ವೈಭವದ 402ನೇ ದಸರಾಕ್ಕೆ ಇಂದು ಚಾಲನೆ

7

ವೈಭವದ 402ನೇ ದಸರಾಕ್ಕೆ ಇಂದು ಚಾಲನೆ

Published:
Updated:
ವೈಭವದ 402ನೇ ದಸರಾಕ್ಕೆ ಇಂದು ಚಾಲನೆ

ಮಹೋತ್ಸವಕ್ಕೆ ಅರಮನೆಗಳ ನಗರಿ ಸಿಂಗಾರ

ಮೈಸೂರು:  ಬರ, ಕಾವೇರಿ ಹೋರಾಟದ ಕರಿನೆರಳು ಹಿಂದೆ ಸರಿದಿದ್ದು, ಆಗಸದಲ್ಲಿ ಮೋಡಗಳು ಮೇಳೈಸಿ, ಇಳೆಗೆ ಮಳೆಯ ಸಿಂಚನವಾಗುತ್ತಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ಅರಮನೆಗಳ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.402ನೇ ವರ್ಷದ ದಸರಾ ಉದ್ಘಾಟನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಇಡೀ ಮೈಸೂರು ನಗರ ಉತ್ಸವಕ್ಕೆ ಸಜ್ಜಾಗಿದೆ. ಚಾಮುಂಡಿಬೆಟ್ಟದಲ್ಲಿ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ.ಅ. 16ರ ಮಂಗಳವಾರ ಬೆಳಿಗ್ಗೆ 10.42 ರಿಂದ 11.12 ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾಕ್ಕೆ ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಈಗಾಗಲೇ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಗ್ರಪೂಜೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಲೋಹದ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಅರ್ಚಕರು ಶುಭ್ರಗೊಳಿಸಿದ್ದು, ಅದನ್ನು ಕೂರಿಸುವ ಬೆಳ್ಳಿರಥವೂ ಸ್ವಚ್ಛಗೊಂಡಿದೆ. ಅ. 24 ರಂದು ಜಂಬೂ ಸವಾರಿ ನಡೆಯಲಿದ್ದು, ಬಲರಾಮ ಅಥವಾ ಅರ್ಜುನ ಆನೆ ಅಂಬಾರಿ ಹೊತ್ತುಸಾಗಲಿದೆ.ಅರಮನೆ, ದೇವಸ್ಥಾನಗಳು, ಪ್ರಮುಖ ವೃತ್ತಗಳು, ಪಾದಚಾರಿ ರಸ್ತೆಗಳು ಸುಣ್ಣ ಬಣ್ಣ ಕಂಡಿವೆ. ಪ್ರಮುಖ ವೃತ್ತಗಳಲ್ಲಿರುವ ಪ್ರತಿಮೆಗಳನ್ನು ಸ್ವಚ್ಛಗೊಳಿಸಲಾಗಿದೆ. ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಹಾಕಲಾಗಿದ್ದು, ಪ್ರಮುಖ ರಸ್ತೆಗಳು, ವೃತ್ತಗಳು, ಸರ್ಕಾರಿ ಕಟ್ಟಡಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಕೆ.ಆರ್.ವೃತ್ತದಲ್ಲಿ ಈ ಬಾರಿ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ. ಸರ್ ಎಂ.ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಮಹಾರಾಜರು ಸೇರಿದಂತೆ ಅನೇಕ ಗಣ್ಯರನ್ನು ವಿದ್ಯುತ್ ದೀಪದ ಚಿತ್ತಾರದಲ್ಲಿ ಸೃಷ್ಟಿಸಲಾಗುತ್ತಿದೆ.ಅರಮನೆ ವೇದಿಕೆ: ದಸರಾ ಉತ್ಸವದ ಅಂಗವಾಗಿ ಅರಮನೆ ವೇದಿಕೆಯಲ್ಲಿ ಅ.16 ರಿಂದ 23ರ ವರೆಗೆ ಖ್ಯಾತನಾಮರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 16 ರಂದು ರಾತ್ರಿ 7.30ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಎಲ್.ಸುಬ್ರಹ್ಮಣ್ಯ ಮತ್ತು ತಂಡದವರ ಪಿಟೀಲು ವಾದನದೊಂದಿಗೆ ಈ ಬಾರಿಯ ಸಾಂಸ್ಕೃತಿಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಅ. 23ರಂದು `ಆಸ್ಥಾನ್ ವಿದ್ವಾನ್~ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಯುವ ಸಂಭ್ರಮ: `ಬರ~ ಹಿನ್ನೆಲೆಯಲ್ಲಿ ಈ ಬಾರಿ ಯುವ ದಸರಾ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಆದರೆ, ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ `ಬಯಲು ರಂಗಮಂದಿರ~ದಲ್ಲಿ `ಯುವ ಸಂಭ್ರಮ~ ಕಳೆಗಟ್ಟಲಿದೆ.ಈಗಾಗಲೇ ನಗರದ ವಿವಿಧ ಕಾಲೇಜಿನ 130 ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಯಾರಿಯಲ್ಲಿ ತೊಡಗಿಸಿಕೊಂಡಿವೆ. ಹಾಗೆಯೇ ಈ ಬಾರಿ `ಧಾರ್ಮಿಕ ದಸರಾ~ ಆಚರಿಸಲಾಗುತ್ತಿದೆ.

ಇನ್ನುಳಿದಂತೆ ದಸರಾ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು ಪ್ರದರ್ಶನಗೊಳ್ಳಲಿವೆ.ಆಹಾರ ಮೇಳ, ಮಹಿಳಾ ದಸರಾ, ಮಕ್ಕಳ ದಸರಾ, ದಸರಾ ಕವಿಗೋಷ್ಠಿ, ನವರಾತ್ರಿ ನಾಟಕೋತ್ಸವ, ಸಂಗೀತ, ನೃತ್ಯ, ಜಾನಪದ, ಫಲಪುಷ್ಪ ಪ್ರದರ್ಶನ, ಭಜನಾ ಕಾರ್ಯಕ್ರಮ, ಗಾಳಿಪಟ ಸ್ಪರ್ಧೆ, ಸಾಹಸ ಕ್ರೀಡೆ, ಕುಸ್ತಿ, ಸೆಸ್ನಾ ವಿಮಾನಯಾನ.. ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ದೇಶ ವಿದೇಶಗಳ ಪ್ರವಾಸಿಗರನ್ನು ರಂಜಿಸಲಿವೆ.ಬಿಗಿ ಭದ್ರತೆ: ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, `ಜನಮಿತ್ರ ಪೊಲೀಸ್~ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಂಚಾರ ದಟ್ಟಣೆ ತಡೆಗಟ್ಟುವ ಉದ್ದೇಶದಿಂದ ಏಕಮುಖ ಸಂಚಾರ, ವಾಹನ ನಿಲುಗಡೆಗೆ ಕ್ರಮಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry