ವೈದ್ಯ ಹಾಸ್ಯ: ನಿನ್ನ ವಯಸ್ಸು ಎಷ್ಟಮ್ಮಾ...?

7

ವೈದ್ಯ ಹಾಸ್ಯ: ನಿನ್ನ ವಯಸ್ಸು ಎಷ್ಟಮ್ಮಾ...?

Published:
Updated:
ವೈದ್ಯ ಹಾಸ್ಯ: ನಿನ್ನ ವಯಸ್ಸು ಎಷ್ಟಮ್ಮಾ...?

ಅತ್ಯಂತ ಒತ್ತಡ ಅನುಭವಿಸುವ ವೃತ್ತಿಗಳಲ್ಲಿ ವೈದ್ಯಕೀಯ ಕ್ಷೇತ್ರವೂ ಒಂದು. ದಿನನಿತ್ಯ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾ ನೂರಾರು ರೋಗಿಗಳೊಂದಿಗೆ ಒಡನಾಡುವ ವೈದ್ಯರದು ಬಿಡುವಿರದ ಕಾರ್ಯ. ಇದರ ನಡುವೆಯೂ ಮುಗ್ಧ, ಅಮಾಯಕ ರೋಗಿಗಳಿಂದ ಕೆಲವೊಮ್ಮೆ ಮೋಜಿನ ಸಂದರ್ಭಗಳು ಎದುರಾಗುವುದೂ ಉಂಟು. ನಮಗೆ ಬರೆದು ಕಳುಹಿಸುವ ಮೂಲಕ ಅಂತಹ ಹಾಸ್ಯ ಪ್ರಸಂಗಗಳನ್ನು ವೈದ್ಯರು ಇಲ್ಲಿ ಹಂಚಿಕೊಳ್ಳಬಹುದು.

ವಿಳಾಸ: ಸಂಪಾದಕರು, ಪ್ರಜಾವಾಣಿ, ಭೂಮಿಕಾ ವಿಭಾಗ, ನಂ. 75, ಎಂ.ಜಿ.ರಸ್ತೆ, ಬೆಂಗಳೂರು- 560 001. ಈ ಮೇಲ್: bhoomika@prajavani.co.in

`ನಿನ್ನ ವಯಸ್ಸು ಎಷ್ಟಮ್ಮಾ?~ ಎಂದೆ ಕ್ಲಿನಿಕ್‌ನಲ್ಲಿ ಟೇಬಲ್ ಮೇಲೆ ಮಲಗಿದ್ದವಳನ್ನ.

`ಯಾರಿಗ್ಗೊತ್ತು ತಗಳ್ಳಿ, ಬರೆದಿಟ್ಟೋರು ಯಾರೂ....~ ಎಂದಳು.`ಒಂದು ಅಂದಾಜು ಹೇಳಮ್ಮಾ~ ಎಂದೆ ಆಕೆಯ ಬಿ.ಪಿ ನೋಡುತ್ತಾ.

`ಏನೋ ಒಂದು 24 ಇರಬೌದು~ ಅಂದಳು, ನನಗೆ ನಗು ಒತ್ತರಿಸಿಕೊಂಡು ಬಂತು.`ತಿಂಗಳು ತಿಂಗಳು ಮುಟ್ಟು ಸರಿಯಾಗಿ ಆಗುತ್ತಾ~

`ಎಲ್ಲಿ ಬಂತು ಡಾಕ್ಟ್ರಮ್ಮ, ಮುಟ್ ನಿಂತು ಸುಮಾರು ವರ್ಷ ಆಯ್ತು. ನನ್ನ ದೊಡ್ಡ ಮಗಂಗೇ ಈಗ ಮೊಮ್ಮಗ್ಳು ಮದುವೆಗೆ ಬಂದವ್ಳೆ~ ಎಂದು ರಾಗ ಎಳೆದಳು ಅಜ್ಜಿ.ಬಂದ ಹೆಂಗಸರನ್ನ `ವಯಸ್ಸೆಷ್ಟು~ ಅಂತ ಕೇಳೋದ್ರಲ್ಲಿ ತುಂಬಾ ಖುಷಿ ಇರುತ್ತೆ ನನಗೆ. ಸಾಮಾನ್ಯವಾಗಿ ಯಾರೂ ಸರಿಯಾದ ವಯಸ್ಸನ್ನು ಹೇಳುವುದಿಲ್ಲ. ಹಳೆ ಕಾಲದವರಿಗಂತೂ ವಯಸ್ಸು ಗೊತ್ತೇ ಇರಲ್ಲ, ಪಾಪ. ವಯಸ್ಸನ್ನು ಕೇಳೋದರಲ್ಲಿ ನಮಗೆ, ಅಂದರೆ ವೈದ್ಯರಿಗಂತೂ ಲಾಭ ಇದೆ.

 

ರೋಗಿಯನ್ನ ಗಳಿಸಿಕೊಳ್ಳೋಕೆ, ಉಳಿಸಿಕೊಳ್ಳೋಕೆ! ಈ `ರಹಸ್ಯ~ವನ್ನು ನಾನು ಕಲಿತದ್ದು ಒಬ್ಬ ಅನಸ್ತೇಶಿಯಾ ವೈದ್ಯರಿಂದ. ಅವರು ಅನಸ್ತೇಶಿಯಾ ಕೊಡುವಾಗ `ನಿನ್ನ ವಯಸ್ಸು ಎಷ್ಟಿರಬಹುದು~ ಎಂದು ಕೇಳುತ್ತಾರೆ.

 

ಸಿಜೇರಿಯನ್‌ಗಾಗಿ ಮಲಗಿರುವ ಆಕೆಗೆ ಸುಮಾರು 30 ವರ್ಷ ಎಂದು ನಮಗೆ ತೋರುತ್ತಿರುತ್ತದೆ. ಆದರೆ ಆಕೆ `ನಂಗೆ 28 ವರ್ಷ ಡಾಕ್ಟ್ರೆ~ ಎಂದಾಗ ಈ ವೈದ್ಯರು ಅಚ್ಚರಿ ವ್ಯಕ್ತಪಡಿಸುತ್ತಾ `ನಿಜವಾಗ್ಲೂನಾ.... ಇಲ್ಲಾ ನೀನು ಸುಳ್ಳು ಹೇಳ್ತಾ ಇದ್ದೀಯಾಮ್ಮ, ನಿಂಗೆ 22 ವರ್ಷ ಇರಬಹುದು ಅಷ್ಟೆ~ ಎನ್ನುತ್ತಿದ್ದರು. ನಮಗೆಲ್ಲಾ ಇದೊಂದು ರೀತಿ ಮೋಜೆನಿಸುತ್ತಿತ್ತು.ಅಸಲು ಆಕೆಗೆ ಎಷ್ಟು ವಯಸ್ಸಾಗಿದ್ದರೆ ನಮಗೇನಾಗಬೇಕಿದೆ. ಆದರೆ ವಿಷಯ ಅದಲ್ಲ. ಅನಸ್ತೇಶಿಯಾ ವೈದ್ಯರನ್ನು ಸಾಮಾನ್ಯವಾಗಿ ಯಾರೂ ನೆನಪಿಸಿಕೊಳ್ಳುವುದಿಲ್ಲ. ಸರ್ಜನ್‌ರನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆಗುತ್ತಿದ್ದುದೇ ಬೇರೆ. ಆಪರೇಷನ್ ಆದ ಮೇಲೆ   ರೋಗಿ ಖುದ್ದಾಗಿ ಈ ವೈದ್ಯರನ್ನು ಕಂಡು, `ಥ್ಯಾಂಕ್ಯೂ ಡಾಕ್ಟ್ರೆ~ ಎಂದು ಹೇಳುತ್ತಿದ್ದರು. `ನೀನು ಚಿಕ್ಕವಳಾಗಿ ಕಾಣ್ತೀಯ~ ಎಂದರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ.ರೋಗಿಗೆ ಸ್ಕ್ಯಾನಿಂಗೋ, ಬ್ಲಡ್ ಟೆಸ್ಟೋ ಮಾಡಿಸಬೇಕಾಗುತ್ತದೆ ಎಂದುಕೊಳ್ಳಿ. ನಾವು ಆಜ್ಞಾ ಪತ್ರದಲ್ಲಿ (ರಿಕ್ವಿಸಿಷನ್ ಲೆಟರ್) ಅವರ ಹೆಸರು, ವಯಸ್ಸು ಬರೆಯಬೇಕು. ಒಂದಿಬ್ಬರು ವೈದ್ಯರು ಹೀಗೆ ಬರೆಯುವಾಗ `ಎಷ್ಟು ವಯಸ್ಸು~ ಎಂದು ಕೇಳಿ, ರೋಗಿ `35~ ಎಂದರೆ, `ಹೌದಾ, ನಾನೇನೋ 44-45 ಇರಬಹುದು ಅಂದುಕೊಂಡಿದ್ನಲ್ರೀ~ ಎಂದು ಹೇಳುವುದನ್ನು ಕೇಳಿದ್ದೇನೆ. ಆಗ ಆ ರೋಗಿಯ ಮುಖ ನೋಡಬೇಕು!

 

ನಾನು ಹೇಳ್ತೀನಿ, ಹೀಗೆ ಅನ್ನಿಸಿಕೊಂಡವರು ನಮ್ಮಪ್ಪನಾಣೆ ತಿರುಗಾ ಆ ಡಾಕ್ಟರ್ ಹತ್ತಿರ ಹೋಗೋದಿಲ್ಲ. ಇದನ್ನು ಗಮನಿಸಿದ ಮೇಲೆ ನಾನಂತೂ ಯಾರಿಗೂ ಹರ್ಟ್ ಮಾಡಲ್ಲಪ್ಪ. `ನಿನ್ನ ವಯಸ್ಸೆಷ್ಟು?~ ಅಂತ ಕೇಳ್ತೀನಿ, ಅವರು `30~ ಅಂದರೆ `ಅಲ್ಲಮ್ಮಾ ಸರಿಯಾಗಿ ಹೇಳಿ, 23-24 ಇರಬೇಕು ಆ....~ ಎನ್ನುತ್ತೇನೆ. ಆಗ ಎದುರಿಗೆ ಕೂತ ರೋಗಿಯ ಮುಖ ಎಷ್ಟು ಅರಳುತ್ತೆ ಗೊತ್ತಾ? ಕೆಲವು ಬಾರಿ ಕೇಳಿಸೇ ಇಲ್ಲವೇನೋ ಎಂಬಂತೆ ಕಡಿಮೆ ವಯಸ್ಸನ್ನು ಹೇಳ್ತೀನಿ, ಅವರಿಗೆ ಖುಷಿ ಆಗುತ್ತೆ. ಇದರಿಂದ ನಾವು ಕಳೆದುಕೊಳ್ಳೋದಾದ್ರೂ ಏನಿದೆ? ಏನೂ ನಷ್ಟವಿಲ್ಲದೆ ನಾವು ಇನ್ನೊಬ್ಬರಿಗೆ ಸಂತೋಷ ಕೊಡಬಹುದಾದರೆ ಒಳ್ಳೆಯದೇ ಅಲ್ವಾ.* * *

`ನಿನ್ನ ಹೆಸರೇನಮ್ಮ~

`ಲೀಲಮ್ಮ ಡಾಕ್ಟ್ರೆ~

`ವಯಸ್ಸೆಷ್ಟು?~

`51 ವರ್ಷ ಡಾಕ್ಟ್ರೆ~

`ಬಿ.ಪಿ ಎಷ್ಟು ದಿನದಿಂದ ಇದೇಮ್ಮಾ~`ಬಿ.ಪಿ ಬಂದು 15 ವರ್ಷ ಆಯ್ತು ಡಾಕ್ಟ್ರೆ, 45ಕ್ಕೇ ಬಂದ್ ಬಿಡ್ತು ಹಾಳಾದ್ದು~- ಇದು ಡಾಕ್ಟರ್ ಮತ್ತು ರೋಗಿಯ ನಡುವೆ ಆಗುವ ಮಾತುಕತೆ. ಡಾಕ್ಟರ್ ಈಗ ಮನಸ್ಸಲ್ಲೇ ಲೆಕ್ಕ ಹಾಕಬೇಕು. 45+15= 60 ವರ್ಷ ಈಕೆಗೆ ಆಗಿದೆ ಎಂದುಕೊಂಡು ಸುಮ್ಮನಾಗಬೇಕು.ಅದು ಬಿಟ್ಟು `ಇದೇನಮ್ಮಾ, ನಿನಗೀಗ 60 ವರ್ಷವಲ್ಲವಾ~ ಅಂತ ಏನಾದರೂ ವಾದ ಮಾಡಿದೆವೋ ಗ್ಯಾರಂಟಿ ಆ ರೋಗಿ ಮತ್ತೆ ನಮ್ಮ ಕ್ಲಿನಿಕ್ ಕಡೆ ತಲೆ ಹಾಕಿ ಮಲಗುವುದಿಲ್ಲ.

* * *

`ಮದುವೆಗೇ ಅಂತ ಬಂದಿದ್ದೆ ಡಾಕ್ಟ್ರೆ, ನಾವು ಈ ಊರಿನವರಲ್ಲ; ಹಾಸನದ ಹತ್ತಿರದವರು. ಸ್ವಲ್ಪ ಜಾರಿ ಬಿದ್ದುಬಿಟ್ಟೆ, ಕಾಲು ನೋಯ್ತಾ ಇದೆ~ ಎಂದಳು ಮಂಗಳಮ್ಮ ಎಂಬ ರೋಗಿ.`ವಯಸ್ಸೆಷ್ಟು ನಿಮಗೆ~

`ನಂಗೆ 40 ಆಗಿದೆ ಡಾಕ್ಟ್ರೆ~ ಎಂದವಳು `ಅಲ್ವಾ~ ಎಂದು ತನ್ನ ಜೊತೆ ಬಂದವಳನ್ನು ಕೇಳಿದಳು. ಆಕೆ ಏನು ಹೇಳಲೂ ತೋಚದೆ, ನನಗ್ಯಾಕೆ ಉಸಾಬರಿ ಅಂತಲೋ ಏನೋ `ಹ್ಞಾ... ಹೌದ್ಹೌದು~ ಎಂದು ತಲೆ ಆಡಿಸಿದಳು.`ನಂಗೆ ನಾಲ್ಕು ಮಕ್ಕಳು ಡಾಕ್ಟ್ರೆ, ನನ್ನ ದೊಡ್ ಮಗಳಿಗೆ ಇಬ್ರು ಮಕ್ಕಳು, ಅದರಲ್ಲಿ ಮೊದಲನೆಯವ್‌ಳಿಗೆ 18 ವರ್ಷ. ಈಗ ಅವ್ಳ ಮದುವೆಗೇ ಬಂದಿರೋದು~`ಇಷ್ಟು ಚಿಕ್ಕ ವಯಸ್ಸಿಗೇ ನಿಮಗೆ 18 ವರ್ಷದ ಮೊಮ್ಮಗಳಾ? ಗೊತ್ತಾಗೋದೇ ಇಲ್ಲಾ~ ಎಂದೆ, ನನಗೂ ಟೈಂಪಾಸ್ ಆಗಬೇಕಿತ್ತು.`ಏನ್ಮಾಡೋದು ಡಾಕ್ಟ್ರೆ, ತುಂಬಾ ಚಿಕ್ಕ ವಯಸ್ಸಿಗೇ ಮದುವೆ ಮಾಡ್‌ಬಿಟ್ರು ನಂಗೆ, ಎಷ್ಟಾದ್ರೂ ಹಳೇಕಾಲ, ಹಳ್ಳಿಯವ್ರ ನೋಡಿ~ ಎಂದಳು.`ಛೆ... ಪಾಪ~ ಎಂದು ಹೇಳುತ್ತಲೇ ನಾನು ಮನಸ್ಸಿನಲ್ಲಿ ಲೆಕ್ಕ ಹಾಕಿದೆ, ಇವಳ ಮಗಳಿಗೆ 16 ವಯಸ್ಸಿಗೇ ಮಗಳು ಹುಟ್ಟಿದ್ರೂ, ಮೊಮ್ಮಗಳಿಗೆ ಈಗ 18 ವರ್ಷ. ಅಂದ್ರೆ 16+18=34 ಆಯ್ತು.ಅಂದ್ರೆ ದೊಡ್ಡ ಮಗಳಿಗೆ 34 ವರ್ಷ ಆಯ್ತು, ಹಾಗಾದ್ರೆ ಈ ಮಂಗಳಮ್ಮನಿಗೆ 6 ವರ್ಷಕ್ಕೇ ಮಗು ಹುಟ್ಟಿತ್ತಾ? ಈ ತರಹದ ಮೋಜಿನ ಸಂಗತಿಗಳು ಸಿಗಬೇಕೆಂದರೆ ಡಾಕ್ಟರ್‌ಗಳು ಆವಾಗಾವಾಗ ಸ್ವಲ್ಪ ಗಣಿತದ ಜ್ಞಾನವನ್ನೂ ಬಳಸಬೇಕಾಗುತ್ತದೆ. ಏನಂತೀರಾ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry