ವೈದ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

7

ವೈದ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

Published:
Updated:

 ಶಹಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಡಾ.ಅನಿಲಕುಮಾರ ಬಣಗಾರ ಮೇಲೆ ಕೆಲ ಕಿಡಿಗೇಡಿಗಳು ದೈಹಿಕವಾಗಿ ಹಲ್ಲೆ ಮಾಡಿ ಅವಮಾನಿಸಿದ್ದಾಗಿ ಆರೋಪಿಸಿ ಸೋಮವಾರ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಚಿಕಿತ್ಸಾ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು.ಬೆಳಿಗ್ಗೆ ವೈದ್ಯರು, ಔಷಧಿ ಅಂಗಡಿಯ ಮಾಲೀಕರು ಚಿಕಿತ್ಸಾ ಕೇಂದ್ರಗಳ ಬಾಗಿಲು ತೆರೆಯದೆ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಹಲ್ಲೆಯನ್ನು ಖಂಡಿಸುವ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಆಗಮಿಸಿದ ರೋಗಿಗಳು  ತೊಂದರೆ ಅನುಭವಿಸಿದರು. ಎಳೆಯ ಕಂದಮ್ಮಗಳೊಂದಿಗೆ ಮಕ್ಕಳ ಆಸ್ಪತ್ರೆಯ ಮುಂದೆ ಆಶಾಭಾವದಿಂದ ಕಾದಿದ್ದ ತಾಯಂದಿರು ನಿರಾಶೆಯಿಂದ ಮರಳಿ ಗೂಡು ಸೇರುವಂತಾಯಿತು.ಅ.1ರಂದು ಡಾ.ಬಣಗಾರ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾಯಿನಾಥ ಕಟ್ಟಿಮನಿ ಮತ್ತಿತರರು ಗುಂಪು ಕಟ್ಟಿಕೊಂಡು 70 ವರ್ಷದ ಮಹಿಳೆಯ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದರು. ಮೃತದೇಹವನ್ನು ಮಂಚದ ಮೇಲೆ ಹಾಕಿ ಚೀರಾಡತೊಡಗಿದರು. ಸಿಬ್ಬಂದಿ ಹಾಗೂ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಡಾ.ಬಣಗಾರ ಲಿಖಿತವಾಗಿ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೂ ಆರೋಪಿಗಳನ್ನು ಬಂಧಿಸಿಲ್ಲವೆಂದು ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಖಂಡನೆ: ಈ ನಡುವೆ ವೈದ್ಯರ ಕ್ರಮವನ್ನು ಸಿಪಿಐ (ಎಂ) ಆಕ್ಷೇಪಿಸಿದೆ. ಕಚೇರಿಯ ವೇಳೆಯಲ್ಲಿ ಖಾಸಗಿ ಚಿಕಿತ್ಸಾ ಕೇಂದ್ರಗಳನ್ನು ತೆರೆದು ಕರ್ತವ್ಯ ನಿರ್ವಹಿಸುವ ಅದೆಷ್ಟೋ ಸರ್ಕಾರಿ ವೈದ್ಯರು ಬಡ ರೋಗಿಗಳ ಪಾಲಿಗೆ ಯಮದೂತರಾಗಿದ್ದಾರೆ. ಸಾವು ಬದುಕಿನ ಜೊತೆ ಹೋರಾಟ ನಡೆಸಿದ್ದ ವೃದ್ಧೆಗೆ ಚಿಕಿತ್ಸೆ ನೀಡದೆ ಕರ್ತವ್ಯಲೋಪ ಎಸಗಿದ ವೈದ್ಯರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ತಾಲ್ಲೂಕು ಸಿಪಿಐ (ಎಂ) ಆಗ್ರಹಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry