ವೈದ್ಯಕೀಯ ವಿದ್ಯಾರ್ಥಿಯ ಬಂಧನ

7

ವೈದ್ಯಕೀಯ ವಿದ್ಯಾರ್ಥಿಯ ಬಂಧನ

Published:
Updated:

ನವದೆಹಲಿ (ಪಿಟಿಐ): ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿ ಒಬ್ಬನನ್ನು ವಶಕ್ಕೆ ತೆಗೆದುಕೊಂಡಿದೆ. ಸ್ಫೋಟದ ಸಂಚಿನ ರೂವಾರಿ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.ಬಾಂಗ್ಲಾ ದೇಶದಲ್ಲಿ ಯುನಾನಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿರುವ ವಾಸಿಂ ಅಹಮ್ಮದ್ ಬಂಧಿತನಾಗಿದ್ದು, ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಾಸಿಂನನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಬಂಧಿಸಲಾಗಿದೆಯೋ ಅಥವಾ ಬಾಂಗ್ಲಾ ದೇಶದ  ಅಧಿಕಾರಿಗಳು ಆತನನ್ನು ಭಾರತಕ್ಕೆ ಹಿಡಿದುಕೊಟ್ಟಿದ್ದಾರೆಯೇ ಎಂಬುದರ ಬಗ್ಗೆ ಯಾವೊಬ್ಬ ಅಧಿಕಾರಿಯು ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ. ತನಿಖಾ ಸಂಸ್ಥೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮೂವರನ್ನು ವಶಕ್ಕೆ ತೆಗೆದುಕೊಂಡಿತ್ತು. ಆನಂತರ ಒಬ್ಬನನ್ನು ಬಿಡುಗಡೆ ಮಾಡಿತ್ತು.ಸ್ಫೋಟದ ಸಂಚಿನ ಪ್ರಮುಖ ರೂವಾರಿ ಎಂದೇ ಹೇಳಲಾಗುತ್ತಿರುವ ಹಿಜ್ಬುಲ್ ಮುಜಾಹಿದ್ದೀನ್ ಸಂಚಾಲಕ ಜುನೈದ್ ಅಕ್ರಂನ ಅಡಗುದಾಣಗಳ ಬಗ್ಗೆಯು ಪ್ರಶ್ನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.2009ರಿಂದ ಜಮ್ಮುವಿನ ಕೊತಬಾಲವಾಲ್ ಜೈಲಿನಲ್ಲಿ ಬಂಧಿಯಾಗಿರುವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಭೂಗತವಾಗಿ ಕೆಲಸ ಮಾಡುತ್ತಿದ್ದ ಅಜರ್ ಅಲಿಯು ವಾಸಿಂ ಕುರಿತು ಮಾಹಿತಿ ನೀಡಿದ್ದಾನೆ. ಅಜರ್ ಈ ಹಿಂದೆ ಕಾಶ್ಮೀರದ ಯುವಕರನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ತರಬೇತಿ ಶಿಬಿರಗಳಿಗೆ ಕಳುಹಿಸುತ್ತಿದ್ದ. ಅಲ್ಲದೇ ಈತ ಕೆಲಕಾಲ ಪಾಕಿಸ್ತಾನದಲ್ಲಿಯೇ ತಂಗಿದ್ದ ಎಂದು ಮೂಲಗಳು ತಿಳಿಸಿವೆ.ಸೆಪ್ಟೆಂಬರ್ 7ರಂದು ನಡೆದ ಸ್ಫೋಟದ ನಂತರ ಇಮೇಲ್ ಕಳುಹಿಸಿದ್ದ ಆರೋಪದ ಮೇರೆಗೆ ಹೈಸ್ಕೂಲ್ ವಿದ್ಯಾರ್ಥಿ ಅಬಿದ್ ಅಬ್ಬಾಸ್‌ನನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ಅಲ್ಲದೇ ಶಿಲ್ಲಾಂಗ್‌ನಲ್ಲಿ ಆತನ ಸಹೋದರನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದ. ಕಳೆದ ತಿಂಗಳು ದೆಹಲಿ ಹೈಕೋರ್ಟ್‌ನ ವಾಹನ ನಿಲುಗಡೆ ಪ್ರದೇಶದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ 15 ಜನ ಸಾವನ್ನಪ್ಪಿ, 70ಕ್ಕೂ ಅಧಿಕ ಜನ ಗಾಯಗೊಂಡಿದ್ದರು.ಪ್ರಕರಣದ ಕುರಿತು ತನಿಖೆಯು ಆಳವಾಗಿ ನಡೆಯುತ್ತಿರುವಂತೆ ಇದರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಪಾತ್ರವಿರುವುದನ್ನು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ. ಈ ಮೊದಲು ಹುಜಿ (ಹರಕತ್-ಉಲ್-ಜಿಹಾದ್-ಇಸ್ಲಾಮಿ) ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು.ಅಬ್ಬಾಸ್ ಎನ್‌ಐಎ ವಶಕ್ಕೆ: ಈ ನಡುವೆ ಇದೇ ಪ್ರಕರಣದಲ್ಲಿ ಬಂಧಿತ ಆರೋಪಿ ಅಮೀರ್ ಅಬ್ಬಾಸ್ ದೇವ್‌ನನ್ನು ಇದೇ 14 ರವರೆಗೆ  ರಾಷ್ಟ್ರೀಯ ತನಿಖಾ ಆಯೋದಗದ ವಶಕ್ಕೆ ನೀಡುವಂತೆ ಶುಕ್ರವಾರ ದೆಹಲಿ ಕೋರ್ಟ್ ಆದೇಶಿಸಿದೆ. ಈ ಪ್ರಕರಣವನ್ನು ವಿಚಾರಣೆ ಮಾಡಿದ ವಿಶೇಷ ನ್ಯಾಯಾಧೀಶ ಎಚ್.ಎಸ್. ಶರ್ಮಾ ಅವರು ಇನ್ನೂ ಏಳು ದಿನಗಳ ಕಾಲ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳದ ವಶಕ್ಕೆ  ಒಪ್ಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry