ವೈದ್ಯ ಶಿಕ್ಷಣ ಕೌನ್ಸೆಲಿಂಗ್: 700 ಸೀಟು ಕೈತಪ್ಪುವ ಸಾಧ್ಯತೆ ದಟ್ಟ

ಬುಧವಾರ, ಜೂಲೈ 17, 2019
24 °C

ವೈದ್ಯ ಶಿಕ್ಷಣ ಕೌನ್ಸೆಲಿಂಗ್: 700 ಸೀಟು ಕೈತಪ್ಪುವ ಸಾಧ್ಯತೆ ದಟ್ಟ

Published:
Updated:

ನವದೆಹಲಿ: ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ತಲೆದೋರಿರುವ ಗೊಂದಲ ಮುಂದುವರಿದಿದ್ದು, ಜೂನ್ 20ರಿಂದ ಆರಂಭವಾಗುವ ಮೊದಲ ಸುತ್ತಿನ  ಕೌನ್ಸೆಲಿಂಗ್‌ನಲ್ಲಿ 700 ಸೀಟುಗಳು ವಿದ್ಯಾರ್ಥಿಗಳ ಕೈತಪ್ಪಿ ಹೋಗುವ ಸಾಧ್ಯತೆ ಇನ್ನಷ್ಟು ದಟ್ಟವಾಗತೊಡಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಎ.ರಾಮದಾಸ್ ಮತ್ತು ಅವರ ಅಧಿಕಾರಿಗಳ ತಂಡ ಎರಡು ದಿನಗಳಿಂದ ಇಲ್ಲಿ ಬೀಡುಬಿಟ್ಟಿದ್ದು ಸಮಸ್ಯೆ ಪರಿಹಾರಕ್ಕೆ ಹರಸಾಹಸ ಮಾಡುತ್ತಿದೆ. ಪ್ರವೇಶ ಕೌನ್ಸೆಲಿಂಗ್ ಪ್ರಕ್ರಿಯೆ ಶುರುವಾಗಲು ಕೇವಲ ನಾಲ್ಕು ದಿನಗಳು ಉಳಿದಿದ್ದು, 700 ಸೀಟುಗಳು ಸರ್ಕಾರದ ಕೋಟಾಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಕುರಿತು ಹಿರಿಯ ಅಧಿಕಾರಿಯೊಬ್ಬರು ಅನುಮಾನಿಸಿದ್ದಾರೆ.

ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಂತೂ ಇದು ಸಾಧ್ಯವಿಲ್ಲದ ಮಾತು. ಸೀಟುಗಳ ಹೆಚ್ಚಳಕ್ಕೆ ಸಲ್ಲಿಸಲಾಗಿರುವ ಮನವಿಗೆ ಎಂಸಿಐ ಜೂನ್ 20ಕ್ಕೆ ಮುನ್ನ ಅನುಮತಿ ನೀಡುವ ಸಾಧ್ಯತೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.

ಈ ಮಧ್ಯೆ ಸೀಟುಗಳ ನವೀಕರಣದ ಮಾನ್ಯತೆ ಹಾಗೂ ಸೀಟುಗಳ ಹೆಚ್ಚಳದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಗುರುವಾರ ವಿಶೇಷ ಸಭೆ ಕರೆಯುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಭರವಸೆ ನೀಡಿದ್ದು ಬಿಕ್ಕಟ್ಟ ಬಗೆಹರಿಯಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮ್‌ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆ ಕಾರ್ಯದರ್ಶಿ ಕೆ.ಚಂದ್ರಮೌಳಿ ಮತ್ತು ಭಾರತೀಯ ವೈದ್ಯ ಮಂಡಲಿಯ (ಎಂಸಿಐ) ಅಧ್ಯಕ್ಷ ಕೆ.ಕೆ.ತಳವಾರ್ ಅವರನ್ನು ಭೇಟಿಯಾಗಿದ್ದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲ ಎಂದು ಅವರು ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಹೊಸ ಐದು ಕಾಲೇಜುಗಳಿಗೆ ತಲಾ 100 ಸೀಟುಗಳ ನವೀಕರಣ ಹಾಗೂ ಹಳೆಯ ಮೂರು ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ 200 ಸೀಟುಗಳಿಗೆ ಅನುಮತಿ ನೀಡುವಂತೆ ಸಚಿವಾಲಯವನ್ನು ಕೋರಲಾಗಿತ್ತು ಎಂದೂ ಅವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಜೂನ್ 11ರಂದೇ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಿತ್ತು. ಆದರೆ ಇದೀಗ ಜೂನ್ 19ರಂದು ಹೊಸ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ರಾಮ್‌ದಾಸ್ ತಿಳಿಸಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಸೀಟುಗಳ ಸಂಖ್ಯೆಯನ್ನು 150ರಿಂದ 250ಕ್ಕೆ,  ಬಳ್ಳಾರಿ ಮತ್ತು ಮೈಸೂರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸ್ತುತ ಇರುವ ಸೀಟುಗಳ ಸಂಖ್ಯೆಯನ್ನು ಈಗಿನ 100ರಿಂದ 150ಕ್ಕೆ ಹೆಚ್ಚಿಸಲು ಸರ್ಕಾರ ಅನುಮತಿ ಕೇಳಿದೆ.

ತಲಾ 100 ಸೀಟುಗಳನ್ನುಳ್ಳ ಹಾಸನ, ಮಂಡ್ಯ, ಶಿವಮೊಗ್ಗ, ಬೀದರ್ ಮತ್ತು ರಾಯಚೂರು ವೈದ್ಯ ಕಾಲೇಜುಗಳ ಮಾನ್ಯತೆ ನವೀಕರಣಗೊಳ್ಳಬೇಕಿದೆ.

ಮೈಸೂರಿನಲ್ಲಿ  ಸರ್ಕಾರಿ ಪ್ರಕೃತಿ ಚಿಕಿತ್ಸಾ ಕಾಲೇಜು ಆಸ್ಪತ್ರೆ ಮತ್ತು ವಿದ್ಯಾರ್ಥಿನಿಲಯ ನಿರ್ಮಿಸಲು ಕೂಡ ರಾಜ್ಯ ಸರ್ಕಾರ ಅನುಮತಿ ಕೋರಿದೆ. ಇದನ್ನು ವೆಚ್ಚ ಹಂಚಿಕೆ ಆಧಾರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು 19.62 ಕೋಟಿ ರೂಪಾಯಿ ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry