ವೈನ್ ನೀತಿ ಸರಳಗೊಳಿಸಲು ಮನವಿ

7

ವೈನ್ ನೀತಿ ಸರಳಗೊಳಿಸಲು ಮನವಿ

Published:
Updated:

ಬೆಂಗಳೂರು: ರಾಜ್ಯದ ವೈನ್ ನೀತಿಯನ್ನು ಸರಳಗೊಳಿಸುವ ಮೂಲಕ ವೈನ್ ಮಾರಾಟಕ್ಕೆ ಉತ್ತೇಜನ ನೀಡ­ಬೇಕೆಂದು ಕರ್ನಾಟಕ ವೈನ್ ಉತ್ಪಾದ­ಕರ ಸಂಘದ ಸದಸ್ಯರು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ  ಗುರುವಾರ ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಪಿ. ಎಲ್. ವೆಂಕಟರಾಮ ರೆಡ್ಡಿ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

‘ದೇಶದಾದ್ಯಂತ ವೈನ್ ಮಾರಾಟಕ್ಕೆ ಏಕರೂಪದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲು ಕೇಂದ್ರದೊಡನೆ ರಾಜ್ಯ ಸರ್ಕಾರ ಮಾತುಕತೆ ನಡೆಸಬೇಕು. ವೈನ್ ಲೇಬಲ್‌ಗಳ ಮರು ಪರಿಷ್ಕರಣೆಗೆ ಸಂಬಂಧಿ­ಸಿದ ನಿಯಮಗಳನ್ನು ಸಡಿಲಗೊಳಿಸಬೇಕು. ಈ ಅಧಿಕಾರವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಅಥವಾ ಅಬಕಾರಿ ಇನ್‌ಸ್ಪೆಕ್ಟರ್‌ಗಳಿಗೆ ನೀಡಬೇಕು’ ಎಂದು ನಿಯೋಗ ಒತ್ತಾಯಿಸಿತು.‘ಬೇರೆ ರಾಜ್ಯಗಳಿಗೆ ವೈನ್ ಮಾರಾಟ ಮಾಡಲು ಬೇಕಾಗಿರುವ ಅನುಮತಿ ಪತ್ರಗಳನ್ನು ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು. ಅಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ಪಡೆಯ­ಬೇಕಾಗಿರುವ ಲೈಸೆನ್ಸ್ ಅವಧಿಯನ್ನು ಒಂದು ವರ್ಷಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿತು.‘ರಾಜ್ಯ ವೈನ್ ನೀತಿ 2007 ರ ಅನ್ವಯ ವೈನ್ ಮಂಡಳಿಯನ್ನು ಪುನರ್ ರಚಿಸಬೇಕು. ಈ ಮೂಲಕ ರಾಜ್ಯದ ದ್ರಾಕ್ಷಿ ಬೆಳೆಗಾರರು ಹಾಗೂ ವೈನ್ ಉತ್ಪಾದಕರಿಗೆ ಮಂಡಳಿಯಲ್ಲಿ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿತು.‘ರಾಜ್ಯ ಅಬಕಾರಿ ಡಿಪೋಗಳಲ್ಲಿ ವೈನ್ ಸಂಗ್ರಹಕ್ಕೆ ಅಗತ್ಯವಾಗಿರುವ ಹವಾ­ನಿಯಂತ್ರಿತ ವ್ಯವಸ್ಥೆಯನ್ನು ಕಲ್ಪಿಸಬೇಕು. ರಾಜ್ಯದ ವೈನ್ ಮಂಡಳಿಯ ಮೂಲಕ ವೈನ್ ಟೂರಿಸಂಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಮಾಡಬೇಕು. ರಾಜ್ಯ ಪೊಲೀಸರು ಮತ್ತು ಸಂಚಾರಿ ಪೊಲೀಸರು ತಮ್ಮ ಗುರುತಿನ ಪತ್ರ ತೋರಿಸಿ ತೆರಿಗೆ ಇಲ್ಲದೆ ತಿಂಗಳಿಗೆ ಒಂದು ಕೇಸ್ ವೈನ್ ಖರೀದಿಸಲು ಅವಕಾಶ ಮಾಡಿಕೊಡಬೇಕು’ ಎಂದು ಮನವಿ­ಯಲ್ಲಿ ಒತ್ತಾಯಿಸಲಾಗಿದೆ.ಸಂಘದ ಉಪಾಧ್ಯಕ್ಷ ಡಾ. ಕೆ ಎಚ್. ಮುಂಬಾ ರೆಡ್ಡಿ, ಕಾರ್ಯದರ್ಶಿ ಕೆ. ಎಚ್ ಕೃಷ್ಣಾ ರೆಡ್ಡಿ ಮತ್ತಿತರರು ನಿಯೋಗದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry