ವೈಭವದ ಜೋಡಿ ರಥೋತ್ಸವ

7

ವೈಭವದ ಜೋಡಿ ರಥೋತ್ಸವ

Published:
Updated:
ವೈಭವದ ಜೋಡಿ ರಥೋತ್ಸವ

ಮರಿಯಮ್ಮನಹಳ್ಳಿ: ಪಟ್ಟಣದ ಆರಾಧ್ಯ ದೈವ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿಯ ಜೋಡಿ ರಥೋತ್ಸವವು ಶ್ರೀರಾಮ ನವಮಿ ದಿನವಾದ ಮಂಗಳವಾರ ಸಂಜೆ ಸಡಗರ ಸಂಭ್ರಮದೊಂದಿಗೆ ಜರುಗಿತು.

ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದ 93ಹಳ್ಳಿಗಳಲ್ಲಿ ನಾರಾಯಣದೇವರಕೆರೆಯೂ ಒಂದಾಗಿದ್ದು, ಅಲ್ಲಿನ ಅರ್ಧದಷ್ಟು ಜನರು ಮರಿಯಮ್ಮನಹಳ್ಳಿಗೆ ಬಂದು ನಲೆಸಿದರು. ಅಲ್ಲದೆ ಅಲ್ಲಿನ ಈ ಉಭಯ ದೇವರನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿ, ಅಲ್ಲಿನ ಮೂಲಪರಂಪರೆಯನ್ನು ಇಲ್ಲಿಯೂ ಮುಂದುವರಿಸಿಕೊಂಡು ಬಂದಿದ್ದು, ಅದರಲ್ಲಿ ಈ ನಾಣಿಕೇರಪ್ಪನ ಜಾತ್ರೆಯೂ ಒಂದಾಗಿದೆ.

ರಥೋತ್ಸವದ ಅಂಗವಾಗಿ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.

ಕಳೆದ ವರ್ಷ ರಥೋತ್ಸವ ಸಂದರ್ಭದಲ್ಲಿ ಪಟಗಳ ಹರಾಜಿನಲ್ಲಿ ಪಟಗಳನ್ನು ಪಡೆದಂತಹ ಭಕ್ತರು ಸಕಲವಾದ್ಯಗಳ ಸಮೇತರಾಗಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ಹರಾಜಿನ ಮೊತ್ತದೊಂದಿಗೆ ಪಟಗಳನ್ನು ದೇವಸ್ಥಾನದ ಸಮಿತಿಗೆ ಅರ್ಪಿಸಿದರು.

ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಯುಗಾದಿಯಿಂದ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ಕಿನ್ನಾಳದ ಆಗಮದವರಿಂದ (ಪುರೋಹಿತ) ತೇರುಗಳ ಮುಂಭಾಗದಲ್ಲಿ ಹೋಮ ಹವನಗಳನ್ನು ನೆರವೇರಿಸಿದರು.

ಮಧ್ಯಾಹ್ನ 12ಗಂಟೆಗೆ ಜೋಡಿ ಮಡಿತೇರನ್ನು ಎಳೆಯಲಾಯಿತು. ಬ್ರಾಹ್ಮಣರಿಂದ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ರಥವನ್ನು ಮತ್ತು ವೈಶ್ಯ ಬಾಂಧವರಿಂದ ಶ್ರೀಆಂಜನೇಯ ಸ್ವಾಮಿಯ ಮಡಿತೇರನ್ನು ಎಳೆಯುವುದನ್ನು ನೋಡುವುದೇ ವಿಶೇಷ.

ಸಂಜೆ 5ಗಂಟೆಗೆ ಸಾವಿರಾರು ಭಕ್ತ ಸಮೂಹದೆದುರು ಜೋಡಿ ರಥೋತ್ಸವಕ್ಕೆ ವಿವಿಧ ಅಲಂಕಾರಿಕ ವಸ್ತುಗಳನ್ನು, ಗೊಂಬೆಗಳಿಂದ ಹಾಗೂ ವಿವಿಧ ಬಗೆಯ ಹೂಗಳಿಂದ, ಮಾವಿನ ತೋರಣ, ಬಾಳೆಗಿಡಗಳೊಂದಿಗೆ ಅಲಕೃತಗೊಂಡಿದ್ದ ಸುಮಾರು 60 ಅಡಿ ಎತ್ತರದ ರಥಗಳಿಗೆ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಭಯ ದೇವರ ಪಟಗಳನ್ನು ದೇವಸ್ಥಾನದ ಸಮಿತಿಯಿಂದ ಹರಾಜು ಹಾಕಲಾಯಿತು. ರೂ. 61ಸಾವಿರಕ್ಕೆ ಶ್ರೀಲಕ್ಷ್ಮೀನಾರಾಯಣ ಸ್ವಾಮಿಯ ಪಟವನ್ನು ಕಲ್ಲಾಳ ಪರಶುರಾಮಪ್ಪ ಪಡೆದರೆ, ಶ್ರೀ ಆಂಜನೇಯ ಸ್ವಾಮಿಯ ಪಟವನ್ನು ಕುರಿ ಹನುಮಂತಪ್ಪ ರೂ. 75ಸಾವಿರಗಳಿಗೆ ಪಡೆದರು.

ರಥೋತ್ಸವದಲ್ಲಿ ಸುಮಾರು 1ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಹೋಬಳಿಯ ಸುತ್ತಮುತ್ತಲಿನ 33ಗ್ರಾಮಗಳಿಂದ ಮತ್ತು ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಬಳ್ಳಾರಿ ಹಾಗೂ ಇತರ ನಗರಪ್ರದೇಶದ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸದಲ್ಲಿ ಭಾಗವಹಿಸಿ, ರಥಗಳಿಗೆ ಹೂ ಹಣ್ಣು ಎಸೆದು ಹರಕೆ ತೀರಿಸಿಕೊಂಡರು. ಜೋಡಿ ರಥಗಳನ್ನು ಸಾವಿರಾರು ಭಕ್ತರು ದೇವಸ್ಥಾನದಿಂದ ದೂರದ ಪಾದಗಟ್ಟೆ ದೇವಸ್ಥಾನದವರೆಗೆ ಎಳೆದುಕೊಂಡು ಹೋಗಿ ನಂತರ ಸ್ವಸ್ಥಾನಕ್ಕೆ ಎಳೆದು ತಂದರು.

ಬಂದಂತ ಸಾರ್ವಜನಿಕರ ನೀರಿನ ದಾಹ ತಣಿಸಲು ಅಲ್ಲಲ್ಲಿ ನೀರಿನ ಅರವಟ್ಟಿಗೆಗಳನ್ನು ತೆರೆಯಲಾಗಿತ್ತು. ಸಂಪ್ರಾದಾಯದಂತೆ ಡಾಣಿ, ಮಂಡಕ್ಕಿ, ಬೆಂಡು ಬತ್ತಾಸು ಹಾಗೂ ಸಿಹಿ-ತಿನಿಸುಗಳನ್ನು ಖರೀದಿಸಲು  ಹಾಗೂ ಹೆಂಗಸರು ಬಳೆಗಳನ್ನು ಖರೀದಿಸುವಲ್ಲಿ ಅಂಗಡಿಗಳ ಮುಂದೆ ಜಮಾಯಿಸಿದ್ದರು.

ಒಂದು ವಾರ ಜರುಗುವ ಜಾತ್ರೆಯಲ್ಲಿ ಜೋಕಾಲಿಗಳು, ವಿವಿಧ ಬಗೆಯ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಹಾಕಿದ್ದಾರೆ.

ಮುಖ್ಯ ರಸ್ತೆಯಲ್ಲಿ ರಥಗಳು ಸಾಗಿದ್ದರಿಂದ ಕೆಲ ಗಂಟೆಗಳವರೆಗೆ ವಾಹನಗಳನ್ನು ಬೇರೆ ಮಾರ್ಗವಾಗಿ ಬಿಡಲಾಯಿತು. ಪಿಎಸ್‌ಐ ಆರ್.ಎಲ್. ಮೋತಿಲಾಲ್ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry