ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು

7
ನಿಮ್ಹಾನ್ಸ್ ಘಟಿಕೋತ್ಸವದಲ್ಲಿ ಸಚಿವ ಆಜಾದ್

ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು

Published:
Updated:
ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು

ಬೆಂಗಳೂರು: `ಪ್ರಸಕ್ತ ವರ್ಷದಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿಗಳ ಸೀಟು ಹೆಚ್ಚಳದ ಮೂಲಕ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ' ಎಂದು ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ತಿಳಿಸಿದರು.ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 17ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.`ಆಧುನಿಕ ಯುಗದಲ್ಲಿ ಬಹುತೇಕ ಮಂದಿ ಒಂದಲ್ಲ ಒಂದು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವ ಬಗ್ಗೆ ಸಂಶೋಧನೆಯಿಂದ ಸಾಬೀತಾಗಿದೆ. ಬಹುತೇಕ ಮಾನಸಿಕ ಕಾಯಿಲೆಗಳು ಆರೋಗ್ಯಯುತ ಜೀವನದ ಮೇಲೆ ದುಷ್ಪರಿಣಾಮ ಬೀರುವುದರಿಂದ ಈ ಬಗ್ಗೆ ಹೆಚ್ಚಿನ ನಿಗಾವಹಿಸುವ ಅಗತ್ಯವಿದೆ' ಎಂದು ಹೇಳಿದರು.`12ನೇ ಪಂಚವಾರ್ಷಿಕ ಯೋಜನೆಯಲ್ಲಿ ನರವಿಜ್ಞಾನಕ್ಕೆ ಸಂಬಂಧಪಟ್ಟ ಸಂಶೋಧನೆಗೆ ಸಹಾಯಕವಾಗುವಂತೆ ಹೆಚ್ಚಿನ ಯೋಜನೆಗಳನ್ನು ರೂಪಿಸಲಾಗುವುದು. ಅಲ್ಲದೇ ಮಾನಸಿಕ ರೋಗಿಗಳು ಗುಣಮುಖರಾಗಲು ಅಗತ್ಯವಿರುವ ಔಷಧೋಪಚಾರಕ್ಕೂ ಗಮನ ಹರಿಸಲಾಗುವುದು' ಎಂದು ತಿಳಿಸಿದರು.ಬಾಂಗ್ಲಾದೇಶದ ಆರೋಗ್ಯ ಸಚಿವ ಪ್ರೊ. ರೂಹಲ್ ಹಕ್, `ಆಟಿಸಂ ಕುರಿತು ಬಾಂಗ್ಲಾದ ರಾಷ್ಟ್ರೀಯ ಸಲಹಾ ಸಮಿತಿಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಟಿಸಂ ಕಾಯಿಲೆಯ ಕುರಿತು ಸಂಶೋಧನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ದೈಹಿಕ ಕಾಯಿಲೆಗಳಿಗೆ ಒತ್ತು ನೀಡುವಷ್ಟೇ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಭಾರತ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ' ಎಂದು ಶ್ಲಾಘಿಸಿದರು.ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಿಮ್ಹಾನ್ಸ್‌ನ ನಿರ್ದೇಶಕ ಪ್ರೊ.ಪಿ.ಸತೀಶ್‌ಚಂದ್ರ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry