ವೈಭವದ ನುಡಿಸಾಣಿಕೆ, ಗಾಯನ

7

ವೈಭವದ ನುಡಿಸಾಣಿಕೆ, ಗಾಯನ

Published:
Updated:

ಸರೋದ್, ಸಾರಂಗಿ, ಸಿತಾರ್, ಸಂತೂರ್, ಮ್ಯಾಂಡೋಲಿನ್... ತಂತಿ ವಾದ್ಯಗಳ ಪಟ್ಟಿ ಹೀಗೆ ಬೆಳೆಯುತ್ತಾ ಹೋಗುತ್ತದೆ. ಪ್ರತಿಯೊಂದು ವಾದ್ಯದ ವಾದನ ಕೇಳಿದಾಗಲೂ ಅದಕ್ಕಿಂತ ಇದರ ನಾದವೇ ಅಮೋಘ ಎನ್ನಿಸುತ್ತದೆ. ಆ ನಿಟ್ಟಿನಲ್ಲಿ ಒಂದೊಂದನ್ನೂ ಒರೆಗೆ ಹಚ್ಚಿ ನೋಡಿದಾಗ ಪ್ರತಿಯೊಂದು ತಂತಿ ವಾದ್ಯವೂ ಅದರದರ ಮಟ್ಟಿಗೆ ಅನನ್ಯವೇ. ಸಂತೂರ್ ವಾದ್ಯದಂತೆ ಬೇರೆ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಮತ್ತೊಂದು ವಾದ್ಯ ಮ್ಯಾಂಡೋಲಿನ್.ಕನ್ನಡ ಚಲನಚಿತ್ರ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿರುವ ಮ್ಯಾಂಡೋಲಿನ್ ವಾದಕರಲ್ಲಿ ಮ್ಯಾಂಡೋಲಿನ್ ಪ್ರಸಾದ್ ಹೆಸರು ಚಿರಪರಿಚಿತ. ತಮ್ಮ ರಾಗಶ್ರೀ ಮ್ಯೂಸಿಕ್ ಅಕಾಡೆಮಿಯ ಮೂಲಕ ಮ್ಯಾಂಡೋಲಿನ್ ವಾದ್ಯದ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಿರುವ ಅವರು ಅದೇ ನಿಟ್ಟಿನಲ್ಲಿ ‘ಮೂಡ್ಸ್ ಆಫ್ ಮ್ಯಾಂಡೋಲಿನ್’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಲ್ಲಿ ಮ್ಯಾಂಡೋಲಿನ್ ವಾದನದ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿರುವ ಪಂ. ಸ್ನೇಹಾಶಿಶ್ ಮಜುಂದಾರ್ ಅವರು ಮ್ಯಾಂಡೋಲಿನ್ ವಾದನವನ್ನು ಪ್ರಸ್ತುತಪಡಿಸಿದರು. ಬೆಂಗಳೂರಿನಲ್ಲಿ ಇದು ಅವರ ಚೊಚ್ಚಲ ಕಾರ್ಯಕ್ರಮ.ಮ್ಯಾಂಡೋಲಿನ್ ವಾದ್ಯವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡು, ಅದರ ವೈಶಿಷ್ಟ್ಯವನ್ನು ಪಸರಿಸುತ್ತಿರುವ ವಿರಳಾತಿ ವಿರಳ ಕಲಾವಿದರಲ್ಲಿ ಕೋಲ್ಕತ್ತ ಮೂಲದ ಸ್ನೇಹಾಶಿಶ್ ಮಜುಂದಾರ್ ಒಬ್ಬರು. ಶ್ಯಾಮ ಕಲ್ಯಾಣ (ಕಲ್ಯಾಣ್ ಥಾಟ್) ರಾಗದಿಂದ ತಮ್ಮ ವಾದನ ಆರಂಭಿಸಿದ ಸ್ನೇಹಾಶಿಶ್ ಸುದೀರ್ಘ ಆಲಾಪ್ ನುಡಿಸಾಣಿಕೆಯ ಮೂಲಕ ಕೇಳುಗರನ್ನು ಸಂಪೂರ್ಣವಾಗಿ ತಮ್ಮ ನಾದದಲೆಯಲ್ಲಿ ಹಿಡಿದುಕೊಂಡರು. ನಂತರ ಯಾವುದೇ ತಾಳದ ಸಹಾಯವಿಲ್ಲದೆ ಜೋಡ್ ಜಾಲಾ ವಾದನ ನಡೆಯಿತು. ಲಯಕಾರಿಗೆ ವಾದ್ಯದ ಸಾಥ್ ಇಲ್ಲದಿದ್ದರೂ ವಾದನದ ಏರಿಳಿತಗಳಲ್ಲಿ ನೀಡುತ್ತಿದ್ದ ಒತ್ತುಗಳು ‘ಸಮ್‌’ನ ಸ್ಥಾನವನ್ನು ಸ್ಪಷ್ಟವಾಗಿ ಕೇಳಿಸುತ್ತಿದ್ದವು. 23 ನಿಮಿಷಗಳ ಶ್ಯಾಮ ಕಲ್ಯಾಣ ರಾಗದ ವಾದನದ ನಂತರ ಆರಂಭವಾದದ್ದು ಚಾರುಕೇಶಿ (ಚಾರುಕೇಶಿ ಥಾಟ್) ರಾಗದ ವಾದನ. ಎರಡೂ ಮುಕ್ಕಾಲು ನಿಮಿಷಗಳ ಆಲಾಪ್ ವಾದನ ಚಾರುಕೇಶಿ ರಾಗ ಸ್ಫುರಿಸಲಿರುವ ರಸಕ್ಕೆ ಭಾವದ ಅಡಿಪಾಯವನ್ನು ಹಾಕಿತು. ನಂತರ ದುಂಬಿಯ ಝೇಂಕಾರದಂತೆ ಹೊಮ್ಮಿತು. ಮತ್ತೊಮ್ಮೆ ಎಲ್ಲರಲ್ಲೂ ಅಡಕವಾಗಿರುವ ಸ್ಥಾಯಿಭಾವದಲ್ಲಿ ಒಂದಷ್ಟು ನೋವಿದ್ದರೆ ಅದನ್ನು ಎಚ್ಚರಗೊಳಿಸುವ ಭಾವತೀವ್ರತೆ ಆ ನುಡಿಸಾಣಿಕೆಯಲ್ಲಿತ್ತು.ಏನೂ ಇಲ್ಲವಾದಲ್ಲಿ ಅಮೂರ್ತವಾದ ಭಾವವೊಂದು ಜೀವವೀಣೆಯನ್ನು ಮಿಡಿಯಿತೋ ಎನ್ನುವಷ್ಟರ ಮಟ್ಟಿಗೆ ಚಾರುಕೇಶಿಯ ನಾದ ಕಾಡಿತು. ಇಡೀ ಸಭಾಂಗಣವನ್ನು ಆವರಿಸಿಕೊಂಡಿದ್ದ ಚಾರುಕೇಶಿಯ ಭಾವಯಾನದಲ್ಲಿ ಲಯ ಹೆಚ್ಚಾದಂತೆ ಶ್ರೋತೃಗಳ ಆಸಕ್ತಿ ಕೆರಳುತ್ತಿತ್ತು. ಒಂದೊಮ್ಮೆ ತಾರ ಷಡ್ಜದ ನಡಿಸಾಣಿಕೆಯ ಲಯವನ್ನು ಹೆಚ್ಚಿಸಿ ಭಾವದ ಶೃಂಗಕ್ಕೆ ಎಳೆದೊಯ್ದು, ಮರುನಿಮಿಷ ಮಧ್ಯಮಕ್ಕೆ ಬಂದು ಶಾಂತತೆಯನ್ನು ಮೂಡಿಸಿದ್ದು  ವಾದನದ ಏಕತಾನ ಶೈಲಿಯನ್ನು ಮುರಿಯವ ವಿಶೇಷ ಪ್ರಯತ್ನವಾಗಿತ್ತು. ತಬಲಾ ವಾದನದಲ್ಲಿ ಸಾಥ್ ನೀಡಿದ ಕಿರಣ್ ಗೋಡ್ಖಿಂಡಿ, ಸ್ನೇಹಾಶೀಶ್ ಅವರ ಲಹರಿಗೆ ತಕ್ಕಂತೆ ನುಡಿಸಿಸಿದ ರೀತಿ ಸಮರ್ಥವಾಗಿತ್ತು. ಮೂವತ್ತೇಳು ನಿಮಿಷಗಳ ಅಮೋಘವಾದ ಮ್ಯಾಂಡೋಲಿನ್ ಮೋಡಿಗೆ ಶ್ರೋತೃಗಳೆಲ್ಲ ಮಂತ್ರಮುಗ್ಧರಾಗಿದ್ದರು. ಸಂಗೀತ ಕುಟುಂಬದಿಂದ ಬಂದಿರುವ ಸ್ನೇಹಾಶಿಶ್ ತಬಲಾ ಹಾಗೂ ಹಲವಾರು ತಂತಿ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣತರು. ಪ್ರಸಾದ್ ಅವರು ಸ್ನೇಹಾಶಿಶ್ ಅವರೊಂದಿಗೆ ಪೀಲೂ ಹಾಗೂ ಕೊನೆಯಲ್ಲಿ ‘ವಂದೇ ಮಾತರಂ’ ಗೀತೆ ನುಡಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾದರು.ಸಂಗೀತ ‘ವಿಜಯ’

ಹಿಂದೂಸ್ತಾನಿ ಸಂಗೀತ ಕಲಾಕಾರ್ ಮಂಡಳಿ ಹಾಗೂ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್‌ ಸಮನ್ವಯದಲ್ಲಿ ಕಳೆದ ವಾರ ಯುವ ಗಾಯಕ ವಿಜಯ್ ಕುಮಾರ್ ಪಾಟೀಲ್ ಅವರ ಹಿಂದೂಸ್ತಾನಿ ಗಾಯನ ಏರ್ಪಾಟಾಗಿತ್ತು. ಧಾರವಾಡದ ವಿಜಯ್ ಪಂ. ಕೈವಲ್ಯ ಕುಮಾರ್ ಗುರವ್ ಅವರ ಬಳಿ ಕಿರಾಣಾ ಘರಾಣೆಯ ಗಾಯಕಿಯಲ್ಲಿ ಸಾಣೆಗೆ ಒಡ್ಡಿಕೊಳ್ಳುತ್ತಿದ್ದಾರೆ.  ಪೂರಿಯಾ ಧನಶ್ರೀ ರಾಗದ ಮೂಲಕ ಗಾಯನ ಆರಂಭಿಸಿದ ಅವರು ನಂತರ ಯಮನ್ (ಕಲ್ಯಾಣ್ ಥಾಟ್) ರಾಗವನ್ನು ಹಾಡಿದರು.‘ಮೋಹೆ ತರಸ್’ ಹಾಗೂ ‘ತೋರೆ ಘರವಾ ಜಾನೇನ ದೂಂಗಿ’ ಎಂಬ ಎರಡು ಬಂದಿಶ್‌ಗಳನ್ನು ಪ್ರಸ್ತುತ ಪಡಿಸಿದರು. ಶಾಸ್ತ್ರೀಯ ಸಂಗೀತ ಗಾಯನದೊಂದಿಗೆ ನಾಟ್ಯ ಗೀತೆಗಳನ್ನು ಹಾಡುವುದರಲ್ಲಿಯೂ ವಿಶೇಷ ಆಸಕ್ತಿ ಇಟ್ಟುಕೊಂಡಿರುವ ವಿಜಯ್ 18 ನಿಮಿಷಗಳ ಸರಳ ಹಾಗೂ ಸುಲಲಿತವಾದ ಯಮನ್ ಪ್ರಸ್ತುತಿಯ ನಂತರ ‘ಹೇ ಸುರಾವೋಂ ಚಾಂದ್ರವಾ’ ಎಂಬ ಮರಾಠಿ ನಾಟ್ಯ ಗೀತೆ, ಹೇಮರೆಡ್ಡಿ ಮಲ್ಲಮ್ಮ ನಾಟಕಕ್ಕೆ ಬಳಸಿಕೊಳ್ಳಲಾಗಿರುವ ಕನಕದಾಸರ ‘ನನಗೂ ಆಣೆ ದೇವ ನಿನಗೂ ಆಣೆ’ ಹಾಗೂ ಒಂದು ಮರಾಠಿ ಅಭಂಗವನ್ನು ಹಾಡಿದರು. ಸೋಹನಿ ರಾಗದಲ್ಲಿದ್ದ ಮರಾಠಿ ನಾಟ್ಯ ಗೀತೆಯನ್ನು ಹಾಡಿದ ರೀತಿ, ಗಾಯನದ ಭಾವ ವೈಶಿಷ್ಟ್ಯ ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುವಂಥದ್ದಾಗಿತ್ತು.ಕೊನೆಯಲ್ಲಿ ಭೈರವಿ ರಾಗದಲ್ಲಿ ‘ಜನಿತಕ್ಕೆ ತಾಯಾಗಿ ಹೆತ್ತಳು’ ಎಂಬ ವಚನವನ್ನೂ ಹಾಡಿದರು. ತಬಲಾದಲ್ಲಿ ಕೇಶವ ಜೋಷಿ ಹಾಗೂ ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿ ಅವರ ಸಾಥ್ ಉತ್ತಮವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry