ಮಂಗಳವಾರ, ಮೇ 11, 2021
27 °C

ವೈದ್ಯೆಯಾಗುವ ಕನಸು: ನೆರವು ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಕಮರಿಪೇಟೆಯ ವಿದ್ಯಾರ್ಥಿನಿ ಪೂಜಾ ಕಠಾರೆ ಮುಂದೆ ವೈದ್ಯೆಯಾಗುವ ಕನಸು ಹೊತ್ತಿದ್ದು, ಬಡ ಕುಟುಂಬದಿಂದ ಬಂದಿರುವ ಅವರು ಶಿಕ್ಷಣ ಮುಂದುವರಿಸಲು ನೆರವಿನ ನಿರೀಕ್ಷೆಯಲ್ಲಿದ್ದಾರೆ.ಈ ಬಾರಿಯ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದಿರುವ ಪೂಜಾ ಮೆಡಿಕಲ್‌ನಲ್ಲಿ 8,176 ಹಾಗೂ ಎಂಜಿನಿಯರಿಂಗ್‌ನಲ್ಲಿ 14,785ನೇ ರ‍್ಯಾಂಕ್ ಗಳಿಸಿದ್ದಾರೆ. ನಗರ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ದ್ವಿತೀಯ ಪಿಯುನಲ್ಲಿ ಶೇ 81ರಷ್ಟು ಅಂಕ ಪಡೆದಿದ್ದಾರೆ.`ವೈದ್ಯೆಯಾಗಬೇಕು ಎನ್ನುವುದು ನನ್ನ ಬಾಲ್ಯದ ಕನಸು. ಅದಕ್ಕಾಗಿ ಎಂತಹ ಕಠಿಣ ಪರಿಶ್ರಮಕ್ಕೂ ಸಿದ್ಧ' ಎನ್ನುವ ಪೂಜಾ ಸದ್ಯ ಸಿಇಟಿ ಕೌನ್ಸೆಲಿಂಗ್‌ನಲ್ಲಿ ಎಂಬಿಬಿಎಸ್‌ಗೆ ಸರ್ಕಾರಿ ಸೀಟು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಎನ್‌ಇಟಿ, ಜೆಇಇ, ಐಎಪಿಟಿ, ಮ್ಯಾಥಮೆಟಿಕಲ್ ಒಲಂಪೈರ್ ಮೊದಲಾದ ಅರ್ಹತಾ ಪರೀಕ್ಷೆಗಳನ್ನು ಬರೆದು ಅರ್ಹತೆ ಗಿಟ್ಟಿಸಿದ್ದಾರೆ.ಆದರೆ ಮುಂದಿನ ಶಿಕ್ಷಣಕ್ಕೆ ಬೇಕಾದ ಹಣ ಅವರಲ್ಲಿಲ್ಲ. ಪೂಜಾ ತಂದೆ ಜಗನ್ನಾಥಸಾ ಈಚೆಗೆ ಅಪಘಾತವೊಂದರಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದು, ದುಡಿಮೆಯಿಲ್ಲದೇ ಮನೆಯಲ್ಲೇ ಉಳಿದಿದ್ದಾರೆ. ತಾಯಿ ಲಕ್ಷ್ಮಿ ಬಟ್ಟೆ ಹೊಲಿದು ಸಂಪಾದಿಸುವ ಹಣವೇ ನಾಲ್ಕು ಮಕ್ಕಳ ಈ ಕುಟುಂಬಕ್ಕೆ ಆಧಾರ.ಟ್ಯೂಶನ್‌ಗೆ ಹೋಗದೆ ಸ್ವಂತ ಪರಿಶ್ರಮದಿಂದಲೇ ಓದುವುದನ್ನು ಅಭ್ಯಾಸ ಮಾಡಿಕೊಂಡಿರುವ ಪೂಜಾ ಆಗಿನಿಂದಲೂ ಪ್ರತಿಭಾನ್ವಿತೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 92 ಅಂಕ ಗಳಿಸಿದ್ದಾರೆ. ವಿವಿಧ ರಸಪ್ರಶ್ನೆ, ಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ಸಹ ಪಡೆದಿದ್ದಾರೆ.ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು ನೆರವು ನೀಡಿದಲ್ಲಿ ಉನ್ನತ ಶಿಕ್ಷಣದ ಕನಸು ನನಸಾಗಿಸಿಕೊಂಡು, ಸಮಾಜಕ್ಕೆ ಕೈಲಾದ ಸೇವೆ ಮಾಡುವುದು ಅವರ ಬಯಕೆ. ನೆರವು ನೀಡಲು ಇಚ್ಛಿಸುವವರು ಹುಬ್ಬಳ್ಳಿಯ ಜೆ.ಸಿ. ನಗರದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಶಾಖೆಯಲ್ಲಿರುವ ಪೂಜಾ ಕಠಾರೆ ಅವರ ಉಳಿತಾಯ ಖಾತೆ ಸಂಖ್ಯೆ 202500101005796, ಐಎಫ್‌ಎಸ್‌ಸಿ ಕೋಡ್-ಸಿಒಆರ್‌ಪಿ 0002025 ಇಲ್ಲಿಗೆ ಹಣ ಸಂದಾಯ ಮಾಡಬಹುದು. ಸ್ವಯಂ ಸೇವಾ ಸಂಘಟನೆಗಳು ನೆರವು ನೀಡಬಯಸಿದಲ್ಲಿ ಹುಬ್ಬಳ್ಳಿಯ ಕಮರಿಪೇಟೆ ಮೊದಲ ಕ್ರಾಸ್‌ನ ಕಾಳಮ್ಮನ ಅಗಸಿ ಓಣಿಯಲ್ಲಿ ವಾಸವಿರುವ ಪೂಜಾ ಕುಟುಂಬದವರನ್ನು ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.