ಮಂಗಳವಾರ, ಮೇ 17, 2022
26 °C

ವೈಧವ್ಯದ ಬವಣೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ವಿಧವೆಯರಿಂದ ಬೆಳ್ಳಿರಥ ಎಳೆಸಿ ಮಂಗಳ ಕಾರ್ಯಗಳನ್ನು ನೆರವೇರಿಸಿದ್ದು ಹೊಸ ಕ್ರಾಂತಿಗೆ ಕಾರಣವಾಯಿತು. ಈಗ ಮತ್ತೆ, ಪತಿ ಮೃತಪಟ್ಟರೆ ಮಾಂಗಲ್ಯ ತೆಗೆಯುವುದಿಲ್ಲ, ಬಳೆ ಒಡೆಯುವುದಿಲ್ಲ ಎಂಬ ಸಂಕಲ್ಪವನ್ನು ಮುತ್ತೈದೆಯರು ದೀಪಾವಳಿಯ ಸಂದರ್ಭದಲ್ಲಿ ಮಾಡಿದ್ದಾರೆ. ಈ ವಿದ್ಯಮಾನಗಳಿಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಒತ್ತಾಸೆಯಾಗಿರುವುದು ಅಭಿನಂದನಾರ್ಹ.

 

ಹೀಗಿದ್ದೂ ಭಾರತೀಯ ಸನಾತನ ಪರಂಪರೆ ಹುಟ್ಟು ಹಾಕಿರುವ ವೈಧವ್ಯವೆಂಬ  ಸಾಮಾಜಿಕ ಅನಿಷ್ಟವು ಇಂಥ ಒಂದೆರಡು ಸಕಾರಾತ್ಮಕ ಕಲಾಪಗಳಿಂದ ಭಾರಿ ಬದಲಾವಣೆ ಕಾಣಲಾರದು. ಏಕೆಂದರೆ  ಶತಮಾನಗಳ ಸ್ತ್ರೀಭೇದ ನೀತಿಯ ಅನಂತ ಕ್ರೂರವಾದ ಮುಖಗಳು ಇದರೊಂದಿಗಿದೆ.`ಗಂಡ ಸತ್ತರೆ ಹೆಂಡತಿಯಾಗುವಳು ವಿಧವೆ; ಹೆಂಡತಿ ಸತ್ತರೆ ಗಂಡನು ಆಗುವನು ಇನ್ನೊಂದು ಮದುವೆ~ ಎಂಬ ಚುಟುಕ, ವೈಧವ್ಯದ ಕ್ರೌರ್ಯವನ್ನು ಬಿಂಬಿಸುತ್ತದೆ. `ಪತಿಯು ಮೃತನಾದ ಮೇಲೆ ಸಾಧ್ವಿಯಾದ ಸತಿಯು ಹೂವು-ಗೆಡ್ಡೆ-ಗೆಣಸು ಹಣ್ಣು ಹಂಪಲಗಳಿಂದ ದೇಹದ ಅಭಿಲಾಷೆಯನ್ನು  ಕಡಿಮೆ ಮಾಡಿಕೊಳ್ಳುವ ರೀತಿಯಲ್ಲಿ ಆಹಾರ, ವಿಹಾರಗಳಲ್ಲಿ ವರ್ತಿಸಬೇಕು. ಪರಪುರುಷನ ಹೆಸರನ್ನು ಕೂಡಾ ನುಡಿಯಬಾರದು~ ಎಂದು ಮನುಸ್ಮೃತಿಯಲ್ಲಿ ವಿಧಿಸಲಾಗಿದೆ.ವಿಧವಾಧರ್ಮ ಎಂಬೊಂದು ನೀತಿಯನ್ನೇ ಪ್ರತಿಷ್ಠಾಪಿಸಿ ಅದರಲ್ಲಿ ಗಂಡ ಸತ್ತ ಸ್ತ್ರೀ ಏನು ತಿನ್ನಬೇಕು, ಏನು ತಿನ್ನಬಾರದು, ತನ್ನ ಕಾಮನೆಗಳನ್ನು ಹೇಗೆಲ್ಲಾ ಸಾಯಿಸಬೇಕು ಎಂಬುದಾಗಿ ಉದ್ದಪಟ್ಟಿಯನ್ನೇ ನೀಡಲಾಗಿದೆ.

 

ಇದರಿಂದ ಮಾತ್ರ  ವಿಧವೆಗೆ ಮುಕ್ತಿ, ಇಲ್ಲವಾದರೆ ಅವಳು ಅದೆಂಥ ನರಕಕ್ಕೆ ಭಾಜನಳಾಗುತ್ತಾಳೆ ಎಂಬ ಚಿತ್ರಣವು  ಧರ್ಮಶಾಸ್ತ್ರಗಳಲ್ಲಿ ತುಂಬಾ ಭಯಾನಕವಾಗಿ ಮೂಡಿಬಂದಿದೆ. ಇಂಥ ನೀತಿ ಪಾಠವನ್ನು ಕೇಳುತ್ತ, ಹಿರಿಯ ವಿಧವೆಯರು ಪಾಲಿಸುತ್ತ ಬಂದ ಪರಿಯನ್ನು ಗಮನಿಸಿದ ಮುಗ್ಧ ಮಹಿಳೆಯರು ತಮಗೆ ದೊರೆತ ವೈಧವ್ಯದ ಚೌಕಟ್ಟನ್ನು ಮೀರುವುದು ಸಾಧ್ಯವೇ ಇಲ್ಲ.ಇವು  ಸ್ತ್ರೀಯರಲ್ಲಿ  ಅಸದಳ ಕೀಳರಿಮೆ, ಪ್ರಶ್ನಾತೀತ ಧರ್ಮಭೀರುತ್ವ, ಅಪಾರ ಪಾಪಪ್ರಜ್ಞೆಯನ್ನು  ತುಂಬುತ್ತ ಬಂದಿವೆ. ಇಂಥ ಅನಿಷ್ಟಗಳ ವಿರುದ್ಧ  ಹಲಕೆಲವು  ಸುಧಾರಣಾವಾದಿ ಪ್ರಕ್ರಿಯೆಗಳು ಸಂಭವಿಸಿವೆಯಾದರೂ ಅವು ಸಾಲದಾಗಿವೆ.

ವಿದುರತನ -ಪುರುಷನ ಆಯ್ಕೆ

ವಿಧವೆತನ ಕುರಿತು ಚರ್ಚೆ ನಡೆದಾಗಲೆಲ್ಲಾ, ಸನಾತನವಾದಿಗಳು ವಿದುರತನವೂ ಇದೆಯಲ್ಲ?ಎನ್ನುತ್ತಾರೆ. ಧರ್ಮಶಾಸ್ತ್ರವು ಹೆಂಡತಿ ಸತ್ತ ಪುರುಷನಿಗೆ ವಿದುರಪಟ್ಟ ನೀಡಿ  ಸಾಕಷ್ಟು ನಿರ್ಬಂಧ ಹೇರಿದೆ;  ಸಮಾಜಸ್ವಾಸ್ಥ್ಯಕ್ಕಾಗಿ ಇಂಥ ನೀತಿಗಳನ್ನು ಸ್ತ್ರೀ-ಪುರುಷರಿಬ್ಬರಿಗೂ ಸಮಾನವಾಗಿ ಬೋಧಿಸಲಾಗಿದೆ ಎಂದು ಸಮರ್ಥಿಸುವ  ಚಾಳಿಗಿಳಿಯುತ್ತಾರೆ.  ಧರ್ಮಶಾಸ್ತ್ರದ ಪ್ರಕಾರ ವಿದುರತನವು  ಪುರುಷನ ಆಯ್ಕೆಗೆ ಬಿಟ್ಟದ್ದು. ಆದರೆ ವಿಧವೆತನ ಮಾತ್ರ ಸ್ತ್ರೀಯರಿಗೆ  ಕಡ್ಡಾಯ ವಿಧಿ ಎಂಬುದನ್ನು ಮರೆಮಾಚುತ್ತಾರೆ.  ಹೆಂಡತಿ ಸತ್ತ ಪುರುಷನು ಇಷ್ಟಪಟ್ಟರೆ ಮಾತ್ರ ಮದುವೆ ಆಗದೆ ವಿದುರನಾಗಿ ಉಳಿಯಬಹುದು. ಗಂಡ ಸತ್ತ ಹೆಂಡತಿಗೆ ಇಷ್ಟವಿರಲಿ ಬಿಡಲಿ, ಅವಳು ಮರು ವಿವಾಹವಾಗುವಂತಿಲ್ಲ.  ಸಾಯುವವರೆಗೆ ವಿಧವೆಯಾಗಿರಬೇಕು.ಈ ಜೀವಂತ ನರಕ ಬೇಡ ಅಂತಾದರೆ ಪತಿಯೊಡನೆ ಚಿತೆಯೇರಿ ಮಹಾಸತಿಯಾಗಿ ಸ್ವರ್ಗ ಸೇರಬೇಕು. ಇವು ಬಿಟ್ಟರೆ ಸ್ತ್ರೀಯರಿಗೆ ಮೂರನೇ ಪರ್ಯಾಯವೆಂಬುದು ಅವಶ್ಯಕವಾಗಿತ್ತು. ಇವತ್ತಿಗೆ ಸತಿಪದ್ಧತಿ ಇಲ್ಲವಾದರೂ ವಿಧವಾ ವಿವಾಹಕ್ಕೆ  ಸಮಾಜ ಸಿದ್ಧವಾದಂತಿಲ್ಲ.ಕೂಡಿಕೆ - ಸಾಮಾಜಿಕ ವೈರುಧ್ಯ 


ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯದ ಕೆಲವು ಪಂಗಡಗಳಲ್ಲಿ ವಿಧವೆಯರಿಗೆ ಪುನರ್‌ವಿವಾಹಕ್ಕೆ ಅವಕಾಶವಿರಲಿಲ್ಲ. ಆದರೆ ಶೂದ್ರರು ಮತ್ತು ಪಂಚಮರಲ್ಲಿ ಯಾವತ್ತೂ ವಿಧವಾವಿವಾಹಕ್ಕೆ ಮುಕ್ತ ಅವಕಾಶವಿತ್ತು.ಬಾಲವಿಧವೆಯರು, ಪ್ರಾಪ್ತವಯಸ್ಸಿನ ವಿಧವೆಯರು, ಮಕ್ಕಳು ಹೊಂದಿರುವ  ವಿಧವೆಯರು ಇನ್ನೊಬ್ಬ ಪುರುಷನೊಂದಿಗೆ ಕೂಡಿಕೆ (ಪುನರ್‌ವಿವಾಹ) ಮಾಡಿಕೊಳ್ಳುವ ಪರಂಪರೆಯು ಇದ್ದೇ ಇತ್ತು. ಇಂಥ ಮದುವೆಗಳು  ಸ್ತ್ರೀ ಸಮಾನತೆಯನ್ನು  ಪೋಷಿಸಿಕೊಂಡು  ಬಂದಿದ್ದವು ಎಂತೇನೂ ಅಲ್ಲ. ಇಲ್ಲಿ ಅನೇಕ ಸಾಮಾಜಿಕ ವೈರುಧ್ಯಗಳಿದ್ದವು.ಈ ತೆರನ ಪುನರ್‌ವಿವಾಹಗಳು ಉಡುಕಿ, ಕೂಡಿಕೆ, ಕೂಡಾವಳಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದವು. ಬಹುತೇಕವಾಗಿ ವಿದುರರು ವಿಧವೆಯರೊಂದಿಗೆ ಕೂಡಾವಳಿ ಮಾಡಿಕೊಳ್ಳುತ್ತಿದ್ದರಲ್ಲದೆ ಅವಿವಾಹಿತ ಪುರುಷರು ವಿಧವೆಯರನ್ನು ಹೆಂಡತಿಯಾಗಿ ಸ್ವೀಕರಿಸಿದ್ದು ತುಂಬಾ ಕಡಿಮೆ.ಏಕೆಂದರೆ ವಿಧವಾ ವಿವಾಹದ ಪುರುಷ-ಮಹಿಳೆಯರಿಬ್ಬರೂ  ಮಂಗಳಕಾರ್ಯದಲ್ಲಿ ಭಾಗವಹಿಸಲು ಅವಕಾಶವಿರುತ್ತಿರಲಿಲ್ಲ. ಜಾನಪದರ ಮಾತಿನಲ್ಲಿ ಹೇಳುವುದಾದರೆ ಅವರು  ಚಾಜಕ್ಕೆ ಬರುವುದಿಲ್ಲ.

 

ಅಂದರೆ ಮದುವೆ, ತೊಟ್ಟಿಲು ಮುಂತಾದ ಮಂಗಳ ಕಾರ್ಯಕ್ರಮದಲ್ಲಿ ಆರತಿ ಮಾಡುವುದು, ಸುರಗಿ ಸುತ್ತುವುದು, ಮಗುವಿಗೆ ನಾಮಕರಣ ಮಾಡುವುದು, ಬಟ್ಟೆ ಉಡುಗೊರೆ ನೀಡುವುದು, ಇಂಥ ಕಾರ್ಯಕ್ರಮಗಳಲ್ಲಿ ರೆಗ್ಯುಲರ್ ಮುತ್ತೈದೆಯರು ಭಾಗವಹಿಸುವಂತೆ ಮುಕ್ತವಾಗಿ ಅವಕಾಶವಿರುತ್ತಿರಲಿಲ್ಲ.ಆದ್ದರಿಂದ ವಿದುರನು ಕೂಡಾ ಸಾಮಾಜಿಕ ಬಹಿಷ್ಕಾರದ ಕಾರಣವಾಗಿ ಕನ್ಯೆಯನ್ನು ಮದುವೆಯಾಗಲು ಸಿದ್ಧವಾಗುತ್ತಿದ್ದನೇ ಹೊರತು ವಿಧವೆಗೆ ಬಾಳು ಕೊಡಲು ಮುಂದೆ ಬರುತ್ತಿರಲಿಲ್ಲ.

 

ತೀರ ಅನಿವಾರ್ಯ ಎಲ್ಲೂ ಹೊಸ ಹೆಣ್ಣು ಸಿಗುತ್ತಿಲ್ಲ ಅಥವಾ ಇವನಿಗೆ ಈಗಾಗಲೇ ಇಬ್ಬರು, ಮೂವರು ಹೆಂಡಂದಿರು ತೀರಿ ಹೋಗಿದ್ದಾರೆ ಎಂದಾಗ ಮಾತ್ರ ವಿಧವೆಯೊಂದಿಗೆ ಮದುವೆಯಾಗಲು ಸಿದ್ಧರಾಗುವ ವಾಡಿಕೆ ಇತ್ತು.ಗಂಡ ಸತ್ತ ಸ್ತ್ರೀಯರಿಗೆ, ಅವಳು ಎಷ್ಟೇ ಚಿಕ್ಕವಳಿರಲಿ ಇನ್ನೊಂದು ಮದುವೆಗೆ ಅವಕಾಶವಿಲ್ಲ ಎಂಬ ಬ್ರಾಹ್ಮಣ ಕ್ಷತ್ರಿಯ, ಸಮುದಾಯದ ಕರ್ಮಠ ಆಚರಣೆಗಳ ಇದುರಿನಲ್ಲಿ ಶೂದ್ರರ ಈ ಕೂಡಾವಳಿಗಳು ಕನಿಷ್ಠ ವಿಧವೆಯರಿಗೆ ಲೈಂಗಿಕ ಹಾಗೂ ಕೌಟುಂಬಿಕ ಸಂಬಂಧದ ಅವಕಾಶ ನೀಡುತ್ತವೆ ಎಂಬ ಕಾರಣಕ್ಕೆ ಗಮನಾರ್ಹ ಎನಿಸುತ್ತವೆ.

 

ಆದರೆ ಕಾಲ ಕಳೆದಂತೆ ಲೈಂಗಿಕ ಮಡಿವಂತಿಕೆ ಎಷ್ಟರ ಮಟ್ಟಿಗೆ ಕ್ರಿಯಾಶೀಲವಾಯಿತೆಂದರೆ ಶೂದ್ರ ಸಮುದಾಯದ ಮೇಲ್ವರ್ಗ, ಮೇಲ್ಜಾತಿಗಳಲ್ಲಿಯೂ ವಿಧವಾ ವಿವಾಹದ ಅವಕಾಶ ಕುಂಠಿತ ವಾಗತೊಡಗಿದವು.

 

ಸನಾತನ ನಂಬಿಕೆಗಳ ಶ್ರೇಷ್ಠತೆಯ ವ್ಯಸನವು ಆಧುನಿಕ ವಿದ್ಯಮಾನಗಳನ್ನು ಬಳಸಿಕೊಂಡು  ವ್ಯಾಪಕವಾದಂತೆ ವಿಧವಾ ವಿವಾಹದ ಕ್ವಚಿತ್ ಅವಕಾಶ ಮರೀಚಿಕೆಯಂತಾದವು.ವಿಧವೆಯರ ಸಂಖ್ಯೆ ಹೆಚ್ಚಳ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಕಳೆದ ಮೇ ನಲ್ಲಿ ಬೀದರ ಜಿಲ್ಲೆಯಲ್ಲಿ ನಡೆಸಿದ ವಿಧವಾ ಸಮಸ್ಯೆಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದ ಅಂಶಗಳು ಆತಂಕಕಾರಿ. 50-60 ರ ದಶಕಕ್ಕಿಂತ ವಿಧವೆಯರ ಸಂಖ್ಯೆಯಲ್ಲಿ  ಈಗ ಹೆಚ್ಚಳವಾಗಿದೆ.ಪ್ರತಿ ಹಳ್ಳಿಯಲ್ಲಿಯೂ ನೂರಾರು ಸಂಖ್ಯೆಯಲ್ಲಿ ಹದಿನೆಂಟು ವಯೋಮಾನದಿಂದ ಎಂಬತ್ತು ವಯೋಮಾನದವರೆಗೂ ವಿಧವೆಯರು ಇದ್ದಾರೆ. ವಿಧವಾ ವಿವಾಹಕ್ಕೆ ಅವಕಾಶವಿದ್ದ ಜಾತಿಗಳಲ್ಲೂ ಇಂದು ಪುನರ್‌ವಿವಾಹಗಳು ನಡೆಯುತ್ತಿಲ್ಲ . ಎಪ್ಪತ್ತು-ಎಂಬತ್ತರ ದಶಕದ ಆದರ್ಶವಾದಿ ಯುವಕರ ಪಡೆ ಇಂದು ಸನಾತನ ಮೌಲ್ಯಗಳತ್ತ ವಾಲುತ್ತಿದ್ದಾರೆ.  ಜಾತಿವಾದಿ ಸಾಂಸ್ಕೃತಿಕ ರಾಜಕಾರಣವು ಗ್ರಾಮ ಮಟ್ಟದಲ್ಲಿ ತುಂಬಾ ಕ್ರಿಯಾಶೀಲವಾಗಿದ್ದೂ ಇದಕ್ಕೆ  ಕಾರಣವಾದಂತಿದೆ.ಬಹುತೇಕ ಮಹಿಳೆಯರಿಗೆ ಗಂಡನ ಮನೆ-ತವರು ಮನೆ ಎರಡೂ ಕಡೆ ಆಸ್ತಿ ದೊರೆತಿಲ್ಲ. ಕನಿಷ್ಠ ಆರ್ಥಿಕ ಭದ್ರತೆ ಇಲ್ಲ. ಅತ್ಯಂತ ಶ್ರೀಮಂತ ಮನೆತನದ ವಿಧವೆ ಮತ್ತು ಕೂಲಿಕಾರ ವಿಧವೆ ಇಬ್ಬರಿಗೂ ಯಾವುದೇ ಅಶ್ರಯ ಇಲ್ಲದಿರುವುದು ಕಂಡುಬಂದಿದೆ.

 

ವಯಸ್ಸಾದ  ಕೆಲವು ವಿಧವೆಯರಿಗೆ ಕನಿಷ್ಠ ಮಾಸಾಶನ ಬರುತ್ತಿತ್ತು. ಇಂದು ಅದನ್ನೂ ಏಕಾಏಕಿ  ನಿಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ವಿಧವೆಯರಿಗಾಗಿ ನೀಡಿದ ಸೌಲಭ್ಯಗಳು ಗ್ರಾಮ ಮಟ್ಟದಲ್ಲಿ ಮುಟ್ಟಿಯೇ ಇಲ್ಲ.ಲೈಂಗಿಕ ಕಿರುಕುಳ

ಪ್ರೌಢ ವಯಸ್ಸಿನ  ವಿಧವೆಯರು ಅನುಭವಿಸುತ್ತಿರುವ  ಲೈಂಗಿಕ  ಕಿರುಕುಳದ ದೊಡ್ಡ ಪುರಾಣವೇ ಇದೆ. ವಿಧವೆಯರ ಸಂಖ್ಯೆಗೆ ಹೋಲಿಸಿದರೆ ಯಾವುದೇ ಹಳ್ಳಿಯಲ್ಲಿ ವಿದುರರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಹೀಗೆಂದೇ ಮೊನ್ನಿನ ಕುದ್ರೋಳಿ ದೇವಸ್ಥಾನದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ವಿಧವೆಯರು ನೆರೆದಿದ್ದರು. ಇಲ್ಲಿಯೂ ಒಂದು ಧರ್ಮ ಸೂಕ್ಷ್ಮವಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವು ಪರಿವರ್ತನೆಯ ಮಹಾನ್ ಸಂತ ನಾರಾಯಣ ಗುರುಗಳಿಂದ ಸ್ಥಾಪಿತವಾದದ್ದು. ನಾರಾಯಣ ಗುರುಗಳು ವೈದಿಕರ ದೇವಸ್ಥಾನಗಳನ್ನು ನಗಣ್ಯಗೊಳಿಸಲೆಂದೆ ಪರ್ಯಾಯ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದು ಇದೆ.ಆ ಹೊತ್ತು ಅದೊಂದು ಕ್ರಾಂತಿಕಾರಿ ಹೆಜ್ಜೆಯೇ ಆಗಿತ್ತು. ಇಂಥ ಬಂಡಾಯದ ದೇವಸ್ಥಾನಗಳಲ್ಲಿ ವಿಧವೆಯರಿಗೆ ಅವಕಾಶ ಸಿಕ್ಕಂತೆ ಶೃಂಗೇರಿ ಶಾರದಾ ಪೀಠ, ಪುರಿ ಜಗನ್ನಾಥ ದೇವಸ್ಥಾನಗಳ ಧಾರ್ಮಿಕಾಚರಣೆಗಳಲ್ಲಿ  ವಿಧವೆಯರಿಗೆ ಅವಕಾಶ ಕೊಟ್ಟಾರೆಯೇ?

 

ಹಾಗೆ ನೋಡಿದರೆ  ಇತ್ತೀಚೆಗೆ  ಮಹಿಳೆಯರಿಗೆ ವೇದಾಧ್ಯಯನಕ್ಕೆ ಅವಕಾಶ, ಅರ್ಚಕ ವೃತ್ತಿಗೆ ಪ್ರವೇಶ, ಯಜ್ಞೋಪವಿತ ಧಾರಣೆ, ಶ್ರಾಧ್ಧ ಕರ್ಮ ಮಾಡಲು ಪ್ರೋತ್ಸಾಹ, ಗಾಯತ್ರಿ ಮಂತ್ರ ಪಠಣಕ್ಕೆ ಅವಕಾಶಗಳು ನೀಡಲಾಗುತ್ತಿವೆ.ಇವನ್ನು ಕ್ರಾಂತಿಕಾರಿ ಹೆಜ್ಜೆಗಳು ಎಂಬಂತೆ ಬಿಂಬಿಸಲಾಗುತ್ತಿದೆ.

 

ಇಲ್ಲಿಯವರೆಗೆ  ಈ ಆಚರಣೆಗಳಿಂದ  ಮಹಿಳೆಯರನ್ನು ದೂರವಿಡುವಲ್ಲಿ ಧಾರ್ಮಿಕ,  ಸಾಮಾಜಿಕ ಕುತಂತ್ರವಿದ್ದರೆ, ಇಂದು ಅಂಥ ಅವಕಾಶಗಳು ನೀಡುತ್ತಿರುವುದರ ಹಿಂದೆ ವ್ಯಾಪಾರಿ  ಮನೋಭಾವದ ಲಾಬಿ ಇರುವಂತಿದೆ. ವಿಧವೆಯರಿಗೆ ಮೂಲಭೂತವಾಗಿ ಬೇಕಾದದ್ದು ಆ ಪಟ್ಟದಿಂದ ಮುಕ್ತಿ. ಚಿಕ್ಕ ಹರೆಯದ, ಮಧ್ಯವಯಸ್ಸಿನ ವಿಧವೆಯರಿಗೆ ಬೇಕಾದದ್ದು ಹೊಸ ಬಾಳು.  ಅವಳನ್ನು ಶುದ್ಧಾಂಗವಾಗಿ ಪ್ರೀತಿಸುವ ಸಂಗಾತಿ. ಎಲ್ಲಕ್ಕಿಂತ ಮಿಗಿಲಾಗಿ ಗೌರವದ ಬದುಕು.

 

ಇನ್ನೊಂದೆಡೆ ವಿಧವೆಯರಿಗೆ ದಕ್ಕಲೇಬೇಕಾದ ಆಸ್ತಿ, ಕನಿಷ್ಠ ಆರ್ಥಿಕ ಭದ್ರತೆ, ಬಡವ ಮತ್ತು ವಯಸ್ಕರಾದವರಿಗೆ ಮಾಸಾಶನ, ಪ್ರತ್ಯೇಕ ರೇಷನ್ ಕಾರ್ಡು, ಆಶ್ರಯ ಮನೆ, ವೃದ್ಧಾಶ್ರಮ, ಒಂದಿಷ್ಟು ಲಾಲನೆ ಪಾಲನೆ.

 

ಭಾರತದ ತುಂಬೆಲ್ಲಾ ವಯೋವೃದ್ಧ ವಿಧವೆಯರು ಚಿಕ್ಕ ಆಸರೆ, ಸಾಂತ್ವನ, ಭರವಸೆ ಇಲ್ಲದೆ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.  ಚಿಕ್ಕ ಹರೆಯದ ವಿಧವೆಯರಂತೂ ಉಕ್ಕಿ ಬಂದ ಬಿಕ್ಕಳಿಕೆ ತಾಳಲಾರದೆ ಒಳಗೊಳಗೆ ಗುಕ್ಕುತ್ತಿದ್ದಾರೆ.  ಅಂಥವರ ಬಾಳಿನಲ್ಲಿ ಬೆಳಕು ತರಬೇಕಾದ ಸಮಾಜ ನಮ್ಮದಾದೀತೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.