ವೈನ್ ಹಬ್ಬ

7

ವೈನ್ ಹಬ್ಬ

Published:
Updated:

`ಹೌ   ಓಲ್ಡ್ ಈಸ್ ದಿಸ್ ವೈನ್?'- ಇದು, ಕ್ರಿಸ್‌ಮಸ್ ಮಾಸದಲ್ಲಿ ಅತಿ ಹೆಚ್ಚು ಕೇಳಿಬರುವ ಪ್ರಶ್ನೆ. ವೈನ್ ಖರೀದಿಸುವ ಜಾಣ ಗ್ರಾಹಕರು ಹಳೆಯ ವೈನ್‌ಗೇ ಆದ್ಯತೆ ಕೊಡುತ್ತಾರೆ. ಹೀಗಾಗಿ ವೈನ್ ಖರೀದಿಗೂ ಮೊದಲು ಹೀಗಂತ ವಿಚಾರಿಸಿಯೇ ಅದರ ಬೆಲೆಯತ್ತ ಗಮನಹರಿಸುತ್ತಾರೆ.ಹೌದು, ವೈನ್ ಇಲ್ಲದ ಕ್ರಿಸ್‌ಮಸ್ ಊಹೆಗೂ ನಿಲುಕದ್ದು. ಹಬ್ಬಕ್ಕೂ ಮುಂಚಿತವಾಗಿ ಆಪ್ತೇಷ್ಟರ ಮನೆಗಳಿಗೆ ಭೇಟಿ ನೀಡಿ ಉಡುಗೊರೆ ಕೊಡುವವರ ಮೊದಲ ಆದ್ಯತೆಯೇ ವೈನ್. ಕ್ರೈಸ್ತ ಬಂಧುಗಳ ಒಳಮನೆಗಳಲ್ಲಿ ವೈನ್ ತಯಾರಿ ಪ್ರಕ್ರಿಯೆ ಶುರುವಾಗಿ ತಿಂಗಳುಗಳೇ ಕಳೆದಿವೆ. ಈ `ಕಂಟ್ರಿ ವೈನ್‌ಗಳು ಸ್ನೇಹ ಸಂಬಂಧದ ಪ್ರತೀಕಗಳೂ ಹೌದು. ಇದೇ ಕಾರಣಕ್ಕೆ ವೈನ್ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ. 30ರಿಂದ 40 ರಷ್ಟು ಹೆಚ್ಚಳವಾಗುತ್ತಲೇ ಇದೆ.`ಹೆಣ್ಣುಮಕ್ಕಳೂ ಮನೆಮಂದಿಯೊಂದಿಗೆ ಕುಳಿತು ಕುಡಿಯಬಹುದಾದ ಸಾಫ್ಟ್‌ಡ್ರಿಂಕ್ಸ್ ವೈನ್. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಸೇವಿಸಬಹುದಾದ ಪೇಯ ಬಿಯರ್ ಬಿಟ್ಟರೆ ವೈನ್ ಮಾತ್ರ' ಎಂಬುದು ದೊಡ್ಡಕಲ್ಲಸಂದ್ರದ ಅನಿತಾ ಡಿಸೋಜ ವೈನ್ ಬಗ್ಗೆ ಕೊಡುವ ವಿಶ್ಲೇಷಣೆ.`ಊರಲ್ಲಿ (ಮಂಗಳೂರಿನ ಬಜ್ಪೆ) ಆರು ತಿಂಗಳ ಹಿಂದೆಯೇ ವೈನ್ ತಯಾರಿ ಶುರುವಾಗುತ್ತದೆ. ಆದರೆ ಇಲ್ಲಿ ಮನೆಗೆಲಸ ಮಾಡಿಕೊಂಡು ಕಚೇರಿಗೆ ಹೋಗಿಬರೋದೇ ದೊಡ್ಡ ಸವಾಲು. ಹಾಗಾಗಿ ಎರಡು ಡಜನ್ ವೈನ್ ತಂದುಬಿಡುತ್ತೇವೆ. ಕಳೆದ ಭಾನುವಾರ ಮೈಸೂರಿನಲ್ಲಿರುವ ನಮ್ಮ ಅತ್ತೆ ಮಾವನ ಮನೆಗೆ ಹೋಗಿ ವೈನ್ ಕೇಕ್ ಕೊಟ್ಟು ಆಶೀರ್ವಾದ ಪಡೆದು ಬಂದೆವು. ಈ ಭಾನುವಾರ ಇನ್ನಷ್ಟು ಸ್ನೇಹಿತರು ಮತ್ತು ಸಂಬಂಧಿಗಳ ಮನೆಗೆ ಹೋಗುವ ಪ್ಲಾನ್ ಇದೆ' ಎಂದು ವಿವರಿಸುತ್ತಾರೆ ಅನಿತಾ.`ಫ್ಯಾಷನ್ ಡ್ರಿಂಕ್ಸ್ ಮತ್ತು ಫ್ಯಾಮಿಲಿ ಡ್ರಿಂಕ್ಸ್ ಪಟ್ಟಿಯಲ್ಲಿ ವೈನ್ ಯಾವಾಗಲೂ ಅಗ್ರಸ್ಥಾನಿ. ಅದರಲ್ಲೂ ನಮ್ಮ ಮನೆಯಲ್ಲಿ ದ್ರಾಕ್ಷಿಯ ವೈನ್‌ಗೆ ಮೊದಲ ಆದ್ಯತೆ. ಕ್ರಿಸ್‌ಮಸ್ ಹಬ್ಬದ ಬಜೆಟ್‌ನಲ್ಲಿ ದೊಡ್ಡ ಮೊತ್ತ ವೈನ್‌ಗೇ ವಿನಿಯೋಗವಾಗುತ್ತದೆ' ಎನ್ನುತ್ತಾರೆ, ಅನಿತಾ ಪತಿ ರಾಬಿನ್.`ವೈನ್‌ನಲ್ಲಿ ಆಲ್ಕೋಹಾಲ್‌ನಂತೆ ದೀರ್ಘಕಾಲ `ಕಿಕ್' ಉಳಿಯುವುದಿಲ್ಲ. ಹೊಸಬರಿಗೆ, ಕುಡಿದ ತಕ್ಷಣ ಒಮ್ಮೆ ತಲೆ `ಗಿರ್ರ‌್‌...' ಆದಂತನಿಸಿದರೂ ಅದು ತಾತ್ಕಾಲಿಕ. ಆದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ಕೆಲವು ದೇಸಿ ಮತ್ತು ವಿದೇಶಿ ವೈನ್‌ಗಳಲ್ಲೂ ಆಲ್ಕೋಹಾಲ್ ಪ್ರಮಾಣ ಶೇ. 14ರಷ್ಟು ಇರುವುದುಂಟು. ಹೀಗಾಗಿ ಹೊಸಬರು, ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ವೈನ್ ಕುಡಿಯುವಾಗ ಸ್ವಲ್ಪ ಜಾಗ್ರತೆಯಾಗಿರಬೇಕು' ಎಂದು ಸಲಹೆ ನೀಡುತ್ತಾರೆ, ಅನಿತಾ.ವೈನ್ ಮಾರುಕಟ್ಟೆಯ ರೂಪರೇಷೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ದ್ರಾಕ್ಷಿ ಬೆಳೆ ನಿರೀಕ್ಷೆಗೆ ತಕ್ಕಂತೆ ಒದಗದಿರುವುದು, ಲಭ್ಯತೆಯ ಸಮಸ್ಯೆ, ಹೆಚ್ಚಿನ ದರ ಇತ್ಯಾದಿ ಕಾರಣಕ್ಕೆ ನೆಲ್ಲಿಕಾಯಿ, ಅಕ್ಕಿ, ಅಕ್ಕಿ ಹೊಟ್ಟು, ಶುಂಠಿ ಇತ್ಯಾದಿ ಪರ‌್ಯಾಯ ಮೂಲಗಳಿಂದಲೂ ವೈನ್ ತಯಾರಿಸಲಾಗುತ್ತದೆ. ಗುಣಮಟ್ಟ ಮತ್ತು ಬ್ರಾಂಡ್‌ಗೆ ಸರಿಯಾಗಿ ಬೆಲೆಯೂ ನಿಗದಿಯಾಗುತ್ತದೆನ್ನಿ.ಅಂದ ಹಾಗೆ, ದೇಶದಲ್ಲೇ ಅತ್ಯಧಿಕ ವೈನ್ ಮಾರಾಟವಾಗುವ ನಗರಗಳ ಪೈಕಿ ದೆಹಲಿ ಮತ್ತು ಮುಂಬೈ ನಂತರದ ಸ್ಥಾನ ಬೆಂಗಳೂರಿನದು.ಮಡಿಕೇರಿ ಮೂಲದ ಲೀನಾ ಅವರು ವೈನ್ ತಯಾರಿಯಲ್ಲಿ ಎತ್ತಿದ ಕೈ ಅಂತೆ. ಸಂಬಂಧಿಗಳು ಮತ್ತು ಸ್ನೇಹಿತರು ಪ್ರತಿವರ್ಷ ಲೀನಾ ಅವರು ತಯಾರಿಸಿದ ಕಂಟ್ರಿ ವೈನ್‌ಗಾಗಿ ಕಾಯುತ್ತಾರಂತೆ. `ಸಾವಯವ ರೀತಿಯಲ್ಲಿ ಬೆಳೆದ ಹತ್ತಾರು ಬಗೆಯ ಹಣ್ಣುಗಳಿಂದ ಅವರು ಸಾವಿರಾರು ಲೀಟರ್ ವೈನ್ ತಯಾರಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ವರ್ಷಗಟ್ಟಲೆ ಸಂಗ್ರಹಿಸಿಟ್ಟುಕೊಳ್ಳಲೂ ಸಾಧ್ಯ.ಕಡಿಮೆ ಬೆಲೆಯ ವಸ್ತು ಗುಣಮಟ್ಟದ್ದಾಗಿರುವುದಿಲ್ಲ ಎಂಬ ಮಾತು ವೈನ್‌ಗೆ ಅನ್ವಯಿಸುವುದಿಲ್ಲ. ಬೆಲೆ ನೋಡಿ ವೈನ್ ಗುಣಮಟ್ಟ ನಿರ್ಧರಿಸಬೇಡಿ ಎಂಬುದು, `ವೈನ್ ವಿಶ್ಲೇಷಕರು' ಹೇಳುವ ಕಿವಿಮಾತು.ಕಂಟ್ರಿ ವೈನ್‌ಗಳು ಖಾಸಗಿ ಮಾರುಕಟ್ಟೆಗೆ ಸೀಮಿತವಾದರೆ, ದೇಸಿ ಬ್ರಾಂಡ್‌ಗಳ ಬೆಲೆ ರೂ. 400ರಿಂದ 1,000ದವರೆಗೂ ಇರುತ್ತದೆ. ವಿದೇಶಿ ಬ್ರಾಂಡ್‌ಗಳಿಗೂ ಬೆಂಗಳೂರಿನಲ್ಲಿ ಭಾರೀ ಬೇಡಿಕೆಯಿದೆ.

ರಕ್ತದ ಸಂಕೇತ

ಬೈಬಲ್‌ನ `ಲಾಸ್ಟ್ ಚಾಪೆಲ್'ನಲ್ಲಿ, ಯೇಸುಕ್ರಿಸ್ತರು ತಮ್ಮ ಸಾವಿಗೂ ಕೆಲದಿನಗಳ ಹಿಂದೆ ತಮ್ಮ 11 ಮಂದಿ ಆಪ್ತರೊಂದಿಗೆ ಮಾಡಿದ ಸಹಭೋಜನದ ವೇಳೆ, ಒಬ್ಬೊಬ್ಬರಿಗೂ ವೈನ್ ಕೊಟ್ಟು `ಇದು ನನ್ನ ರಕ್ತ. ಇನ್ನು ಮುಂದೆ ನೀವು ಇದನ್ನು ನನ್ನ ರಕ್ತದ ಸಂಕೇತವಾಗಿ ಬಳಸಲು ತಿಳಿಸಿದರು ಎಂದು ಹೇಳಲಾಗಿದೆ. ಅದರನ್ವಯ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಪ್ರತಿಯೊಬ್ಬರಿಗೂ ದಿವ್ಯಪ್ರಸಾದವಾಗಿ ವೈನ್ ಹಂಚಲಾಗುತ್ತದೆ.

ಆರೋಗ್ಯಕ್ಕೂ, ಅಂದಕ್ಕೂ

ವೈನ್ ಎಲ್ಲರ ನೆಚ್ಚಿನ ಪೇಯವಾಗಿರುವುದು ಇದೇ ಕಾರಣಕ್ಕೆ ಎನ್ನುವುದು ಅನುಭವಿಗಳ ಮಾತು. ವೈದ್ಯಲೋಕವೂ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದೆ. ಮಾರುಕಟ್ಟೆಯಲ್ಲಿ ಸಿಗುವ ವೈನ್‌ಗಳು ಯಾವುದೇ ಬ್ರಾಂಡ್‌ನದ್ದಿರಲಿ, ಸಾವಯವ ವೈನ್‌ಗೆ ಸರಿಸಾಟಿಯಲ್ಲ ಎಂಬುದು ಕಂಟ್ರಿ ವೈನ್ ತಯಾರಕರ ಸವಾಲು.ಅದೆಲ್ಲ ಇರಲಿ, ನಿಯಮಿತವಾಗಿ ವೈನ್ ಕುಡಿದರೆ ತೂಕ ಹೆಚ್ಚಾಗುತ್ತದೆ ಎಂಬ ತಗಾದೆ, ಸಪೂರ ಸೂತ್ರಕ್ಕೆ ಶರಣಾಗಿರುವ ಲಲನೆಯರದ್ದು. ಯಾವ ವೈನ್ ಎಷ್ಟು ಕ್ಯಾಲರಿ ಒಳಗೊಂಡಿದೆ ಎಂಬ ವಿವರವನ್ನು ನೋಡಿಯೇ ವೈನ್ ಖರೀದಿಸಿದರಾಯಿತು!

ಮಾಗಿದಷ್ಟೂ ಟೇಸ್ಟು...

ವೈನ್ ಮಾಡೋದೂ ಒಂದು ಕಲೆ. ನಾವು ಕ್ರಿಸ್‌ಮಸ್‌ಗಾಗಿ ಮನೆಯಲ್ಲೇ ವೈನ್ ತಯಾರಿಸುತ್ತೇವೆ. ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ದ್ರಾಕ್ಷಿ ಸೀಸನ್ ಅಲ್ವಾ ಆಗಲೇ ನಮಗೆ ಬೇಕಾದಷ್ಟು ಕಪ್ಪು ದ್ರಾಕ್ಷಿ ಖರೀದಿಸುತ್ತೇವೆ. ಸೀಸನ್‌ನಲ್ಲಿ ದ್ರಾಕ್ಷಿ ಸಿಹಿ ಇರುತ್ತದೆ. ಅದನ್ನು ತಂದು ಚೆನ್ನಾಗಿ ತೊಳೆದು ಮಣ್ಣಿನ ಅಥವಾ ಉಪ್ಪಿನಕಾಯಿಗೆ ಬಳಸುವಂತಹ ದೊಡ್ಡ ಜಾಡಿಯಲ್ಲಿ ಕುದಿಸಿ ಆರಿಸಿದ ನೀರು, ದ್ರಾಕ್ಷಿಯ ಮುಕ್ಕಾಲು ಭಾಗ ಸಕ್ಕರೆ ಹಾಕಬೇಕು. ಈ ಜಾಡಿಗೆ ಕ್ರಿಕೆಟ್ ಚೆಂಡಿನಷ್ಟು ದೊಡ್ಡ ಗಾತ್ರದ ಇಡಿ ಗೋಧಿಯನ್ನು ಕಟ್ಟಿ ಹಾಕಬೇಕು. ಈ ಮಿಶ್ರಣವನ್ನು ನಾಲ್ಕೈದು ದಿನಗಳ ಕಾಲ ಪ್ರತಿನಿತ್ಯ ಮರದ ಸೌಟಿನಿಂದ ಕಲಸಿ ಬೆರೆಸಿ ಮತ್ತೆ ಮುಚ್ಚಿ ಇಡಬೇಕು. ಅಮೇಲೆ ಅದನ್ನು ಚೆನ್ನಾಗಿ ನಾದಿ ತೆಳುವಾದ ಬಟ್ಟೆಯಲ್ಲಿ ಸೋಸಿ ಬಾಟಲಿಯಲ್ಲಿ ಹಾಕಿಟ್ಟರೆ ಸೂಕ್ಷ್ಮವಾದ ತ್ಯಾಜ್ಯಗಳು ಬಾಟಲಿ ತಳದಲ್ಲಿ ನಿಲ್ಲುತ್ತವೆ. ಇದನ್ನು ಮತ್ತೆ ಸೋಸಿ ಇಟ್ಟರೆ ಸುಪೀರಿಯರ್ ವೈನ್ ಸಿದ್ಧವಾದಂತೆ. ನಮ್ಮ ಮನೆಯಲ್ಲಿ ಐದು ಮತ್ತು 10 ವರ್ಷ ಹಳೆಯ ವೈನ್‌ಗಳಿವೆ. ವೈನ್ ಖರೀದಿಸುವವರೂ `ಹೌ ಓಲ್ಡ್ ಈಸ್ ದಿಸ್' ಅಂತ ವಿಚಾರಿಸಿಯೇ ಬೆಲೆ ಪಾವತಿಸೋದು. ಹಳತಾದಷ್ಟೂ ವೈನ್ ರುಚಿ ಹೆಚ್ಚು.

-ಪಾಲ್ ಸಿ. ಐ, ಬಸವೇಶ್ವರನಗರ

ಇದೋ ಕಂಟ್ರಿ ವೈನ್...

ವೈನ್ ಎಂದರೆ ದ್ರಾಕ್ಷಿಯದ್ದೇ ಎಂಬ ಸಿದ್ಧಸೂತ್ರ ಈಗಿಲ್ಲ. ನೆಲ್ಲಿಕಾಯಿ, ಪಪ್ಪಾಯಿ, ಬಾಳೆಹಣ್ಣು, ಪಿಗ್ ಫ್ರೂಟ್, ಫ್ಯಾಷನ್ ಫ್ರೂಟ್, ಕಿತ್ತಳೆ, ದಾಳಿಂಬೆ, ಸಪೋಟ, ಅಕ್ಕಿ, ರಾಗಿ, ವೀಳ್ಯದೆಲೆ, ಭತ್ತ, ಶುಂಠಿ ಹೀಗೆ ಈಗ ಸಾಧ್ಯತೆಗಳು ಹಲವಾರು. ಟಾಕ್ಸಿಕ್ ಅಂಶವಿಲ್ಲದ ಕೆಲವು ಗಿಡಗಳಿಂದಲೂ ವೈನ್ ತಯಾರಿ ಯಶಸ್ವಿಯಾಗಿದೆ.ವೈನ್ ತಯಾರಿ ಪ್ರಕ್ರಿಯೆ ಕನಿಷ್ಠ ಎರಡು ತಿಂಗಳ ಮೊದಲೇ ಶುರು. ಲೀನಾ ಅವರೇ ಹೇಳುವಂತೆ, ಅತ್ಯುತ್ತಮ ವೈನ್ ಬೇಕಿದ್ದರೆ ಎರಡು ತಿಂಗಳಾದರೂ ಹಣ್ಣುಗಳನ್ನು ಪ್ರತ್ಯೇಕ ಕಂಟೈನರ್‌ಗಳಲ್ಲಿ ಹಾಕಿಟ್ಟು ಹುಳಿ ಬರಿಸಿದ ನಂತರ ಎರಡು ಮೂರು ಹಂತದ ಫಿಲ್ಟರ್ ಮಾಡಿ ಬಾಟಲಿಯಲ್ಲಿ ಹಾಕಿಡಬೇಕು. ಈ ಕ್ರಮದಲ್ಲಿ ಸಿದ್ಧಗೊಂಡ ವೈನ್ ವರ್ಷಗಟ್ಟಲೆ ಕೆಡುವುದಿಲ್ಲವಂತೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry