ವೈದ್ಯನ ಅಪಹರಣ ಸುಖಾಂತ್ಯ

7

ವೈದ್ಯನ ಅಪಹರಣ ಸುಖಾಂತ್ಯ

Published:
Updated:

ಚಂಡಿಗಡ: ಇದು ಬಾಲಿವುಡ್ ಸಿನಿಮಾವೊಂದರಿಂದ ಪ್ರೇರಣೆ ಪಡೆದ ಮೂವರು ಯುವಕರ ಗುಂಪಿನ ದುಸ್ಸಾಹಸದ ಕಥೆ. ಭಾರಿ ಶುಲ್ಕ ನೀಡುವ ಆಮಿಷವೊಡ್ಡಿ ಬೆಂಗಳೂರು ಮೂಲದ ವೈದ್ಯರೊಬ್ಬರನ್ನು ಹರಿಯಾಣಕ್ಕೆ ಕರೆಸಿದ ಯುವಕರು ನಂತರ ಅವರನ್ನು ಹಣಕ್ಕಾಗಿ ಅಪಹರಿಸಿದ್ದರು. ಸುಮಾರು 50 ಲಕ್ಷ ರೂಪಾಯಿ ಒತ್ತೆ ಹಣದ ಬೇಡಿಕೆ ಇಟ್ಟು ಕೊನೆಗೆ ತಾವೇ ಜೈಲು ಸೇರಿದ ಸಿನಿಮೀಯ ಘಟನೆ ಬೆಳಕಿಗೆ ಬಂದಿದೆ.ಬೆಂಗಳೂರಿನ ಕೆ.ಆರ್.ಪುರ ಪೊಲೀಸರೊಂದಿಗೆ ಭಾನುವಾರ ಜಂಟಿ ಕಾರ್ಯಾಚರಣೆ ನಡೆಸಿದ ಚಂಡಿಗಡ ಸಮೀಪದ ಹೊಡಾಲ್ ಠಾಣೆ ಪೊಲೀಸರು ವೈದ್ಯ ಡಾ.ಶಂಕರ್ (28) ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ನಡೆದದ್ದು ಏನು?: ಈ ಕಥೆಯ ಖಳನಾಯಕ ಚಂಡಿಗಡದ ಇರ್ಷಾದ್. ಜನವರಿ 19ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ಆತ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲು ವೈದ್ಯ ಶಂಕರ್ ಅವರ ನರ್ಸಿಂಗ್ ಹೋಂಗೆ ಹೋಗಿದ್ದ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಆತನಿಗೆ ಆ ಸಮಯದಲ್ಲೇ ಶಂಕರ್ ಅವರನ್ನು ಅಪಹರಿಸಿ ಹಣ ದೋಚುವ ಆಲೋಚನೆ ಹೊಳೆಯಿತು.ಇರ್ಷಾದ್ ಹರಿಯಾಣ ಬಳಿ ಇರುವ ತನ್ನ ಹೊಡಾಲ್ ಗ್ರಾಮಕ್ಕೆ ಬಂದು ತಂದೆಗೆ ಚಿಕಿತ್ಸೆ ನೀಡುವಂತೆ ಶಂಕರ್ ಅವರಿಗೆ ಮನವಿ ಮಾಡಿದ. ಪ್ರತಿಯಾಗಿ ಹೆಚ್ಚು ಹಣ ನೀಡುವ ಆಮಿಷ ಒಡ್ಡಿದ್ದ. ಜತೆಗೆ ದೆಹಲಿಗೆ ಹೋಗಿ, ಬರುವ ವಿಮಾನ ಪ್ರಯಾಣದ ಖರ್ಚು, ವಾಸ್ತವ್ಯದ ವೆಚ್ಚ ಭರಿಸುವುದಾಗಿಯೂ ಹೇಳಿದ್ದ. ಇದನ್ನು ನಂಬಿದ ವೈದ್ಯ ಶಂಕರ್ ಆರೋಪಿಯ ಗ್ರಾಮಕ್ಕೆ ತೆರಳಿ ಆತನ ತಂದೆಗೆ ಚಿಕಿತ್ಸೆ ನೀಡಲು ಒಪ್ಪಿಕೊಂಡಿದ್ದರು.ಬೆಂಗಳೂರಿನಲ್ಲಿ ಇಬ್ಬರ ಮಧ್ಯ ಆದ ಒಪ್ಪಂದದಂತೆ ಫೆಬ್ರುವರಿ 10ರಂದು ಶಂಕರ್ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದರು. ಆರೋಪಿ ಇರ್ಷಾದ್ ಖುದ್ದಾಗಿ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದ. ಅಲ್ಲಿಂದ ನೇರವಾಗಿ ಅವರನ್ನು ಕಾರಿನಲ್ಲಿ ಹರಿಯಾಣದ ಅರಣ್ಯವೊಂದಕ್ಕೆ ಕರೆದೊಯ್ದ. ಅಲ್ಲಿ ಮೊದಲೇ ಕಾಯ್ದಿದ್ದ ಇಬ್ಬರು ಸಹಚರರು ಇವರನ್ನು ಸೇರಿಕೊಂಡರು. ಅಲ್ಲಿಯವರೆಗೂ ವೈದ್ಯರಿಗೆ ತಾನು ಮೋಸ ಹೋದ ಬಗ್ಗೆ ಕಿಂಚಿತ್ತೂ ಸುಳಿವು ದೊರೆತಿರಲಿಲ್ಲ.ಪೂರ್ವಯೋಜಿತ ಸಂಚಿನಂತೆ ಆರೋಪಿ ಇರ್ಷಾದ್ ಮತ್ತು ಸಹಚರರು ಶಂಕರ್ ಅವರನ್ನು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದರು. ಅವರನ್ನು ಹಗ್ಗದಿಂದ ಕಟ್ಟಿ ಹಾಕಿ ಒತ್ತೆಯಾಳಾಗಿ ಇಟ್ಟುಕೊಂಡರು. ನಂತರ ಬೆಂಗಳೂರಿನ ವೈದ್ಯರ ಮನೆಗೆ ಮೊಬೈಲ್ ಕರೆ ಮಾಡಿದ ಆರೋಪಿಗಳು, ಶಂಕರ್ ಅವರನ್ನು ಅಪಹರಿಸಿರುವ ವಿಷಯ ತಿಳಿಸಿ 50 ಲಕ್ಷ ಹಣ ನೀಡುವಂತೆ ಬೇಡಿಕೆ ಮುಂದಿಟ್ಟರು.ಕರೆಯನ್ನು ಸ್ವೀಕರಿಸಿದ ವೈದ್ಯರ ಸಹೋದರ ಬೆಂಗಳೂರು ಪೊಲೀಸರಿಗೆ ವಿಷಯ ತಿಳಿಸಿದರು. ಮೊಬೈಲ್ ಕರೆಯ ಸುಳಿವು ಆಧರಿಸಿ ಪೊಲೀಸರು ನೇರವಾಗಿ ಬಂದಿಳಿದಿದ್ದು ಹರಿಯಾಣಕ್ಕೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಭಾನುವಾರ ಜಂಟಿ ಕಾರ್ಯಾಚರಣೆ ನಡೆಸಿ ವೈದ್ಯ ಶಂಕರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.ಇರ್ಷಾದ್ ಹಾಗೂ ಇತರ ಇಬ್ಬರನ್ನು ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.`ಸ್ಥಳೀಯ ಪೊಲೀಸರ ನೆರವಿನಿಂದ ಬಂಧನ~


ಬೆಂಗಳೂರು ವರದಿ: `ಶಂಕರ್ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಲು ಯತ್ನಿಸಲಾಯಿತು. ಆದರೆ, ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಆರೋಪಿಗಳ ಕಾರಿನ ಮೇಲೆ ಹೊಡಾಲ್ ಠಾಣೆಯ ಎಸ್‌ಐ ಮಹಮ್ಮದ್ ಇಲಿಯಾಜ್ ಅವರು ಸರ್ವಿಸ್ ಪಿಸ್ತೂಲ್‌ನಿಂದ ಎರಡು ಬಾರಿ ಗುಂಡು ಹಾರಿಸಿದರು. ನಂತರ ಕಾರನ್ನು ಸುತ್ತುವರಿದು ಆರೋಪಿಗಳನ್ನು ಬಂಧಿಸಲಾಯಿತು~ ಎಂದು ಪ್ರಕರಣದ ತನಿಖಾಧಿಕಾರಿ ತಿಳಿಸಿದರು.

ಕಾರ್ಯಾಚರಣೆಗೆ ತೆರಳಿದ್ದ ತನಿಖಾಧಿಕಾರಿ ಹರಿಯಾಣ ವಿಮಾನ ನಿಲ್ದಾಣದಿಂದ `ಪ್ರಜಾವಾಣಿ~ ಜತೆ ಮಾತನಾಡಿ ಮಾಹಿತಿ ನೀಡಿದರು.

 

`ಇರ್ಷಾದ್ (20), ಜಾವೀದ್ (22), ಶಬ್ಬೀರ್ (30) ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಫಾರೂಖ್ (40) ಎಂಬಾತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ವೈದ್ಯ ಶಂಕರ್ ಅವರನ್ನು ಮಂಗಳವಾರ ನಸುಕಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry