ಗುರುವಾರ , ಏಪ್ರಿಲ್ 15, 2021
23 °C

ವೈದ್ಯರ ಸೇವೆಯ ಮಾಹಿತಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಆರೋಗ್ಯ ಇಲಾಖೆಯ ಕುಂದುಕೊರತೆಗೆ ತಾ.ಪಂ. ಸದಸ್ಯರ ಅನುದಾನ ಬಳಸಿಕೊಳ್ಳುತ್ತಾರೆ. ಆದರೆ, ಸದಸ್ಯರಿಗೆ ಯಾವುದೇ ಕಾರ್ಯಕ್ರಮದ ಆಹ್ವಾನ ನೀಡುವುದಿಲ್ಲ. ಆರೋಗ್ಯ ಸಮಿತಿಯಲ್ಲಿ ಸೇರಿಸಿಕೊಂಡಿಲ್ಲ ಹಾಗೂ ವೈದ್ಯರ ಸೇವೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ. ಅಜ್ಜಪ್ಪ ಆರೋಪಿಸಿದರು.ಗುರುವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮೀನಾಕ್ಷಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಕಾರ್ಯ ನಿರ್ವಹಣಾಧಿಕಾರಿ ಪುಷ್ಪಾ ಕಮ್ಮಾರ ಉತ್ತರಿಸಿ, ಇನ್ನು ಮುಂದೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಅಧಿಕಾರಿಗಳು ಕಚೇರಿಯನ್ನು ಬಿಟ್ಟು ಹೊರಗೆ ಹೋಗುವಾಗ ಯಾವ ಕಾರ್ಯದ ಮೇಲೆ ಹೊರಗಡೆ ಹೋಗಿದ್ದೇವೆ ಎಂಬ ಬಗ್ಗೆ ಲಾಗ್‌ಪುಸ್ತಕದಲ್ಲಿ ನಮೂದಿಸಬೇಕು ಎಂದು ತಿಳಿಸಿದರು.ತಾಲ್ಲೂಕಿನಾದ್ಯಂತ ಮದ್ಯದ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು ಓಡಾಡುವಾಗ ತಲೆ ತಗ್ಗಿಸಿಕೊಂಡು ಹೋಗುವಂತಾಗಿದೆ ಎಂದು ಸದಸ್ಯೆ ಜಯಮ್ಮ ಸಭೆಯಲ್ಲಿ ಪ್ರಸ್ತಾಪಿಸಿ, ಹಳ್ಳಿಗಳ ಕಿರಾಣಿ ಅಂಗಡಿ, ಸಣ್ಣಪುಟ್ಟ ಅಂಗಡಿಯಲ್ಲಿ ಮದ್ಯಮಾರಾಟ ಮಾಡಲಾಗುತ್ತಿದೆ. ಅದನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ ಎಂದರು. 

ಸದಸ್ಯ ಬರಗಿ ನಿಂಗಪ್ಪ ತಾಲ್ಲೂಕಿನಾದ್ಯಂತ ಸಣ್ಣಪುಟ್ಟ ಅಂಗಡಿಗೆ ಮದ್ಯ ಸರಬರಾಜು ಮಾಡಲು ವಾಹನವನ್ನು ಮಾಡಿಕೊಂಡಿಕೊಂಡಿದ್ದಾರೆ.ಅವರಿಗೆ ಅಂಗಡಿ ನಡೆಸಲು ಮತ್ತು ವ್ಯಾನ್‌ನಲ್ಲಿ ಸಾಗಿಸಲು ಪರವಾನಗಿ ಕೊಟ್ಟವರು ಯಾರು. ಈ ಹಿಂದೆ ಕಳ್ಳಬಟ್ಟಿಯನ್ನು ಕದ್ದುಮುಚ್ಚಿ ಕುಡಿಯುತ್ತಿದ್ದರು. ಈಗ ಹಗಲು, ರಾತ್ರಿ ಎನ್ನದೇ ಮದ್ಯಪಾನ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದಾಗ ಅಬಕಾರಿ ನಿರೀಕ್ಷಕಿ ಮಮತಾ ಉತ್ತರಿಸಿ ಕಾನೂನಿನಲ್ಲಿ ಒಬ್ಬ ವ್ಯಕ್ತಿ 12 ಬಾಟಲಿ ಮದ್ಯ ತೆಗೆದುಕೊಂಡು ಹೋಗಲು ಹಾಗೂ ಮನೆಯಲ್ಲಿ 24 ಬಾಟಲಿ ಸಂಗ್ರಹಿಸಲು ಅವಕಾಶವಿದೆ. ಆದರೆ, ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದರು.ಹಳ್ಳಿಗಳಿಗೆ ಆಗುತ್ತಿರುವ ಮದ್ಯ ಸರಬರಾಜನ್ನು ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಸದಸ್ಯರೆಲ್ಲರೂ ದನಿಗೂಡಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಈ ಬಾರಿ ಶೇ 80 ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಿದ್ದು, ತಾಲ್ಲೂಕಿನಾದ್ಯಂತ 116 ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಜುಲೈ 5ರಂದು `ಶಾಲೆಗಾಗಿ ನಾವು-ನೀವು~ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಸದಸ್ಯರು ತಾವು ಓದಿದ ಶಾಲೆಗೆ ತಮ್ಮ ಕೊಡುಗೆ ನೀಡಬೇಕಾಗಿ ಕೋರಿದರು. ಕೃಷಿ ಅಧಿಕಾರಿ ಕೃಷ್ಣಮೂರ್ತಿ ಮಾಹಿತಿ ನೀಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಇದುವರೆಗೆ 91.8 ಮಿ.ಮೀ. ಮಳೆಯಾಗಿದೆ ಎಂದರು.ಉಪಾಧ್ಯಕ್ಷೆ ಹೇಮಾವತಿ ಕಡ್ಲೇರ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.