆ. ಆ ಪ್ರಾಂತ್ಯದ ಕರಾಟೆಯಂಥ ಕಲೆಯಾದ ಕಳರಿಪಯಟ್ಟು ಪಟುಗಳಿಗೆ ಪೆಟ್ಟಾದಾಗ ಕೊಡುವ ಉಪಚಾರವನ್ನು ಆಧರಿಸಿದ ವೈದ್ಯ ಶಾಸ್ತ್ರ.ಇಂಥ ಎಷ್ಟೋ ವೈದ್ಯರ ಬಗ್ಗೆ ನಾವು ಹೆಚ್ಚಾಗಿ ಕೇಳದೆ ಹೋದರೂ ಎಲ್ಲೋ ಅವರ ಖ್ಯಾತಿ ಬಾಯಿಂದ ಬಾಯಿಗೆ ಹಬ್ಬಿರುತ್ತದೆ. `ಆಲ್ಟರ್ನೇಟಿವ್~ ಎನಿಸಿಕೊಳ್ಳುವ ಆಲೋಪತಿಯೇತರ ಪದ್ಧತಿಗಳನ್ನು ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಸ್ವಲ್ಪ ಮಟ್ಟಿಗೆ ಪ್ರಚಾರ ಮಾಡುತ್ತಿವೆ (ರೇಡಿಯೋದಲ್ಲಿ ಜಾಹೀರಾತುಗಳನ್ನು ನೀವು ಕೇಳಿರಬಹುದು).ಖಾಸಗಿ ವಲಯದಲ್ಲಿ ಕೆಲವರು `ಹೊಲಿಸ್ಟಿಕ್~ ಪದ್ಧತಿಯನ್ನು ಅನುಸರಿಸಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಸೌಖ್ಯ ಎಂಬ ಒಂದು ಸಂಸ್ಥೆ ವಿಶಾಲವಾದ ರೆಸಾರ್ಟ್‌ನಂಥ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿದೆ. ಇಲ್ಲಿಯ ಉಪಚಾರ ಬೆಂಗಳೂರಿನ ಮೆಲ್ವರ್ಗದವರಿಗೂ ಎಟಕುವಂಥದ್ದಲ್ಲ. ಅಮೆರಿಕಾದ ಪಾಪ್ ಸ್ಟಾರ್‌ಗಳು ಮತ್ತು ಆ ಮಟ್ಟದ ಶ್ರೀಮಂತರು ಇಲ್ಲಿಯ ಕಾಟೇಜ್‌ಗಳಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಾರೆ.ಬೆಂಗಳೂರಿನ ಸಣ್ಣ ಪ್ರಮಾಣದ ನಾಟಿ ಎನಿಸಿಕೊಳ್ಳುವ ಪದ್ಧತಿಗಳ ಬಗ್ಗೆ ಕೆಲವೇ ಕೆಲವರಿಗೆ ಅರಿವಿದೆ. ಇವು ಪರಿಣಾಮಕಾರಿಯೇ? ಎಷ್ಟೋ ಜನ ಅದರಿಂದ ಗುಣವಾಗಿರುವ ಸಂಗತಿಯನ್ನು ಕೇಳುತ್ತೇವೆ. ಆದರೆ ಖಚಿತವಾಗಿ ಅದನ್ನು ಹೇಳುವುದು ಹೇಗೆ?ಅಲೋಪತಿಯಲ್ಲಿ ಕ್ಲಿನಿಕಲ್ ಟ್ರಯಲ್‌ಗಳನ್ನು ಮಾಡಿ ಡಾಕ್ಟರ್‌ಗಳಿಗೆ ಮಾಹಿತಿ ಒದಗಿಸುವ ಸಂಪ್ರದಾಯವಿದೆ. ಫಾರ್ಮಸಿ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಮಾರಲು ಅನುವಾಗುವಂತೆ ಈ ಟ್ರಯಲ್‌ಗಳನ್ನು ಬೆಂಬಲಿಸುವುದೂ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ನಾಟಿ ಪದ್ಧತಿಗಳನ್ನು ಅಧ್ಯಯನ ಮಾಡಿ ಸರ್ಟಿಫಿಕೇಶನ್ ಮಾಡುವ ಸಂಸ್ಥೆಗಳು ಎಲ್ಲಿವೆ? ನಾಲ್ಕಾರು ಸಹ ರೋಗಿಗಳನ್ನು ಮಾತಾಡಿಸಿ, ನಿಮ್ಮ ತೊಂದರೆಗೆ ಯಾವ ಪದ್ಧತಿ ಒದಗಿಬರಬಹುದು ಎಂದು ತಿಳಿದುಕೊಳ್ಳುವುದೊಂದೇ ಮಾರ್ಗವೇನೋ?

ಹೊಸ ಸಾಹಿತ್ಯ ಪತ್ರಿಕೆ

ಸಾಹಿತ್ಯ ಪತ್ರಿಕೆ ದೇಶ ಕಾಲ ವಿರಮಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಮತ್ತೊಂದು ಸಾಹಿತ್ಯ ಪತ್ರಿಕೆ ಜನ್ಮ ತಳೆದಿದೆ. ಹೆಸರು `ಬುಕ್ಸ್ ಅಂಡ್ ಮೋರ್~. ಇದು ಇಂಗ್ಲಿಷ್‌ನಲ್ಲಿದೆ. ಎರಡು ತಿಂಗಳಿಗೊಮ್ಮೆ ಬರುವ ಈ ಪತ್ರಿಕೆಯ ಕಚೇರಿ ಜೆಪಿ ನಗರದಲ್ಲಿದೆ. ಸಪ್ನ ರಾವತ್ ಮುಖ್ಯ ಸಂಪಾದಕರಾಗಿರುವ `ಬುಕ್ಸ್ ಅಂಡ್ ಮೋರ್~ನಲ್ಲಿ ಪುಸ್ತಕ ವಿಮರ್ಶೆಗೆ ಒತ್ತು ಕೊಟ್ಟಂತಿದೆ.

ಮೊದಲ ಸಂಚಿಕೆಯಲ್ಲಿ ಹೇಗೆ ಸ್ವತಃ ಪುಸ್ತಕ ಪ್ರಕಟಿಸಬಹುದು, ಪ್ರಕಾಶಕರ ಜೊತೆ ವ್ಯವಹರಿಸುವುದು ಹೇಗೆ ಎಂಬಂಥ ಲೇಖಕರಿಗೆ ಉಪಯೋಗವಾಗುವ ಬರಹಗಳಿವೆ. ವಿನ್ಯಾಸ, ಲೇಖನಗಳ ಮಿಶ್ರಣದಲ್ಲಿ ಹದವಿಲ್ಲದ ಪತ್ರಿಕೆಯ ಮುಂಬರುವ ಸಂಚಿಕೆಗಳು ಹೇಗೆ ಮೂಡಿಬರುತ್ತದೋ ಎಂಬ ಕುತೂಹಲವಂತೂ ಇದೆ. ಪತ್ರಿಕೆಯ ಬೆಲೆ ರೂ 30. (ಕಚೇರಿ ಫೋನ್: 43251760).ಊಟ-ತಿಂಡಿ, ಖ್ಯಾತರು

ಹೋದವಾರ ಆಹಾರ ಮತ್ತು ಪ್ರಖ್ಯಾತರನ್ನು ಒಟ್ಟೊಟ್ಟಿಗೆ ನೆನೆಸಿಕೊಂಡು ಮಾಡಿದ ಟ್ವೀಟ್‌ಗಳ ಬಗ್ಗೆ ಈ ಅಂಕಣದಲ್ಲಿ ಓದಿದ್ದು ನಿಮಗೆ ಜ್ಞಾಪಕವಿರಬಹುದು. ಅದಕ್ಕೆ ಇನ್ನೆರಡು ಸೇರ್ಪಡೆ: ಅಶೋಕ್ ಫೇಣಿ. ಬರ್ಗರ್ ರಾಮಚಂದ್ರಪ್ಪ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.