ಶನಿವಾರ, ಮೇ 21, 2022
23 °C

ವೈದ್ಯಕೀಯ: 300 ಹೆಚ್ಚುವರಿ ಸೀಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಎರಡು ಹೊಸ ಖಾಸಗಿ ವೈದ್ಯಕೀಯ ಕಾಲೇಜುಗಳು ಆರಂಭವಾಗಿದ್ದು, ಇದರಿಂದ ಒಟ್ಟು 300 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಿವೆ.ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ತುಮಕೂರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಸಂಶೋಧನಾ ಆಸ್ಪತ್ರೆಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಒಪ್ಪಿಗೆ ನೀಡಿದೆ.ಎರಡೂ ಕಾಲೇಜುಗಳಲ್ಲಿ ತಲಾ 150 ಸೀಟುಗಳ ಪ್ರವೇಶಕ್ಕೆ ಒಪ್ಪಿಗೆ ದೊರೆತಿದೆ. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ ಎರಡೂ ಕಾಲೇಜುಗಳಿಂದ ಸರ್ಕಾರಿ ಕೋಟಾದಡಿ 120 ಸೀಟುಗಳು ಲಭ್ಯವಾಗಲಿವೆ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ತಿಳಿಸಿದರು.ಕೊನೆ ದಿನ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಸೀಟುಗಳ ಆದ್ಯತೆಯನ್ನು ಗುರುತಿಸಲು ಭಾನುವಾರ ಕೊನೆಯ ದಿನ. ಈಗಾಗಲೇ ಶೇ 95ರಷ್ಟು ವಿದ್ಯಾರ್ಥಿಗಳು ಸೀಟು ಆಯ್ಕೆಯ ಆದ್ಯತೆಯನ್ನು ಗುರುತಿಸಿದ್ದಾರೆ. ಭಾನುವಾರ ರಾತ್ರಿ 11 ಗಂಟೆವರೆಗೂ ಆದ್ಯತೆಗಳನ್ನು ಗುರುತಿಸಲು ಅವಕಾಶ ಇದೆ.ಮಂಗಳವಾರ ನಿರ್ಧಾರ: ಬೆಂಗಳೂರು ಹಾಗೂ ಗುಲ್ಬರ್ಗದ ಇಎಸ್‌ಐ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಸೀಟುಗಳ ಪ್ರವೇಶಕ್ಕೆ ಎಂಸಿಐ ಮಂಗಳವಾರ ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ಎರಡೂ ಕಡೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಮಂಗಳವಾರ ನಡೆಯುವ ಎಂಸಿಐ ಆಡಳಿತ ಮಂಡಳಿಯ ಸಭೆ 200 ಸೀಟುಗಳ ಪ್ರವೇಶಕ್ಕೆ ಒಪ್ಪಿಗೆ ನೀಡಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.ಈ ಎರಡೂ ಕಾಲೇಜುಗಳಿಗೆ ಒಪ್ಪಿಗೆ ದೊರೆತರೆ 170 ಸೀಟುಗಳು ಸರ್ಕಾರಿ ಕೋಟಾದಡಿ ದೊರೆಯಲಿವೆ. 30 ಸೀಟುಗಳು ಅಖಿಲ ಭಾರತ ಕೋಟಾದಡಿ ದೊರೆಯಲಿವೆ.ಬೆಂಗಳೂರಿನ ಎಂ.ವಿ.ಜೆ ವೈದ್ಯಕೀಯ ಕಾಲೇಜು, ವೈದೇಹಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಜೆಎಸ್‌ಎಸ್ ಡೀಮ್ಡ ವಿಶ್ವವಿದ್ಯಾಲಯ ಹಾಗೂ ಆಲ್‌ಅಮಿನ್ ವೈದ್ಯಕೀಯ ಕಾಲೇಜುಗಳಲ್ಲಿ ಹಾಲಿ ಇರುವ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಎಂಸಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಎಂಸಿಐ ಮುಂದಿನ ವಾರ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ.ವೈದೇಹಿ ಕಾಲೇಜಿನಲ್ಲಿ ಸದ್ಯ 150 ಸೀಟುಗಳಿದ್ದು, 250 ಸೀಟುಗಳಿಗೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆ ದೊರೆತರೆ ಒಪ್ಪಂದದ ಪ್ರಕಾರ 25 ಸೀಟುಗಳು ಸರ್ಕಾರಿ ಕೋಟಾದಡಿ ಲಭ್ಯವಾಗಲಿವೆ. ಜೆಎಸ್‌ಎಸ್ ಡೀಮ್ಡ ವಿಶ್ವವಿದ್ಯಾಲಯದಲ್ಲಿ ಸದ್ಯ 150 ಸೀಟುಗಳು ಇದ್ದು, 200ಕ್ಕೆ ಹೆಚ್ಚಿಸುವಂತೆ ಕೋರಲಾಗಿದೆ. ಇಲ್ಲಿ 12 ಸೀಟುಗಳು ಸರ್ಕಾರಿ ಕೋಟಾಗೆ ದೊರೆಯಲಿವೆ.ಹೆಚ್ಚುವರಿ ಸೀಟುಗಳಿಗೆ ಎಂಸಿಐ ಅನುಮತಿ ನೀಡಿದರೂ, ಮೊದಲ ಸುತ್ತಿನ ಕೌನ್ಸೆಲಿಂಗ್‌ಗೆ ಆ ಸೀಟುಗಳು ಲಭ್ಯವಾಗುವುದಿಲ್ಲ. ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಆ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.