ವೈದ್ಯ ವಿದ್ಯಾರ್ಥಿಗಳಿಗೆ ದೇಹಗಳ ಕೊರತೆ

7

ವೈದ್ಯ ವಿದ್ಯಾರ್ಥಿಗಳಿಗೆ ದೇಹಗಳ ಕೊರತೆ

Published:
Updated:

ಮೈಸೂರು: ‘ಸಾಮಾನ್ಯ ಜನರಿಗೆ ದೇಹದಾನದ ಕುರಿತು ಅರಿವಿಲ್ಲ. ಹೀಗಾಗಿ ದೇಹದಾನ ವಿರಳವಾಗಿದೆ’ ಎಂದು  ಕೆ.ಆರ್. ಆಸ್ಪತ್ರೆಯ ವೈದ್ಯ ಡಾ.ಚಂದ್ರಕುಮಾರ್ ಬುಧವಾರ ಹೇಳಿದರು.ನಟರಾಜ ಮಹಿಳಾ ಕಾಲೇಜು ಏರ್ಪಡಿಸಿದ್ದ ದೇಹದಾನ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು ದೇಹದ ಅಂಗರಚನೆ ಕುರಿತು ಪ್ರಯೋಗಿಗ ಅಧ್ಯಯನ ನಡೆಸಲು  ತೊಂದರೆಯಾಗುತ್ತಿದೆ’ ಎಂದರು.‘ಜನರಿಗೆ ನೇತ್ರದಾನ, ರಕ್ತದಾನದ ಬಗ್ಗೆ ಮಾತ್ರ ಗೊತ್ತು. ದೇಹದಾನದ ಬಗ್ಗೆ ಅನೇಕರಿಗೆ ಅರಿವಿಲ್ಲ. ಹತ್ತು ವೈದ್ಯ ಕೀಯ ವಿದ್ಯಾರ್ಥಿಗಳು ಪ್ರಯೋಗಿಕ ಅಧ್ಯಯನ ನಡೆಸಲು ಒಂದು ದೇಹದ ಅವಶ್ಯಕತೆ ಇರುತ್ತದೆ. ರಾಜ್ಯದಲ್ಲಿ ಸುಮಾರು 40 ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿ ವರ್ಷ 25 ರಿಂದ 30 ದೇಹಗಳು ಕಾಲೇಜೊಂದರ ಪ್ರಯೋಗಕ್ಕೆ ಬೇಕಾಗುತ್ತವೆ. ಆದರೆ ಅದು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘ಈ ಹಿಂದೆ ಅನಾಥ ಶವಗಳು ವೈದ್ಯಕೀಯ ಕಾಲೇಜುಗಳ ಪ್ರಯೋಗಾಲಯ ಸೇರುತ್ತಿದ್ದವು. ಹೀಗಾಗಿ ಅಂದು ಈ  ಮಟ್ಟಿನ ಕೊರತೆ ಕಂಡಿರಲಿಲ್ಲ. ಶವಗಳನ್ನು ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡಬೇಕು ಎಂಬ ನಿಯಮ ಜಾರಿ ಯಾದ ಬಳಿಕ ಈ ಕೊರತೆ ಹೆಚ್ಚಾಗಿದೆ. ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಆ ದೇಹಗಳನ್ನು ಪ್ರಯೋಗಕ್ಕೆ ಬಳಸಲು ಬರುವುದಿಲ್ಲ’ ಎಂದರು.ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸದಸ್ಯ ಸಿ.ನರೇಂದ್ರ ಮಾತನಾಡಿ, ‘ದೇಹದಾನ ಶೇಷ್ಠ ವಾದುದ್ದು.  ಮೊದಲು ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ದಾನ ಮಾಡಿ, ಬಳಿಕ ದೇಹದಾನದ ಕುರಿತು ಅರಿವು ಮೂಡಿಸಿ. ದೇಹದಾನ ಮಾಡಿದರೆ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ’ ಎಂದರು.ಹೊಸಮಠದ ಗೌರವ ಕಾರ್ಯದರ್ಶಿ ಮಹದೇವ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ  ಡಾ.ಶ್ಯಾಮ್‌ಸುಂದರ್, ಕೆಆರ್ ಆಸ್ಪತ್ರೆಯ ಮೂಳೆ ಮತ್ತು ಕೀಲು ತಜ್ಞೆ ಡಾ.ಶೋಭಾ ಮಾತನಾಡಿದರು. ಪ್ರಾಂಶುಪಾಲರಾದ ವಾಸಂತಿ ರೀನಾ ವಿಲಿಯಮ್ಸ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಲು ಸುಮಾರು 40 ಮಂದಿ ಹೆಸರು ನೋಂದಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry