ಶುಕ್ರವಾರ, ಜೂನ್ 25, 2021
22 °C

ವೈದ್ಯಕೀಯ ಸೌಲಭ್ಯ ಸಾಮಾನ್ಯರಿಗೆ ತಲುಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯಕೀಯ ಸೌಲಭ್ಯ ಸಾಮಾನ್ಯರಿಗೆ ತಲುಪಿಸಿ

ಕೋಲಾರ: ದುಬಾರಿಯಾಗಿರುವ ವೈದ್ಯಕೀಯ ಸೌಲಭ್ಯವನ್ನು ಮಾನವೀಯ ನೆಲೆಯಲ್ಲಿ ಜನ ಸಾಮಾನ್ಯರಿಗೆ ದೊರಕಿಸುವ ಸವಾಲನ್ನು ಹೊಸ ವೈದ್ಯರು ಸಮರ್ಥವಾಗಿ ನಿಭಾಯಿಸಬೇಕಾಗಿದೆ ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀಪ್ರಕಾಶ್ ತಿಳಿಸಿದರು.ನಗರದ ಹೊರವಲಯದ ಟಮಕದಲ್ಲಿರುವ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ನಡೆದ 21ನೇ ಘಟಿಕೋತ್ಸವದಲ್ಲಿ ಪ್ರಮುಖ ಭಾಷಣ ಮಾಡಿದ ಅವರು, ಹೊಸ ವೈದ್ಯರ ಎದುರು ಉತ್ತೇಜನಕಾರಿಯಾದ ಹಲವು ಅವಕಾಶಗಳಿವೆ. ಅದೇ ರೀತಿ ಹೊಸ ಸವಾಲುಗಳೂ ಇವೆ ಎಂದರು.ಬದಲಾದ ಜೀವನ ಶೈಲಿಯ ಪರಿಣಾಮ ಹೊಸ ಕಾಯಿಲೆ ಹುಟ್ಟಿಕೊಂಡಿವೆ. ಅವುಗಳ ಹಿನ್ನೆಲೆಯಲ್ಲಿ ಅತ್ಯಾಧುನಿಕ ನೆಲೆಯಲ್ಲಿ ವೈದ್ಯಕೀಯ ಸಂಶೋಧನೆ ನಡೆಯುತ್ತಿವೆ. ಹೊಸ ಔಷಧಿ, ಉಪಕರಣ ಸೃಷ್ಟಿಯಾಗಿವೆ. ಅವು ಹೊಸ ವೈದ್ಯರಿಗೆ ಅನುಕೂಲಕರವಾಗಿವೆ. ಆದರೆ ಅವೆಲ್ಲವೂ ದುಬಾರಿಯಾಗಿವೆ. ಇಂಥ ಸಂದರ್ಭದಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ತಲುಪಿಸುವ ಹೊಸ ಜವಾಬ್ದಾರಿಯೂ ದೊಡ್ಡದಾಗಿದೆ ಎಂದರು.ಜೀವನಶೈಲಿಯ ಏರುಪೇರಿನಿಂದ ಕಾಣಿಸಿಕೊಳ್ಳುತ್ತಿರುವ ಹೊಸ ಆರೋಗ್ಯ ಸಮಸ್ಯೆ, ರಕ್ತದೊತ್ತಡ, ಮಧುಮೇಹ, ಅಲರ್ಜಿ, ವಯೋ ಸಹಜವಾದ ಏರುಪೇರುಗಳಂಥ ಹಲವು ವೈದ್ಯಕೀಯ ಕ್ಷೇತ್ರಕ್ಕೆ ಸವಾಲುಗಳಾಗಿವೆ. ಈ ನಿಟ್ಟಿನಲ್ಲಿ ಹೊಸ ವೈದ್ಯರು ಪ್ರಾಯೋಗಿಕ ನೆಲೆಯಲ್ಲಿ ಹೆಚ್ಚು ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ನಿರಂತರ ಸಂಶೋಧನೆ ಮಾಡದಿದ್ದರೆ ವೈದ್ಯರು ನಿಂತ ನೀರಾಗುವ ಅಪಾಯ ಹೆಚ್ಚು ಎಂದರು.ಕಾನೂನು ಅರಿಯಿರಿ: ಸಂವಹನ ಕೌಶಲ, ನಾಯಕತ್ವದ ಗುಣ, ತಂಡವಾಗಿ ಕಾರ್ಯ ನಿರ್ವಹಿಸುವುದು ಸೇರಿದಂತೆ ಹಲವು ಕೌಶಲಗಳನ್ನು ವೈದ್ಯರು ಕಲಿಯಬೇಕು. ಅಷ್ಟೆ ಅಲ್ಲದೆ, ವೈದ್ಯಕೀಯ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೂಡುವ ಪ್ರತಿ ದಾಖಲೆಗಳೂ ಕಾನೂನಿನ ದೃಷ್ಟಿಯಿಂದ ಯಾವ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಸದಾ ಎಚ್ಚರಿಕೆ ಇರಬೇಕು.ಕೇಸ್ ಶೀಟ್‌ನಲ್ಲಿ ಮಾಹಿತಿ ಸಂಗ್ರಹಿಸುವುದರಿಂದ ಶುರುವಾಗಿ ಎಲ್ಲ ಕಡೆಯೂ ದಾಖಲೀಕರಣ ಮಾಡುವಾಗ ಕಾನೂನು ಅರಿವಿನಿಂದಲೇ ದಾಖಲಿಸಬೇಕು. ಇಲ್ಲವಾದರೆ ತೊಂದರೆಗೆ ಸಿಲುಕುವ ಅಪಾಯವಿದೆ. ಹೊಸ ವೈದ್ಯರು ಕಾನೂನು ತಿಳಿವಳಿಕೆ ಹೊಂದುವುದು ಅನಿವಾರ್ಯ ಎಂದರು.ಇದೇ ಸಂದರ್ಭದಲ್ಲಿ ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಸಂಸ್ಥೆಯ ಕುಲಪತಿ ಡಾ.ಎಸ್.ಚಂದ್ರಶೇಖರ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಂಸ್ಥೆ ಅಧ್ಯಕ್ಷ ಆರ್.ಎಲ್.ಜಾಲಪ್ಪ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ, ಟ್ರಸ್ಟಿಗಳಾದ ಕೆ.ಜಿ.ಹನುಮಂತರಾಜು, ಓಬಯ್ಯ, ಜೆ.ರಾಜೇಂದ್ರ, ಸರಸ್ವತಿ, ರಾಜೇಶ್ ಜಗದಾಳೆ, ಸಂಚಾಲಕ ಅಧಿಕಾರಿ ಡಾ.ಎಂ.ಎಚ್.ಚಂದ್ರಪ್ಪ, ಕುಲಸಚಿವ ಡಾ.ಎವಿಎಂ ಕುಟ್ಟಿ, ಆಂಜಿನಪ್ಪ, ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಿ.ಲಕ್ಷ್ಮಯ್ಯ, ಪರೀಕ್ಷಾಂಗ ಅಧಿಕಾರಿ ಡಿಬಿಎಲ್‌ಎನ್ ಪ್ರಸಾದ್ ಉಪಸ್ಥಿತರಿದ್ದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಪ್ರಸಾದ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಪಿ.ಎಂ.ಕುಮಾರ್ ಅತಿಥಿ ಪರಿಚಯ ಮಾಡಿದರು.ಶಸ್ತ್ರಚಿಕಿತ್ಸಾ ವಿಷಯದಲ್ಲಿ ಚಿನ್ನದ ಪದಕ ಪಡೆದಿರುವ ಡಾ.ಕೆ.ಸಿಗ್ಧಾರೆಡ್ಡಿ ಅವರಿಗೆ 2011-12ನೇ ಸಾಲಿನ ಅತ್ಯತ್ತಮ ವಿದ್ಯಾರ್ಥಿನಿ ಪ್ರಶಸ್ತಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಡಾ.ಫರಾನ್ ಅಲಿ ಮತ್ತು ಡಾ.ನೂಪೂರ್ ಶರ್ಮ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ, ಡಾ.ಎಂ.ಪವನ್ ಹಾಗೂ ಡಾ.ಎಲ್.ಶೀತಲ್ ಅವರಿಗೆ 2011-12ನೇ ಸಾಲಿನ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನೂ ಇದೇ ಸಂದರ್ಭದಲ್ಲಿ ನೀಡಲಾಯಿತು. 158 ಮಂದಿಗೆ ಪದವಿ ಮತ್ತು 52 ಮಂದಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರ ವಿತರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.