ವೈದ್ಯಕೀಯ ವೆಚ್ಚ ಮರು ಪಾವತಿಗೆ ಆದೇಶ

7

ವೈದ್ಯಕೀಯ ವೆಚ್ಚ ಮರು ಪಾವತಿಗೆ ಆದೇಶ

Published:
Updated:

ಕೊಪ್ಪಳ: ನಿಗದಿತ ಕಾಲಾವಧಿಯೊಳಗೆ ಕ್ಲೇಂ- ಫಾರ್ಮ್ ಸಲ್ಲಿಸದಿರುವುದನ್ನೇ ಪ್ರಮುಖ ಕಾರಣವನ್ನಾಗಿಸಿ ವೈದ್ಯಕೀಯ ವೆಚ್ಚ ಮರು ಪಾವತಿಸಲು ನಿರಾಕರಿಸುವಂತಿಲ್ಲ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.ಗಂಗಾವತಿಯ ಕೆ.ಪಿ.ರಾಜಾ ಎಂಬುವವರು ಭಾರತೀಯ ಜೀವ ವಿಮಾ ನಿಗಮದ ನೌಕರರಾಗಿದ್ದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ. ನಿಗಮದವರು 2011-12ನೇ ಸಾಲಿಗೆ ನಿಗಮದ ಎಲ್ಲ ನೌಕರರು ಹಾಗೂ ಅವರ ಅವಲಂಬಿತರಿಗೆ ಅನ್ವಯಿಸುವಂತೆ ಎಲ್‌ಐಸಿ ಗ್ರೂಪ್ ಮೆಡಿಕ್ಲೇಂ ಇನ್ಸೂರೆನ್ಸ್ ಪಾಲಿಸಿಯನ್ನು ನೀಡಿದ್ದರು.ಈ ಪಾಲಿಸಿಯನ್ವಯ ಎಲ್‌ಐಸಿಯ ಎಲ್ಲ ನೌಕರರು ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ವೈದ್ಯಕೀಯ ವೆಚ್ಚ ಮರು ಪಾವತಿಗೆ ಅವಕಾಶವಿದೆ. ಗಂಗಾವತಿಯ ಕೆ.ಪಿ.ರಾಜಾ ಅವರು 2011ರ ಜೂನ್‌ನಲ್ಲಿ ಅಪಘಾತದಲ್ಲಿ ಗಾಯಗೊಂಡು, ಗಂಗಾವತಿಯ ಓಂ ಸಾಯಿ ಆರ್ಥೋಪೆಡಿಕ್ ಮತ್ತು ಟ್ರಾಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ನಂತರ ವೈದ್ಯಕೀಯ ವೆಚ್ಚ ಮರು ಪಾವತಿಸುವಂತೆ ಕ್ಲೇಂ- ಫಾರ್ಮ್ ಅನ್ನು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ. ನಿಗಮದವರಿಗೆ ಸಲ್ಲಿಸಿದ್ದರು. ಆದರೆ ಈ ಕಂಪನಿಯು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 20 ದಿನಗಳ ಒಳಗಾಗಿ ಕ್ಲೇಂ ಸಲ್ಲಿಸಿಲ್ಲ ಎಂಬ ಕಾರಣ ನಮೂದಿಸಿ, ವೈದ್ಯಕೀಯ ವೆಚ್ಚ ಮರು ಪಾವತಿಗೆ ನಿರಾಕರಿಸಿತು.  ವೈದ್ಯಕೀಯ ವೆಚ್ಚ ಮರುಪಾವತಿ ನಿರಾಕರಿಸಿರುವುದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸೇವಾ ನ್ಯೂನತೆ ಎಂದು ಪರಿಗಣಿಸಿ, ವೈದ್ಯಕೀಯ ವೆಚ್ಚ, ಮಾನಸಿಕ ಮತ್ತು ದೈಹಿಕ ಹಿಂಸೆಗೆ ಪರಿಹಾರ, ಇತರೆ ಖರ್ಚು ಹಾಗೂ ಪ್ರಕರಣದ ಖರ್ಚು ಸೇರಿ ಒಟ್ಟು 85,000 ರೂಪಾಯಿಗಳನ್ನು ದೊರಕಿಸಿಕೊಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಹಾಗೂ ಸದಸ್ಯರಾದ ಶಿವರೆಡ್ಡಿ.ಬಿ. ಗೌಡ ಮತ್ತು ವೇದಾ ಜೋಷಿ ಅವರು, ಭಾರತೀಯ ಜೀವ ವಿಮಾ ನಿಗಮದ ನೌಕರರಿಗೆ ಒದಗಿಸಿರುವ ಎಲ್‌ಐಸಿ ಗ್ರೂಪ್ ಮೆಡಿ-ಕ್ಲೇಂ ಇನ್ಸೂರೆನ್ಸ್ ಪಾಲಿಸಿಯು ಎಲ್ಲಾ ನೌಕರರು ಹಾಗೂ ಅವರ ಅವಲಂಬಿತರಿಗೆ ಅನ್ವಯಿಸುವಂತೆ ಒದಗಿಸಿರುವ ಒಂದು ಸಾಮೂಹಿಕ ಪಾಲಿಸಿಯಾಗಿದ್ದು, ಪಾಲಿಸಿಯ ದಾಖಲೆಗಳನ್ನು ಪ್ರತಿಯೊಬ್ಬ ನೌಕರರಿಗೆ ನೀಡಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಪಾಲಿಸಿಯ ಷರತ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯು ಯಾವುದೇ ಪಾಲಿಸಿದಾರರಿಗೆ/ನೌಕರರಿಗೆ ಗೊತ್ತಿರುವುದಿಲ್ಲ. ಕೇವಲ ನಿಗದಿತ ಕಾಲಾವಧಿಯೊಳಗೆ ಕ್ಲೇಂ- ಫಾರ್ಮ್ ಸಲ್ಲಿಸದೇ ಇರುವುದಕ್ಕೆ ವೈದ್ಯಕೀಯ ವೆಚ್ಚ ಮರು ಪಾವತಿಸಲು ನಿರಾಕರಿಸಿರುವುದು ಕಂಪನಿಯ ಸೇವಾ ನ್ಯೂನತೆ ಎಂದು ಪರಿಗಣಿಸಿದ್ದಾರೆ.ಕೆ.ಪಿ.ರಾಜಾ ಅವರ ವೈದ್ಯಕೀಯ ವೆಚ್ಚ ರೂ. 21,925 ಗಳನ್ನು 2011ರ ಆಗಸ್ಟ್ 26ರಿಂದ ಅನ್ವಯಿಸುವಂತೆ ವಾರ್ಷಿಕ ಶೇ 10ರ ಬಡ್ಡಿಯೊಂದಿಗೆ ಮರು ಪಾವತಿಸಬೇಕು. ಅಲ್ಲದೇ, ಪ್ರಕರಣದ ಖರ್ಚು ರೂ. 2000 ಗಳನ್ನು 90 ದಿನಗಳ ಒಳಗಾಗಿ ಪಾವತಿಸುವಂತೆ ತೀರ್ಪು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry