ವೈಮಾನಿಕ ಉದ್ಯಮಿಗಳನ್ನು ಸೆಳೆಯುವಲ್ಲಿ ಸಫಲ: ರೂ. 1000 ಕೋಟಿ ಹೂಡಿಕೆ
ಯಲಹಂಕ ವಾಯುನೆಲೆ: ಇಲ್ಲಿ ನಡೆಯುತ್ತಿರುವ 8ನೇ ಆವೃತ್ತಿಯ ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಮಳಿಗೆ ತೆರೆಯುವ ಮೂಲಕ ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯು ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ವ್ಯಾಪಾರ ವಹಿವಾಟಿಗಾಗಿಯೇ ಮೀಸಲಾಗಿದ್ದ ಮೊದಲ ಮೂರು ದಿನಗಳಲ್ಲಿ (ಫೆ.9-11) ಸುಮಾರು 8 ಕಂಪೆನಿಗಳ ಜೊತೆ ರೂ. 500 ಕೋಟಿ ಮೊತ್ತದ ಹೂಡಿಕೆಗೆ ಇಲಾಖೆಯು ಒಪ್ಪಂದ ಮಾಡಿಕೊಂಡಿದೆ.
‘ಇನ್ನೂ ಕೆಲವು ಕಂಪೆನಿಗಳ ಜೊತೆ ಅಂತಿಮ ಹಂತದ ಮಾತುಕತೆ ನಡೆದಿದ್ದು, ಎರಡು ತಿಂಗಳೊಳಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಹೂಡಿಕೆ ಮೊತ್ತ ರೂ.1,000 ಕೋಟಿಗೆ ತಲುಪುವ ನಿರೀಕ್ಷೆ ಇದೆ’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ. ಬಳಿಗಾರ್ ‘ಪ್ರಜಾವಾಣಿ’ಗೆ ಹೇಳಿದರು. ಮಹೀಂದ್ರಾ ಏರೊಸ್ಪೇಸ್, ವಿಪ್ರೊ, ಕರ್ನಾಟಕ ಸಿಎನ್ಸಿ, ಡೈನಾಮ್ಯಾಟಿಕ್ ಏರೋಸ್ಪೇಸ್ ಕಂಪೆನಿ ಸೇರಿದಂತೆ ಒಟ್ಟು ಎಂಟು ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವೈಮಾಂತರಿಕ್ಷ ಕ್ಷೇತ್ರದಲ್ಲಿ ಈಗ ಬೆಂಗಳೂರು ಆಕರ್ಷಕ ತಾಣವಾಗಿದೆ. ಇಲ್ಲಿರುವ ಸೌಲಭ್ಯಗಳನ್ನು ಹಾಗೂ ಸರ್ಕಾರದ ವತಿಯಿಂದ ನೀಡಲಾಗುವ ಸವಲತ್ತುಗಳನ್ನು ತಿಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಮಳಿಗೆ ತೆರೆದಿತ್ತು. ’ಅದರ ಉದ್ದೇಶ ಸಫಲವಾದಂತೆ ಕಂಡುಬಂದಿದೆ. ಕೇವಲ ಮೂರು ದಿನಗಳಲ್ಲಿ 8 ಕಂಪೆನಿಗಳ ಜೊತೆ ಒಪ್ಪಂದವಾಗಿರುವುದೇ ಇದಕ್ಕೆ ಸಾಕ್ಷಿ’ ಎಂದು ಅವರು ಹೇಳಿದರು. ‘ಯುರೋಪಿಯನ್ ಏರೊನಾಟಿಕ್ ಡಿಫೆನ್ಸ್ ಅಂಡ್ ಸ್ಪೇಸ್ ಕಂಪೆನಿ (ಇಎಡಿಎಸ್), ಹನಿವೆಲ್, ರೋಲ್ಸ್ ರಾಯ್ ಸೇರಿದಂತೆ 100ಕ್ಕೂ ಹೆಚ್ಚು ಕಂಪೆನಿಗಳು ಆಸಕ್ತಿ ತೋರಿವೆ’ ಎಂದು ತಿಳಿಸಿದರು.
‘ಫ್ರಾನ್ಸ್ನ ಸುಮಾರು 10 ಕಂಪೆನಿಗಳು, ಬೆಲ್ಜಿಯಂನ 12 ಕಂಪೆನಿಗಳು, ಅಮೆರಿಕದ 20 ಕಂಪೆನಿಗಳು ಚರ್ಚೆ ಮಾಡಿವೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನೂ ತೋರಿವೆ. ಇನ್ನೂ ಸ್ವಲ್ಪ ಸಮಯದ ನಂತರ ಇದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಅವರು ತಿಳಿಸಿದರು.
ವಿಶೇಷ ಆಕರ್ಷಣೆ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿರುವ ವೈಮಾಂತರಿಕ್ಷ ಪಾರ್ಕ್ ಹೂಡಿಕೆದಾರರಿಗೆ ವಿಶೇಷ ಆಕರ್ಷಣೆಯಾಗಿದೆ. ಈಗಾಗಲೇ ಇಲ್ಲಿ 27 ಕಂಪೆನಿಗಳಿಗೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಇವುಗಳಲ್ಲಿ ಐದು ವಿದೇಶಿ ಕಂಪೆನಿಗಳೂ ಸೇರಿವೆ ಎಂದರು. ಪಾರ್ಕ್ನಲ್ಲಿ ಅಮೆರಿಕದ ಡೈನಾಮ್ಯಾಟಿಕ್ ಏರೋಸ್ಪೇಸ್ ಕಂಪೆನಿಗೆ 35 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಶುಕ್ರವಾರವಷ್ಟೇ ಕಂಪೆನಿಯ ಅಧಿಕಾರಿಗಳು ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು ಎಂದು ಅವರು ಹೇಳಿದರು.
ಇದೇ ಪಾರ್ಕ್ನಲ್ಲಿ ಘಟಕಗಳನ್ನು ಸ್ಥಾಪಿಸಲು ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ಗೆ (ಬಿಇಎಂಎಲ್) 25 ಎಕರೆ ಹಾಗೂ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ಗೆ (ಎಚ್ಎಎಲ್) 100 ಎಕರೆ ಭೂಮಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.