ಗುರುವಾರ , ನವೆಂಬರ್ 21, 2019
26 °C

ವೈಭವದ ಪದ್ಮಾವತಿದೇವಿ ಪಲ್ಲಕ್ಕಿ

Published:
Updated:

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿದೇವಿ ದೇವಸ್ಥಾನದಲ್ಲಿ ಮಂಗಳವಾರ ಪದ್ಮಾವತಿದೇವಿಯ ಜಾತ್ರೆ ಭಕ್ತಿ, ಶ್ರದ್ಧೆಯಿಂದ ನೆರವೇರಿತು.ಕಿಲ್ಲಾ ಗಲ್ಲಿಯಲ್ಲಿರುವ ಪಾರ್ಶ್ವನಾಥ ಜೈನ ಬಸದಿಯಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ನಂತರ  ಪಲ್ಲಕ್ಕಿಯಲ್ಲಿ ಪದ್ಮಾವತಿದೇವಿ ಮೂರ್ತಿ ಹಾಗೂ  ದೇವಿಯ ಭಾವಚಿತ್ರದ ಮೆರವಣಿಗೆ ವೈಭವದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದು ಊರ ಹೊರಗೆ ಇರುವ ಪದ್ಮಾವತಿದೇವಿ ದೇವಸ್ಥಾನ ತಲುಪಿತು. ಮೆರವಣಿಗೆಯೂದ್ದಕ್ಕೂ ಜೈನ ಬಂಧುಗಳು ಜೈನ ತೀರ್ಥಂಕರರ ಅಹಿಂಸಾ ತತ್ವಗಳನ್ನು ಘೋಷಣೆ ಕೂಗುತ್ತ ಸಾಗಿದ್ದು ವಿಶೇಷವಾಗಿತ್ತು.ದೇವಸ್ಥಾನದಲ್ಲಿ ಪದ್ಮಾವತಿದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಾವಚಿತ್ರ ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಅಸಂಖ್ಯ ಭಕ್ತರು ದೇವಿ ದರ್ಶನ ಪಡೆದರು. ಬರುವ ವರ್ಷದಲ್ಲಿ ಪಟ್ಟಣದ ಎಲ್ಲ ನಾಗರಿಕರ ಸಹಕಾರದೊಂದಿಗೆ ಪದ್ಮಾವತಿದೇವಿಯ ರಥೋತ್ಸವ ನಡೆಸಲು ನಿರ್ಧರಿಸಲಾಯಿತಲ್ಲದೇ, ರಥದ ನಿರ್ಮಾಣಕ್ಕೆ ಬೇಕಾದ ಐದೂವರೆ ಲಕ್ಷ ರೂಪಾಯಿ ಹಣದಲ್ಲಿ ಮೂರೂವರೆ ಲಕ್ಷ ರೂಪಾಯಿ ಹಣವನ್ನು ಸಭೆಯಲ್ಲಿಯೇ ನೀಡಲು ದಾನಿಗಳು ಒಪ್ಪಿಕೊಂಡರು ಎಂದು ತಾಲ್ಲೂಕು ಜೈನ ದಿಗಂಬರ ಸಮಾಜದ ಅಧ್ಯಕ್ಷ ಶಾಂತಿನಾಥ ದಂಡಾವತಿ ತಿಳಿಸಿದರು.ಜಾತ್ರಾ ಉತ್ಸವದಲ್ಲಿ ಅಶೋಕ ಮಣಿ, ಜಯಪಾಲ ಶೆಟ್ಟಿ, ಪದ್ಮರಾಜ ದಂಡಾವತಿ, ಜೆ.ಪಿ. ಶೆಟ್ಟಿ, ಅನಂತರಾಜ ಉಪಾಧ್ಯ, ನಾಗೇಶ ಬೋಗಾರ, ಮಹಾವೀರ ಶೆಟ್ಟಿ, ಅನಿಲ ಯಾತಗಿರಿ, ಶ್ರೀಧರ ದಂಡಾವತಿ, ಮಹಾವೀರ ವಂದಕುದರಿ, ಬಾಬು ಗೋಗಿ, ಮಾಣಿಕ ದಂಡಾವತಿ, ಭರತೇಶ ಮಂಕಣಿ, ಜೀನೇಶ ಮಂಕಣಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)