ಮಂಗಳವಾರ, ಮೇ 17, 2022
23 °C

ವೈಮಾನಿಕ ಕಸರತ್ತು,ಬಾನಂಗಳದಲ್ಲಿ ರಕ್ಷಣೆಯ ಗಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ ವಾಯುನೆಲೆ: ‘ಏರೊ ಇಂಡಿಯಾ’   ಪ್ರದರ್ಶನದ ನಿಮಿತ್ತ ಶನಿವಾರ ನಡೆದ ಹತ್ತಾರು ಲೋಹದ ಹಕ್ಕಿಗಳ ಕಸರತ್ತುಗಳನ್ನು ಸಾವಿರಾರು ಜನರು ವೀಕ್ಷಿಸಿ,   ಸಂಭ್ರಮಿಸಿದರು.

ಭಾರತೀಯ ಸೇನೆಯ ಹೆಲಿಕಾಪ್ಟರ್‌ಗಳು, ‘ಸೂರ್ಯಕಿರಣ’, ‘ಸಾರಂಗ್’ ಹಾಗೂ ಫ್ಲೈಯಿಂಗ್ ಬುಲ್ಸ್ ತಂಡಗಳು ನಡೆಸಿದ ಕಸರತ್ತುಗಳು ಜನರನ್ನು ಮೂಕವಿಸ್ಮಿತಗೊಳಿಸಿದವು. ಒಂದು ಅಂದಾಜಿನ ಪ್ರಕಾರ ಶನಿವಾರ   50,000ಕ್ಕೂ ಹೆಚ್ಚು ಜನರು ವಿಮಾನಗಳ ಕಸರತ್ತು ನೋಡಿದರು. ಭಾನುವಾರ ರಜಾದಿನ ಆಗಿರುವುದರಿಂದ ಇದಕ್ಕಿಂತಲೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ.

ನೀರು ದುಬಾರಿ: ಆವರಣದಲ್ಲಿ ನೀರನ್ನು (ಮಿನರಲ್ ವಾಟರ್) ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಅರ್ಧ ಲೀಟರ್ ನೀರಿಗೆ ಗರಿಷ್ಠ ಮಾರಾಟ ಬೆಲೆ ರೂ 10 ಇದ್ದರೂ ಇಲ್ಲಿ ರೂ 12 ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದಲ್ಲದೇ, ಒಂದು ಲೀಟರ್ ನೀರಿಗೆ ಗರಿಷ್ಠ ಮಾರಾಟ ಬೆಲೆ ರೂ 15 ಇದ್ದರೂ ರೂ 17 ದರದಲ್ಲಿ ಮಾರಾಟ ಮಾಡಲಾಯಿತು. ಬೇಸಿಗೆಯ ಧಗೆ ತಣಿಸಲು ಜನರು ದುಬಾರಿ ಬೆಲೆ ತೆತ್ತು ನೀರು ಕುಡಿಯುತ್ತಿದ್ದರು.

ಪ್ರದರ್ಶನದ ವೇಳೆ ಕುಡಿಯುವ ನೀರನ್ನು ರಿಯಾಯಿತಿ ದರದಲ್ಲಿ ಪೂರೈಸಲು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಖಾಸಗಿ ಕಂಪೆನಿಯೊಂದು ಪೂರಕವಾಗಿ ಸ್ಪಂದಿಸಿದೆ. ಈ ಬಾರಿ ಕಡಿಮೆ ಬೆಲೆಗೆ ನೀರು ಪೂರೈಕೆಯಾಗಬಹುದು ಎಂದು ಭರವಸೆ ನೀಡಿದ್ದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಮಾತು ಆಶ್ವಾಸನೆಯಾಗಿಯೇ ಉಳಿಯಿತು.

ತಾರಾ ಮೆರುಗು: ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ವಾಯುನೆಲೆಯಲ್ಲಿ ಕಾಣಿಸಿಕೊಂಡು ‘ಏರೊ ಇಂಡಿಯಾ’ಗೆ ತಾರಾ ಮೆರುಗು ತಂದುಕೊಟ್ಟರು.

ಶಾಹಿದ್ ಅವರು ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನದ ಹಾರಾಟ ನಡೆಸಿ, ಗಮನ ಸೆಳೆದರು. ಯುದ್ಧ ವಿಮಾನ ಹಾರಾಟ ನಡೆಸುವುದಕ್ಕೆ ಪೂರ್ವಭಾವಿಯಾಗಿ ಅವರು ಸುಮಾರು ಒಂದು ತಿಂಗಳ ಕಾಲ ತರಬೇತಿ ಪಡೆದಿದ್ದರು. 

 ತಮ್ಮ ಮುಂದಿನ ಚಲನಚಿತ್ರ ‘ಮೌಸಂ’ನಲ್ಲಿ ಅವರು ಯುದ್ಧ ವಿಮಾನ ಪೈಲಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ತಮ್ಮ ಕುಟುಂಬದ ಜೊತೆ ಆಗಮಿಸಿ, ಪ್ರದರ್ಶನಕ್ಕೆ ಇಟ್ಟಿದ್ದ ಬೃಹತ್ ವಿಮಾನಗಳನ್ನು ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.