ಭಾನುವಾರ, ಜನವರಿ 19, 2020
29 °C

ವೈಮಾನಿಕ ಕ್ಷೇತ್ರದಲ್ಲಿ ಮೈಲಿಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗುರ ಯುದ್ಧ ವಿಮಾನ ‘ತೇಜಸ್‌’ಗೆ ಎರಡನೇ ಹಂತದ ಪರೀಕ್ಷಾರ್ಥ ಹಾರಾಟ ಅನುಮತಿ (ಐಒಸಿ) ದೊರಕುವ ಮೂಲಕ ಭಾರತೀಯ ವಿಜ್ಞಾನಿ­ಗಳ ಮೂರು ದಶಕಗಳ ಕನಸು ನನಸಾಗುವ  ದಿನ ಸನ್ನಿಹಿತವಾಗುತ್ತಿದೆ.  ಭಾರತೀಯ ವಾಯುಪಡೆಯ ಮಿಗ್‌- ೨೧ ಮಾದರಿಯ ವಿಮಾನಗಳನ್ನು ಸೇವೆಯಿಂದ ಹಿಂತೆಗೆದುಕೊಂಡ ಕೆಲವೇ ದಿನಗಳಲ್ಲಿ ತೇಜಸ್‌ ಅನ್ನು ಅಂತಿಮ ಪರೀಕ್ಷೆಗಾಗಿ ವಾಯುಪಡೆಗೆ ನೀಡಲಾಗಿದೆ.ಇದೊಂದು ಅಪರೂಪದ ಗಳಿಗೆ. ಭಾರತೀಯ ವಿಜ್ಞಾನಿಗಳು ಮಾತ್ರವಲ್ಲದೇ ದೇಶದ ಪ್ರಜೆಗಳೆಲ್ಲಾ ಹೆಮ್ಮೆಪಡುವ ಕ್ಷಣವಿದು. ಈ ವಿಮಾನವನ್ನು ಅಭಿವೃದ್ಧಿಪಡಿಸುತ್ತಿರುವ ವೈಮಾನಿಕ ಅಭಿವೃದ್ಧಿ ಸಂಸ್ಥೆಗೆ (ಎಡಿಎ)ಅತ್ಯಾಧುನಿಕವಾದ ಹಗುರ ಮತ್ತು ಕಡಿಮೆ ವೆಚ್ಚದ ಯುದ್ಧ ವಿಮಾನವನ್ನು ತಯಾರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ನೀಡಿದಾಗ ಬೆಚ್ಚಿ ಬೀಳುವ ಸ್ಥಿತಿ ಸಂಸ್ಥೆಯಲ್ಲಿತ್ತು.ಪೊಖ್ರಾನ್‌ ಅಣುಪರೀಕ್ಷೆಯ ನಂತರವಂತೂ ಭಾರತಕ್ಕೆ ಯಾವುದೇ ತಂತ್ರಜ್ಞಾನ ವರ್ಗಾ­ಯಿಸದಂತೆ ಅಮೆರಿಕ ದಿಗ್ಬಂಧನವನ್ನೇ  ಹೇರಿತ್ತು. ಇಂತಹ ಸ್ಥಿತಿಯಲ್ಲೂ ಡಿಜಿಟಲ್‌ ಫ್ಲೈ ಬೈ ವೈರ್‌ ತಂತ್ರಜ್ಞಾನದ ಅಭಿವೃದ್ಧಿ ಮತ್ತು ತಂತ್ರಜ್ಞಾನ ಉನ್ನತೀಕರಣಕ್ಕೆ ಅವಕಾಶವಿರುವಂತೆ ಅಭಿವೃದ್ಧಿಯಾದ ವಿಮಾನದ ಹಿಂದಿರುವ ಶ್ರಮವನ್ನು ಮೆಚ್ಚಲೇಬೇಕು. ಇದರಲ್ಲಿ ಸರ್ಕಾರಿ ಸಂಸ್ಥೆಗಳಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳು, ಭಾರತೀಯ ವಿಮಾನ ಕಾರ್ಖಾನೆ ಮಾತ್ರವಲ್ಲದೇ ಅನೇಕ ಖಾಸಗಿ ಸಂಸ್ಥೆಗಳು ಸಹ ಭಾಗಿಯಾಗಿವೆ. ಈ ಸಂಸ್ಥೆಗಳ ಶ್ರಮವನ್ನು ಶ್ಲಾಘಿಸಬೇಕು.ಈ ವಿಮಾನಕ್ಕಾಗಿಯೇ ಅಭಿವೃದ್ಧಿಪಡಿಸಿದ ಕಾವೇರಿ ಎಂಜಿನ್‌ ನಿಗದಿತ ಮಟ್ಟವನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ತೇಜಸ್‌ ಎಂಕೆ ೧ ಮಾದರಿಯ ವಿಮಾನದಲ್ಲಿ ಜಿಇ ಸಂಸ್ಥೆಯ ೪೦೪ ಎಂಜಿನ್‌  ಬಳಸಲಾಗಿದೆ. ಎರಡನೇ ಪೀಳಿಗೆಯ ಎಂಕೆ ೨ ಮಾದರಿಯ ವಿಮಾನದಲ್ಲಿ ಮತ್ತಷ್ಟು ಶಕ್ತಿಶಾಲಿಯಾದ ಜಿಇ ೪೧೪ ಎಂಜಿನ್‌ ಬಳಸಲಾಗುತ್ತದೆ.ಇದರಿಂದ ವಿಮಾನಕ್ಕೆ ಮತ್ತಷ್ಟು ಬಲ ಬರುತ್ತದೆ. ಮೊದಲ ಹಂತದ ಐಒಸಿ ಪಡೆದ ಸಂದರ್ಭದಲ್ಲಿ ಶಕ್ತಿಶಾಲಿ ಎಂಜಿನ್‌, ಎಲ್ಲಾ ರೀತಿಯ ಶಸ್ತ್ರಗಳನ್ನು ಬಳಸುವ ತಾಕತ್ತು ಮತ್ತು ಗುಂಡುಹಾರಿಸುವ ಕೋನವನ್ನು ವಿಸ್ತರಿಸಬೇಕು ಎಂದು ವಾಯುಪಡೆ ಕೋರಿತ್ತು. ಅದಕ್ಕೆ ಅನುಗುಣವಾಗಿ ವಿಮಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ. ಎರಡನೇ ಹಂತದ ಪ್ರಮಾಣಪತ್ರಕ್ಕೂ ಅಂತಿಮ ಪ್ರಮಾಣಪತ್ರಕ್ಕೂ ಸಾಕಷ್ಟು ಅಂತರವಿರಲಿದೆ.ಈ ಅವಧಿಯಲ್ಲಿ ವಾಯುಪಡೆಯ ಚಾಲಕರು ವಿಮಾನವನ್ನು ದೇಶದ ವಿವಿಧ ಭಾಗಗಳಲ್ಲಿ ತೀವ್ರತರದ ಪರೀಕ್ಷೆಗೆ ಗುರಿಪಡಿಸಲಿದ್ದಾರೆ. ಅದರಲ್ಲೂ ವಿಮಾನ ಉತ್ತೀರ್ಣವಾಗಬೇಕು. ೨೩ ಮಿ.ಮೀ. ಗನ್‌ಗಳ ಬಳಕೆ, ದೂರಗಾಮಿ ರಾಕೆಟ್‌ ಬಳಕೆ ಮತ್ತು  ಹಾರಾಡುವಾಗಲೇ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ನಂತರವೇ ಅಂತಿಮ ಪ್ರಮಾಣ ಪತ್ರ ದೊರಕುತ್ತದೆ.ಇದು ೨೦೧4ರ ಡಿಸೆಂಬರ್‌ ಒಳಗೆ ದೊರಕಬಹುದು ಎನ್ನುವ ಆಶಯವಿದೆ. ತೇಜಸ್‌ ಬೆಲೆ ₨ ೨೨೦ರಿಂದ ೨೫೦ ಕೋಟಿ. ರಷ್ಯಾದಿಂದ ಖರೀದಿಸುತ್ತಿರುವ ಸುಖೋಯ್‌ ವಿಮಾನದ ಬೆಲೆ ₨ ೩೨೦ರಿಂದ ೪೨೦ ಕೋಟಿ.  ಕಡಿಮೆ ಬೆಲೆ ಎಂದ ಮಾತ್ರಕ್ಕೆ ತೇಜಸ್‌ ಕ್ಷಮತೆಯಲ್ಲಿ ಯಾವುದೇ ವಿಮಾನಕ್ಕೂ ಕಡಿಮೆಯೇನಿಲ್ಲ. ತೇಜಸ್‌ನಿಂದಾಗಿ ಭಾರತ ಸಹ ಯುದ್ಧ ವಿಮಾನಗಳನ್ನು ಉತ್ಪಾದಿಸುವ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರಿದಂತಾಗಿದೆ.

ಪ್ರತಿಕ್ರಿಯಿಸಿ (+)