ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಗಾಂಧಿ!

Last Updated 24 ಜನವರಿ 2015, 19:30 IST
ಅಕ್ಷರ ಗಾತ್ರ

‘ಆಸ್ಪತ್ರೆಯನ್ನು ಉದ್ಘಾಟಿಸುವುದಕ್ಕಿಂತ ಅದನ್ನು ಶಾಶ್ವತವಾಗಿ ಮುಚ್ಚಲು ನಾನು ಬರುತ್ತೇನೆ’– ಹೀಗೆಂದು ಮಹಾತ್ಮ ಗಾಂಧಿ ಅವರು ಪತ್ರ ಬರೆದದ್ದು 1945ರಲ್ಲಿ. ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಪ್ರೊ. ಟಿ.ಎನ್. ಜಗದೀಶನ್ ೧೯೪೫ರಲ್ಲಿ ತಮಿಳುನಾಡಿನಲ್ಲಿ ನಿರ್ಮಿಸಿದ್ದ ‘ಕಸ್ತೂರಿ ಬಾ ಕುಷ್ಟ ನಿವಾರಣಾ ನಿಲಯಂ’ ಆಸ್ಪತ್ರೆಯನ್ನು ಬಾಪೂಜಿ ಅವರಿಂದ ಉದ್ಘಾಟಿಸಲು ಬಯಸಿ ಬರೆದ ಪತ್ರಕ್ಕೆ ಅವರ ಪ್ರತಿಕ್ರಿಯೆ ಇದಾಗಿತ್ತು.

ಪಾಪಗಳಿಂದ ಕುಷ್ಟರೋಗ ಬರುವುದೆಂಬುದು ಬಹು ಹಿಂದಿನಿಂದಲೂ ಇದ್ದ ನಂಬಿಕೆ. ಭಾರತವೇ ಕುಷ್ಟರೋಗದ ತವರು. ಸಾವಿರಾರು ವರ್ಷಗಳ ಹಿಂದೆಯೇ ದೇಹದ ಅಂಗಗಳು ಹುಣ್ಣುಗಳಿಂದ ಹಾಳಾಗುವ ಈ ಕಾಯಿಲೆಯನ್ನು ನಮ್ಮ ದೇಸಿ ವೈದ್ಯ ಪದ್ಧತಿಯಲ್ಲಿ ಪತ್ತೆ ಹಚ್ಚಿ ದಾಖಲು ಮಾಡಲಾಗಿತ್ತಾದರೂ ಅವರ ನಿವಾರಣೆಗೆ ಹೆಚ್ಚಿನ ಕಾರ್ಯಗಳಾಗಿರಲಿಲ್ಲ. ಕುಷ್ಟ ರೋಗಿಗಳನ್ನು ಅವರ ಕುಟುಂಬದವರು ಹಾಗಿರಲಿ, ಊರುಗಳಿಂದಲೇ ಹೊರಹಾಕುವ ಪರಿಪಾಠವಿತ್ತು. ಕಾಯಿಲೆ ಕಾಣಿಸಿಕೊಂಡು ದಿನಕಳೆದಂತೆ ಒಂದೊಂದೆ ಅಂಗಗಳನ್ನು ಕಳೆದು ಹೋಗುವುದು ಒಂದು ಕಡೆಯಾದರೆ ಸಮಾಜದ ಸಂಪೂರ್ಣ ಅಸಡ್ಡೆಯ ಮಾನಸಿಕ ಯಾತನೆ ಇನ್ನೊಂದು ಕಡೆ. ಇಂತಹ ದಾರುಣ ಸ್ಥಿತಿಯಲ್ಲಿ ಕುಷ್ಟ ರೋಗಿಗಳ ಕಡೆಗೆ ಗಮನ ಹರಿಸಿದರು ಗಾಂಧೀಜಿ.

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ಭಾರತೀಯ ಸಮಾಜದ ವಿವಿಧ ಮಗ್ಗಲುಗಳನ್ನು ಗಾಂಧೀಜಿ ಅಧ್ಯಯನ ಮಾಡತೊಡಗಿದರು. ಆಹಾರ, ಆರೋಗ್ಯ, ಅಧಾತ್ಮ, ಉಡುಗೆ, ತೊಡುಗೆ, ಕಸುಬುಗಳು, ರಾಜಕಾರಣ, ಸಾರ್ವಜನಿಕ ಬದುಕು, ಸಂವಹನ– ಹೀಗೆ ಬದುಕಿನ ಎಲ್ಲ ಮುಖಗಳನ್ನು ತಡವಿ ನೋಡಿದರು.

ಒಂದೆಡೆ ಸ್ವಾತಂತ್ರ್ಯಗಾಳಿಗೆ ಹಾತೊರೆಯುತ್ತಿದ್ದ ಜನತೆಯ ಮುಂದಾಳಾಗಿದ್ದ ಬಾಪು, ಮತ್ತೊಂದೆಡೆ ಅವರ ದುಃಖ ದುಮ್ಮಾನಗಳಿಗೆ ದನಿಯಾದರು. ಒಮ್ಮೆ ಜೈಲು ವಾಸಿಯಾಗಿದ್ದಾಗ ಕುಷ್ಟರೋಗದ ಕಷ್ಟ ಕಾರ್ಪಣ್ಯಗಳ ಪರಿಚಯವನ್ನು ಹತ್ತಿರದಿಂದಲೇ ಕಂಡರು.

ಯರವಾಡ ಬಂದೀಖಾನೆಯಲ್ಲಿದ್ದಾಗ ಕುಷ್ಟರೋಗದಿಂದ ನರಳುತ್ತಿದ್ದ ಪ್ರಖ್ಯಾತ ವಿದ್ವಾಂಸರೊಬ್ಬರು ಅದೇ ಜೈಲಿನಲಿದ್ದಾರೆಂಬ ವಿಷಯ ಗಾಂಧಿಗೆ ಗೊತ್ತಾಯಿತು. ಅವರೇ ದತ್ತಾತ್ರೇಯ ಶಾಸ್ತ್ರಿ.  ಸ್ವಾತಂತ್ರ್ಯ ಸಂಗ್ರಾಮದ ಸಾಗರದಲ್ಲಿದ್ದ ಶಾಸ್ತ್ರಿಗಳನ್ನು ಬ್ರಿಟಿಷರು ಜೈಲಿಗಟ್ಟಿದ್ದರು, ಕುಷ್ಟರೋಗವಿದೆಯೆಂದರೂ ಅವರಿಗೆ ವಿನಾಯಿತಿ ಕೊಟ್ಟಿರಲಿಲ್ಲ. ಸಮಾಜದ ಬಯಲಲ್ಲಿ ಕುಷ್ಟರೋಗಿಗಳು ಅನುಭವಿಸುತ್ತಿದ್ದ ಬಹಿಷ್ಕಾರ ಜೈಲೆಂಬ ಕೋಟೆಯೊಳಗೂ ಮುಂದುವರೆದಿತ್ತು. ಇಲ್ಲೂ ಅವರಿಗೆ ಪ್ರತ್ಯೇಕ ಸ್ಥಳ. ಬೇರಾವ ಜೈಲು ವಾಸಿಗಳೂ ಅವರನ್ನು ನೋಡುವಂತಿರಲಿಲ್ಲ. 

ಜೈಲಿನ ರೀತಿ ನೀತಿಗಳು ಶಾಸ್ತ್ರಿಗಳೊಂದಿಗೆ ಮುಖಾಮುಖಿಗೆ ಗಾಂಧಿಗೆ ಅವಕಾಶ ನೀಡಲಿಲ್ಲ. ಪುಟ್ಟ ಪುಟ್ಟ ಪತ್ರಗಳ ಮೂಲಕ ಇವರಿಬ್ಬರೂ ಪರಿಸ್ಥಿತಿಯನ್ನು ಅರಿತುಕೊಳ್ಳುತ್ತಿದ್ದರು. ಶಿಕ್ಷೆ ಮುಗಿದ ಮೇಲೆ ಗಾಂಧಿ ಹೊರಕ್ಕೆ ಬಂದರೂ ಶಾಸ್ತ್ರಿಗಳು ಜೈಲೊಳಗೆ ಇರಬೇಕಾಯಿತು.  

ಕುಷ್ಟ ರೋಗಿಗಳನ್ನು ಜಗತ್ತು ಅಸ್ಪೃಶ್ಯರಂತೆ ಕಾಣುವ ಸಂದರ್ಭದಲ್ಲಿ, ಗಾಂಧೀಜಿ ಆ ರೋಗಿಗಳ ಬಗ್ಗೆ ಕಾಳಜಿ ವಹಿಸಿದರು. ಅವರ ನಡತೆ ‘ಮಹಾತ್ಮ’ ವಿಶೇಷಣಕ್ಕೆ ಹೊಂದುವಂತಿತ್ತು.

ದೇಶದುದ್ದಕ್ಕೂ ಓಡಾಡುವಾಗ ಕುಷ್ಟ ರೋಗದ ಸಮಸ್ಯೆ ಕುರಿತು ವಾಸ್ತವ ಸ್ಥಿತಿಯನ್ನು ಪಡೆದುಕೊಳ್ಳಲು ಗಾಂಧೀಜಿ ಮರೆಯಲಿಲ್ಲ. ಐದಾರು ವರ್ಷಗಳ ಬಳಿಕ, ಬಹುಶಃ ೧೯೩೯ರಲ್ಲಿ ದತ್ತಾತ್ರೇಯ ಶಾಸ್ತ್ರಿಗಳ ಜೈಲು ಶಿಕ್ಷೆ ಮುಗಿದಿತ್ತು. ಆದರೆ ಕುಷ್ಟರೋಗ ಉಲ್ಖಣಿಸಿತ್ತು. ಜೈಲಿನಿಂದ ಹೊರ ಬರುವ ಸ್ವಾತಂತ್ರ್ಯ ದೊರೆತರೂ ಸಮಾಜದಲ್ಲಿ ಬದುಕುವ ಅವಕಾಶಗಳಿಲ್ಲವೆಂಬುದು ಅವರ ಅರಿವಿಗೆ ಬರುವುದಕ್ಕೆ ತಡವಾಗಲಿಲ್ಲ. ಜೈಲಿನೊಳಗೆ ತಮ್ಮ ಬಗ್ಗೆ ಅಸ್ಥೆವಹಿಸಿದ್ದ ಗಾಂಧೀ ಅವರನ್ನು ಖುದ್ದಾಗಿ ಕಾಣಲು ಸೇವಾಶ್ರಮಕ್ಕೆ ಬಂದರು.

ಬದುಕುವ ಆಸೆಯನ್ನೇ ಕಳೆದುಕೊಂಡಿದ್ದ ಶಾಸ್ತ್ರಿಗಳು ಬಾಪೂಜಿ ಅವರನ್ನು ಭೇಟಿಯಾಗಿ ತಮ್ಮ ತೀರ್ಮಾನವನ್ನೂ ಹೇಳಿದರು. ಗಾಂಧೀಜಿ ಅವರಿಗೆ ಶಾಸ್ತ್ರಿಗಳ ಪರಿಸ್ಥಿತಿ ಕಂಡು ತುಂಬಾ ನೋವಾಯಿತು. ಶಾಸ್ತ್ರಿಗಳು ಆಶ್ರಮದಲ್ಲೇ ಉಳಿಸಿಕೊಂಡರೆ ಏನಾದರೂ ಆಗಬಹುದೆಂಬ ಆತಂಕವೂ ಬಾಪು ಮನಸ್ಸನ್ನು ಕದಡಿತು. ರಾತ್ರಿಯೆಲ್ಲಾ ಯೋಚಿಸಿದ ಅವರು ಮುಂಜಾನೆ ಪ್ರಾರ್ಥನಾ ಸಮಯದ ಬಳಿಕ ವಿಷಯವನ್ನು ಪ್ರಸ್ತಾಪಿಸಿ, ಸಹವಾಸಿಗಳ ತೀರ್ಮಾನಕ್ಕಾಗಿ ಕಾದರು. ಎಲ್ಲರೂ ಶಾಸ್ತ್ರಿಗಳನ್ನು ಆಶ್ರಮದಲ್ಲೇ ಉಳಿಸಿಕೊಂಡು ಅವರನ್ನು ನೋಡಿಕೊಳ್ಳಲು ಒಪ್ಪಿಕೊಂಡರು.

ದತ್ತಾತ್ರೇಯ ಶಾಸ್ತ್ರಿಗಳು ಆಶ್ರಮದಲ್ಲಿ ಮರುಹುಟ್ಟು ಪಡೆದರು. ಗಾಂಧೀಜಿ ಅವರೇ ಖುದ್ದು ಶಾಸ್ತ್ರಿಗಳ ಹುಣ್ಣುಗಳಿಗೆ ಔಷಧಿ ಹಾಕಿ ಪಟ್ಟಿಕಟ್ಟುತ್ತಿದ್ದರು.  ಬದುಕುವ ಆಸೆಯನ್ನೇ ಬಿಟ್ಟಿದ್ದ ಶಾಸ್ತ್ರಿಗಳು ನಿಧಾನವಾಗಿ ಚೇತರಿಕೊಂಡರು. ಆಶ್ರಮದ ಕೆಲಸ ಕಾರ್ಯಗಳನ್ನೂ ತೊಡಗಿಕೊಂಡರು. 

ಭಾರತದಲ್ಲಿ ಕಾಣಿಸಿಕೊಂಡು ವ್ಯಾಪಾರ-ಯುದ್ಧಗಳಿಂದಾಗಿ ಬೇರೆ ದೇಶಗಳಲ್ಲೂ ಕುಷ್ಟ ರೋಗ ಹರಡಿತ್ತು. ಯುರೋಪ್‌ನಲ್ಲಿ ಕುಷ್ಟಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸುವ ರೂಢಿ ಆರಂಭವಾಯಿತು. ಅನೇಕ ವಿಜ್ಞಾನಿಗಳು, ವೈದ್ಯರು ಕುಷ್ಟರೋಗಕ್ಕೆ ಕಾರಣಗಳನ್ನು ಹುಡುಕಲು ಪ್ರಯತ್ನಗಳನ್ನು ಹೆಚ್ಚಿಸಿದರು.

’ಡಾಪ್ಸೋನ್’ ಎಂಬ ಬ್ಯಾಕ್ಟೀರಿಯಾ ನಿರೋಧಕ ಮದ್ದು ಕುಷ್ಟ ರೋಗ ಕಾಯಿಲೆಯ ಚಿಕಿತ್ಸೆಗಾಗಿ ಉಪಯೋಗವಾಗುತ್ತದೆ ಎಂಬುದು ಬೆಳಕಿಗೆ ಬಂದಿದ್ದು ೧೯೪೧ರಲ್ಲಿ. ಕುಷ್ಟರೋಗಿಗಳೂ ಗುಣಮುಖರಾಗಲು ಸಾಧ್ಯವೆಂಬುದು ಈ ಔಷಧಿಯಿಂದ ದೃಢಪಟ್ಟಿತು. ವರ್ಷಗಟ್ಟಲೆ ಕಾಡುತ್ತಿದ್ದ ಕುಷ್ಟರೋಗವನ್ನು ಒಂದೆರಡು ವರ್ಷಗಳಲ್ಲಿ ಹೊಡದೂಡಿಸಬಹುದೆಂಬುದು ಪ್ರಪಂಚಕ್ಕೆ ತಿಳಿಯಿತು.

ಔಷಧಿಗಳಿಂದ ರೋಗ ನಿವಾರಣೆ ಆಗುವುದೆಂಬುದನ್ನು ವೈದ್ಯಕೀಯ ಲೋಕ ಕಂಡುಕೊಂಡಾಗ ರೋಗಪೀಡಿತರಿಗೆ ಮಾನವೀಯ ಸ್ಪರ್ಶವೂ ಅತ್ಯಗತ್ಯವೆಂಬುದನ್ನು ಪ್ರತಿಪಾದಿಸಿದವರಲ್ಲಿ ಮಹಾತ್ಮ ಗಾಂಧಿ ಅವರು ಮೊದಲಿಗರು. ಕುಷ್ಟ ರೋಗ ನಿವಾರಣೆ ಸಾಧ್ಯವಿದ್ದಾಗ ಆಸ್ಪತ್ರೆಗಳ ಅಗತ್ಯವಿಲ್ಲವೆಂಬುದೂ ಬಾಪೂಜಿ ಅಭಿಪ್ರಾಯವಾಗಿತ್ತು. ಇದೇ ವಿಶಾಲ ಅರ್ಥದಲ್ಲಿ ಆಸ್ಪತ್ರೆ ಮುಚ್ಚುವ ಸಂದೇಶ ರವಾನಿಸಿದ್ದರು.

ಆಡಿದ್ದನ್ನು ಮಾಡಿ ತೋರಿಸುವ ಜಾಯಮಾನದ ಬಾಪೂಜಿ ಸೇವಾಗ್ರಾಮದಲ್ಲಿ ಕುಷ್ಟ ರೋಗಿಗಳ ಆರೈಕೆ ಮಾಡುತ್ತಿದ್ದರು. ಅವರ ಕಾಲಾನಂತರ ಬಾಪೂ ನೆನಪಿನಲ್ಲಿ ಕುಷ್ಟರೋಗ ವಿಶ್ವಸ್ಥ ಮಂಡಲಿಯೊಂದು ಸ್ಥಾಪಿತವಾಗಿ ಕುಷ್ಟರೋಗದ ವಿರುದ್ಧ ಸಮರ ಸಾರಲು ಶುರುಮಾಡಿತು. ಅದೊಂದು ದೊಡ್ಡ ಆಂದೋಲನವಾಗಿ ರೂಪುಗೊಳ್ಳಲು ವೇದಿಕೆ ಒದಗಿಸಿತು. ವಿಶ್ವವ್ಯಾಪಿ ಕುಷ್ಟ ರೋಗ ನಿರ್ಮೂಲನೆಯ ಅರಿವು ಮೂಡಿಸಲು ಪ್ರತ್ಯೇಕ ದಿನಗಳನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಬಾಪೂಜಿ ಅವರ ಪುಣ್ಯತಿಥಿಯ ದಿನದಂದು (ಜನವರಿ 30) ‘ಕುಷ್ಟ ರೋಗ ನಿವಾರಣಾದಿನ’ವನ್ನು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT