ಶುಕ್ರವಾರ, ಮೇ 14, 2021
30 °C

ವೈದ್ಯರ ಮೇಲೆ ಹಲ್ಲೆ: ಕಿಮ್ಸ ಸಿಬ್ಬಂದಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯರ ಮೇಲೆ ಹಲ್ಲೆ: ಕಿಮ್ಸ ಸಿಬ್ಬಂದಿ ಪ್ರತಿಭಟನೆ

ಹುಬ್ಬಳ್ಳಿ: ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ ಆಸ್ಪತ್ರೆಗೆ ಬಂದು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಕಿಮ್ಸ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೋಮವಾರ ಕಪ್ಪುಪಟ್ಟಿ ಧರಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.ಘಟನೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳು ಪೂರ್ವಗ್ರಹಪೀಡಿತವಾಗಿ ವರದಿ ಮಾಡಿವೆ. ವೈದ್ಯರದ್ದೇ ತಪ್ಪು ಎಂಬಂತೆ ಚಿತ್ರಿಸಿವೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿದೆ ಎಂದು ಆರೋಪಿಸಿ, ಮೂರು ಗಂಟೆ ಕಾಲ ಪ್ರತಿಭಟನೆ ಮಾಡಿದರು. ವೈದ್ಯರು ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದು ಆಸ್ಪತ್ರೆಗೆ ಬಂದ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ, ಪ್ರತಿಭಟನಾಕಾರರ ಮನವೊಲಿಸಲು ಒಂದು ಗಂಟೆ ಕಾಲ ಕಿಮ್ಸ ನಿರ್ದೇಶಕಿ ಡಾ. ವಂಸತಾ ಕಾಮತ್ ಕೊಠಡಿಯಲ್ಲಿ ಸಭೆ ನಡೆಸಿದರು. ಹಲ್ಲೆಗೊಳಗಾದ ವೈದ್ಯ ಡಾ. ದೇವರಾಜ ರಾಯಚೂರು, ಕಿಮ್ಸ ಹಿರಿಯ ಹಾಗೂ ಕಿರಿಯ ವೈದ್ಯರ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.ಹೆಚ್ಚಿನ ಭದ್ರತೆಗೆ ನಿರ್ಧಾರ: ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪದ್ಮನಯನ, ಆಸ್ಪತ್ರೆಯ ಹೊರಠಾಣೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ತುರ್ತು ಚಿಕಿತ್ಸೆ, ಮಕ್ಕಳ ಚಿಕಿತ್ಸಾ ಘಟಕದ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲು ಕಿಮ್ಸ ಆಡಳಿತ ಕೇಳಿದೆ, ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಹಲ್ಲೆ ಪ್ರಕರಣದ ದೂರು ದಾಖಲಾಗದಿರುವ ಬಗ್ಗೆ ಕೇಳಿದಾಗ, `ಆ ವಿಚಾರದಲ್ಲಿ ಸಂಬಂಧಿಸಿದವರನ್ನೇ ಕೇಳಿ' ಎಂದರು. ಶಾಸಕರು ಹಾಗೂ ವೈದ್ಯರ ನಡುವೆ ನನ್ನ ಕಚೇರಿಯಲ್ಲಿ ರಾಜಿ ಮಾಡಿಸಲಿಲ್ಲ. ಬದಲಿಗೆ ಇಬ್ಬರೂ ಕುಳಿತು ಮಾತನಾಡಲು ವೇದಿಕೆ ಕಲ್ಪಿಸಿದ್ದಾಗಿ ಹೇಳಿದರು.

 

`ಹಾಗಿದ್ದರೆ ಠಾಣೆಗೆ ಬರುವ ಪ್ರತಿಯೊಂದು ಹಲ್ಲೆ ಪ್ರಕರಣಕ್ಕೂ ಮಾತುಕತೆಗೆ ವೇದಿಕೆ ಕಲ್ಪಿಸಿ ಬಗೆಹರಿಸುವಿರಾ' ಎಂಬ ಸುದ್ದಿಗಾರರ ಪ್ರಶ್ನೆಗೆ ಸಿಡಿಮಿಡಿಗೊಂಡ ಆಯುಕ್ತರು `ಇಂತಹ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ' ಎನ್ನುತ್ತಾ ಅಲ್ಲಿಂದ ತೆರಳಿದರು.ನಂತರ ಡಾ.ದೇವರಾಜ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸಂತಾ ಕಾಮತ್, `ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಮೌಖಿಕವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೇ ಆ ಘಟನೆಯಲ್ಲಿ ಸಂಪೂರ್ಣವಾಗಿ ತಮ್ಮಿಂದಲೇ ತಪ್ಪಾಗಿದೆ. ಇದರಲ್ಲಿ ವೈದ್ಯರ ತಪ್ಪು ಇಲ್ಲ. ಮುಂದೆ ಇಂತಹ ಘಟನೆಗಳು ಮರುಕಳಿಸಿದಲ್ಲಿ ವೈದ್ಯರ ಪರವಾಗಿ ನಿಲ್ಲುವುದಾಗಿ ಶಾಸಕರು ಹೇಳಿದ್ದಾರೆ' ಎಂದರು.`ಬಾಲಕಿ ಮೇಘಾ ಹಾದಿಮನಿ ಸಾವಿಗೆ ಜ್ವರ ಕಾರಣ ಅಲ್ಲ. ಬದಲಿಗೆ ಆಕೆಯ ಹೃದಯದಲ್ಲಿ ರಂಧ್ರ ಇತ್ತು. `ಪಲ್ಮನರಿ ಹೈಪರ್ ಟೆನ್ಷನ್'ನಿಂದ ಬಳಲುತ್ತಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಅಲ್ಲ' ಎಂದರು.ಶಾಸಕರು ಕ್ಷಮೆ ಯಾಚಿಸಿರುವುದು ಹಲ್ಲೆಗೊಳಗಾದ ವೈದ್ಯರಿಗೆ ಸಮಾಧಾನ ತಂದಿದೆ ಆದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯುವುದಾಗಿ ಡಾ. ವಸಂತಾ ಹೇಳಿದರು.ರೋಗಿಗಳ ಪರದಾಟ: ಮಧ್ಯಾಹ್ನದವರೆಗೆ ನಡೆದ ಪ್ರತಿಭಟನೆಯಿಂದಾಗಿ ಕಿಮ್ಸ ರೋಗಿಗಳ ಚಿಕಿತ್ಸೆ ದೊರೆಯದೆ ಪರದಾಡಬೇಕಾಯಿತು. ಜ್ವರದಿಂದ ಬಳಲುತ್ತಿರುವವರ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದರು.ಪ್ರಸೂತಿ ವಾರ್ಡ್‌ನಲ್ಲಿ ವೈದ್ಯರಿಲ್ಲದೆ ತೊಂದರೆ ಎದುರಾಯಿತು. ವೈದ್ಯರು ಎಷ್ಟು ಹೊತ್ತಿಗೆ ಬರಲಿದ್ದಾರೆ ಎಂದು ವಿಚಾರಿಸುತ್ತಾ ರೋಗಿಗಳ ಸಂಬಂಧಿಗಳು ಅಡ್ಡಾಡುತ್ತಿದ್ದ ದೃಶ್ಯ ಕಂಡುಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.