ಮಂಗಳವಾರ, ಆಗಸ್ಟ್ 3, 2021
23 °C

ವೈನ್ ಟೂರಿಸಂಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ವೈನ್’ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಚನ್ನಪಟ್ಟಣ ಬಳಿಯ ‘ಹೆರಿಟೇಜ್ ಗ್ರೇಪ್ ವೈನರಿ ಕಂಪೆನಿ’ ಕಲ್ಪಿಸಿದೆ.‘ಹೆರಿಟೇಜ್ ವೈನ್ ಟೂರಿಸಂ’ ಹೆಸರಿನಲ್ಲಿ ಈ ಕಂಪೆನಿಯು ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಿದೆ. ಅಷ್ಟೇ ಅಲ್ಲ ಉಚಿತವಾಗಿ ‘ವೈನ್’ ರುಚಿ ಸವಿಯುವ ಅವಕಾಶವನ್ನೂ ದಯಪಾಲಿಸಿದೆ. ಅದೂ ಒಂದಲ್ಲ, ಎರಡಲ್ಲ, ಒಟ್ಟು ಏಳು ಬಗೆಯ ವೈನ್‌ಗಳ ‘ಸ್ಯಾಂಪಲ್’ ನೋಡಲು ಕಂಪೆನಿ ಅವಕಾಶ ಒದಗಿಸಿದೆ.ಚನ್ನಪಟ್ಟಣ ತಾಲ್ಲೂಕಿನ ಗಂಗೇನಹಳ್ಳಿಯಲ್ಲಿ ಇರುವ ಹೆರಿಟೇಜ್ ಗ್ರೇಪ್ ವೈನರಿ ಕಂಪೆನಿಯ ಆವರಣದಲ್ಲಿ ಕಂಪೆನಿಯ ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಾಮ ರೆಡ್ಡಿ ‘ಹೆರಿಟೇಜ್ ವೈನ್ ಟೂರಿಸಂ’ಗೆ ಮಂಗಳವಾರ ಚಾಲನೆ ನೀಡಿದರು.‘ವೈನ್’ ಮದ್ಯವಲ್ಲ: ನಂತರ ಮಾತನಾಡಿದ ವೆಂಕಟರಾಮ ರೆಡ್ಡಿ ಅವರು, ‘ವೈನ್ ಅನ್ನು ಮದ್ಯದ ಜತೆ ತಳಕು ಹಾಕಿಕೊಂಡು ಬರಲಾಗುತ್ತಿದೆ. ಆದರೆ ವೈನ್ ಎಂಬುದು ಯಾವುದೇ ಮದ್ಯಕ್ಕೂ ಸಮಾನವಲ್ಲ. ಈ ಪೇಯ ಆರೋಗ್ಯ ವೃದ್ಧಿಗೆ ಹೇಳಿ ಮಾಡಿಸಿದಂತಹದ್ದು. ಆದರೆ ಈ ಬಗ್ಗೆ ನಮ್ಮ ದೇಶದಲ್ಲಿ ಜನ ಸಾಮಾನ್ಯರಲ್ಲಿ ಅರಿವಿನ ಕೊರತೆ ಇದೆ.ಅರಿವು ಮೂಡಿಸುವ ಪ್ರಯತ್ನಗಳೂ ನಡೆದಿಲ್ಲ. ವೈನ್ ಬಗ್ಗೆ ಅರಿವು ಮೂಡಿಸುವುದರ ಜತೆಗೆ ವೈನ್ ತಯಾರಿಕೆ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಒಂದು ಪ್ರಯತ್ನವೇ ಈ ‘ವೈನ್ ಟೂರಿಸಂ’ ಆಗಿದೆ ಎಂದರು.ಮೊದಲ ಎರಡು ತಿಂಗಳು ಸಾರ್ವಜನಿಕರು ಈ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು.ಅಲ್ಲದೆ ದ್ರಾಕ್ಷಿ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಸವಲತ್ತುಗಳು ಹಾಗೂ ದ್ರಾಕ್ಷಿ ಬೆಳೆಯುವುದರಿಂದ ದೊರೆಯುವ ಇತರ ಲಾಭದ ಬಗ್ಗೆ ಕೂಡ ಇಲ್ಲಿ ಮಾಹಿತಿ ನೀಡಲಾಗುತ್ತದೆ. ವೈನ್ ತಯಾರಿಯ ವಿವಿಧ ಹಂತಗಳ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.ವಾರ್ಷಿಕ 10 ಕೋಟಿ ವಹಿವಾಟು: ರಾಜ್ಯದ ವೈನ್ ಮಾರುಕಟ್ಟೆಗೆ 2004ರಲ್ಲಿ ಪರಿಚಯವಾದ ಹೆರಿಟೆಜ್ ವೈನರಿ ಪ್ರತಿ ವರ್ಷ ತನ್ನ ವ್ಯಾಪ್ತಿ ಹಾಗೂ ವಿಸ್ತಾರವನ್ನು ಹೆಚ್ಚಿಸಿಕೊಂಡು ಸಾಗಿದ್ದು, ಇದೀಗ ರಾಜ್ಯದ ಪ್ರಮುಖ ವೈನ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. 2010-11ನೇ ಸಾಲಿನಲ್ಲಿ 12 ಲಕ್ಷ ಬಾಟಲ್‌ಗಳನ್ನು ಮಾರಾಟ ಮಾಡಲಾಗಿದ್ದು, ಈ ಮೂಲಕ 10 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯದ ಎಲ್ಲ 53 ಕೆಎಸ್‌ಬಿಸಿಎಲ್ ಡಿಪೊಗಳಲ್ಲಿ ವಹಿವಾಟು ನಡೆಸಲಾಗಿದೆ. ಬೆಂಗಳೂರಿನ ವೈನ್ ಮಾರುಕಟ್ಟೆಯಲ್ಲಿ ಶೇ 75 ಹಾಗೂ ರಾಜ್ಯದ ಮಾರುಕಟ್ಟೆಯಲ್ಲಿ ಶೇ 50ರಷ್ಟನ್ನು ಹೆರಿಟೇಜ್ ಆಕ್ರಮಿಸಿಕೊಂಡಿದೆ ಎಂದು ವಿವರಿಸಿದರು. ಈ ಆರ್ಥಿಕ ವರ್ಷದಲ್ಲಿ ಕೇರಳ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಚತ್ತೀಸ್‌ಗಡ, ನವ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ತನ್ನ ಉತ್ಪನ್ನ ಪರಿಚಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಶ್ರೀಲಂಕಾ, ಮಲೇಷ್ಯಾ, ಥೈಲ್ಯಾಂಡ್‌ಗಳಿಗೂ ರಫ್ತು ಮಾಡುವ ಉದ್ದೇಶ ಇದೆ ಎಂದರು.ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ: ಚನ್ನಪಟ್ಟಣದಲ್ಲಿ ನೆಲೆಯೂರಿರುವ ಹೆರಿಟೇಜ್ ವೈನರಿ ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಬೆಳೆಯುವ ದ್ರಾಕ್ಷಿಯನ್ನು ಉತ್ತಮ ಬೆಲೆಗೆ ಖರೀದಿಸಿ ರೈತರ ಹಿತ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.

 

ಅಲ್ಲದೆ ನೀಲಿ ದ್ರಾಕ್ಷಿ ಬೆಳಯುವಂತೆ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕಂಪೆನಿ ಹಮ್ಮಿಕೊಂಡಿದೆ ಎಂದು ಹೇಳಿದರು.ಗಂಗೇನದೊಡ್ಡಿಯ 11 ಎಕರೆ ಜಮೀನಿನಲ್ಲಿ ತಲೆಯೆತ್ತಿರುವ ಹೆರಿಟೇಜ್ ವೈನರಿ ಕಂಪೆನಿಯು ಎರಡು ಎಕರೆ ಪ್ರದೇಶದಲ್ಲಿ ಕಾರ್ಖಾನೆ ನಿರ್ಮಿಸಿದೆ. ಐದು ಎಕರೆ ಪ್ರದೇಶದಲ್ಲಿ ಫ್ರೆಂಚ್ ತಳಿ ದ್ರಾಕ್ಷಿ ಬೆಳೆಯುತ್ತಿದೆ.

 

ಇನ್ನೂ 4 ಎಕರೆಯಲ್ಲಿ ನೀಲಿ ದ್ರಾಕ್ಷಿ ಬೆಳೆಯಲಿದೆ. ದಿನಕ್ಕೆ ಕಂಪೆನಿಯಲ್ಲಿ 450 ಕೇಸ್ ವೈನ್ ಉತ್ಪಾದಿಸಲಾಗುತ್ತಿದೆ. ಕಂಪೆನಿಯಲ್ಲಿ ಒಟ್ಟು 60 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 45 ಮಹಿಳೆಯರು, 15 ಪುರುಷರಾಗಿದ್ದಾರೆ. ಎಲ್ಲರೂ ಚನ್ನಪಟ್ಟಣ ತಾಲ್ಲೂಕಿನವರಾಗಿದ್ದಾರೆ ಎಂದು ವಿವರಿಸಿದರು.ಬರಲಿವೆ ಆರು ಬಗೆಯ ವೈನ್‌ಗಳು:  ಕಂಪೆನಿಯಲ್ಲಿ 2011-12ನೇ ಸಾಲಿನಲ್ಲಿ 6 ಬಗೆಯ ವೈನ್ ಅನ್ನು ಪರಿಚಯಿಸಲಿದೆ. ಅವೆಂದರೆ- ಹೆರಿಟೇಜ್ ಸ್ಟಾರ್ಕಲಿಂಗ್ ರೆಡ್‌ವೈನ್, ಹೆರಿಟೇಜ್ ಷಿರಾಜ್ ರೆಡ್ ವೈನ್, ಹೆರಿಟೇಜ್ ಕ್ಯಾರ್ಬೇನೆಟ್ ರೆಡ್ ವೈನ್, ಹೆರಿಟೇಜ್ ಎಸ್ಟೇಟ್ ಷಿರಾಜ್ ರೆಡ್‌ವೈನ್, ಹೆರಿಟೇಜ್ ಎಸ್ಟೇಟ್ ಕ್ಯಾರ್ಬೇನೆಟ್ ರೆಡ್‌ವೈನ್, ಹೆರಿಟೇಜ್ ಚನ್ನಿನ್‌ಬ್ಲಾಕ್ ವೈಟ್ವೈನ್ ಎಂದು ಅವರು ಮಾಹಿತಿ ನೀಡಿದರು.ಕಂಪೆನಿಯ ಇಂಡಿಯನ್ ವೈನ್ ಮೇಕರ್ ಜಿ.ವಿ.ಮೋಹನ್ ರಾವ್ ಮಾತನಾಡಿ  ವೈನ್ ತಯಾರಿಕೆ ಸಂಪೂರ್ಣ ಯಾಂತ್ರೀಕೃತವಾಗಿ ಕಂಪೆನಿಯಲ್ಲಿ ನಡೆಯುತ್ತಿದೆ. ಕೇವಲ ದ್ರಾಕ್ಷಿ ರಸದಿಂದ ವೈನ್ ತಯಾರಿಸಲಾಗುತ್ತಿದ್ದು ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.ವೈನ್ ಆರೋಗ್ಯಕ್ಕೆ ಉಪಯುಕ್ತವಂತೆ!ವೈನ್ ಸೇವನೆಯಿಂದ ಜೀರ್ಣಕಾರಕ ರಸಗಳ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ ಮತ್ತು ಹಸಿವು ಹೆಚ್ಚುತ್ತದೆ. ರಕ್ತ ಸಂಚಾರ ಪ್ರಕ್ರಿಯೆಯಲ್ಲಿ ಸುಧಾರಣೆ ಆಗುತ್ತದೆ. ಥೈರಾಯ್ಡಿ ಕ್ಯಾನ್ಸರ್, ಗಡ್ಡೆಗಳು, ವೃದ್ಧಾಪ್ಯ, ಪ್ಯಾಂಕ್ರಿಯಾಟಿಕ್, ಗ್ಯಾಸ್ಟ್ರಿಕ್ ಮೊದಲಾದ ಕಾಯಿಲೆಗಳಿಂದ ಮುಕ್ತರಾಗಬಹುದು.ವೈನ್‌ನಲ್ಲಿ ಇರುವ ಅಂತರ್ಗತ ಕ್ಯಾಲ್ಸಿಯಂನಿಂದ ಮೂಳೆಗಳು ಗಟ್ಟಿಯಾಗುತ್ತದೆ. ಇದರಿಂದ ಹೃದಯ ತೊಂದರೆ, ರಕ್ತದೊತ್ತಡದಂತಹ ರೋಗಗಳು ಕಡಿಮೆಯಾಗುತ್ತವೆ ಎಂದು ವಿವಿಧ ಸಂಶೋಧನೆಗಳು ಸಾಬೀತು ಪಡಿಸಿವೆ ಎಂದು ಹೆರಿಟೇಜ್ ಗ್ರೇಪ್ ವೈನರಿ ಕಂಪೆನಿಯ ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಾಮ ರೆಡ್ಡಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.