ವೈದ್ಯಲೋಕಕ್ಕೆ ತಂತ್ರಜ್ಞಾನದ ನೆರವು

7

ವೈದ್ಯಲೋಕಕ್ಕೆ ತಂತ್ರಜ್ಞಾನದ ನೆರವು

Published:
Updated:
ವೈದ್ಯಲೋಕಕ್ಕೆ ತಂತ್ರಜ್ಞಾನದ ನೆರವು

ಇದು ನಿಜಕ್ಕೂ ತಂತ್ರಜ್ಞಾನದ ಯುಗ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಷ್ಟೇ ಅಲ್ಲ, ಕೃಷಿ ಭೂಮಿಯಿಂದ ಯುದ್ಧಭೂಮಿವರೆಗೂ, ಪಾಠಶಾಲೆಯಿಂದ ಪಾಕಶಾಲೆವರೆಗೂ ತಂತ್ರಜ್ಞಾನ ವ್ಯಾಪಿಸಿದೆ. ತಂತ್ರಜ್ಞಾನ ಇಲ್ಲದ ಕ್ಷೇತ್ರವೇ ಇಲ್ಲ ಎಂಬಂತಾಗಿದೆ.ಮನುಷ್ಯರ ಅಂಗೈನಲ್ಲಿಯೇ ಮೊಬೈಲ್ ಎಂಬ ಅಚ್ಚರಿ! ಅದು ತಂತ್ರಜ್ಞಾನದ ವರ ಎಷ್ಟಿದೆ ಎಂಬುದಕ್ಕೆ ಪುಟ್ಟ ಸಾಕ್ಷಿ. ಸಮಯವನ್ನಷ್ಟೇ ತೋರುವ ಕೈಗಡಿಯಾರವೂ ತಂತ್ರಜ್ಞಾನದ ಫಲವಾಗಿ  ಕಾರ್ಯಶೈಲಿ ಬದಲಿಸಿಕೊಂಡು, ದೇಹದ ತಾಪ, ಕ್ಯಾಲೊರಿ, ಬೆವರಿನಲ್ಲಿನ ಲವಣಾಂಶ ಮೊದಲಾದ ಅಂಶಗಳ ವಿವರ ನೀಡುವ ಸಾಧನವಾಗಿ ಸುಧಾರಣೆ ಕಂಡಿದೆ.ತಂತ್ರಜ್ಞಾನ ವೈದ್ಯಕೀಯ ಲೋಕದಲ್ಲೂ ಪ್ರಭಾವ ತೋರಿದೆ. ರೋಗಿಗಳ  ಮಾಹಿತಿಯ ದತ್ತಾಂಶ ಸಂಗ್ರಹ, ರೋಗ ಪತ್ತೆ ಮೊದಲಾದ ಕೆಲಸಗಳಲ್ಲಿ ವೈದ್ಯರಿಗೆ  ನೆರವಾಗುತ್ತಿದೆ. ಶಸ್ತ್ರಚಿಕಿತ್ಸೆ ಕೋಣೆಗೂ ಕಾಲಿಟ್ಟಿದೆ. ರೋಗ ಪತ್ತೆ ವಿಚಾರದಲ್ಲೂ ತಂತ್ರಜ್ಞಾನದ ಕೊಡುಗೆ ಅನನ್ಯ.ವನಿತೆಯರನ್ನು ಬಹಳ ಕಾಡುವ ವಿಚಾರವೆಂದರೆ ಸ್ತನ ಕ್ಯಾನ್ಯರ್. ಈ ರೋಗ ಪತ್ತೆ ಯೇ ಮಹಿಳೆಯರನ್ನು ಕಂಗೆಡಿಸುತ್ತಿದೆ. ಕನ್ನಡಿ ಎದುರು ಸ್ವತಃ ಪರಿಶೀಲನೆಯ ಸರಳ ವಿದಾನವೂ ಬಹಳಷ್ಟು ಮಹಿಳೆಯರಿಗೆ ತಿಳಿದಿಲ್ಲ. `ಮಮ್ಮೊಗ್ರಫಿ' ಕುರಿತು ಅರಿತವರ ಸಂಖ್ಯೆಯೂ ಕಡಿಮೆ ಇದೆ. ಸ್ತ್ರೀರೋಗ ತಜ್ಞರು ಈ ಬಗ್ಗೆ ಅರಿವು ಮೂಡಿಸುವ ಯತ್ನದಲ್ಲೇ ಇದ್ದಾರೆ. ಹಾಗಿದ್ದೂ ರೋಗ ಪತ್ತೆ ವಿಳಂಬವಾಗುತ್ತಿದೆ. ವನಿತೆಯರ ಕಷ್ಟವೂ ಹೆಚ್ಚುತ್ತಿದೆ.`3ಡಿ ತಂತ್ರಜ್ಞಾನ ಬಳಸಿಕೊಂಡಲ್ಲಿ ಬಹಳ ಬೇಗ ಹಾಗೂ ನಿಖರವಾಗಿ ಸ್ತನ ಕ್ಯಾನ್ಸರ್ ಪತ್ತೆ ಮಾಡಬಹುದು' ಎಂಬುದನ್ನು `ರೇಡಿಯಾಲಜಿ ಸೊಸೈಟಿ ಆಫ್ ನಾರ್ಥ್ ಅಮೆರಿಕ' ನಡೆಸಿದ ಇತ್ತೀಚಿನ ಅಧ್ಯಯನ ತಿಳಿಸಿಕೊಟ್ಟಿದೆ.ಸದ್ಯ, ಸ್ತನ ಕ್ಯಾನ್ಸರ್ ಪತ್ತೆಗೆ `ಸ್ಟಾಂಡರ್ಡ್ ಡಿಜಿಟಲ್ ಮಮ್ಮಗ್ರಫಿ'  ವಿಧಾನ ಅನುಸರಿಸಲಾಗುತ್ತಿದೆ. ಇದರಲ್ಲಿ ಅತಿಸಣ್ಣ ಗಡ್ಡೆಗಳು ಗೋಚರಿಸದೆ ತಪ್ಪಿಹೋಗುವ ಸಾಧ್ಯತೆ ಇದೆ. 3ಡಿ ತಂತ್ರಜ್ಞಾನ ಬಳಸಿದಲ್ಲಿ ರೋಗಪತ್ತೆ ಸುಲಭ. ಈ ತಂತ್ರಜ್ಞಾನ ಸ್ತನದ ಚಿತ್ರವನ್ನು ವಿವಿಧ ಕೋನಗಳಲ್ಲಿ ಸೆರೆ ಹಿಡಿದು `3ಡಿ' ಚಿತ್ರ ರೂಪಿಸುತ್ತದೆ.ಈ ಚಿತ್ರವನ್ನು ಎಲ್ಲ ಕೋನಗಳಿಂದಲೂ ವೀಕ್ಷಿಸಿ, ಕ್ಯಾನ್ಸರ್ ಗಡ್ಡೆ ಅಥವಾ ಕ್ಯಾನ್ಸರ್‌ಗೆ ಪರಿವರ್ತನೆ ಆಗಬಲ್ಲ ಕೋಶಗಳೇನಾದರೂ ಇವೆಯೇ ಎಂಬುದನ್ನು ವೈದ್ಯರು ನಿಖರವಾಗಿ ತಿಳಿಯಬಹುದು. 3ಡಿ ತಂತ್ರಜ್ಞಾನದ ನೋಟದಿಂದ ಸಣ್ಣ ಗೆಡ್ಡೆ-ಗಂಟುಗಳೂ ತಪ್ಪಿಸಿಕೊಳ್ಳಲಾರವು. ಇದರಿಂದ ಮುಂಚಿತವಾಗಿಯೇ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂಬುದು ಹ್ಯೂಸ್ಟನ್‌ನ `ಪೋರ್ಟರ್ ಹೆಲ್ತ್‌ಕೇರ್ ಸಿಸ್ಟೆಂ' ನಿರ್ದೇಶಕಿ ನ್ಯಾನ್ಸಿ ಬೆಬಿಚ್ ಅವರ ವಿಶ್ವಾಸದ ನುಡಿ.`ಎಂಬ್ರಿಯೋಸ್ಕೋಪ್'

`ಸಂತಾನ ಭಾಗ್ಯವಿಲ್ಲ' ಎಂದು ನರಳುತ್ತಿರುವ ದಂಪತಿಗಳಿಗೆ `ಎಂಬ್ರಿಯೋಸ್ಕೋಪ್' ಎಂಬ ಹೆಸರಿನಲ್ಲಿ ಆಧುನಿಕ ತಂತ್ರಜ್ಞಾನ ನೆರವಾಗುತ್ತಿದೆ. ಆ ಮೂಲಕ ಭ್ರೂಣದವರೆಗೂ ತಂತ್ರಜ್ಞಾನ ಸಹಾಯಹಸ್ತ ಚಾಚಿದೆ.`ಎಂಬ್ರಿಯೋ' ಅಂದರೆ ಫಲಿತಗೊಂಡ ಭ್ರೂಣ, `ಸ್ಕೋಪ್' ಎಂದರೆ ದರ್ಶಕ. ತಾಯ ಒಡಲಲ್ಲಿ ಅಥವಾ ಪ್ರನಾಳದಲ್ಲಿ ಫಲಿತಗೊಂಡು ಬಹಳ ಸೂಕ್ಷ್ಮ ಗಾತ್ರದಲ್ಲಿರುವ ಭ್ರೂಣವನ್ನು ಸ್ಪಷ್ಟವಾಗಿ ವೀಕ್ಷಿಸಲು ನೆರವಾಗುವುದೇ `ಎಂಬ್ರಿಯೋಸ್ಕೋಪ್'.ದೀರ್ಘ ಕಾಲ ಮಕ್ಕಳಾಗದ ದಂಪತಿಗೆ ಇತ್ತೀಚಿನ ವರ್ಷಗಳಲ್ಲಿ `ಐವಿಎಫ್' (ಇನ್-ವಿಟ್ರೊ ಫರ್ಟಿಲೈಸೇಷನ್), ಅಂದರೆ ಮಹಿಳೆಯ ದೇಹದಿಂದ ಹೊರಗೇ(ಪ್ರನಾಳದಲ್ಲಿ) ಅಂಡಾಣು ಮತ್ತು ವೀರ್ಯಾಣು ಮಿಲನಗೊಳಿಸಿ ಭ್ರೂಣವನ್ನು ಹುಟ್ಟುಹಾಕುವ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೇ ಸರಳವಾಗಿ ಕೃತಕ ಗರ್ಭಧಾರಣೆ ಅಥವಾ ಪ್ರನಾಳ ಶಿಶು ಜನನ ಎನ್ನಲಾಗುತ್ತದೆ.ಆದರೆ, ಐವಿಎಫ್ ಚಿಕಿತ್ಸೆಯಲ್ಲಿಯೂ ಕೆಲವೊಮ್ಮೆ ವೈಫಲ್ಯ ಕಂಡುಬರುತ್ತಿದೆ. 10 ವರ್ಷಗಳಾದರೂ ಮಕ್ಕಳಾಗದೇ ಪರಿತಪಿಸುವ ದಂಪತಿಗಳ ಕೆಲವು ಪ್ರಕರಣಗಳಲ್ಲಿ `ಐವಿಎಫ್' ಚಿಕಿತ್ಸೆಯೂ 2-3 ಬಾರಿ ವಿಫಲವಾಗಿರುವ ಉದಾಹರಣೆ ಇದೆ. ಕಾರಣ, ಪ್ರನಾಳದಲ್ಲಿ ವೀರ್ಯಾಣು ಜತೆ ಮಿಲನಗೊಂಡು ಫಲಿತವಾಗುವ ಅಂಡಾಣುಗಳಲ್ಲಿ (ಎಂಬ್ರಿಯೊ) ಉತ್ತಮವಾದುದನ್ನು ಆಯ್ಕೆ ಮಾಡಿ ತಾಯಿಯ ಗರ್ಭಕ್ಕೆ ಸೇರಿಸುವಾಗಲೇ ಸಮಸ್ಯೆಯಾಗುತ್ತಿದೆ.ಈ ಸಮಸ್ಯೆಗೆ ದೊಡ್ಡ ಪರಿಹಾರವೆಂಬಂತೆ `ಎಂಬ್ರಿಯೋಸ್ಕೋಪ್' ತಂತ್ರಜ್ಞಾನ ವೈದ್ಯಲೋಕದ ನೆರವಿಗೆ ಬರುತ್ತಿದೆ. ಈ ತಂತ್ರಜ್ಞಾನದ ಮೂಲಕ ಆರೋಗ್ಯವಂತ ಭ್ರೂಣದ ಆಯ್ಕೆ ಸುಲಭವಾಗುತ್ತಿದೆ' ಎನ್ನುತ್ತಾರೆ ಬೆಂಗಳೂರಿನ ಗುಣಶೀಲ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ದೇವಿಕಾ ಗುಣಶೀಲ.18 ದೇಶಗಳಲ್ಲಿ ಬಳಕೆ

`ಫಲಿತಗೊಂಡ ಅಂಡಾಣುಗಳ ಚಿತ್ರವನ್ನು ಸೆರೆಹಿಡಿದು ಅವುಗಳ ಬೆಳವಣಿಗೆ ಹಂತಗಳನ್ನು ಗಮನಿಸಲು, ನಂತರ ಪ್ರತಿ ಭ್ರೂಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಲು, ಆರೋಗ್ಯವಂತ ಭ್ರೂಣವನ್ನಷ್ಟೇ ನಿಖರವಾಗಿ ಪತ್ತೆ ಹಚ್ಚಿ ತಾಯ ಗರ್ಭಕ್ಕೆ ಅಳವಡಿಸುವ ಮಹತ್ವದ ಘಟ್ಟಗಳಲ್ಲಿ `ಎಂಬಿಯೋಸ್ಕೋಪ್' ತಂತ್ರಜ್ಞಾನ ಬಹಳವಾಗಿ ನೆರವಾಗುತ್ತಿದೆ' ಎನ್ನುವ ಡಾ. ದೇವಿಕಾ(ದೂ: 080-41312600), ಈ ತಂತ್ರಜ್ಞಾನ 18 ದೇಶಗಳಲ್ಲಿ, ಸದ್ಯ ಭಾರತದ ಮುಂಬೈ, ಚೆನ್ನೈ ಮತ್ತು ಬೆಂಗಳೂರಿನ `ಐವಿಎಫ್' ಚಿಕಿತ್ಸಾಲಯಗಳಲ್ಲಿ ಬಳಕೆಯಲ್ಲಿದೆ ಎಂದು ವಿವರಿಸುತ್ತಾರೆ.ಸ್ಪೇನ್‌ನಲ್ಲಿ ಮೊದಲ ಬಾರಿಗೆ ಈ `ಎಂಬ್ರಿಯೋಸ್ಕೋಪ್' ತಂತ್ರಜ್ಞಾನವನ್ನು ಪ್ರನಾಳ ಶಿಶು ಗರ್ಭಧಾರಣೆ ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಯಿತು. ವಿಶ್ವದಾದ್ಯಂತ ಈವರೆಗೆ 3500ಕ್ಕೂ ಅಧಿಕ ಐವಿಎಫ್ ಚಿಕಿತ್ಸೆಯಲ್ಲಿ ಎಂಬ್ರಿಯೋಸ್ಕೋಪ್ ನೆರವು ಪಡೆಯಲಾಗಿದೆ. ಪರಿಣಾಮ `ಐವಿಎಫ್' ಚಿಕಿತ್ಸೆಯ ಫಲಿತಾಂಶದಲ್ಲಿ ಶೇ 8ರಿಂದ 12ರಷ್ಟು ಸುಧಾರಣೆ ಕಂಡುಬಂದಿದೆ ಎಂಬುದು ಅವರ ಸ್ಪಷ್ಟ ನುಡಿ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry