ವೈನತೇಯ ಸ್ಟೀವ್‌!

7

ವೈನತೇಯ ಸ್ಟೀವ್‌!

Published:
Updated:

‘ವರ್ಷದಲ್ಲಿ ಆರು ತಿಂಗಳು ಹೊರಗೆ ತಿರುಗುತ್ತಿದ್ದ ನಾನು ಭಾರತಕ್ಕೆ ಬರಲು ಇಷ್ಟು ಕಾಲ ತೆಗೆದುಕೊಂಡಿದ್ದಾದರೂ ಏಕೆ ಎಂದು ಇಂದಿಗೂ ಅರ್ಥವಾಗುತ್ತಿಲ್ಲ. ಇಷ್ಟು ಸುಂದರ ದೇಶ, ಊರಿಂದ ಊರಿಗೆ ಬದಲಾಗುವ ಭಾಷೆ, ಊಟ, ಉಡುಪು ಇತ್ಯಾದಿ... ಮನಮೋಹಕ. ಇಂಥ ವೈವಿಧ್ಯಮಯ ದೇಶಕ್ಕೆ ಬರಲು ತಡವಾಗಿದ್ದಕ್ಕೆ ವಿಷಾದವಿದೆ’ ಎಂದವರು ಆಸ್ಟ್ರೇಲಿಯಾದ ಜೇಕಬ್‌ ಕ್ರೀಕ್‌ ವೈನ್‌ನ ಜಾಗತಿಕ ಪ್ರಚಾರ ರಾಯಭಾರಿ ಸ್ಟೀವ್‌ ಮೆಕಿ್ಕಫ್‌.ಕೋರಮಂಗಲದಲ್ಲಿ ಆರಂಭವಾದ ಸಮ್‌ಥಿಂಗ್ಸ್‌ ಕುಕ್ಕಿಂಗ್‌ ಎಂಬ ಅಡುಗೆ ಸ್ಟುಡಿಯೋಗೆ ಭೇಟಿ ನೀಡಿದ್ದ ಸ್ಟೀವ್‌, ವೈನ್ ಬೆರೆಸಿ ರುಚಿಕಟ್ಟಾದ ಅಡುಗೆ ತಯಾರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ನೀಡಲು ಬಂದಿದ್ದರು. ಭಾರತಕ್ಕೆ ಮೊದಲ ಬಾರಿ ಭೇಟಿಯಾದ್ದರಿಂದ ಬೆಂಗಳೂರಿನ ಕುರಿತು ಕೇಳಿದ್ದ ಜೇಕಬ್‌ಗೆ ಬೆಂಗಳೂರು ಸಾಕಷ್ಟು ಕುತೂಹಲ ಹುಟ್ಟಿಸಿದೆಯಂತೆ. ನಗರದಲ್ಲಿ ಅವರಿದ್ದ ಒಂದು ವಾರ ಇಲ್ಲಿನ ಪುಟ್ಟ ಗಲ್ಲಿಗಳು, ದೊಡ್ಡ ಹೋಟೆಲ್‌ಗಳು, ಬಗೆಬಗೆಯ ಜನರು ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಹಾಗೆಯೇ ತಮ್ಮ ಅನುಭವಗಳನ್ನು ‘ಮೆಟ್ರೊ’ದೊಂದಿಗೂ ಹಂಚಿಕೊಂಡಿದ್ದಾರೆ.‘ಭಾರತದ ನೆಲದ ಮೇಲೆ ಕಾಲಿಟ್ಟಾಗ ಬೆಳಗಿನ ಜಾವ ಆರು ಗಂಟೆ. ಜೆಟ್‌ಲ್ಯಾಗ್‌ ಎಂದು ವಿಶ್ರಾಂತಿ ಪಡೆಯದೆ ನೇರವಾಗಿ ಆಗ್ರಾದ ತಾಜ್‌ ಮಹಲ್‌ ನೋಡಲು ತೆರಳಿದೆ. ಅದೊಂದು ಸುಂದರ ಸ್ಮಾರಕ. ಅಲ್ಲಿಂದ ಹೊರಟು ಸೀದಾ ನಾನು ಬಂದದ್ದು ಬೆಂಗಳೂರಿಗೆ. ಇಲ್ಲಿನ ಹವೆ, ವಾತಾವರಣ, ಮಳೆ, ಊಟ ಎಲ್ಲವೂ ಹಿಡಿಸಿತು. ಕೆಲವು ಹೋಟೆಲ್‌ಗಳಿಗೆ ತೆರಳಿ ವೈನ್‌ ಕುರಿತು ಒಂದಷ್ಟು ಹರಟಿದೆ. ಆಗ ನನಗೆ ಬೆಂಗಳೂರಿಗರು ಪ್ರಯೋಗಶೀಲರು ಎಂಬುದು ಸ್ಪಷ್ಟವಾಯಿತು. ಹೊಸತನ್ನು ಕಲಿಯಲು ಅವರೆಲ್ಲಾ ಸದಾ ಉತ್ಸುಕರು ಎಂದೆನಿಸಿತು’ ಎಂದರು ಸ್ಟೀವ್‌.ಭಾರತೀಯ ಅಡುಗೆಯಲ್ಲಿ ವೈನ್‌ಗಳ ಬಳಕೆ ಕುರಿತು ಕೇಳಿದ್ದಕ್ಕೆ, ‘ಇಲ್ಲಿನ ಬಿರಿಯಾನಿ, ಬಟರ್‌ ಚಿಕನ್‌, ಚಿಕನ್‌ ಮಸಾಲಾ ಸೇರಿದಂತೆ ಎಲ್ಲಾ ರೀತಿಯ ಭಾರತೀಯ ಖಾದ್ಯಗಳಿಗೂ ವೈನ್‌ ಬಳಸಿದಲ್ಲಿ ಅದರ ರುಚಿಯೇ ಬದಲಾಗುತ್ತದೆ. ಆಲ್ಕೋಹಾಲ್‌ ಹಾಗೂ ದ್ರಾಕ್ಷಿರಸ ಬೆರೆತಲ್ಲಿ ಯಾವುದೇ ಖಾದ್ಯದ ಸ್ವಾದ, ರುಚಿ ಇಮ್ಮಡಿಯಾಗುತ್ತದೆ ಎನ್ನುವುದು ನನ್ನ ಸ್ವಂತ ಅನುಭವ’ ಎಂದು ಸ್ಟೀವ್‌ ಪ್ರತಿಕ್ರಿಯಿಸಿದರು.ವಿಟಿಕಲ್ಚರ್‌ ಹಾಗೂ ವೈನ್‌ಮೇಕಿಂಗ್ ಕುರಿತು ಪದವಿ ಪಡೆಯಲು ಚಾರ್ಲ್ಸ್‌ ಸ್ಟಾರ್ಟ್‌ ವಿಶ್ವವಿದ್ಯಾಲಯಕ್ಕೆ ದಾಖಲಾದಾಗ ಪೋಷಕರಿಂದ ದೂರ ಇರಬೇಕಾದ ಸಂದರ್ಭ ಎದುರಾದಾಗ ಜೇಕಬ್‌ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಆರಂಭಿಸಿದರಂತೆ. ಅಡುಗೆ ಮಾಡುವುದನ್ನು ಸಂಭ್ರಮಿಸುತ್ತಿದ್ದ ಅವರು ಅವುಗಳಲ್ಲಿ ಬಗೆಬಗೆಯ ಪ್ರಯೋಗಗಳನ್ನು ಮಾಡಲು ಆರಂಭಿಸಿದ್ದೇ ಇಂದು ಈ ಸ್ಥಾನಕ್ಕೇರಲು ಸಹಕಾರಿಯಾಯಿತು ಎಂದು ಸ್ವತಃ ಜೇಕಬ್‌ ತಿಳಿಸಿದರು.

‘ಆಸ್ಟ್ರೇಲಿಯಾದಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಒಟ್ಟಿಗೆ ಅಡುಗೆ ಮಾಡುವ ಸಂಪ್ರದಾಯವಿದೆ. ಮನೆಯೊಡತಿ ಅಡುಗೆ ಆರಂಭಿಸಿದರೆ ಪತಿ, ಮಕ್ಕಳು ಆಕೆಗೆ ಸಹಕರಿಸುತ್ತಾರೆ. ಹೀಗಾಗಿ ಬಾಲ್ಯದಿಂದಲೇ ನನಗೆ ಅಡುಗೆ ಕುರಿತು ಜ್ಞಾನ ಸಿಕ್ಕಿದ್ದರಿಂದಲೇ ನಾನು ಲೀಲಾಜಾಲವಾಗಿ ಅಡುಗೆ ಕಲಿತೆ’ ಎಂದೆನ್ನುತ್ತಾರೆ ಸ್ಟೀವ್‌ ಮೆಕ್ಕಿಫ್‌.ಸಮುದ್ರ ಖಾದ್ಯಗಳು, ಕುರಿ, ದನ, ಹಂದಿ ಹಾಗೂ ಕೋಳಿ ಮಾಂಸದ ಖಾದ್ಯಗಳನ್ನು ಬಹುವಾಗಿ ಇಷ್ಟಪಡುವ ಆಸ್ಟ್ರೇಲಿಯನ್ನರ ತಿನಿಸುಗಳ ಆಯ್ಕೆಯಲ್ಲಿ ಭಾರತದ ಬಹಳಷ್ಟು ಖಾದ್ಯಗಳು ಸೇರಿಕೊಂಡಿವೆ. ಹೀಗಾಗಿಯೇ ಸಿಡ್ನಿ, ಮೆಲ್ಬರ್ನ್ ನಗರಗಳಲ್ಲಿ 20ಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳಿವೆ. ಇಲ್ಲಿಯೂ ವೈನ್‌ ಹೀರುವ ಸಂಸ್ಕೃತಿ ಇದೆ ಎಂದು ತಿಳಿದದ್ದು ಬಹಳ ಸಂತೋಷವಾಯಿತು. ಯುವಜನತೆಯಲ್ಲಿ ವೈನ್‌ ಕುರಿತು ಆಸಕ್ತಿ ಇರುವುದು ಆಶಾದಾಯಕ’ ಎಂದರು ಅವರು.ವೈನ್‌ ಮೇಲಿನ ಸಂಶೋಧನೆ, ಅಡುಗೆ ಹೊರತುಪಡಿಸಿ ಜೇಕಬ್‌ಗೆ ಇಷ್ಟವಾಗುವುದು ಕ್ರಿಕೆಟ್‌ ಹಾಗೂ ರಗ್ಬಿ ಕ್ರೀಡೆಗಳು. ವಿಶ್ವವಿದ್ಯಾಲಯದ ತಂಡಕ್ಕೆ ಆಡಿದ ದಾಖಲೆ ಇರುವ ಜೇಕಬ್‌ಗೆ ಸ್ವಿಂಗ್‌ ಬೌಲಿಂಗ್‌ ಬಲು ಇಷ್ಟವಂತೆ. ಆರು ಅಡಿಗೂ ಹೆಚ್ಚು ಎತ್ತರವಿರುವ ಜೇಕಬ್‌ ಹೆಸರಿನಲ್ಲಿ ಈಗಾಗಲೇ ಹಲವು ಅರ್ಧ ಶತಕಗಳು ದಾಖಲಾಗಿವೆಯಂತೆ. ಅದರಂತೆಯೇ ವಾರಾಂತ್ಯದಲ್ಲಿ ಎರಡು ಕಿಲೋ ಮೀಟರ್‌ಗಳಷ್ಟು ಈಜುವುದು, ದೂರ ಓಡುವುದರ ಮೂಲಕ ದೇಹ ಫಿಟ್‌ ಆಗಿರುವಂತೆ ನೋಡಿಕೊಂಡಿದ್ದಾರೆ ಸ್ಟೀವ್‌.‘ಭಾರತಕ್ಕೆ ಕಾಲಿಟ್ಟ ಮೊದಲ ದಿನದಿಂದಲೇ ಇಲ್ಲಿನ ಘಟನೆ, ದೃಶ್ಯ, ಸ್ಥಳಗಳ ಚಿತ್ರಗಳನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗಂತೂ ಇಲ್ಲಿ ಕಳೆಯುತ್ತಿರುವ ಪ್ರತಿಯೊಂದು ಗಳಿಗೆಯೂ ಹಿತಾನುಭವ ನೀಡಿದೆ. ಭಾರತಕ್ಕೆ ಮತ್ತೆ ಮತ್ತೆ ಭೇಟಿ ನೀಡಬೇಕು. ಇಲ್ಲಿ ನೋಡಬೇಕಾದ್ದು ಬಹಳಷ್ಟಿದೆ’ ಎಂದು ಮಾತು ಮುಗಿಸಿದರು.-

ಒಳ್ಳೆಯ ವೈನ್‌ ಎಂದರೇನು?

ಇದನ್ನು ಹೇಳುವುದು ಕಷ್ಟ. ಏಕೆಂದರೆ ಪ್ರತಿಯೊಬ್ಬರ ರುಚಿ ಮೊಗ್ಗು ಒಂದೊಂದು ರೀತಿಯದ್ದಾಗಿರುವುದರಿಂದ ಒಬ್ಬೊಬ್ಬರಿಗೆ ಒಂದೊಂದು ಬಗೆಯ ವೈನ್‌ ರುಚಿಸಬಹುದು. ಆದರೂ ಇದನ್ನು ರಮ್‌ ಅಥವಾ ತಂಪು ಪಾನೀಯದೊಂದಿಗೆ ಹೋಲಿಸಲಾಗದು. ಒಂದೇ ಮನೆಯಲ್ಲಿ ಎರಡು ತಲೆಮಾರಿನಷ್ಟು ಹಿಂದಿನವರಿಂದ ಹಿಡಿದು ಇಂದಿನ ಯುವಪೀಳಿಗೆಯವರೆಗೂ ಇದರ ಸವಿ ಕಂಡಿದ್ದಾರೆ.

ಹೀಗಾಗಿ ವೈನ್‌ ನಾವು ಇರುವ ಪ್ರದೇಶದ ಮಣ್ಣು, ಅಲ್ಲಿನ ಹವಾಗುಣ, ಅದು ಎಷ್ಟು ಹಳೆಯದು ಎಂಬುದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವರಿಗೆ ಸಿಹಿ, ಇನ್ನು ಕೆಲವರಿಗೆ ಒಗರು, ಮತ್ತೂ ಕೆಲವರಿಗೆ ಗಡಸು ರುಚಿ ಇಷ್ಟ.ವೈನ್‌ ಬಳಸಲು ಸೂಕ್ತ ಸಮಯ ಯಾವುದು?

ಭಾರತದಲ್ಲಿ ವೈನ್‌ಗಳನ್ನು ತಯಾರಾದ ಕೆಲವೇ ದಿನಗಳಲ್ಲಿ ಬಳಸುವುದು ಸೂಕ್ತ. ಬಾಟಲಿಗೆ ತುಂಬಿದ ಮೊದಲ ಎರಡು ವರ್ಷಗಳ ಒಳಗೆ ಬಳಸಬೇಕು. ಏಕೆಂದರೆ ಬಾಟಲಿಯ ಮುಚ್ಚಳ ತೆರೆದ ತಕ್ಷಣ ಇದರ ರುಚಿ ಉತ್ತಮವಾಗಿರುತ್ತದೆ. ನಂತರ ಹಂತ ಹಂತವಾಗಿ ಕಡಿಮೆಯಾಗಲಿದೆ. ಹೀಗಾಗಿ ಜೇಕಬ್‌ ಕ್ರೀಕ್‌ ಕಂಪೆನಿಯು 187 ಎಂಎಲ್‌ ಬಾಟಲಿಯಲ್ಲಿ ವೈನ್‌ ಪರಿಚಯಿಸುವತ್ತ ಚಿಂತಿಸುತ್ತಿದೆ. ಇದು ಒಂದು ಗ್ಲಾಸ್‌ಗಿಂತ ಕೊಂಚ ಹೆಚ್ಚು ಅಷ್ಟೆ.ಕುರಿ ಮಾಂಸದೊಂದಿಗೆ ಕೆಂಪು, ಕೋಳಿಯೊಂದಿಗೆ ಬಿಳಿ ವೈನ್‌ ಹೀರಬೇಕೆ?

ಹಾಗೇನೂ ಇಲ್ಲ. ಏಕೆಂದರೆ ಭಾರತೀಯ ಖಾದ್ಯಗಳು ಹೆಚ್ಚು ಮಸಾಲೆಯುಕ್ತವಾದ್ದರಿಂದ ಅವು ಆಯಾ ಖಾದ್ಯಗಳಿಗೆ ಬಳಸಿದ ಮಸಾಲೆಯನ್ನು ಅವಲಂಬಿಸಿರುತ್ತದೆ. ಚಿಕನ್‌ ಟಿಕ್ಕಾ ಮಲೈ ಆಗಿದ್ದಲ್ಲಿ ಬಿಳಿ ವೈನ್‌, ಕೆಂಪು ಮೆಣಸಿನ ಖಾರದ ಪುಡಿ ಹಾಕಿದ್ದಲ್ಲಿ ಕೆಂಪು ವೈನ್‌ ಹೀರಬಹುದು.ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ವೈನ್‌ ಯಾವುದು?

ಜೇಕಬ್‌ ಕ್ರೀಕ್‌ ಉತ್ಪನ್ನವನ್ನು ಗಮನಿಸಿದಲ್ಲಿ ಶೇ 70ರಷ್ಟು ಭಾರತೀಯರು ಕೆಂಪು ವೈನ್‌ ಅಪೇಕ್ಷಿಸುತ್ತಾರೆ. ಅವುಗಳಲ್ಲಿ ಶಿರಾಜ್‌ ಬಹು ಬೇಡಿಕೆಯ ವೈನ್‌. ಭಾರತೀಯ ಖಾದ್ಯಗಳ ಜತೆ ಇದು ಹದವಾಗಿ ಹೊಂದುತ್ತದೆ. ಆಸ್ಟ್ರೇಲಿಯನ್ನರ ಮೆಚ್ಚಿನ ವೈನ್

ಕೂಡ ಇದೇ.

–- ಇ.ಎಸ್‌.ಸುಧೀಂದ್ರ ಪ್ರಸಾದ್‌.

ಚಿತ್ರ: ಎಸ್.ಕೆ. ದಿನೇಶ್.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry