ವೈದ್ಯರ ನಿರ್ಲಕ್ಷ್ಯ: ಶವ ಇಟ್ಟು ಪ್ರತಿಭಟನೆ

7

ವೈದ್ಯರ ನಿರ್ಲಕ್ಷ್ಯ: ಶವ ಇಟ್ಟು ಪ್ರತಿಭಟನೆ

Published:
Updated:

ಶಿರಾ: ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ನಗರದ ಸಾರ್ವಜನಿಕ ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.ತಾಲ್ಲೂಕಿನ ಬೊಮ್ಮರಸನಹಳ್ಳಿ ಜಯರಾಮ್ (40) ಮೃತಪಟ್ಟಿದ್ದು, ಇವರು ಅ.15ರಂದು ಜ್ವರದ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯ ಕುಮಾರಸ್ವಾಮಿ ಎರಡು ದಿನ ಚಿಕಿತ್ಸೆ ನೀಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.ಆದರೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ರಕ್ತದಲ್ಲಿನ ಪ್ಲೇಟ್ ಲೆಟ್ಸ್ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಇದೆಲ್ಲಕ್ಕೂ ಸರಿಯಾದ ಸಮಯಕ್ಕೆ ಮಾರ್ಗದರ್ಶನ ನೀಡದ ಡಾ.ಕುಮಾರಸ್ವಾಮಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.ಕರ್ತವ್ಯಲೋಪ ಎಸಗಿದ ವೈದ್ಯರನ್ನು ಅಮಾನತಿನಲ್ಲಿಟ್ಟು, ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.ಈ ವೇಳೆಗೆ ಡಾ.ಕುಮಾರಸ್ವಾಮಿ ಆಸ್ಪತ್ರೆಯಿಂದ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.

ಆಸ್ಪತ್ರೆಯಲ್ಲಿ ವೈದ್ಯರು ಸಣ್ಣ-ಪುಟ್ಟ ಚಿಕಿತ್ಸೆಗೂ ಹಣ ಕೀಳುತ್ತಾರೆ. ಕೀಳು ಭಾಷೆಯಲ್ಲಿ ಮಾತನಾಡುತ್ತಾರೆ.ರೋಗಿಯನ್ನು ಕೊನೆ ಕ್ಷಣದಲ್ಲಿ ಇಲ್ಲಿ ಸಾಧ್ಯವಿಲ್ಲ. ಬೇರೆಡೆಗೆ ಕರೆದುಕೊಂಡು ಹೋಗಿ ಎಂದು ಬೇಜವಾಬ್ದಾರಿ ನುಡಿಗಳನ್ನಾಡುತ್ತಾರೆ ಎಂದು ನೆರೆದಿದ್ದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಡಾ.ಅಜಗರ್ ಬೇಗ್ ಮಾತನಾಡಿ, ಲಿಖಿತ ದೂರು ನೀಡಿದರೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡುವುದಲ್ಲದೆ ಇನ್ನೊಮ್ಮೆ ಇಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಸ್ವಲ್ಪ ಶಾಂತವಾದರು.ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್-2 ಪುಟ್ಟನರಸಯ್ಯ ಮಾತನಾಡಿ, ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಶವಸಂಸ್ಕಾರಕ್ಕೆ ಒಂದು ಸಾವಿರ ರೂಪಾಯಿ, ಪರಿಹಾರವಾಗಿ 10 ಸಾವಿರ ನೀಡುವ ಭರವಸೆ ನೀಡಿದರು.ತಾಲ್ಲೂಕು ವೈದ್ಯಾಧಿಕಾರಿ ಟಿ.ತಿಮ್ಮರಾಜು, ನಗರ ಸಿಪಿಐ ಪ್ರಹ್ಲಾದ್ ಮತ್ತಿತರರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry