ಸೋಮವಾರ, ಮೇ 10, 2021
25 °C

ವೈದ್ಯರ ಮನೆಯಲ್ಲಿ ಚಿನ್ನಾಭರಣ, ನಗದ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಯ್ಯಪ್ಪನಹಳ್ಳಿ ಸಮೀಪದ ಹೊರಸಾವು ಲೇಔಟ್ ಎರಡನೇ ಅಡ್ಡರಸ್ತೆ ನಿವಾಸಿ ಡಾ.ಶಶಿಧರ್ ಎಂಬುವರ ಮನೆಯಲ್ಲಿ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಸುಮಾರು ರೂ 36 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 21.50 ಲಕ್ಷ ನಗದು ಕಳವು ಮಾಡಿದ್ದಾರೆ.ವೈದ್ಯರಾದ ಶಶಿಧರ್, ಕುಟುಂಬ ಸದಸ್ಯರೊಂದಿಗೆ ಇಂದಿರಾನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿರುವ ಕಿಡಿಗೇಡಿಗಳು, ಅಲ್ಮೇರಾದಲ್ಲಿದ್ದ ಒಂದೂಕಾಲು ಕೆ.ಜಿ ಚಿನ್ನಾಭರಣ ಮತ್ತು ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಶಶಿಧರ್ ದಂಪತಿ ರಾತ್ರಿ ಹತ್ತು ಗಂಟೆಗೆ ಮನೆಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ರಾತ್ರಿ ಏಳು ಗಂಟೆ ಸುಮಾರಿಗೆ ಪತ್ನಿ ಚಿತ್ರಾ ಮತ್ತು ಮಕ್ಕಳೊಂದಿಗೆ ಇಂದಿರಾನಗರದಲ್ಲಿರುವ ಮಾವನ ಮನೆಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಕಳ್ಳತನವಾಗಿದೆ. ಕೊಠಡಿಯೊಂದರ ಅಲ್ಮೇರಾದಲ್ಲಿದ್ದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿರುವ ಕಳ್ಳರು, ಅದೇ ಅಲ್ಮೇರಾದಲ್ಲಿದ್ದ ಎರಡು ಕೆ.ಜಿಯಷ್ಟು ಬೆಳ್ಳಿ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ' ಎಂದು ಶಶಿಧರ್ `ಪ್ರಜಾವಾಣಿ'ಗೆ ತಿಳಿಸಿದರು.`ಮನೆಯ ಸಮೀಪವೇ ಇತ್ತೀಚೆಗೆ ನಿವೇಶನ ಖರೀದಿಸಿದ್ದೆ. ಆ ನಿವೇಶನದ ಮಾಲೀಕರಿಗೆ ಕೊಡುವ ಉದ್ದೇಶದಿಂದ ಹಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದೆ. ಮೊದಲಿನಿಂದಲೂ ಆಭರಣಗಳನ್ನು ಬ್ಯಾಂಕ್‌ನ ಸುರಕ್ಷತಾ ಕಪಾಟಿನಲ್ಲಿ ಇಡದೆ ಮನೆಯಲ್ಲೇ ಇಟ್ಟುಕೊಂಡಿದ್ದೆವು. ಕೃತ್ಯದ ಹಿಂದೆ ಮನೆಯ ಕೆಲಸಗಾರರ ಕೈವಾಡವಿರುವ ಬಗ್ಗೆ ಅನುಮಾನವಿಲ್ಲ' ಎಂದು ಅವರು ಹೇಳಿದರು.ಹಣ ಹಾಗೂ ಚಿನ್ನಾಭರಣ ಸೇರಿದಂತೆ ಸುಮಾರು ರೂ 57.50 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ. ದೇವಸಂದ್ರದಲ್ಲಿ ಶಶಿಧರ್ ಅವರಿಗೆ ಸೇರಿದ ಪೆಟ್ರೋಲ್ ಬಂಕ್ ಇದೆ ಮತ್ತು ವಿವೇಕನಗರದಲ್ಲಿ ಕ್ಲಿನಿಕ್ ಇದೆ. ಪ್ರಕರಣದ ತನಿಖೆಗೆ ಬೈಯ್ಯಪ್ಪನಹಳ್ಳಿ ಠಾಣೆ ಸಬ್‌ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೈಕ್ ಡಿಕ್ಕಿ: ವಿದ್ಯಾರ್ಥಿ ಸಾವು

ಜಾಲಹಳ್ಳಿ ಸಮೀಪದ ಬಿಇಎಲ್ ವೃತ್ತದಲ್ಲಿ ಶುಕ್ರವಾರ ರಾತ್ರಿ ಪಾದಚಾರಿ ಮಾರ್ಗದ ತಡೆಗೋಡೆಗೆ ಬೈಕ್ ಗುದ್ದಿಸಿ ಸಂಜೀವ್ ಕುಮಾರ್ ಝಾ (28) ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.ನೇಪಾಳ ಮೂಲದ ಸಂಜೀವ್, ಚಿಕ್ಕಬಾಣಾವರದಲ್ಲಿರುವ ಸಂಭ್ರಮ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ (ಸಿವಿಲ್) ವಿದ್ಯಾರ್ಥಿಯಾಗಿದ್ದರು. ಕಾಲೇಜಿನ ಸಮೀಪವೇ ಪೇಯಿಂಗ್ ಗೆಸ್ಟ್ ಆಗಿದ್ದ ಅವರು, ಮತ್ತೀಕೆರೆಯಲ್ಲಿರುವ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿಕೊಂಡು ರಾತ್ರಿ 12.30ರ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಿಇಎಎಲ್ ವೃತ್ತದ ಬಳಿ ತಿರುವ ಪಡೆಯುವ ವೇಳೆ ಸಂಜೀವ್ ನಿಯಂತ್ರಣ ಕಳೆದುಕೊಂಡು ಪಾದಚಾರಿ ಮಾರ್ಗದ ತಡೆಗೋಡೆಗೆ ವಾಹನ ಗುದ್ದಿಸಿದ್ದಾರೆ. ಈ ವೇಳೆ ಹೆಲ್ಮೆಟ್ ಧರಿಸಿರದ ಕಾರಣ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಸಂಜೀವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೇಪಾಳದಲ್ಲಿರುವ ಮೃತರ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಭಾನುವಾರ ರಾತ್ರಿ ನಗರಕ್ಕೆ ಬರಲಿದ್ದಾರೆ ಎಂದು ಜಾಲಹಳ್ಳಿ ಸಂಚಾರ ಪೊಲೀಸರು ಮಾಹಿತಿ ನೀಡಿದರು. ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ: ಮಡಿವಾಳ ಮೇಲ್ಸೇತುವೆಯಲ್ಲಿ ಶುಕ್ರವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ ಎಂದು ಮಡಿವಾಳ ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.