ಮಂಗಳವಾರ, ಮೇ 24, 2022
31 °C

ವೈದ್ಯಕೀಯ ಸೇವೆ ಬಂದ್: ರೋಗಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೇಂದ್ರ ಸರ್ಕಾರದ ಉದ್ದೇಶಿತ ವೈದ್ಯಕೀಯ ನೀತಿಗಳನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘವು ನೀಡಿದ್ದ ವೈದ್ಯಕೀಯ ಸೇವೆ ಬಂದ್‌ನಲ್ಲಿ ಜಿಲ್ಲಾ ಆಸ್ಪತ್ರೆಯ ಹಲವು ವೈದ್ಯರು ಸೋಮವಾರ ಪಾಲ್ಗೊಂಡರು. ಈ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವ ಸನ್ನಿವೇಶ ನಿರ್ಮಾಣವಾಗಿತ್ತು.ಮುಷ್ಕರಕ್ಕೆ ತೆರಳದೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲವು ವೈದ್ಯರ ಕೊಠಡಿಗಳ ಮುಂದೆ ರೋಗಿಗಳ ಉದ್ದನೆಯು ಸರತಿ ಕಂಡು ಬಂದಿತು. ಕೆಲವು ಕೊಠಡಿಗಳ ಮುಂದೆ ಸಾಲಿನ ನಿಯಮ ಮೀರಿ ರೋಗಿಗಳು ನೆರೆದ ಪರಿಣಾಮ ನೂಕು ನುಗ್ಗಲು ಏರ್ಪಟ್ಟಿತ್ತು. ರೋಗಿಗಳು ಮತ್ತು ಅವರ ಸಂಬಂಧಿಕರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟರು. ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆಯಿತು.ಜಿಲ್ಲಾ ಸರ್ಜನ್ ಡಾ.ಶ್ರೀಧರ್‌ಮೂರ್ತಿ ಅವರು ರಜೆ ಪಡೆದು ಬೆಂಗಳೂರಿನಲ್ಲಿ ನಡೆದ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಸುದರ್ಶನ್ ಕುಮಾರ್‌ಜೈನ್ ಕೊಠಡಿ ಮುಂದೆ ಜನ ಸೇರಿದ್ದರು. ಅಲ್ಲಿಯೂ ನೂಕಾಟ ನಡೆದಿತ್ತು. ಆಸ್ಪತ್ರೆಯ ಆಯಕಟ್ಟಿನ ಸ್ಥಳಗಳಲ್ಲಿ ವೈದ್ಯಕೀಯ ಸೇವೆ ಬಂದ್ ವಿವರಣೆಯುಳ್ಳ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು.ಆಸ್ಪತ್ರೆಯ ಸುಮಾರು 30 ವೈದ್ಯರ ಪೈಕಿ 10 ವೈದ್ಯರು ರಜೆ ಪಡೆದು ಮುಷ್ಕರದಲ್ಲಿ ಪಾಲ್ಗೊಂಡ್ದ್ದಿದರು.

ಭಾನುವಾರ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಸೋಮವಾರ ರಜೆ. ವೈದ್ಯರ ಕೊರತೆ ಎದುರಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಮಾತ್ರ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದು ಡಾ.ಜೈನ್ ಸುದ್ದಿಗಾರರಿಗೆ ತಿಳಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.