ಸೋಮವಾರ, ಜೂನ್ 21, 2021
21 °C

ವೈದ್ಯನಾಥಪುರ: ಗ್ರಾಮಸ್ಥರಿಂದಲೆ ನಾಲೆ ಸ್ವಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯನಾಥಪುರ: ಗ್ರಾಮಸ್ಥರಿಂದಲೆ ನಾಲೆ ಸ್ವಚ್ಛ

ಮದ್ದೂರು: ತಮ್ಮ ಗ್ರಾಮದ ಕಿರು ನಾಲೆಯ ಹೂಳು ಹಾಗೂ ಜೊಂಡು ತೆರವುಗೊಳಿಸದ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ವೈದ್ಯನಾಥಪುರ ಗ್ರಾಮಸ್ಥರು ಬುಧವಾರ ಸ್ವಯಂ ಪ್ರೇರಣೆಯಿಂದ ತಾವೇ ನಾಲೆಗಿಳಿದು ಶುಚಿಗೊಳಿಸುವ ಕಾರ್ಯ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.  ವೈದ್ಯನಾಥಪುರ ಸಂಪರ್ಕಿಸುವ ಈ ನಾಲೆಯಲ್ಲಿ ಹಲವು ವರ್ಷಗಳಿಂದ ಜೊಂಡು ಬೆಳದು ಹೂಳು ತುಂಬಿದ್ದು, ಸರಾಗವಾಗಿ ನೀರು ಹರಿಯದ ಪರಿಣಾಮ 200 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಬತ್ತ, ಕಬ್ಬು ಹಾಗೂ ರಾಗಿ ಬೆಳೆಗಳು ಒಣಗುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾಲೆ ಶುಚಿಗೊಳಿಸಲು ಇಲ್ಲಿನ ರೈತರು ಹಲವು ಬಾರಿ ನೀರಾವರಿ ನಿಗಮಕ್ಕೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ಪ್ರದರ್ಶಿಸಿದ್ದರು.ಇದರಿಂದ ಅಸಮಾಧಾನಗೊಂಡ 50ಕ್ಕೂ ಹೆಚ್ಚು ರೈತರು ಬುಧವಾರ ಬೆಳಿಗ್ಗೆ ಹಾರೆ, ಗುದ್ದಲಿ ಸನಿಕೆಗಳೊಂದಿಗೆ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಾಲೆಗಿಳಿದರು. `ಒಗ್ಗಟ್ಟಿನಲ್ಲಿ ಬಲವಿದೆ~ ಎಂಬಂತೆ ಶ್ರಮದಾನದ ಮೂಲಕ 4ಕಿ.ಮೀ ಉದ್ದ ಕಿರುನಾಲೆಯಲ್ಲಿ ಬೆಳೆದಿದ್ದ ಜೊಂಡನ್ನು ತೆರವುಗೊಳಿಸಿದರು. ಹಲವು ವರ್ಷಗಳಿಂದ ತುಂಬಿದ್ದ ಹೂಳನ್ನು ಎತ್ತಿ ನಾಲೆಯನ್ನು ಶುಚಿಗೊಳಿಸಿದರು.ರೈತ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯ ವಿ.ಟಿ.ಶಿವರಾಜು ಮಾತನಾಡಿ, ನಾಲೆಯಲ್ಲಿ ನೀರು ಸರಾಗ ಹರಿಯದ ಪರಿಣಾಮ ರೈತರ ಬೆಳೆ ಒಣಗಿ ಈಗಾಗಲೇ 10ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ.ನೀರಾವರಿ ನಿಗಮವನ್ನು ಕಾಯ್ದು ಕುಳಿತರೆ ಸಂಪೂರ್ಣ ಬೆಳೆಗಳೆಲ್ಲ ಒಣಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸುತ್ತಿತ್ತು. ಹೀಗಾಗಿ ನಾವೇ ಸ್ವಯಂ ಪ್ರೇರಿತರಾಗಿ ನಾಲೆ ಶುಚಿ ಕಾರ್ಯಕ್ಕೆ ಮುಂದಾದೆವು ಎಂದು ತಿಳಿಸಿದರು. ರೈತರಾದ ನಂದೀಶ್, ಸ್ವಾಮಿ, ನಿಂಗಪ್ಪ, ಕೃಷ್ಣ, ವಿಷಕಂಠ, ಮರಿಯಣ್ಣ, ತಮ್ಮಯ್ಯ, ಬೋರೇಗೌಡ, ಸುರೇಶ್ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.