ವೈದ್ಯರಿಗೆ ಬೆದರಿಕೆ: ಪ್ರತಿಭಟನೆ

7

ವೈದ್ಯರಿಗೆ ಬೆದರಿಕೆ: ಪ್ರತಿಭಟನೆ

Published:
Updated:
ವೈದ್ಯರಿಗೆ ಬೆದರಿಕೆ: ಪ್ರತಿಭಟನೆ

ಕನಕಪುರ: ವೈದ್ಯರ ಜತೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ವೈದ್ಯಾಧಿಕಾರಿಗಳ ಸಂಘ ಮತ್ತು ಇತರೆ ವೈದ್ಯಕೀಯ ಸಂಘಗಳ ಸದಸ್ಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ವಿವೇಕ್ ದೊರೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾನವ ಹಕ್ಕುಗಳ ಸಂಘಟನೆಯ ಸದಸ್ಯ ಎಂದು ದೂರವಾಣಿ ಮೂಲಕ ಪರಿಚಯಿಸಿಕೊಂಡ ಮಧುಗೌಡ ಎಂಬಾತ ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ.

 

ವೈದ್ಯರು ಘಟನೆಗೆ ಸಂಬಂಧಿಸಿದಂತೆ ಜೂನ್ 7ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೋಲಿಸರು ಮಧುಗೌಡ ಅವರ ವಿರುದ್ಧ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಂಘಟನೆಗಳ ಹೆಸರು ಹೇಳಿಕೊಂಡು ಬರುವ ವ್ಯಕ್ತಿಗಳು ವೈದ್ಯರ ಜತೆ ಅನುಚಿತವಾಗಿ ವರ್ತಿಸುತ್ತಾರೆ. ಇದರಿಂದ ವೈದ್ಯರಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಇದೇ ಮಧುಗೌಡ ಅವರು ಈ ಹಿಂದೆಯೂ ವಿವೇಕ್ ದೊರೆ ಅವರಿಗೆ ಬೆದರಿಕೆ ಹಾಕಿದ್ದರು. ಆದರೆ ಅವರು ಇದಕ್ಕೆ ತಲೆ ಕೆಡಿಸಿಕೊಳ್ಳದೆ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದರು.

 

ಆದರೆ ಮತ್ತೊಮ್ಮೆ ಬೆದರಿಕೆ ಹಾಕಿರುವುದಕ್ಕೆ ಬೇಸತ್ತು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ. ಈಗಾಗಲೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇವರು ಸಹ ಕೆಲಸ ಬಿಡುವುದಾಗಲಿ, ರಜೆ ಮೇಲೆ ತೆರಳುವುದಾಗಲಿ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಅವರ ಮನವೊಲಿಸಿ ಕರ್ತವ್ಯ ನಿರ್ವಹಿಸುವಂತೆ ಧೈರ್ಯ ತುಂಬಲಾಗಿದೆ.

 

ಆದರೆ ಪೊಲೀಸರು ಆರೋಪಿಗಳ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳತ್ತಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು. ಸಾಂಕೇತಿಕವಾಗಿ ಈ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ನೀಡಿದ್ದೇವೆ.ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇದೇ 13ರವರೆಗೆ ಗಡುವು ನೀಡಿದ್ದು, ಯಾವುದೇ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅವಶ್ಯಕ ಸೇವೆಗಳನ್ನು ಹೊರತು ಪಡೆಸಿ ಉಳಿದೆಲ್ಲಾ ಸೇವೆಗಳನ್ನು ಕಡಿತಗೊಳಿಸುವ ಮೂಲಕ ಮುಷ್ಕರ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ, ಭಾರತೀಯ ವೈದ್ಯರ ಸಂಘ, ಸರ್ಕಾರಿ ನೌಕರರ ಸಂಘ ಮತ್ತು ತಾಲ್ಲೂಕಿನ ಆರೋಗ್ಯ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry