ವೈದ್ಯ 78, ದಂತವೈದ್ಯ 8 ಸೀಟು ಆಯ್ಕೆ

ಶುಕ್ರವಾರ, ಜೂಲೈ 19, 2019
26 °C

ವೈದ್ಯ 78, ದಂತವೈದ್ಯ 8 ಸೀಟು ಆಯ್ಕೆ

Published:
Updated:

ಮಂಗಳೂರು: ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಸೀಟು ಆಯ್ಕೆ ಪ್ರಕ್ರಿಯೆ ಸೋಮವಾರ ನಗರ ಹೊರವಲಯದ ಅಡ್ಯಾರ್‌ನಲ್ಲಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭವಾಯಿತು.ಸೋಮವಾರ ಮಂಗಳೂರು ಕೇಂದ್ರದಲ್ಲಿ 78 ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ 8 ವಿದ್ಯಾರ್ಥಿಗಳು ದಂತ ವೈದ್ಯಕೀಯ ಸೀಟು ಆಯ್ಕೆ ಮಾಡಿಕೊಂಡರು. ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 108 ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು. ಇದೇ 24ರವರೆಗೆ ಆಯ್ಕೆ ಪ್ರಕ್ರಿಯೆ ಮುಂದುವರೆಯಲಿದೆ.ಸಿಇಟಿ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿ ಹೇಮಂತ್ 24ನೇ ರ‌್ಯಾಂಕ್ ಪಡೆದಿದ್ದು, ಇಂದು ನಡೆದ ಕೌನ್ಸೆಲಿಂಗ್‌ನಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜು ಆಯ್ಕೆ ಮಾಡಿಕೊಂಡರು. 25ನೇ ರ‌್ಯಾಂಕ್ ಪಡೆದ ಎಕ್ಸಪರ್ಟ್ ಪಿಯು ಕಾಲೇಜು ವಿದ್ಯಾರ್ಥಿನಿ ಶ್ವೇತಾ ಆರ್. ಪೂಜಾರಿ ಮಂಗಳೂರು ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲಿದ್ದಾರೆ.ಮಂಗಳೂರು ಸೇರಿದಂತೆ ರಾಜ್ಯದ 7 ಕೇಂದ್ರಗಳಲ್ಲಿ ಸಿಇಟಿ ಕೌನ್ಸೆಲಿಂಗ್ ನಡೆಯುತ್ತಿದ್ದು, ವಿದ್ಯಾರ್ಥಿ ಯಾವುದೇ ಕೇಂದ್ರದಲ್ಲಿ ಸೀಟು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ. ಸೀಟು ಆಯ್ಕೆ ಪ್ರಕ್ರಿಯೆ ಬೆಳಿಗ್ಗೆ 8, 10, ಮಧ್ಯಾಹ್ನ 1 ಮತ್ತು ಸಂಜೆ 4 ಗಂಟೆಯ ವಿವಿಧ ಹಂತಗಳಲ್ಲಿ ನಡೆಯುತ್ತಿದೆ.ಆಯ್ಕೆ ಹೀಗೆ: `ಆರಂಭದಲ್ಲಿ ಅಭ್ಯರ್ಥಿ ನೋಂದಣಿ ಮಾಡಿಕೊಳ್ಳಬೇಕು. ನಂತರ ದಾಖಲೆ ಪರಿಶೀಲನೆ. ಅಭ್ಯರ್ಥಿ ರ‌್ಯಾಂಕ್ ಆಧಾರ ನಿಗದಿಪಡಿಸಿದ ಕೊಠಡಿಯಲ್ಲಿ ಸೀಟು ಹಂಚಿಕೆ ನಡೆಯುತ್ತದೆ. ರಾಜ್ಯದಾದ್ಯಂತ ಆನ್‌ಲೈನ್ ವ್ಯವಸ್ಥೆಯಲ್ಲಿ ಏಕಕಾಲಕ್ಕೆ ಸೀಟು ಹಂಚಿಕೆ ನಡೆಯುತ್ತಿದ್ದು, ಅಭ್ಯರ್ಥಿ ತನಗೆ ಇಷ್ಟದ ಕೇಂದ್ರಗಳಲ್ಲಿ ಸೀಟು ಆಯ್ಕೆ ಮಾಡಿಕೊಳ್ಳಬಹುದು. ನಂತರ ಡಿಡಿ ಮೂಲಕ ಹಣ ಪಾವತಿಸಿ ದಾಖಲಾತಿ ಪತ್ರ ಸ್ಥಳದಲ್ಲೇ ಪಡೆಯಬಹುದು~ ಎಂದು ಸಿಇಟಿ ಮಂಗಳೂರು ಕೇಂದ್ರ ಸಮನ್ವಯಾಧಿಕಾರಿ ಶ್ರುತಕೀರ್ತಿ ರಾಜ ತಿಳಿಸಿದರು.ನಿರಾಶೆ: ಸೋಮವಾರದ ಕೌನ್ಸೆಲಿಂಗ್‌ನಲ್ಲಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ 400ಕ್ಕೂ ಅಧಿಕ ಸೀಟು ಭರ್ತಿಯಾಗಿದ್ದು, 400ಕ್ಕಿಂತ ಮೇಲಿನ ರ‌್ಯಾಂಕ್ ಪಡೆದ ಅಭ್ಯರ್ಥಿಗಳು ಇಷ್ಟದ ಕಾಲೇಜು ಸಿಗದೆ ನಿರಾಶರಾದರು. ಹಾಸನ, ಶಿವಮೊಗ್ಗ, ಮೈಸೂರು ಸೇರಿದಂತೆ ಕೆಲವು ಮೆಡಿಕಲ್ ಕಾಲೇಜುಗಳಿಗೆ ಮೆಡಿಕಲ್ ಕೌನ್ಸಿಲ್ ಮಾನ್ಯತೆ ದೊರೆತಿಲ್ಲ. ಮಾನ್ಯತೆ ದೊರೆತರೆ 700 ಅಧಿಕ ಸೀಟು ಲಭ್ಯವಾಗಲಿವೆ.`ಇಂದಿನ ಕೌನ್ಸೆಲಿಂಗ್‌ನಲ್ಲಿ ಅನಿವಾರ್ಯವಾಗಿ ನಮಗಿಷ್ಟವಿಲ್ಲದ ಕಾಲೇಜು ಆಯ್ಕೆ ಮಾಡಿಕೊಂಡಿದ್ದೇವೆ.

ಮುಂದಿನ ಹಂತದಲ್ಲಿ ಮತ್ತೆ ತಮ್ಮ ಇಷ್ಟದ ಕಾಲೇಜು ಪಡೆದುಕೊಳ್ಳುತ್ತೇವೆ. ಇಂದಿನದ್ದು ಕೇವಲ ಪ್ರಹಸನ~ ಎಂದು ಪೋಷಕರೊಬ್ಬರು ಪತ್ರಿಕೆಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry