ವೈದ್ಯನಾಥನ್ ವರದಿ ಜಾರಿಗೆ ಬದ್ಧ: ಭರವಸೆ

7

ವೈದ್ಯನಾಥನ್ ವರದಿ ಜಾರಿಗೆ ಬದ್ಧ: ಭರವಸೆ

Published:
Updated:

ಹೊನ್ನಾಳಿ: ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರೊ.ಎಲ್.ಆರ್. ವೈದ್ಯನಾಥನ್ ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ ರೇಣುಕಾಚಾರ್ಯ ಭರವಸೆ ನೀಡಿದರು.ಹಿರೇಕಲ್ಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ದಾವಣಗೆರೆ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರೊ.ಎಲ್.ಆರ್. ವೈದ್ಯನಾಥನ್ ನೀಡಿರುವ ವರದಿಯ ಅಂಶಗಳ ಬಗ್ಗೆ ತಾವು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಕ್ರೀಡೆ ಮತ್ತು ಯುವಜನ ಖಾತೆ ಸಚಿವರೊಂದಿಗೆ ಚರ್ಚೆ ನಡೆಸಿ ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ದೈಹಿಕ ಶಿಕ್ಷಣವನ್ನು ಉತ್ತಮವಾಗಿ ನೀಡಿದರೆ, ಸಶಕ್ತ ವಿದ್ಯಾರ್ಥಿಗಳು ಹೊರಹೊಮ್ಮುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದೈಹಿಕ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯ ನೀಡುತ್ತಿದೆ. ಇವುಗಳನ್ನು ದೈಹಿಕ ಶಿಕ್ಷಕರು ಸದುಯೋಗಪಡಿಸಿಕೊಂಡು ಮಕ್ಕಳ ದೈಹಿಕ ಬೆಳವಣಿಗೆಯತ್ತ ಗಮನಹರಿಸಬೇಕು ಎಂದರು.ದೇಸಿ ಕ್ರೀಡೆಗಳು ಇಂದು ನಶಿಸುವ ಹಂತ ತಲುಪಿವೆ. ದೈಹಿಕ ಶಿಕ್ಷಕರು ನಮ್ಮ ದೇಸಿ ಕ್ರೀಡೆಗಳತ್ತ ಇಂದಿನ ವಿದ್ಯಾರ್ಥಿಗಳು ಪ್ರೀತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ಆಧುನಿಕ ಜಗತ್ತಿನ ಕ್ರೀಡೆಗಳಿಗಿಂತ ದೇಸಿ ಕ್ರೀಡೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಚಾರ್ಯ ಪ್ರೊ.ಎಲ್.ಆರ್. ವೈದ್ಯನಾಥನ್, ಅತಿಥಿಯಾಗಿ ಮಾತನಾಡಿ, ಸಾಮಾನ್ಯ ಶಿಕ್ಷಣಕ್ಕೆ ದೈಹಿಕ ಶಿಕ್ಷಣ ಪೂರಕವಾಗಿದೆ. ಆದರೆ, ನಮ್ಮಲ್ಲಿ ಇತರ ವಿಷಯಗಳ ಶಿಕ್ಷಕರಿಗೆ ದೊರೆಯುವ ಸೌಲಭ್ಯಗಳು ದೈಹಿಕ ಶಿಕ್ಷಕರಿಗೆ ಸಿಗುತ್ತಿಲ್ಲ. ವಿದ್ಯಾರ್ಥಿ-ಪೋಷಕರೂ ದೈಹಿಕ ಶಿಕ್ಷಣದ ಮಹತ್ವ ಅರಿತಿಲ್ಲ. ಸರ್ಕಾರ ಈ ಬಗ್ಗೆ ಜಾಗೃತಿ ಮೂಡಿಸುವ ತುರ್ತು ಇದೆ ಎಂದರು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ದೈಹಿಕ ಶಿಕ್ಷಣವನ್ನು ಒಂದು ಬೋಧನಾ ವಿಷಯವಾಗಿಸಬೇಕು. ದೈಹಿಕ ಶಿಕ್ಷಕರ ವೃಂದ ನೇಮಕಾತಿಯಲ್ಲಿ ಬದಲಾವಣೆ ತರಬೇಕು. ಬಡ್ತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮುಂದುವರಿದ ರಾಷ್ಟ್ರಗಳಲ್ಲಿ ದೈಹಿಕ ಶಿಕ್ಷಣಕ್ಕೆ ಇನ್ನಿಲ್ಲದ ಮಹತ್ವ ನೀಡಲಾಗಿದೆ. ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ  ಸಂಗ್ರಹಾಲಯಗಳು, ಸುಸಜ್ಜಿತ ಮೈದಾನ-ಈಜುಕೊಳಗಳು ಇವೆ. ಆ ಮಾದರಿಯಲ್ಲಿ ನಮ್ಮಲ್ಲೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು.

ಜಿ.ಪಂ. ಸದಸ್ಯೆಯರಾದ ಅಂಬಿಕಾ ರಾಜಪ್ಪ, ಉಷಾ ಅಶೋಕ್, ಹರಪನಹಳ್ಳಿ ಬಿಇಒ ವೀರಣ್ಣ ಎಸ್. ಜತ್ತಿ, ಎಂ.ಪಿ. ರಾಜು, ಆರ್ಥರ್ ತ್ರಿಲೋಕ್ ಸಿಂಗ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರವಿ ಗಾಳಿ, ಶಿವಲಿಂಗೇಗೌಡ, ಆರ್. ಈಶ್ವರಪ್ಪ, ದಿಳ್ಳೆಪ್ಪ, ಡಿ. ರಾಮಪ್ಪ, ನ್ಯಾಮತಿ ನಾಗರಾಜ್ ಇತರರು ಉಪಸ್ಥಿತರಿದ್ದರು.ಶಾಲಾ ಮಕ್ಕಳು ಪ್ರಾರ್ಥಿಸಿದರು. ಬಿಇಒ ಕೆ.ಸಿ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಗಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಪ್ಪ ಕಾರ್ಯಕ್ರಮ ನಿರೂಪಿಸಿದರು.ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಾಜು ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಊಟ-ಉಪಾಹಾರದ ವ್ಯವಸ್ಥೆ ಮಾಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry